ಶುಕ್ರವಾರ, ಮೇ 3, 2013

ನಾಗಲ-ಪಶ್ಚಿಮ ಚಾರಣ (Treknic to Nagala-West )


ನಾಗಲ:
ನಾಗಲಾಪುರಂ  ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಗಡಿ ಭಾಗದಲ್ಲಿದ್ದು, ಭಾರತದ ಪೂರ್ವ ಘಟ್ಟ(Eastern Ghats) ಗಳ ಸಾಲಿಗೆ ಸೇರುತ್ತದೆ. ಸ್ಫಟಿಕ ಶುಭ್ರವಾದ ನೈಸರ್ಗಿಕ ನಿರ್ಮಿತ ಝರಿ ಮತ್ತು ಕೊಳಗಳಿಂದ ನಿರ್ಮಿತವಾಗಿರುವ ಈ ಪ್ರದೇಶವು ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಚಾರಣಿಗರನ್ನು ತನ್ನತ್ತ ಸೆಳೆಯುತ್ತದೆ.




ಚಾರಣದ ನನ್ನ ಅನುಭವ:

Bangalore Ascenders (BASC - www.bangaloreascenders.org) ಇಂದ ಚಾರಣಕ್ಕೆಂದು ನಮ್ಮ ಬಾಸ್ಕ್( BASC) ನ ಆಧಾರಸ್ಥಂಬಗಳಲ್ಲೊಬ್ಬರಾದ RX ಸತೀಶ್ ರವರು ಆಯೋಜಿಸಿದ್ದ ಚಾರಣಕ್ಕೆ ನಾವೆಲ್ಲರೂ ಕೂಡಿ 22 ಮಂದಿ ಹೊರಟೆವು. ಆಂಧ್ರ ಸಾರಿಗೆಗೆ ಚಳ್ಳೆಹಣ್ಣು ತಿನ್ನಿಸಲೋಸುಗ ಸತೀಶ್ ರವರು ಎರಡು ಬೇರೆ ಬೇರೆ ಟೆಂಪೋ ಟ್ರಾವೆಲ್ ಗಳನ್ನು ಗೊತ್ತು ಮಾಡಿದ್ದರು( ರಸ್ತೆ ತೆರಿಗೆ: TT- 3500, ಬಸ್ಸು -13000). ಅವರು ಕಳುಹಿಸಿದ ಇ-ಮೇಲ್ ನಂತೆ ಎಲ್ಲರೂ ಶುಕ್ರವಾರ(26.04.2013) ರಾತ್ರಿ ಶಾಂತಲಾ ರೇಷ್ಮೆ ಮಳಿಗೆ( Shantala Silk House),ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ರಾತ್ರಿ ಸುಮಾರು 10ರ ಹೊತ್ತಿಗೆ ಸೇರಿದೆವು.10:30ರ ಹೊತ್ತಿಗೆ ಬೆಂಗಳೂರಿನಿಂದ ಹೊರಟು, ಬೆಳಗಿನ ಜಾವ 5 30ರ ಹೊತ್ತಿಗೆ( 27.4.2013) ಪಿಚಾತ್ತೂರು ಸೇರಿದ ನಾವು ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಅಲ್ಲಿಯೇ ಇದ್ದ ಒಂದು ಪುಟ್ಟ ಹೋಟೆಲ್ ನಲ್ಲಿ ಇಡ್ಲಿ ತಿಂದು 9 ಗಂಟೆಯ ಹೊತ್ತಿಗೆ ನಾಗಲ ಕಡೆಗೆ ಹೊರಟೆವು.
9 15 ರಿಂದ 9 30ರ ವರೆಗೆ ಸತೀಶ್ BASCನಲ್ಲಿ ಅನುಸರಿಸಬೇಕಾದ ಕೆಲ ನಿಯಮಗಳ ಕುರಿತು ಹೇಳಿದರು. ಈ ಮೊದಲೇ ಈ ಜಾಗಕ್ಕೆ ಚಾರಣ ಮಾಡಿ ಅನುಭವವಿದ್ದ DSLR ಕ್ಯಾಮೆರಾ ಹಿಡಿದಿದ್ದ ಕಾರ್ತಿಕ್ ಮತ್ತು Bournvita Goggles ತೊಟ್ಟಿದ್ದ ನಿರಂಜನ್ ತಂಡದ ಮುಂದಾಳತ್ವವನ್ನು ವಹಿಸಿದರು.


ಮೊದಲ 45 ನಿಮಿಷಗಳ ಚಾರಣವು ಸೂರ್ಯನ ರಶ್ಮಿಯೊಡನೆ ಕಳೆದು ಚರ್ಮವೆಲ್ಲ ಕೆಂಪಾಗಿ ನಂತರ ಮರದ ನೆರಳು ಆವರಿಸಿ ಬಿಸಿಲಿನ ಝಳವು ಕಡಿಮೆಯಾಯಿತು.

ತನ್ನ ಸ್ಫಟಿಕ ಶುಭ್ರತೆಯಿಂದ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಭಾರತದ ಪೂರ್ವ ಘಟ್ಟದಲ್ಲಿ ತನ್ನದೇ ಆದ ವಿಶೇಷ ಸಸ್ಯ ಸಂಪತ್ತಿನಿಂದ ಕೂಡಿದ ಕೊಳದ ಬಳಿ ಜಟಿಲ ಕಾನನದ ಕುಟಿಲ ಪಥದೊಳಗೆ ಹರಿಯುತ್ತಿದ್ದ ತೊರೆಯ ಪಕ್ಕದಲ್ಲಿ ನಮ್ಮ ಚಾರಣ.


ನೀರನ್ನು ಕಂಡೊಡನೆ ನೀರಿಗಿಳಿಯುವುದೋ ಇಲ್ಲ ಫೋಟೋ ತೆಗೆಯುವುದೋ ಎಂಬ ಗೊಂದಲ. ಸರಿ ನೀರಿಗಿಳಿದರೆ ಇನ್ನೆಲ್ಲಿ ಛಾಯಾಚಿತ್ರ ತೆಗೆಯುವುದು ಎಂದು ಮೊದಲು ಕೆಲವು ಫೋಟೋ ಗಳನ್ನು ಕ್ಲಿಕ್ಕಿಸಿ ನಂತರ ಓ ಎಂದು ಕೂಗುತ್ತಾ ನೀರಿಗಿಳಿದೆವು. ಪುಟ್ಟದಾಗಿ ಹರಿಯುವ ಝರಿ, ಅದರಿಂದ ನಿರ್ಮಿತವಾದ ಕೊಳ( Pool-1), ಅದರ ತಳದಲ್ಲಿ ಕಾಣುವ ಕಲ್ಲುಗಳು, ಕಾಲಿಗೆ ಕಚಗುಳಿಯಿಡುವ ಮೀನುಗಳು....

ಅಲ್ಲಿ ನಮ್ಮ ವೃತ್ತಿಪರ ಛಾಯಾಗ್ರಾಹಕರಾದ ಗೋವಿಂದ್ ರವರಿಗೆ ನಾವು ನಮ್ಮ ಫೋಟೋಗಳಿಗಾಗಿ ಪೋಸು ಕೊಡಲು ಸರತಿಯಲ್ಲಿ ಕಾಯುತ್ತಿದ್ದೆವು. ನಾನು ಮತ್ಸ್ಯ ಕನ್ಯೆ( Mermaid) ತರಹ ನೀರಿನಿಂದೇಳ್ತೀನಿ ನಂದು ಫೋಟೋ ತೆಗೀರಿ ಅಂತ ಅವರ ಛಾಯಾಗ್ರಹಣಕ್ಕೆ ಸವಾಲೊಡ್ಡುವಂತೆ ಕೇಳುತ್ತಿದ್ದೆ( ಇದೆಲ್ಲಿಂದ ಗಂಟ್ ಬಿತ್ತೋ ಪಾರ್ಟಿ ಅಂತ ಗೋವಿಂದ್ ಏನಾದ್ರು ಅಂದ್ಕೊಂಡಿದ್ದ್ರೆ ವಾಟಾಳ್ ನಾಗರಾಜ್ ಟೋಪಿ & ಕನ್ನಡಕದ ಮೇಲೆ ಆಣೆ ನಾನೇನ್ ಬೇಜಾರ್ ಮಾಡ್ಕೊಳಲ್ಲ. ನಮಗೆ ಫೋಟೋ ಮುಖ್ಯ ಅಷ್ಟೆ.)

ಶ್ವೇತ ತಂದಿದ್ದ Dolphin ಚಿತ್ರಗಳಿದ್ದ ನೀಲಿ ಬಣ್ಣದ ಟ್ಯೂಬ್ ನಲ್ಲಿ ಕುಳಿತು ನೀರ ಮೇಲೆ ತೇಲುವಾಗ ಮನದಲಿ ಮೂಡಿದ ಹಾಡು :
                              ಉಡುಗಣ ವೇಷ್ಠಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ 
                              ಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವ ರಸಹಚಾರಿ

ಅಲ್ಲಿಂದ ಸುಮಾರು 20 ನಿಮಿಷಗಳ ಕಾಲ ಹಬ್ಬಿದ ಮಲೆಯಲ್ಲಿ ಮುಂದುವರೆದು ಎರಡನೇ ಕೊಳ(Pool-2)ವನ್ನು ಸೇರಿದೆವು. ತನ್ನ ಪಚ್ಚವರ್ಣದ ತರಂಗ ಶೋಭಿತ ಗಂಭೀರಾಂಬುಧಿಯು ಮೊದಲನೇ ಕೊಳಕ್ಕಿಂತಲೂ ಮತ್ತೂ ಸುಂದರವಾಗಿ ಕಂಗೊಳಿಸುತ್ತಿತ್ತು.

ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮಧುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ ಬಿಳಿಯಾ ಮೋಡದ ಹಿಂದೆ ಹೊಳೆಯುತ್ತಿತ್ತು
                                                                                 ( ಒಂದು ಮುಂಜಾವಿನಲಿ)

Catering ರಾಮ್ ಮತ್ತು ಸಂಗಡಿಗರ ಪಾಕ ಕ್ರಾಂತಿಯ ದೆಸೆಯಿಂದ ಹೊಟ್ಟೆಗೆ ಬಿಸಿ ಬಿಸಿಯಾದ ಪುಳಿಯೊಗರೆ ಬಿತ್ತು.



ಮೂರನೇ ಕೊಳ(Pool-3)ದತ್ತ ದಾಪುಗಾಲು ಹಾಕುತ್ತಾ ನಡೆದರೆ 10-15 ನಿಮಿಷಗಳಲ್ಲೆಲ್ಲ ಆ ಜಾಗವನ್ನು ತಲುಪಿಬಿಟ್ಟೆವು. ಸುಮಾರು 30-40 ಅಡಿಗಳಷ್ಟು ಆಳವಿರುವ ಆ ಕೊಳದಲ್ಲಿ ಈಜಿದರೆ ಅಮಿತ ಹರ್ಷ ಮನಸಿಗೆ...  ಸೃಷ್ಟಿ ಲೀಲೆಗೆ ತಲ್ಲಣಗೊಂಡ ಮನವು ಪ್ರಕೃತಿ ಮಾತೆಗೆ ಮನದಲ್ಲೇ ವಂದಿಸಿತು.


ಮುಂಬರುವ ಚಂದಿರನಿಗಾಗಿ ದಾರಿ ಮಾಡುತ್ತಾ ಪಡುವಣದಂಚಿನಲ್ಲಿ ಭಾಸ್ಕರನು ಮರೆಯಾಗುತ್ತಿದ್ದು, ನಾವು ನಮ್ಮ ನೀರಾಟ ಸಾಕು ಮಾಡಿ ಮೇಲೆದ್ದೆವು. ಇಲ್ಲಿ ನೀರಿಗೆ ಬಿದ್ದು ಹಾಳಾದ ಸತೀಶ್ ರವರ ಕ್ಯಾಮೆರಾದಿಂದ ಅಡುಗೆ ತಯಾರಿಸುವ ಜಾಗದಲ್ಲಿ ನಿರಂಜನ್ ಅದನ್ನಿಟ್ಟುಕೊಂಡು ಎಲ್ಲರಿಗೂ ಬಹಳವೇ ನಗೆಯೂಟ ಉಣಿಸಿದನು. ಶ್ವೇತ ಮತ್ತು ಗೌತಮ್ ಗೆ ಫೋಟೋ ತೆಗೆಯುತ್ತೇನೆಂದು ಹೇಳಿ ಅವರನ್ನು ವಿವಿಧ ಭಂಗಿಗಳಲ್ಲಿ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದನು. ಇವನೆಷ್ಟು ಸಹಜ ಕಲಾವಿದನೆಂದರೆ ಗೌತಮ್ ಗೆ ಮಗಾ ನೀನ್ ಇಲ್ಲೇ ಇರು ನಾನೇ ಹಿಂದಕ್ಕೆ ಹೋಗಿ ತೆಗೀತೀನಿ ಅಂತ ಬೇರೆ ಹೇಳ್ತಿದ್ದ ( ಓ ಮಲ್ಲಿಗೆ ಚಿತ್ರದ ಮುಸ್ತಫಾನನ್ನು ನೆನೆಸಿಕೊಳ್ಳಿ).

ಅಡುಗೆ ಆಗುವವರೆಗೂ ಎರಡು ತಂಡಗಳಾಗಿ ವಿಭಜನೆಗೊಂಡು ಆಟಕ್ಕೆ ಕುಳಿತೆವು. ನಮ್ಮ ಮನರಂಜನೆ ಶುರು. ಚಲನಚಿತ್ರದ ಹೆಸರನ್ನು ಮೂಕಾಭಿನಯದ ಮೂಲಕ ತೋರಿಸುವುದು (Dumb Charades).ಚಿತ್ರದ ಹೆಸರನ್ನು ಊಹಿಸುವುದರಲ್ಲಂತೂ ಸತೀಶ್ ಎತ್ತಿದ ಕೈ. सलीम  लंगड़े  पे  क्यूँ रोता है ( ಅದರ ಅಸಲಿ ಹೆಸರು सलीम लंगड़े पे मत रो) ಸತೀಶ್ ಅಂತೂ ನಮ್ಮ ತಂಡದಲ್ಲಿ 18 ತುಂಬಿರದ Indemnity Bondಗೆ ತನ್ನ ಚಿಕ್ಕಮ್ಮ ಅಲಿಯಾಸ್ Cousin ಇಂದ ಪೋಷಕರ(Guardian) ಸಹಿ ಪಡೆದ ಅನಿರುದ್ಧ್ ಇದ್ದಾನೆ ಎಂಬುದನ್ನೂ ಮರೆತು ಮಾಕಿ ಸಾಲಾ ಇನ್ನೂ ಏನೇನೋ .... ( ಚುಕ್ಕಿಗಳನ್ನು ನೀವು TVಯಲ್ಲಿ ಬರುವ ಬೀಪ್ ಶಬ್ದಗಳೆಂದು ತಿಳಿಯಬೇಕಾಗಿದೆ) ಊಹೆಗಳನ್ನು ಮಾಡುತ್ತಿದ್ದರು.


ಊಟ ಮುಗಿಸಿ ಎಲ್ಲರೂ ಮಲಗಲು ತಾವು ಹುಡುಕಿ ಭೂಮಿತಾಯಿಯ ಮಡಿಲಿಗೆ ಶರಣು ಹೋದೆವು.
ಜುಳು ಜುಳು ನಾದಗೈಯ್ಯುತ್ತಾ ಹರಿಯುತ್ತಿದ್ದ ನೀರ ಸದ್ದು, ಝರಿಯ ಮೊರೆತ, ಮರಗಳ ಮೇಲೆ ಕುಳಿತ ಮಿಂಚು ಹುಳುಗಳು ಮತ್ತು ಇವುಗಳಿಗೆಲ್ಲ ನಾನೇ ರಾಜ ನನ್ನಿಂದಲೇ ನಿಮ್ಮ ಸೌಂದರ್ಯಕ್ಕೊಂದು ಬೆಡಗು ಎಂದು ಮರಗಳ ನಡುವೆ ನುಸುಳಿ ನಗುತ್ತಿದ್ದ ಪೂರ್ಣಚಂದಿರ ... ಇದರ ನಡುವೆ ಸುಮಾರು 1 30ರ ವರೆಗೂ(28.4.2013) ಹರಟುತ್ತಾ ನಂತರ ಮಲಗಿದೆವು.
ಮಾರನೆಯ ದಿನ ಮೂರನೇ ಕೊಳದಲ್ಲಿ ಮತ್ತೆ ಆಟ ಶುರು. ಈ ಬಾರಿ ಮೇಲಿನಿಂದ ಒಬ್ಬರನ್ನು ಜೋಲಿ ಬೀಸಿ ಎಸೆಯೋ ಆಟ. Life Jacket ತೊಟ್ಟ ನಮ್ಮನ್ನು ಮೇಲಿನಿಂದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಸಡ್ಡು ಹೊಡೆಯುವಂತೆ ರಂಗನಾಥ್ Square, ಗೋವಿಂದ್, ಸತೀಶ್ ಎಸೆಯುತ್ತಿದ್ದರು. ಆ ಗಾಳಿಯಲ್ಲಿ ಹಾರಿ ಬೀಳುವಾಗಿನ ಸಂತೋಷವನ್ನು ಮನವು ಈಗಲೂ ನೆನೆದು ಖುಷಿ ಪಡುತ್ತದೆ( ಮತ್ತೆ ಮೂಡಿ ಬಾ ನೀ ಎನ್ನ ಚಿತ್ತ ಪ್ರುಥುವಿಯಲ್ಲಿ)
ತಿಂಡಿ ಮುಗಿಸಿ ಮತ್ತೆ ನಮ್ಮ ಚಾರಣವನ್ನು ಶುರು ಮಾಡುವಷ್ಟರಲ್ಲಿ ಗಂಟೆ 11. ಅಲ್ಲಿಂದ ಮೊದಲನೇ ಕೊಳದ ಬಳಿ ಸಾಗಿ ನೀರಿನೊಳಗೆ BASCನ ನಿಯಮದಂತೆ ಎಲ್ಲರ ಸ್ವ-ಪರಿಚಯ ಮತ್ತು ಅವರಿಗೆ ನೀರೆರೆಚಾಟ. ಪುಷ್ಪವೃಷ್ಟಿಯ ತರಹ ಜಲವೃಷ್ಟಿ. ನಾನೇನೋ Different ಅಂತ ಪೋಸ್ ಕೊಡಬೇಕಲ್ಲ ಚಿಕ್ಕ ಚಿಕ್ಕ ಕಲ್ಲುಗಳನ್ನಾಯ್ದು ROCKವೃಷ್ಟಿ ( ಹೆಸರು ಸ್ವಲ್ಪ ದರಿದ್ರವಾಗಿದೆ ಒಸಿ ಅಡ್ಜಸ್ಟ್ ಮಾಡ್ಕೊಳಿ) ಅಂತ ಹೊಡೆಯಲು ಹೋಗಿ ದೂರ್ವಾಸ ಮುನಿಯಿಂದ (ನಿರಂಜನ್)  ಬೈಸಿಕೊಂಡೆ. ಪುಣ್ಯಕ್ಕೆ ಶಾಪ ಕೊಡಲಿಲ್ಲ ಆಸಾಮಿ.

ಮಾನ್ಯ S M ಕೃಷ್ಣಾ ರವರು ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಹೇಳಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಲಂಡನ್ ನಲ್ಲಿ MBA ಮುಗಿಸಿ ಬಂದು ಜೈವಿಕ ಚೀಲ(Biodegradable Bags ) ಗಳನ್ನು ತಯಾರಿಸುವ ತನ್ನದೇ ಆದ ಸಣ್ಣ ಉದ್ದಿಮೆಯನ್ನು ನಡೆಸುತ್ತಿರುವ ರಂಗನಾಥ್ ನ ಮಾತುಗಳನ್ನು ಎಲ್ಲರೂ ತದೇಕ ಚಿತ್ತದಿಂದ ಆಲಿಸುತ್ತಿದ್ದೆವು. ದೀಪಕ್ ಗೆ 5 ಕನ್ನಡ ಪದಗಳನ್ನು ಹೇಳಲು ಸವಾಲು ಹಾಕಿದರು. ನಂತರ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿಯಾದ ಶ್ರೀದೇವಿಯವರಿಗೆ ಒಂದು ಪ್ರಶ್ನೆ ಕೇಳಲು ಹೇಳಿದೆವು.

ಇಲ್ಲಿ ಕನ್ನಡ ತರ್ಜುಮೆ ಮಾಡಿದರೆ ಪದಗಳ ರಸಸ್ವಾದ ಹಾಳಾಗುವ ಕಾರಣ ತದ್ರೂಪನ್ನು ಇಡಲಾಗಿದೆ.

ಶ್ರೀದೇವಿ - Which is your Favorite color?
ಉತ್ತರ ( ಹೇಳಿದವರಾರೆಂದು ಮರೆತು ಹೋಗಿದೆ) - Blue
ಪಕ್ಕದಲ್ಲಿ ಯಾರೋ ತಕ್ಷಣವೇ ಕೇಳಿದರು - Favorite Film!!!!????
(ಯಾರೂ ಪ್ರಶ್ನೆನ ಅದಲಿ ಬದಲಿ ಮಡ್ಬೇಡ್ರಪ್ಪ)
ತಿರುಗಿ ನೋಡಿದರೆ ರಂಗನಾಥ್ ... ಒಹ್ ನಮ್ ದೇಶ ಲಂಡನ್ ಆಗೋದ್ರಲ್ಲಿ ಸಂಶಯಾನೆ ಇಲ್ಲ ಬಿಡಿ.
ಸತೀಶ್ BRIEF ಪದದ ಕುರಿತು ತಮ್ಮ ಅನುಮಾನವನ್ನು ವ್ಯಕ್ತ ಪಡಿಸುತ್ತಿದ್ದರು ( Brief ಎಂದರೆ ಚಿಕ್ಕದಾಗಿ ಹೇಳಬೇಕೋ ಇಲ್ಲ ಸವಿಸ್ತಾರ ಎಂಬ ಅರ್ಥವೋ ಎನ್ನುವ ಅನುಮಾನ ಅವರಿಗೆ ಚಿಕ್ಕಂದಿನಿಂದಲೂ ಇದೆಯಂತೆ)
ಶಿವಕುಮಾರ್ ಮುಂಗಾರು ಮಳೆ ಭಾಗ -2 ಕಥೆಯನ್ನು ಹೇಳುತ್ತಿದ್ದ ( ಕಥೆ ನೈಜ ಘಟನೆಯನ್ನು ಆಧರಿಸಿದ್ದು, ಪ್ರೀತಿ ಮಧುರ ತ್ಯಾಗ ಅಮರ ಎಂಬ ಸಂದೇಶದಿಂದ ಮುಕ್ತಾಯಗೊಳ್ಳುತ್ತದೆ)



ಗೋವಿಂದ್ ರವರು ತಮ್ಮ ಹಿಮಾಲಯದ ಸುನಂದಾದೇವಿ ಮತ್ತು ನಂದಾದೇವಿ ಪರ್ವತಾರೋಹಣದ ಅನುಭವವನ್ನು ಮನಮುಟ್ಟುವಂತೆ ಚಿತ್ರಿಸಿ ಹೇಳುತ್ತಿದ್ದರು. ಪರೀಕ್ಷಾ ಕೊಠಡಿಯಲ್ಲೂ ಕಂಡಿರದ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ( Pin Drop Silence) ಅಲ್ಲಿ ಮನೆ ಮಾಡಿತ್ತು. ಕತ್ತಲಾಗುತ್ತಾ ಬಂದದ್ದರಿಂದ ಮಾಡಿದ್ದ ಮ್ಯಾಗಿ ತಿಂದು ಅಲ್ಲಿಂದ ಹೊರಟು TT ತಲುಪಿ ಅಲ್ಲಿ ಗೋವಿಂದ್ ರವರು ತಮ್ಮ ಅನುಭವದ ಮುಂದುವರೆದ ಭಾಗವನ್ನು ಅಲ್ಲಿದ್ದ ಬೆಟ್ಟಗಳನ್ನು ತೋರಿಸಿ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
TT ಬಳಿ ಬಂದು ಚಾಲಕರಿಗೆ ಚೆನ್ನಾಗಿ ನಿದ್ದೆ ಮಾಡಿದಿರಾ ಎಂದು ಕೇಳಿದರೆ ರಾತ್ರಿ ಎಲ್ಲಾ ದೆವ್ವದ ಕಾಟ ನಿದ್ದೇನೆ ಬರ್ಲಿಲ್ಲ ಅಂದ್ರು...
ದೆವ್ವ ಹೀಗೆ ಮೋಸ ಮಾಡುತ್ತೆ ಅಂತ ನಾನು ತಿಳ್ಕೊಂಡಿರ್ಲಿಲ್ಲ ( ಮನುಷ್ಯರು ಮಾತ್ರ ಮೋಸ ಮಾಡೋದು ಅನ್ನೋದು ನನ್ನ ಅಭಿಪ್ರಾಯ). ರಾತ್ರಿ 1 30ರ ವರೆಗೂ ಎದ್ದಿದೀವಿ ನಮಗೆ ಒಂದು ಮರಿ ದೆವ್ವನಾದ್ರೂ ಕಾಣ್ಲಿಲ್ಲ, ಚಾಲಕರಿಗೆ ಮಾತ್ರ ದೆವ್ವಗಳು!!!! ಬಹುವಚನ!!!  
ಅಲ್ಲಿಂದ ಹೊರಟು ಮಾರ್ಗ ಮಧ್ಯದ ಡಾಬಾ ದಲ್ಲಿ ಊಟ ಮುಗಿಸಿ ಬೆಂಗಳೂರಿಗೆ ಮರಳುವಷ್ಟರಲ್ಲಿ ಬೆಳಗ್ಗೆ 5 45.

ಮಾಹಿತಿ:

ಸ್ಥಳ: ನಾಗಲಾಪುರಂ (Nagala-West) -ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ
ಚಾರಣ ಶುರು ಮಾಡುವ ಸ್ಥಳ: ಪಿಚಾತ್ತೂರು
ದೂರ: ಬೆಂಗಳೂರಿನಿಂದ  270 ಕಿ.ಮೀ., ಚನ್ನೈ ಇಂದ 85 ಕಿ.ಮೀ.

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು
ಮಾರ್ಗ: ಬೆಂಗಳೂರು - ಕೋಲಾರ - ಮುಳಬಾಗಿಲು - ಪಲಮನೆರ್ - ಚಿ
ತ್ತೂರು - ಪುತ್ತೂರು - ಪಿಚಾತ್ತೂರು