ಮಂಗಳವಾರ, ಅಕ್ಟೋಬರ್ 30, 2012

ಪ್ರವಾಸ ಕಥನ - ಶೃಂಗೇರಿ, ಕುದುರೆಮುಖ, ಹೊರನಾಡು - 27 & 28 ಅಕ್ಟೋಬರ್


ಶುಕ್ರವಾರ(26.10.2012) ರಾತ್ರಿ ವಿನಯ್ KGS ಕಳುಹಿಸಿದ ಇ-ಮೇಲ್ ನಂತೆ ಎಲ್ಲರೂ ಶಾಂತಲಾ ರೇಷ್ಮೆ ಅಂಗಡಿ( Shantala Silk House),ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ರಾತ್ರಿ ಸುಮಾರು 10ರ ಹೊತ್ತಿಗೆ ಸೇರಿದೆವು. 10:30ರ ಹೊತ್ತಿಗೆ ಬೆಂಗಳೂರಿನಿಂದ ಹೊರಟ ನಾವು ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ವಾಹನ ಪೆಟ್ರೋಲ್ ಬಂಕ್ ಬಳಿ ನಿಂತು ಹೋಯಿತು. ಚಾಲಕ ಎಲ್ಲರನ್ನೂ ಕೆಳಗಿಳಿಯಲು ಹೇಳಿದರು. ನಾನು ಏಕೆ ಎಂದು ಯೋಚಿಸ್ತಿದ್ದೆ, ಅಷ್ಟು ಹೊತ್ತಿಗೆ ವೀರೇ೦ದರ್ धक्का देना है ಅಂದ. ಅಯ್ಯೋ ತಳ್ಳೋ ಮಾಡೆಲ್ ಗಾಡೀಲಿ ನಿಜಕ್ಕೂ ನಾವು ಶೃಂಗೇರಿ ಸೇರ್ತೀವ ಅನ್ನಿಸಿಬಿಡ್ತು. ಎಲ್ಲಾ ಗಂಡ್ ಹೈಕ್ಳು ಕೆಳಗಿಳ್ದು, ಸಾಹಸ ಮಾಡಿ ಗಾಡಿಯನ್ನು ಮುಂದೂಡಿ ಗಾಡಿ ಶುರುವಾದ ನಂತರ ಹತ್ತಿದರು. ವಿನಯ್ KGS ತಂದ ಸಿದ್ಲಿಂಗು ಚಲನ ಚಿತ್ರದ CD ಯನ್ನು ಹಾಕಲಾಯಿತು. ಎಲ್ಲರೂ ಚಿತ್ರವನ್ನು ತುಂಬಾನೇ ಖುಷಿಯಿಂದ ಆಸ್ವಾದಿಸುತ್ತಿದ್ದರು. ಮೊದಲೇ ಆಯೋಜಿಸಿದಂತೆ ಸರಿಯಾಗಿ 12 ಗಂಟೆ ಹೊತ್ತಿಗೆ ಚಿತ್ರಕ್ಕೆ ತಾತ್ಕಾಲಿಕ ತಡೆ ಹಾಕಿ( Pause ), ಅವಿನಾಶ್ ಹುಟ್ಟು ಹಬ್ಬವನ್ನು ಸುಂಕ ಪಾವತಿ ಕೇಂದ್ರ(TOLL GATE)ದ ಬಳಿ ಆಚರಿಸಿದೆವು. ಕೇಕ್ ಅನ್ನು ಕತ್ತರಿಸಲು ಅವಿ ಏನೋ ಕೌತುಕತೆಯಿಂದ ಸಿದ್ಧವಾಗಿದ್ದ. ಆದರೆ ನಮ್ಮ ವಿನಯ್ KGS ಕ್ಯಾಮೆರಾವನ್ನು ಬ್ಯಾಗ್ ನಿಂದ ತೆಗೆದು ಕ್ಲಿಕ್ಕಿಸಲು ಸ್ವಲ್ಪ ತಡಮಾಡಿದ.
( ನಮ್ಮ ಮಂದಿ ಕ್ಯಾಮೆರಾಗೆ ಪೋಸು ಕೊಡೋಕೆ ಎಷ್ಟು ಉತ್ಸುಕರಾಗಿರುತ್ತಾರೆ ಎಂದರೆ 12:07 ತೋರಿಸುತ್ತಿದ್ದ ಗಡಿಯಾರಾನ 12:00 ಎಂದು ಮಾಡೋಕ್ಕೂ ಇವರು ಸಿದ್ಧ!!)

ನಾವು ಶೃಂಗೇರಿ ತಲುಪುವಷ್ಟರಲ್ಲಿ ಸಮಯ ಬೆಳಗ್ಗೆ 7 ಗಂಟೆ( 27.10.2012). ವೀರಾಧಿವೀರರಾದ ವಿನಯ್ KGS ಮತ್ತು ವಿಶ್ವನಾಥ್ ಬಣಕಾರ್ ಎಲ್ಲೆಲ್ಲೋ ಅಲೆದು, ಕಡೆಗೂ ಕಷ್ಟಪಟ್ಟು ಹುಡುಕಿ ಗೊತ್ತು ಮಾಡಿದ್ದ ವಿಶ್ರಾಂತಿ ಗೃಹದಲ್ಲಿ ಸ್ನಾನ ಮುಗಿಸಿ ದೇವರ ದರ್ಶನಕ್ಕೆ ಹೋಗುವ ಹೊತ್ತಿಗೆ 9 ಗಂಟೆ.
ಶೃಂಗೇರಿ - ಶಾರದಾಂಬೆಯ ಸನ್ನಿಧಿ
ಶೃಂಗೇರಿ - ಶಾರದಾಂಬೆಯ ಸನ್ನಿಧಿ

ಭವ್ಯವಾಗಿ ಕಂಗೊಳಿಸುತ್ತಿದ್ದ ವೀಣಾಧರಿ ಬಂಗಾರ ಶಾರದೆಗೆ ನಮಿಸಿ ಚಿರ ಶಾಂತಿ ನೀಡೆಂದು ಪ್ರಾರ್ಥಿಸಿದೆವು. ನಂತರ ಪಕ್ಕದ ಹೊಯ್ಸಳ ಶೈಲಿಯ ದೇವಸ್ಥಾನಕ್ಕೆ ಭೇಟಿಯಿತ್ತು, ಅಲ್ಲಿನ ಶ್ರೀಗಂಧದ ಸರಸ್ವತಿಯನ್ನು ಕಂಡೆವು. ದೇವಸ್ಥಾನದ ಹೊರಭಾಗದಲ್ಲಿ ಇಷ್ಟ ದೇವರೊಂದಿದೆ, ಅದನ್ನು ತೋರಿಸಿ ವಿನಯ್ ಮತ್ತು ಅವಿಗೆ  ಮನದ ಇಚ್ಛೆಯನ್ನು ಬೇಡಲು ಹೇಳಿದೆ. ವಿನಯ್ ಅಂತು ದೀರ್ಘ ದಂಡ ನಮಸ್ಕಾರವನ್ನೇ ಹಾಕಿಬಿಟ್ಟ! ಏನ್ ಕೇಳ್ಕೊಂಡ್ಯಪ್ಪ ಅಂತ ಕೇಳ್ದ್ರೆ SECRET ಅಂದ್ಬಿಡೋದಾ! :-(
ಶೃಂಗೇರಿ

ಪಕ್ಕದಲ್ಲೇ ಹರಿಯುತ್ತಿದ್ದ ತುಂಗಾ ನದಿಯ ಬಳಿ ಮಂಡಕ್ಕಿ(ಪುರಿ) ಯೊಂದಿಗೆ ತೆರಳಿದೆವು. ಮೀನಿಗೆ ಮಂಡಕ್ಕಿಯನ್ನು ಹಾಕಿದಾಗ ಅವು ಅದನ್ನು ಕಣ್ಣೆತ್ತಿಯೂ ಸಹ ನೋಡಲಿಲ್ಲ. ಕಾಸು ಕೊಟ್ಟು ತಂದಿದ್ದಲ್ವ, ಜೊತೆಗೆ ನಮ್ಮ ಹೊಟ್ಟೆಯೂ ಚುರುಗುಟ್ಟುತ್ತಿತ್ತು ಇನ್ನೇನು ಮಾಡೋದು ಅಂತ ನಾವೇ ಅದನ್ನು ತಿನ್ನೋಕೆ ಶುರು ಮಾಡಿದೆವು. ಸ್ವಲ್ಪವೇ ತಿನ್ನುವಷ್ಟರಲ್ಲಿ ನನಗೆ ಜ್ಞಾನೋದಯ ಆಗೋಯ್ತು ಯಾಕೆ ಮೀನುಗಳು ಇದನ್ನು ಮುಟ್ಟಲಿಲ್ಲ ಅಂತ.
( ಒಂದು ದಿನ ಅರ್ಧ ಲೀಟರ್ ಮಂಡಕ್ಕೀನ  ಎಲ್ರೂ ಸೇರಿ ಖಾಲಿ ಮಾಡಕ್ಕೆ ನಮಗೆ ಆಗ್ಲಿಲ್ಲ, ಇನ್ನು ಎಷ್ಟೋ ವರ್ಷಗಳಿಂದ ಪಾಪ ಅದನ್ನೇ ಅವು ಹೇಗೆ ತಾನೇ ತಿಂದಾವು- ಮೀನುಗಳೂ ಬದಲಾವಣೆ ಬಯಸೋದ್ರಲ್ಲಿ ತಪ್ಪೇನಿದೆ!!!???)
ಶೃಂಗೇರಿ - ತುಂಗಾನದಿ

ಆದರೂ, ಎಲ್ಲಾ ಗಡವ ಮೀನುಗಳೇ ಅಲ್ಲಿ. ಹುಡುಕುದ್ರೂ ಒಂದೂ ನನ್ನ SIZEದು ಇಲ್ವಲ್ಲೋ ಅಂತ ಅವಿಗೆ ಹೇಳ್ತಿದ್ದೆ. ಉಪಹಾರ ಮಂದಿರದಲ್ಲಿ ತಿಂಡಿ ಮುಗಿಸಿ ನಮ್ಮ ಪಯಣ ಹನುಮಾನ್ ಗುಂಡಿ( ಸೂತನಬ್ಬಿ ಎಂಬ ಹೆಸರೂ ಇದೆ )ಯತ್ತ ಸಾಗಿತು. ಜಲಪಾತದಡಿಯಲ್ಲಿ ಮನಸೋ ತೃಪ್ತಿ ಆಡಿದ ನಾವು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ವರುಣ್ ಮೂಗಿಗೆ ಪೆಟ್ಟು ಮಾಡಿಕೊಂಡ.
(ಅವಿನಾಶ್ ಹೇಳಿದ ಪ್ರಕಾರ ಅವನ ಹತ್ತಿರ ಆಶೀರ್ವಾದ ಪಡೆಯಲು ಹೋಗಿ ವರುಣ್ ಬಂಡೆಗೆ ಮುಖ ಹೊಡೆದುಕೊಂಡ - ಸಮಗ್ರ ತನಿಖೆಯ ನಂತರ ಸತ್ಯಾಂಶ ಹೊರಬೀಳುವುದು).
ಹನುಮಾನ್ ಗುಂಡಿ( ಸೂತನಬ್ಬಿ)

ಮುಂದೆ ಗಂಗಾಮೂಲ/ವರಾಹ ಪರ್ವತ ( ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಾನ) ಕ್ಕೆ ತಲುಪಿದೆವು. ಸ್ವಲ್ಪ ತಲೆ ನೋಯುತ್ತಿದ್ದ ಕಾರಣ ನಾನು ಬಸ್ಸಿನಲ್ಲೇ ಉಳಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನದೇನನ್ನು ಬರೆಯುತ್ತಿಲ್ಲ.
ನಂತರ ನಮ್ಮ ಸವಾರಿ ಲಕ್ಯಾ ಅಣೆಕಟ್ಟಿನತ್ತ ಸಾಗಿತು. ಅಲ್ಲಿ ಎಲ್ಲರೂ ಗುಂಪು ಛಾಯಾಚಿತ್ರ(GROUP  PHOTO) ತೆಗೆಸಿಕೊಳ್ಳಲು ಅಲ್ಲಿ ಬಂದಿದ್ದ ಪ್ರವಾಸಿ, "ನಂದ" ರವರ ಸಹಾಯ ಕೇಳಿದೆವು. ಎಲ್ಲರನ್ನು ಕಟ್ಟೆಯ ಆಚೆ ಬದಿಯಲ್ಲಿ ಕುಳಿತು ಹಿಂದೆ ತಿರುಗಿ ನೋಡಿ ಎಂದು ಹೇಳಿದರು. ನಾವೇನೋ ಫೋಟೋಗಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿದೆವು (ಅಂದರೆ ಕುಳಿತೆವು) ಆದರೆ ಎಲ್ಲಿ ಕ್ಯಾಮೆರ ಎತ್ತುಕೊಂಡು ಓಡಿಹೋಗುವರೋ ಎಂಬ ಸಣ್ಣ ಅಳುಕು( ಮನುಷ್ಯ ಮನುಷ್ಯನನ್ನೇ ನಂಬದ ಪರಿಸ್ಥಿತಿಗೆ ನಾವಿಂದು ಬಂದು ತಲುಪಿದ್ದೇವೆ). ಪುಣ್ಯಕ್ಕೆ ಆಸಾಮಿ ಹಾಗೇನೂ ಮಾಡದೆ ನಮಗೆ ಸುಂದರ ಛಾಯಾಚಿತ್ರವನ್ನು ತೆಗೆದುಕೊಟ್ಟು ಕ್ಯಾಮೆರಾವನ್ನು ಕೈಗಿತ್ತು ತಮ್ಮ ಹಾದಿ ಹಿಡಿದರು. - ಆ ಕ್ಷಣದಲ್ಲಿ ನಮ್ಮ ನಾಗ್ ಸೋದರರ ಮಿಂಚಿನ ಓಟ ಚಿತ್ರದ ಹಾಡೊಂದು ಮನದಲ್ಲಿ ಮಿಂಚಿ ಮರೆಯಾಯಿತು( ಹಾಡು - ಬೆಳ್ಳಿ ಮೋಡ ಹತ್ತುತ್ತ, ಬಡತನ ಸುಡುತ್ತ - ಈ ಹಾಡಿನಲ್ಲಿ ಅವರು ಫೋಟೋ ತೆಗೆಯುತ್ತ ಕಾರಿನೊಂದಿಗೆ ಪರಾರಿಯಾಗುತ್ತಾರೆ).
ಕಬ್ಬಿಣದ ಖನಿಜಕ್ಕಾಗಿ ಗಣಿಗಾರಿಕೆ ನಡೆದು ಸರ್ಕಾರೇತರ ಸಂಸ್ಥೆ( Non - Government Organisation - NGO )ಯ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ನಡೆದ ಸತತ ಹೋರಾಟದ ಪರಿಶ್ರಮದ ಫಲವಾಗಿ ಈಗ ಗಣಿಗಾರಿಕೆಯು ನಿಂತಿದೆ. ಈ ಸುಂದರ ಪ್ರಕೃತಿಯು ಬರಿ ಮಣ್ಣಲ್ಲದೆ ನಿಸರ್ಗಧಾಮವಾಗಿ ರೂಪುಗೊಂಡಿದೆ. ಒಂದು ಉತ್ತಮ ಪ್ರವಾಸೀ ತಾಣವಾಗಬೇಕಾದ ಎಲ್ಲಾ ಲಕ್ಷಣಗಳೂ ಇದಕ್ಕಿದ್ದು, ಸರ್ಕಾರ ಲಕ್ಯಾ ಅಣೆಕಟ್ಟಿನ ಅಭಿವೃದ್ಧಿಯತ್ತ ಲಕ್ಷ್ಯ ವಹಿಸಬೇಕಾಗಿದೆ.
ಲಕ್ಯಾ ಅಣೆಕಟ್ಟು

ಅಲ್ಲಿಂದ ನಾವು ಅರಣ್ಯ ಇಲಾಖೆಗೆ ಭೇಟಿಯಿತ್ತು, ಕುರಿಂಜಾಲ್  ಅರಣ್ಯ ಪ್ರದೇಶವನ್ನು ಚಾರಣ ಮಾಡಲು ಅಪ್ಪಣೆ ಚೀಟಿಯನ್ನು  ಕೇಳಿದೆವು. ತಲಾ 275ರೂ. ಎಂದು ಹೇಳಿದರು ಮತ್ತು ನಮ್ಮ ಗುರುತಿನ ಚೀಟಿಯ ನಕಲು ಪ್ರತಿ(PHOTO COPY) ಯನ್ನು ನೀಡಿ, ಮೂಲ ಪ್ರತಿಯನ್ನು ತೋರಿಸಲು ಹೇಳಿದರು. ನನ್ನ ಸ್ನೇಹಿತೆ ದೀಪಾಳ ಭಾವ ನವೀನ್ ಚಿಕ್ಕಮಗಳೂರಿನ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನೆನಪಿಗೆ ಬಂದು ಅವರಿಗೆ ದೂರವಾಣಿಯನ್ನು ಮಾಡಿ ಸಹಾಯ ಕೇಳಿದೆ. ಕುದುರೆಮುಖ ಅರಣ್ಯ ಪ್ರದೇಶವು ಮಂಗಳೂರು ವಲಯಕ್ಕೆ ಸೇರಿದ್ದು, ನವೀನ್ ಭಾವರವರ ಮಂಗಳೂರಿನ ಅಧಿಕಾರಿಯೊಟ್ಟಿಗಿನ ಮಾತುಕತೆಯ ನಂತರ ಅರಣ್ಯ ಇಲಾಖೆಯವರು ನಮಗೆ 50% ರಿಯಾಯಿತಿಯನ್ನು ಕೊಟ್ಟರು.

ಜಿತೇಂದ್ರ ಅವರ ಚಿಕ್ಕಪ್ಪನವರು ನಮಗೆಂದೇ ಒಂದು ಖಾಲಿ ಕ್ವಾಟ್ರಸ್ ಮನೆ(ಕನ್ನಡದಲ್ಲಿ ಕೇರಿ ಮನೆ ಅನ್ನೋದಕ್ಕೆ ಕೆಟ್ಟದಾಗಿರುತ್ತೆ ಅನ್ನಿಸ್ತು ಅದಕ್ಕೆ ಕ್ವಾಟ್ರಸ್ ಎಂದೇ ಬರೆದಿದ್ದೇನೆ)ಯನ್ನು ಶುಚಿಮಾಡಿಸಿಟ್ಟಿದ್ದರು. ಆ ಮನೆಯನ್ನು ಹೊಕ್ಕು ಅಲ್ಲಿ ಎಲ್ಲರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ಜಿತೇಂದ್ರ, ರಾಜೇಶ್ ಅವರ ಚಿಕ್ಕಪ್ಪ, ಚಿಕ್ಕಮ್ಮರವರೊಡಗೂಡಿ ಬಿಸಿ ಬಿಸಿ ಊಟ ತಂದರು. ಅನ್ನ, ಹುಳಿ(ಸಾಂಬಾರ್) ಮತ್ತು ಪಲ್ಯವನ್ನು ಭರ್ಜರಿಯಾಗಿ ತಿಂದ ನಾವು ಬಾಸ್ಕ್(BASC) ನ ನಿಯಮದಂತೆ ಎಲ್ಲರ ಸ್ವ-ಪರಿಚಯಕ್ಕಾಗಿ ಒಟ್ಟಾಗಿ ಕುಳಿತೆವು.

ವಿಶೇಷ ಪ್ರದರ್ಶನ ನೀಡಿದವರ ಪಟ್ಟಿ:
  • ಸುಮಂತ್(ಪಿ.ಕಾಳಿಂಗರಾವ್ ರವರ ಮೊಮ್ಮಗನಾಗಿ ಹಾಡು ಹೇಳೋ ಅಂದ್ರೆ ಎಷ್ಟು ಸಮಯ ತೊಗೊಂಡ ಬಡ್ಡಿ ಮಗ- ಮಸ್ಕಾ ಹೊಡೆಯೋಕೆ ಖರ್ಚಾದ ಬೆಣ್ಣೆ- 3 ಕಿ.ಗ್ರಾಂ.), ವಿಶ್ವಾಸ್(ಅನಿಸುತಿದೆ ಯಾಕೋ ಇಂದು-ಮುಂಗಾರು ಮಳೆ ), ಚಿರಾಗ್(ಯಾವ್ದೋ ಮರ್ತೊಗಿದೆ :( - ಹಿಂದಿ ಭಾಷೆದು ಅಂತಷ್ಟೇ ನೆನಪಿರೋದು ) - ತಮ್ಮ ಕಂಠ ಸಿರಿಗಾಗಿ
  • ಸ್ವಪ್ನಿಲ್ - ಉಲ್ಟಾ ಇಂಗ್ಲೀಷ್ ವರ್ಣಮಾಲೆ ಹೇಳಿದ್ದಕ್ಕಾಗಿ.
  • ವಿನಯ್ ನಾಗರಾಜು - ಮಿಕ್ಸ್ಚರ್ ಕೊಟ್ಟು ಹುಡುಗೀನ ಹೇಗೆ ಪಾಟಾಯ್ಸ್ಕೊಳೋದು ಅಂತ ತೋರಿಸಿಕೊಟ್ಟದ್ದಕ್ಕಾಗಿ.
  • ಹರ್ಷ್ ಮತ್ತು BIRTHDAY BOY ಅವಿನಾಶ್ - ತಮ್ಮ ಅಖಂಡ ನೆನಪಿನ ಶಕ್ತಿಗಾಗಿ( ಪ್ರತಿಯೊಬ್ಬ ಸಹ ಚಾರಣಿಗರ ಹೆಸರು ಮತ್ತು ಅವರ ಆಸಕ್ತಿಯನ್ನು ತಪ್ಪಿಲ್ಲದಂತೆ ಹೇಳಿದರು)
  • ಅಮೋಲ - ಕಾರು ಮಾರುವ ಮತ್ತು ಕೊಳ್ಳುವ ವ್ಯಾಪಾರ ಮಾಡುತ್ತೇನೆಂದು BRAND ಇಲ್ದಿರೋ BISCUIT ಹಾಕಿದ್ದಕ್ಕೆ.
  • ಗೌತಮ್ - ಸಚಿನ್ ತೆಂಡೂಲ್ಕರ್ ರವರ ಬಹು ದೊಡ್ಡ ಅಭಿಮಾನಿಯಾದ ಇವರು ನಮಗೆ ಹೊಸದಾದ ವಿಶೇಷ ಮಾಹಿತಿಯನ್ನು ನೀಡಿದರು(ತೆಂಡೂಲ್ಕರ್ ಹುಟ್ಟಿದ್ದು 1984!)
  • ಮುರಳಿ - ಐಡಿಯಾ ದೂರವಾಣಿಯಲ್ಲಿ ಕೆಲಸ ಮಾಡುವ ಇವರು ಎಷ್ಟು ಚೆನ್ನಾಗಿ ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂಬುದನ್ನು ತೋರಿಸಿಕೊಟ್ಟರು.
  • ರಾಜೇಶ್ - ಈ ಗಜಿನಿ ಬಗ್ಗೆ ಏನ್ ಹೇಳೋದ್ ರೀ - ಸತತ 3 ಬಾರಿ ಎಲ್ಲರೂ ತಮ್ಮ ಹೆಸರನ್ನು ಹೇಳಿದರೂ ಕಡೆಗೂ ಇವನು ಯಾರ ಹೆಸರನ್ನು ಸರಿಯಾಗಿ ಹೇಳಲಾರದೆ ಹೋದ. ನನ್ನ ಹೆಸರನ್ನು ವೈಶಾಲಿ ಅಂತ ತುಂಬಾನೇ ಆತ್ಮ ವಿಶ್ವಾಸದಿಂದ ನಿರ್ಧಾರಿತ ಧ್ವನಿಯಲ್ಲಿ ಹೇಳ್ದ ( ನಾನ್ BOOST ಕುಡ್ಯೋದು COMPLAN ಅಲ್ಲ). ಕೇವಲ ಮಿಕ್ಸ್ಚರ್ ಗೋಸ್ಕರ ಹುಡುಗನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ. ಒಟ್ಟಾರೆ ಹೇಳೋದಾದ್ರೆ ನಮ್ಮ ತಂಡದ ಕೇಂದ್ರ ಬಿಂದುವಾಗಿ, ಹಾಸ್ಯ ನಟನಾಗಿ ನಮಗೆಲ್ಲರಿಗೂ ಭರ್ತಿ ಮನರಂಜನೆ ನೀಡಿದ.
ಬೆಳಿಗ್ಗೆ ಹತ್ತಿರದ ಹೋಟೆಲ್ ನಲ್ಲಿ( 28.10.2012 ) ಉಪಹಾರವನ್ನು ಮುಗಿಸಿ ಮಧ್ಯಾಹ್ನಕ್ಕೆಂದು ಬುತ್ತಿ ಕಟ್ಟಿಸಿಕೊಂಡು ಕುರಿಂಜಾಲ್ ಪರ್ವತಾರೋಹಣಕ್ಕೆಂದು ಹೊರಟೆವು. 8:30ಕ್ಕೆ ನಮ್ಮನ್ನು ಸೇರಿಕೊಂಡ ಮಾರ್ಗದರ್ಶಿ(GUIDE)ಗಳಾದ ನಾಗರಾಜ್ ರವರು ಉತ್ಸಾಹಿ ತರುಣನಂತೆ ನಮ್ಮೊಟ್ಟಿಗೆ ಹೆಜ್ಜೆ ಹಾಕಿದರು.

ಆ ಸ್ಥಳದ ಬಗೆಗಿನ ಮಾಹಿತಿ, ಅಲ್ಲಿನ ಆಗು ಹೋಗುಗಳು, ಸರ್ಕಾರದ ಪಾತ್ರ ಮತ್ತು ಇತಿ ಮಿತಿಗಳು ಹೀಗೆ ನಾನಾ ತರಹದ ಮಾಹಿತಿಗಳನ್ನು ನಮಗೆ ನಾಗರಾಜ್ ರವರು ನೀಡುತ್ತಾ ಸಾಗಿದರು. ನಾವು ಎಷ್ಟರ ಮಟ್ಟಿಗೆ ಅದರಲ್ಲಿ ಮುಳುಗಿ ಹೋಗಿದ್ದೆವೆಂದರೆ ನಮ್ಮ ಅಂತಿಮ ಗುರಿ ಬಂದದ್ದೇ ತಿಳಿಯಲಿಲ್ಲ. 

ಮೇಲೆ ಭಾರತೀಯ ಸಂಚಾರ ನಿಗಮದವರು ಒಂದು ಪುಟ್ಟ ಕಟ್ಟಡವನ್ನು ಕಟ್ಟಿದ್ದಾರೆ. ನಾವು ಕೆಲವರು ಅಲ್ಲೇ ತಂಗಿದರೆ ಮತ್ತು ಕೆಲವು ಮಂದಿ ತುತ್ತ ತುದಿಯವರೆಗೂ ಹೋಗಿ ಬಂದು ತಿರುಗಿ ನಮ್ಮನ್ನು ಸೇರಿಕೊಂಡರು. ಅಲ್ಲಿಂದ ಕೆಳಗಿಳಿದು, ಜುಳು ಜುಳು ನಾದ ಮಾಡುತ್ತಾ, ನಿರ್ಮಲವಾಗಿ ನರ್ತಿಸುತ್ತಾ ಸಾಗುತ್ತಿದ್ದ ನೀರಿನಲ್ಲಿ ಮಿಂದು, ಕಟ್ಟಿಸಿಕೊಂಡು ಬಂದ ಪೂರಿ, ಸಾಗುವನ್ನು ತಿಂದು ಹೊರಡುವಷ್ಟರಲ್ಲಿ ಮಧ್ಯಾಹ್ನ 3 ಗಂಟೆ.     

                                                     ಓ ನನ್ನ ತುಂಗೆ, 
ಸಹ್ಯಪರ್ವತ ತೀರ್ಥ ಪೋಷಿತ ತರಂಗೆ,
   ನಿಬಿಡ ವನಮಾಲಿನಿಯೆ, ಪುಣ್ಯಶಾಲಿನಿಯೆ,
      ನೋಡಿದನಿತೂ ನಿನ್ನ ನೋಡಿ ನಾ ತಣಿಯೆ...
                                                        - ಕು.ವೆಂ.ಪು 

ಅಲ್ಲಿಂದ ಹೊರಟು ಸುಮಾರು 6 ಗಂಟೆಯ ಹೊತ್ತಿಗೆ ಹೊರನಾಡು ತಲುಪಿದ ನಾವು, ಅಲ್ಲಿ ತಾಯಿ ಅನ್ನಪೂಣೇಶ್ವರಿಯ ದರ್ಶನಗೈದು,ಬದುಕಿನುದ್ದಕ್ಕೂ ಅನ್ನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳೆಂದು ಪ್ರಾರ್ಥಿಸಿ, ಪ್ರಸಾದವನ್ನು ತಿಂದೆವು.  ಅವಿ ಅವನಿಗೆ ಪುಳಿಯೋಗರೆ ಕಡಿಮೆ ಹಾಕಿದರೆಂದು ಗೊಣಗುತ್ತಿದ್ದ. ಆಮೇಲೆ ಅನ್ನಪೂರ್ಣೆಗೆ ಇವನ ಮಾತು ಕೇಳಿಸಿತೆಂದು ತೋರುತ್ತದೆ, ಸಾರಿಗೆಂದು ಅನ್ನ ಹಾಕುವಾಗ ಹೆಚ್ಚಿಗೆ ಹಾಕಿಬಿಟ್ಟರು. ಕಷ್ಟ ಪಟ್ಟು ಅಂತೂ ಅದನ್ನು ಮುಗಿಸಿದ. ಅಲ್ಲಿ ಎಲ್ಲರಿಗೂ ಪ್ರಸಾದವನ್ನು ಚೆಲ್ಲದಂತೆ ಮೊದಲೇ ಸೂಚಿಸಿತ್ತಾದರೂ ವೀರು ಮಾತ್ರ ಅದನ್ನು ಪಾಲಿಸಲಿಲ್ಲ.

ನಂತರ ಕೆಲ ಸ್ನೇಹಿತರೊಟ್ಟಿಗೆ ನಾನು ಸಂಬಾರ ಪದಾರ್ಥಗಳನ್ನು ಕೊಳ್ಳಲು ಹೊರಟೆ. ಸಿದ್ಲಿಂಗು ಚಿತ್ರವನ್ನು ನೋಡಿ ಬಹಳವೇ ಉತ್ಸುಕನಾಗಿದ್ದ ವಿನಯ್ ನಾಗರಾಜು ಮಠ ಚಿತ್ರದ CDಗಾಗಿ ಅಲ್ಲಿ ಹುಡುಕಾಡಿದ. ದುರದೃಷ್ಟವಶಾತ್ ಅವನ ಪ್ರಯತ್ನ ಫಲಿಸಲಿಲ್ಲ. ರಾತ್ರಿ ಸುಮಾರು 9 ಗಂಟೆಗೆ ಹೊರನಾಡಿನಿಂದ ಹೊರಟ ನಾವು, ರಾಜಧಾನಿಯನ್ನು ತಲುಪುವಷ್ಟರಲ್ಲಿ ಮುಂಜಾನೆ 4:45.(30.10.2012)


ಶಾರದಾಂಬೆ ಮತ್ತು ಅನ್ನಪೂರ್ಣೆಯರನ್ನು ನಿರ್ವಿಘ್ನವಾಗಿ ನೋಡಲು ಮತ್ತು ಚಾರಣಕ್ಕೆ ಪರೋಕ್ಷವಾಗಿ ಸಹಾಯ ಮಾಡಿದವರೆಲ್ಲರಿಗೂ  ನನ್ನ ಮನದಾಳದ ಧನ್ಯವಾದಗಳು:

  • ನವೀನ್, ಚಿಕ್ಕಮಗಳೂರು - ಚಾರಣದ ಪ್ರವೆಶದರಕ್ಕೆ ರಿಯಾಯಿತಿಯನ್ನು ಕೊಡಿಸಿದ್ದಕ್ಕಾಗಿ.
  • ಜಿತೇಂದ್ರ ಮತ್ತು ರಾಜೇಶ್ ಅವರ  ಚಿಕ್ಕಪ್ಪನವರ ಕುಟುಂಬ - ಅನ್ನಪೂರ್ಣೆಶ್ವರಿಯ ಅಪರಾವತಾರವೆಂದೇ ಹೇಳಬೇಕು. ಅತಿಥಿ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ ಎಂದು ತೋರಿಸಿಕೊಟ್ಟರು.
  • ವಿನಯ್ KGS - ಚಾರಣದ ಹೊಣೆ ಹೊತ್ತು, ಧುತ್ತೆಂದು ಎದುರಾದ ಕೆಲವು ತಾತ್ಕಾಲಿಕ ಅಡೆತಡೆಗಳನ್ನು ನಿವಾರಿಸಿದ್ದಕ್ಕಾಗಿ.      
ನಮ್ಮ ಇಡೀ ಪ್ರವಾಸದಲ್ಲಿ ಒಂದೇ ಒಂದು ಬೇಸರ ತರಿಸಿದ ಸಂಗತಿ ಎಂದರೆ ಅವಿನಾಶ್ ಗೆ ಯಾರು BIRTHDAY BUMS ಹೊಡಿಲೇ ಇಲ್ಲ :-(

2 ಕಾಮೆಂಟ್‌ಗಳು: