ಗುರುವಾರ, ಡಿಸೆಂಬರ್ 27, 2012

ರಾತ್ರಿ ಚಾರಣ - ಮಾಲೆಕಲ್ಲು ತಿರುಪತಿ - 24, 25 ಡಿಸೆಂಬರ್ 2012


ಮಾಲೆಕಲ್ಲು ತಿರುಪತಿ ಬೆಟ್ಟ:
ಮಾಲೆಕಲ್ಲು ಬೆಟ್ಟದ ಲಕ್ಷ್ಮಿ ವೆಂಕಟೇಶ್ವರ ದೇವಾಲಯವು "ಅಮರಗಿರಿ ಮಾಲೆಕಲ್ಲು ತಿರುಪತಿ"ಯೆಂದೇ ಪ್ರಸಿದ್ಧಿ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನೆಲೆಗೊಂಡಿರುವ ಈ ದೇವಾಲಯವು 1250 ಮೆಟ್ಟಿಲುಗಳನ್ನು ಹೊಂದಿದ್ದು, ಹೊಯ್ಸಳರ ಕಾಲದ್ದೆಂದು ಐತಿಹ್ಯವಿದೆ.

ಸ್ಥಳ ಪುರಾಣ:
ಸುಮಾರು 800 ವರ್ಷಗಳ ಹಿಂದೆ ಲಕ್ಷ್ಮಿ ನಾರಾಯಣನು ಚಿತ್ರದುರ್ಗದ ಪಾಳೇಗಾರನಾದ ತಿಮ್ಮಪ್ಪ ನಾಯಕನ ಕನಸಿನಲ್ಲಿ ಕಾಣಿಸಿಕೊಂಡು, ತಾನಿರುವ ಸ್ಥಳಕ್ಕೆ ಬಂದು ತನ್ನನ್ನು ಮೇಲೆತ್ತಲು ಹೇಳಿ, ಕೆಲ ಸೂಚನೆಗಳನ್ನು ನೀಡುತ್ತಾನೆ. ಅಂತೆಯೇ ತುಳಸೀ ಮಾಲೆಯ ರೂಪದಲ್ಲಿ ಬೆಟ್ಟದ ಕಲ್ಲುಗಳ ಮೇಲೆ ನಿರ್ಮಿತವಾದ ದಾರಿಯಲ್ಲಿ ನಡೆಯುತ್ತಾ ಸ್ವಾಮಿ ನೆಲೆಸಿರುವ ಜಾಗವನ್ನು ಅರಿತು ತಿಮ್ಮಪ್ಪ ನಾಯಕನು ಬೆಟ್ಟದ ಮೇಲೆ ಮತ್ತು ಕೆಳಗೆ ದೇವಾಲಯಗಳನ್ನು ನಿರ್ಮಿಸುತ್ತಾನೆ. ತುಳಸೀಮಾಲೆಯ ಹಾದಿಯಿದ್ದುದ್ದರಿಂದ " ಮಾಲೆಕಲ್ಲು ತಿರುಪತಿ" ಎಂಬ ಹೆಸರು ಬಂದಿದೆ.

ಮಾಲೆಕಲ್ಲು ತಿರುಪತಿ ಬೆಟ್ಟ
ಮಾಲೆಕಲ್ಲು ತಿರುಪತಿ ಬೆಟ್ಟ
 


ಲಕ್ಷ್ಮಿ ವೆಂಕಟೇಶ್ವರ ದೇವಾಲಯ

ಶಿವಾಲಯ( ಚಂದ್ರ ಮೌಳೇಶ್ವರ ದೇವಸ್ಥಾನ):
ಮುಜ್ರಾಯಿಗೆ ಸೇರಿದ ಈ ದೇವಸ್ಥಾನವೂ ಸಹ ಅರಸೀಕೆರೆಯಲ್ಲೇ ಸ್ಥಾಪಿತಗೊಂಡಿದ್ದು, ಕ್ರಿ. ಶ. 1200 ಕ್ಕೂ ಹಿಂದಿನ ದೇವಾಲಯವೆಂದು ಅಲ್ಲಿರುವ ಶಾಸನವೊಂದು ಹೇಳುತ್ತದೆ. ಶಿವಲಿಂಗ ಮೂರ್ತಿ,  ಕಲ್ಲು ಬಸವ ಮತ್ತು ಬಳಪದ ಕಲ್ಲಿನಿಂದ ನಿರ್ಮಿತವಾದ ಕಂಬಗಳಿಂದ ಕೂಡಿದ ಈ ಸುಂದರ ದೇವಾಲಯವು ನಿಮ್ಮ ಕ್ಯಾಮೆರಾ ಕೈ ಚಳಕವನ್ನು ತೋರಿಸಲು ಅತ್ಯುತ್ತಮ ಸ್ಥಳವಾಗಿದೆ.

ಚಂದ್ರಮೌಳೇಶ್ವರ ದೇವಾಲಯ, ಅರಸೀಕೆರೆ



ಚಾರಣದ ನನ್ನ ಅನುಭವ:
Bangalore Ascenders (BASC - www.bangaloreascenders.org) ಇಂದ ದಿನಾಂಕ 24 ಡಿಸೆಂಬರ್ 2012ರ ರಾತ್ರಿ ಎಲ್ಲರೂ ಬೆಂಗಳೂರಿನ ರಾಜಾಜಿ ನಗರದ ನವರಂಗ್ ಚಿತ್ರಮಂದಿರದ ಬಳಿ 9:30ಕ್ಕೆ  ಬರಲು ಇ- ಮೇಲ್  ನಲ್ಲಿ ತಿಳಿಸಿದ್ದೆ. ಅಂತೆಯೇ ಸಮಯಕ್ಕೆ ಸರಿಯಾಗಿ ಅಲ್ಲಿ ಸೇರಿದ ನಾವು ಬೆಂಗಳೂರು ಬಿಡುವಷ್ಟರಲ್ಲಿ ಸಮಯ 10:10. ಯಶವಂತಪುರದಲ್ಲಿ ನಮ್ಮ ಬರುವಿಕೆಗಾಗಿ ಕಾಯುತ್ತಿದ್ದ 6 ಮಂದಿಯನ್ನು ಹತ್ತಿಸಿಕೊಂಡು ಒಟ್ಟಾರೆ 22 ಚಾರಣಿಗರು ಅರಸೀಕೆರೆಯತ್ತ ಪ್ರಯಾಣ ಬೆಳೆಸಿದೆವು.
ಬಸ್ಸಿನಲ್ಲಿ  BASCನ ನಿಯಮದಂದೆ ಎಲ್ಲರಿಂದಲೂ INDEMNITY BONDಗೆ ಸಹಿ ಪಡೆದು ಸ್ವ-ಪರಿಚಯವನ್ನು ಮಾಡಿಕೊಳ್ಳಲು ಹೇಳಿದೆವು ಮತ್ತು ಪರಿಚಯದಲ್ಲಿ ತಮ್ಮ ಹೆಸರಿನ ಪಕ್ಕದಲ್ಲಿ ಒಂದು ಉಪನಾಮವನ್ನು ಹೇಳಬೇಕೆಂದು ತಿಳಿಸಿದೆವು. ( ಷರತ್ತು - ಉಪನಾಮ ಕೆಟ್ಟದ್ದಾಗಿರಬೇಕು). ವಿನೋದದ ರೀತಿಯಲ್ಲೇ ಷರತ್ತನ್ನು ಸ್ವೀಕರಿಸಿದ ಸ್ನೇಹಿತರು ತಮ್ಮ ಉಪ ನಾಮಗಳನ್ನು ಖುಷಿಯಿಂದಲೇ ಹೇಳಿಕೊಂಡರು.
ಸ್ವ-ನಾಮಕರಣದ ಪಟ್ಟಿ ಇಂತಿದೆ:
  • ಅಸಹ್ಯ ಅರುಣ್ - ತಾನು ಸೋಂಬೇರಿಯೆಂದು ಎದೆ ತಟ್ಟಿ ಹೇಳಿಕೊಳ್ಳುವ ಎದೆಗಾರಿಕೆಯುಳ್ಳವ.
  • ಮಾರಿಮುತ್ತು ಸಂಧ್ಯ - ಅಕ್ಕ ಫುಲ್ ಹೆದ್ರುಸ್ತಾಳಪ್ಪ ( ಎಲ್ಲ್ರುಗು ಹವಾ ಮಾಡ್ಗಿದ್ಲು ಚಾರಣದಲ್ಲಿ)
  • ಚಿಂಗಿ ರಾಹುಲ್ - ಮೂಲತಃ ನಾಗಲ್ಯಾಂಡ್ ರಾಜ್ಯದವನಾದ ಈತನ ಕನ್ನಡ ಮಾತನಾಡುವ ಶೈಲಿಯನ್ನು ಕೇಳುವುದೇ ಮಜಾ( ಕನ್ನಡ ನಟಿ ಪೂಜಾ ಗಾಂಧಿಯನ್ನು ನೆನಪಿಸುತ್ತಾನೆ)
  • ರೌಡಿ ರಮ - ಗಾತ್ರದಲ್ಲಿ, ಆವಾಜ್ ಹಾಕುವುದರಲ್ಲಿ ನನ್ನ ಪ್ರತಿಸ್ಪರ್ಧಿ
  • ಹರಾಮಿ ಹರ್ಷ - ತುಂಬಾ ಬಲಶಾಲಿ ( ಇಲ್ಲದಿದ್ರೆ ವೆಂಕಟೇಶ್ವರ ಚಾರಣದಲ್ಲಿ ಡೋಲಿ ಹೊರಲು ಆಗುತ್ತಿತ್ತೇ !! )
  • ಪಂಗನಾಮ ಜಗದೀಶ್ - ತಿರುಪತಿ ತಿರುಮಲ ವೆಂಕಟೇಶ ( ಮೂಲತಃ ತಿರುಪತಿಯವನು)
  • ಯಕ್ಕುಟ್ಟೋಗಿರೋ ವಿಶ್ವಾಸ್ M - ಟೊಮೇಟೊ ಹುಡುಗ ( ಬೆಟ್ಟದ ಮೇಲೆ ಮ್ಯಾಗಿ ತಯಾರಿಸಲು ಟೊಮೇಟೊ ಕೊಂಡು ತಂದಿದ್ದ)
  • ವೋಡ್ಕಾ ವಿನಯ್ - ಫುಲ್ ಡ್ರಾಮಾ - ( ನಾಟಕ ಅಭ್ಯಾಸ ಮಾಡುತ್ತಿದ್ದಾನೆ - LKG ಅಷ್ಟೇ ಇನ್ನು)
  • ಪೇಪರ್ ಪಡ್ಡು ( ಸುಧೀಂದ್ರ) - MINDTREE ನಲ್ಲಿ ಉದ್ಯೋಗಿ, Notice Serve ಮಾಡ್ಯಾನೆ ( ಕ್ಷಮಿಸಿ ತರ್ಜುಮೆ ಮಾಡಿ ಕನ್ನಡಾನ ಗಬ್ಬೆಬ್ಬ್ಸಕ್ಕೆ ಇಷ್ಟ ಇಲ್ಲ)
  • ILLEGAL ಶೃತಿ - ಪೂಟ್ ಲಾಯ್ರಿ, ಎಲ್ಲದುಕ್ಕು ಲಾ ಪಾಯಿಂಟು, ಸೆಕ್ಷನ್ನು ಅನ್ತಿರ್ತಾಳೆ.
  • ನಾಗೇಂದ್ರ ಅಲಿಯಾಸ್ ಬ್ಲೇಡ್ ನಾಗ - ಇವನು ಹಾಸ್ಯ ಮಾಡೋವಾಗ ಇವನ ಸಮಯ ಸ್ಪೂರ್ತಿಗೆ ಯಾರದ್ರೂ ತಲೆದೂಗ್ಲೇ ಬೇಕು.
  • ಕಿತ್ತೋಗಿರೋ ವಿಶ್ವಾಸ್ HK - ಉತ್ತಮ ಹಾಡುಗಾರ( ತಾನೇ ಮುಂದೆ ಬಂದು ಹಾಡುತ್ತೇನೆಂದು ಹೇಳಿದ) ಹಾಗು ಛಾಯಾಗ್ರಾಹಕ
  • ಧಬಾಂಗ್ ಅಶುತೋಷ್ - ಮನಮೋಹನ್ ಸಿಂಗ್ ರವರ ಅಪರಾವತಾರ ( ಬಾಯೇ ಬಿಡಲ್ಲ ಅನ್ನುತ್ತೆ ಪಾರ್ಟಿ)
  • ರಾಮ್ ಕುಮಾರ್ ಅಲಿಯಾಸ್ ಬಾಬಾ ರಾಮ್ - ಬಾಬಾ ಚಿಹ್ನೆಗೆ ಪೇಟೆಂಟ್ ಮಾಡಿಸ್ಕೊಂಡಿದಾರೆ so ನಾವು ನಮ್ ಬಾಯಿಗೆ ZIP ಹಾಕಿಕೊಳ್ಳೋದು ಉತ್ತಮ.
  • ರಾಸ್ಕಲ್ ರೋಹಿತ್ - ಅಬ್ಬಾ ಮತ್ತೊಬ್ಬ ನಾಗೇಂದ್ರನ ಸಾಥಿ - ಹಾಸ್ಯ ಚಕ್ರವರ್ತಿ
  • ಸಪ್ಪೆ ಸಪ್ನಾ - ಡಾಕುಟ್ರಮ್ಮ ( ವಯಸ್ಸು 18, ನೋಡಲು ಗೋದಿ ಮೈ ಬಣ್ಣ ಹೊಂದಿದ್ದು, ಸದಾ ಹಸನ್ಮುಖಿಯಾಗಿರುವ ಇವರು ಕನ್ನಡ, ಆಂಗ್ಲ ಭಾಷೆಗಳನ್ನು ಬಲ್ಲವರಾಗಿರುತ್ತಾರೆ)
  • ಕಪ್ಪ ಅರವಿಂದ್ - ತಮಿಳಿಗನಾದ ಈತ, ಕನ್ನಡದ ಐತಿಹಾಸಿಕ ಚಿತ್ರ ಸಂಗೊಳ್ಳಿ ರಾಯಣ್ಣ ಚಿತ್ರದ ಸಾಲೊಂದನ್ನು ಹೇಳಿದ ( ಕಪ್ಪ ಬೇಕಾ ಕಪ್ಪ - ಈ ಸಾಲು ನಿಮಗೆ ರಾಗಿಣಿ ನಟಿಸಿರುವ ತುಪ್ಪ ಬೇಕಾ ತುಪ್ಪ ಹಾಡನ್ನು ನೆನಪಿಗೆ ತಂದರೆ ರೇಣುಕಾಚಾರ್ಯ, ನರ್ಸ್ ಜಯಲಕ್ಷ್ಮಿ ಮೇಲೆ ಆಣೆ ನಾನು ಜವಾಬ್ದಾರಳಲ್ಲ!!)
  • ಮೊಟ್ಟೆ ಸುನೀಲ್ - ಅರಸೀಕೆರೆ ಅಣ್ಣಾ - ಈ ಚಾರಣದ ಸಹ-ರೂವಾರಿ - ತಮ್ಮ ಬಕ್ಕ ತಲೆಯ ಮೇಲೆ ಬಹಳವೇ ಅಭಿಮಾನವನ್ನು ಬೆಳೆಸಿಕೊಂಡಿದ್ದಾರೆ --- I LIKE IT KAANTAA
  • ಚಂದ್ರ ಶೇಖರ್ ಅಲಿಯಾಸ್ ಮೊಗ್ಯಾಂಬೊ ಶೇಖರ್ - ಇವರನ್ನು ಕರ್ನಾಟಕದ ಪ್ರವಾಸೀ ತಾಣಗಳ WIKIPEDIA ಎಂದರೆ ಅತಿಶಯೋಕ್ತಿಯಾಗಲಾರದು.
  • ಮೊಗ್ಲಿ ನಿರಂಜನ್ - ತನ್ನ ವಿಶಿಷ್ಟ ಶೈಲಿಯ ನೃತ್ಯದಿಂದ ಎಲ್ಲರ ಮನ ಸೂರೆಗೊಂಡನು.( ಜಂಗಲ್ ಬುಕ್ ಹಾಡನ್ನು ನೃತ್ಯ ಮಾಡಿ ತೋರಿಸಿಕೊಟ್ಟ)
  • ಪೆಡಲ್ ಶುಭ - ಸೈಕಲ್ ಎಂದರೆ ಪ್ರಾಣ ಹಾಗಾಗಿ ಪೆಡಲ್ ಎನ್ನುವ ನಾಮಕರಣ.

ಈ ರೀತಿಯಾಗಿ ನಮ್ಮ ಪಯಣವನ್ನು ಮುಂದುವರೆಸಿದ ನಾವು ಅರಸೀಕೆರೆಯ ಮಾಲೆಕಲ್ಲು ತಿರುಪತಿ ಬೆಟ್ಟದ ಬುಡವನ್ನು ತಲುಪುವಷ್ಟರಲ್ಲಿ ಸಮಯ ಬೆಳಗ್ಗೆ 2 ಗಂಟೆ( 25 ಡಿಸೆಂಬರ್ 2012).
ತುಂಬು ಚಂದಿರನು ತನ್ನ ಬೆಳದಿಂಗಳನ್ನು ಚೆಲ್ಲಿ ತೋರಿಸಿಕೊಟ್ಟ ದಾರಿಯಲ್ಲಿ ಮೆಟ್ಟಿಲುಗಳನ್ನು ಹತ್ತುತ್ತ ಸಾಗಿ ಮೇಲಿರುವ ದೇವಾಲಯವನ್ನು ತಲುಪುವಷ್ಟರಲ್ಲೂ ಗಡಿಯಾರ 3 ಗಂಟೆ ತೋರಿಸುತ್ತಿತ್ತು.
ಎಲ್ಲರೂ ಅವರವರಿಗೆ ವಹಿಸಿದ್ದ ಅಡುಗೆ ಸಾಮಗ್ರಿ, ಪದಾರ್ಥಗಳನ್ನು ಹೊರತೆಗೆದರು( ತರಕಾರಿಗಳು, ಪಾತ್ರೆ, ಅಡಿಕೆ ಪಟ್ಟಿಯ ತಟ್ಟೆ)
ಪಾಕ ಕ್ರಾಂತಿ ಶುರು ...
ಮಾಲೆಕಲ್ಲು ಬೆಟ್ಟ - ಪಾಕ ಕ್ರಾಂತಿ

ಮಾಲೆಕಲ್ಲು ಬೆಟ್ಟ - ಬಿಸಿ ಬಿಸಿ ಮ್ಯಾಗಿ


ತರಕಾರಿ ಹೆಚ್ಚಿ, ಮ್ಯಾಗಿ ಮಾಡಿ ತಿಂದು ಆ ನಡುಗುವ ಚಳಿಯಲ್ಲಿ ಹೊದಿಕೆಗಾಗಿ ಕಿತ್ತಾಡುತ್ತಾ ಮಲಗಿ ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.
ಛಾಯ ಚಿತ್ರಗಳನ್ನು ತೆಗೆಯಲು ಯುದ್ಧಕ್ಕೆ ನಿಂತ ಯೋಧರಂತೆ ಕೆಲ ಸಹ ಚಾರಣಿಗರು ಸನ್ನದ್ಧರಾಗಿದ್ದರು. ತಿಳಿಯಾಗಸದಲ್ಲಿ ನೇಸರನ ಹೊಂಗಿರಣಗಳು ಮೂಡಿ ಅರುಣೋದಯವಾದ ಕೂಡಲೇ ಎಲ್ಲರ ಕ್ಯಾಮೆರಾ ಕಣ್ಣುಗಳು ಭಾಸ್ಕರನತ್ತಲೇ ಮುಖಮಾಡಿ ಫೋಟೋಗಳನ್ನು ಕ್ಲಿಕ್ಕಿಸುವಲ್ಲಿ ಕಾರ್ಯನಿರತವಾಗಿದ್ದವು.
ಮಾಲೆಕಲ್ಲು ಬೆಟ್ಟ - ಅರುಣೋದಯ
ಮಾಲೆಕಲ್ಲು ಬೆಟ್ಟ - ಗುಂಪು ಛಾಯಾಚಿತ್ರ



ಮಾಲೆಕಲ್ಲು ಬೆಟ್ಟ - ಗುಂಪು ಛಾಯಾಚಿತ್ರ

ಸುಮಾರು 7:30ರ ಹೊತ್ತಿಗೆ ಕೆಳಗಿಳಿಯಲು ಶುರು ಮಾಡಿ ಕೆಳಗಿನ ದೇವಸ್ಥಾನವನ್ನು ತಲುಪುವ ಹೊತ್ತಿಗೆ ಸಮಯ 8:30. ಅಲ್ಲಿ ಲಕ್ಷ್ಮಿ ನಾರಾಯಣನ ದರ್ಶನಗೈದು ನಮ್ಮ ಪಯಣ ಶಿವಾಲಯದತ್ತ ಸಾಗಿತು.
ಚಂದ್ರಮೌಳೇಶ್ವರ ದೇವಾಲಯದ ಶಿಲ್ಪಿಯ ಕೈ ಚಳಕಕ್ಕೆ ತಲೆದೂಗುತ್ತಾ ಸಾಗಿದಂತೆ ಮನದ ಮೂಲೆಯಲ್ಲೊಂದು ಬೇಸರ ... ಮುಸ್ಲಿಮರ ನಿರಂತರ ಧಾಳಿಗೆ ತುತ್ತಾದ ದೇವಾಲಯದ ಶಿಲ್ಪಗಳು ತಮ್ಮ ಪ್ರಾಕೃತಿಕ ಸೌಂದರ್ಯವನ್ನು ಕಳೆದುಕೊಂಡಿರುವುದು ವಿಷಾದಕರ ಸಂಗತಿ( ಪ್ರತಿಯೊಂದು ಶಿಲ್ಪದ ಮುಖವನ್ನೂ ಭಂಗ ಮಾಡಲಾಗಿದೆ). ದೇವಾಲಯದ ಒಳ ಹೊಕ್ಕು ಅಲ್ಲಿನ ಶಿಲ್ಪಕಲೆಯನ್ನು ನೋಡುತ್ತಿದ್ದರೆ ಏನೋ ಒಂದು ರೀತಿಯ ಪುಳಕ. ನವಗ್ರಹಗಳ ಸೂಕ್ಷ್ಮ ಕೆತ್ತನೆ, ಬಳಪದ ಕಲ್ಲಿನಿಂದ ನಿರ್ಮಿತವಾದ ಕಂಬಗಳು ಮತ್ತು ಅದರ ಮೇಲೆ ಮೂಡಿಸಿರುವ ಸೂಕ್ಷ್ಮಾತಿ ಸೂಕ್ಷ್ಮ ಕೆತ್ತನೆಗಳು ಆಗಿನ ಕಾಲದ ಶಿಲ್ಪಿಗಳ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಶಿವಾಲಯ - ಬಳಪದ ಕಲ್ಲಿನ ಕಂಬ


ಶಿವಾಲಯ

ಶಿವಾಲಯ - ಶಿಲಾ ಶಾಸನ
ಅಲ್ಲಿನ ಶಿಲಾಶಾಸನವನ್ನು ನೋಡಿ ಓದಬೇಕೆಂದು ಹೊರಟರೆ ಆಗಿನ ಕಾಲದ ಕನ್ನಡ ನಮಗೆಲ್ಲಿ ಅರ್ಥವಾದೀತು(ಬದಲಾಗುತ್ತಿರುವ ಸಮಾಜದ ಜೊತೆಯಲ್ಲಿ ಭಾಷೆಯ ಬಳಕೆಯೂ ಬದಲಾಗುವುದಲ್ಲವೇ- ಆಗಿನ ಕಾಲದಲ್ಲಿ ಬರೆಯುವಾಗ ಪದಗಳ ವಿಂಗಡಣೆಗೆಂದು ಸ್ಥಳವನ್ನು ಬಿಡುತ್ತಿರಲಿಲ್ಲ )

ಶಿವಾಲಯ - ರಾಜ ನರ್ತಕಿಯರು


ಶಿವಾಲಯ - ಗುಂಪು ಛಾಯಾಚಿತ್ರ

ಶಿವಾಲಯದಿಂದ ಹೊರಟು ಹತ್ತಿರದ ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಕೆರೆಯ ಬಳಿ ಹೊರಟೆವು(ತಿಂದಮೇಲೆ ಕೆರೆ ಕಡೆ ತಾನೇ ಅಂತ  ಅಪಾರ+ಅರ್ಥ ಮಾಡ್ಕೋಬೇಡಿ!! - ನಾವು ಹೋಗಿದ್ದು ತೆಪ್ಪದಲ್ಲಿ ಪ್ರಯಾಣ ಮಾಡಲು)
ತೆಪ್ಪವಿಹಾರ ಮಾಡುತ್ತಾ, ಮಾರ್ಗ ಮಧ್ಯದಲ್ಲಿ ಹಾಡುಗಳನ್ನು ಗುನುಗುತ್ತಾ, ಪ್ರಕೃತಿಯಮ್ಮನ ಮಡಿಲಲ್ಲಿ ಮಗುವಾಗುವುದೇ ಸಂಭ್ರಮ.
ತೆಪ್ಪವಿಹಾರ, ಅರಸೀಕೆರೆ

ಇಲ್ಲಿಂದ ಬೆಂಗಳುರಿನೆಡೆಗೆ ಮುಖ ಮಾಡಿ ಮಾರ್ಗ ಮಧ್ಯೆ ಕಾಮತ್ ಹೋಟೆಲ್ ನಲ್ಲಿ ಆಹಾರವನ್ನು ಸೇವಿಸಿ ಮಹಾನಗರಿಯನ್ನು ತಲುಪುವಷ್ಟರಲ್ಲಿ ಸಮಯ ಸಂಜೆ 5:30.

ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಸುನೀಲ್ ಕುಮಾರ್ - ನನ್ನ ಬೆನ್ನೆಲುಬಾಗಿ ನಿಂತು ಸಹ -ರೂವಾರಿಯಾಗಿ, ಮೊದಲೇ ಮಾತನಾಡಿ ತೆಪ್ಪ ನಡೆಸುವ ಅಂಬಿಗನಿಂದ  ಸಂಚಾರಿ ದೂರವಾಣಿ(MOBILE ) ಸಂಖ್ಯೆಯನ್ನೂ ಸಹ ಪಡೆದು ನಾವು ತೆಪ್ಪವಿಹಾರ ಮಾಡಲು ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದಕ್ಕಾಗಿ. 
ವಿನಯ್, ಅಶುತೋಷ್, ವಿಶ್ವಾಸ್ HK, ಸುನೀಲ್ , ರೋಹಿತ್- ಉತ್ತಮ ಛಾಯಾಚಿತ್ರಗಳಿಗಾಗಿ  
ವಿಶ್ವಾಸ್ M, ಸಂಧ್ಯ, ಶೃತಿ - ತರಕಾರಿ ತಂದದ್ದಕ್ಕಾಗಿ
ಸಪ್ನಾ, ಹರ್ಷ, ಜಗದೀಶ್, ನಿರಂಜನ್, ಶುಭ - ಮ್ಯಾಗಿ ಪ್ಯಾಕೆಟ್ ತಂದದ್ದಕ್ಕಾಗಿ
ನಾಗೇಂದ್ರ, ರಾಮ್  - ಟಾರ್ಪಾಲಿನ್ ಹೊತ್ತು ತಂದದ್ದಕ್ಕಾಗಿ
ವಿಶ್ವಾಸ್ HK - ಅಡುಗೆ ಮಾಡುವ ಪಾತ್ರೆ ತಂದದ್ದಕ್ಕಾಗಿ
ಸುಧೀಂದ್ರ, ರಾಹುಲ್, ರೋಹಿತ್, ಅರುಣ್, ವಿನಯ್, ಶೇಖರ್, ಅಶುತೋಷ್, ಅರವಿಂದ್ - ನೀರಿನ ವ್ಯವಸ್ಥೆಗಾಗಿ
ರಮ - ಹಳೆ ದಿನಪತ್ರಿಕೆಯನ್ನು ತಂದದ್ದಕ್ಕಾಗಿ.

ಮಾಹಿತಿ:

ಸ್ಥಳ: ಮಾಲೆಕಲ್ಲು ತಿರುಪತಿ ( MALEKALLU TIRUPATI ) - ಅರಸೀಕೆರೆ, ಹಾಸನ ಜಿಲ್ಲೆ , ಕರ್ನಾಟಕ.

ಚಾರಣ ಶುರು ಮಾಡುವ ಸ್ಥಳ: ಅರಸೀಕೆರೆ

ದೂರ: ಬೆಂಗಳೂರಿನಿಂದ  172 ಕಿ.ಮೀ. 
ಪರ್ವತರೋಹದ ದರ್ಜೆ : ಸುಲಭ 

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ: ಬೆಂಗಳೂರು( BH ರಸ್ತೆ )- ತುಮಕೂರು - ತಿಪಟೂರು - ಅರಸೀಕೆರೆ

  • ವಿಶೇಷ ಸೂಚನೆ - ಮಾರ್ಗ ಮಧ್ಯೆ 2 ಕಡೆ ಸುಂಕ ಪಾವತಿ ಮಾಡಬೇಕಾಗುತ್ತದೆ.
  •  


                                                                                                         -ಪೊರ್ಕಿ ಪಲ್ಲವಿ