ಶನಿವಾರ, ಜನವರಿ 4, 2014

ಶಿಲೆಯೊಳಗಣ ಕಲೆ - 1 : ಅರಳಗುಪ್ಪೆ ಮತ್ತು ತುರುವೇಕೆರೆ - 15 ಡಿಸೆಂಬರ್ 2013


ಕಾಲನ ಸೆಳೆತಕ್ಕೆ ಸಿಕ್ಕು ಅವಸಾನದ ಅಂಚಿನಲ್ಲಿರುವ, ಅನೇಕ ಐತಿಹಾಸಿಕ ಕೌತುಕಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಅನೇಕ ದೇವಾಲಯಗಳು ನಮ್ಮ ದೇಶದಲ್ಲಿವೆ.
 BASC(www.bangaloreascenders.org) ನ ವತಿಯಿಂದ "Heritage Photography" ಎಂಬ ಹಣೆಪಟ್ಟಿಯನ್ನು ಹೊತ್ತ ಸರಣಿ(Series) ಯೊಂದಿಗೆ ನಮ್ಮ ನಾಡಿನ ಈ ರೀತಿಯ ಶಿಲ್ಪಕಲೆಗಳ ಕಣಜಕ್ಕೆ ಲಗ್ಗೆ ಇಟ್ಟು, ಆ ಜಾಗದ ವಿಶೇಷತೆ, ದೇವಾಲಯಗಳ ವೈಶಿಷ್ಟ್ಯ ಈ ಎಲ್ಲವುಗಳ ಬಗೆಗೆ ಮಾಹಿತಿ ಶೇಖರಣೆ ಮಾಡುವ ಒಂದು ಪುಟ್ಟ ಪ್ರಯತ್ನ.  


                         Heritage Photography - Aralguppe & Turuvekere - HP1


               
ಕನ್ನಡ ತರಗತಿಯಲ್ಲಿ ಪಾಠ ಕೇಳುತ್ತಿರಬೇಕಾದರೆ ಶ್ರೀನಿವಾಸ ಮೇಷ್ಟ್ರು ನಮ್ಮ ತುಮಕೂರು ಜಿಲ್ಲೆಯ ಅರಳಗುಪ್ಪೆ ದೇವಾಲಯದ ಬಗ್ಗೆ ಹೇಳಿದರು. ಗಿರಿ ಜೊತೆ ಚರ್ಚಿಸಿ ಅರಳಗುಪ್ಪೆ ಮತ್ತು ಹತ್ತಿರದ ತುರುವೇಕೆರೆ ಸ್ಥಳಗಳಿಗೆ  Event ಹಾಕಿದ್ದು ಆಯಿತು.
ದಾಖಲಾತಿಗಳು ಬಂದು ಒಟ್ಟಾರೆ 9 ಮಂದಿ ಬೆಳಗ್ಗೆ 6 30ರ ಶಿವಮೊಗ್ಗ ರೈಲಿಗೆ ಅರಳಗುಪ್ಪೆಗೆ ಹೊರಟೆವು.
ರೈಲಿನಲ್ಲಿ ಕ್ಯಾತ್ಸಂದ್ರ ದಲ್ಲಿ ಬಂದ ತಟ್ಟೆ ಇಡ್ಲಿ ತಿಂದು, ಅರಳಗುಪ್ಪೆಯಲ್ಲಿ ಇಳಿಯುವಷ್ಟರಲ್ಲಿ ಸಮಯ 9 30.

ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರ ಸಾಗುತ್ತಿದ್ದಾಗ ಸುರೇಶ, ಈ ದೇವಸ್ಥಾನವು ಪುರಾತತ್ವ ಇಲಾಖೆಗೆ ಸೇರಿದೆಯೇ ಎಂದು ಕೇಳಿದ. ನಾನು ಹೌದು ಎಂದದ್ದಕ್ಕೆ ಅಲ್ಲಿ ನೋಡು ಸೌರ ವಿದ್ಯುತ್ ಕಂಬ (Solar Light ), ಅಲ್ಲಿಯೇ ಇರುವುದು ದೇವಸ್ಥಾನ ಎಂದು ತೊರಿಸಿದ.
ಅಲ್ಲಿಂದ ಸಾಗಿ ಕೇಶವ ದೇವಾಲಯವನ್ನು ತಲುಪಿದೆವು.

ಕೇಶವ ದೇವಾಲಯ, ಅರಳಗುಪ್ಪೆ:
                                           ಕೇಶವ ದೇವಾಲಯ, ಅರಳಗುಪ್ಪೆ                 ಕೃಪೆ: ಚಂದ್ರಕಲ
   ಕೇಶವನ ಸುಂದರ ಮೂರ್ತಿಯಿದೆ. ಎಡಗಡೆ ಗಣೇಶನ ವಿಗ್ರಹವಿದ್ದು, ಬಲಗಡೆಯಲ್ಲಿ ತನ್ನ ವಾಹನವಾದ ಕೋಣದ  ಮೇಲೆ ತನ್ನ ಬಲಗಾಲನ್ನಿಟ್ಟು, ಮಹಿಷನನ್ನು ಸಂಹರಿಸುತ್ತಿರುವ ಬಳಪದ ಕಲ್ಲಿನ ಮಹಿಷಾಸುರ ಮರ್ಧಿನಿಯ ವಿಗ್ರಹವಿದೆ  ಮತ್ತು ವಿಗ್ರಹದ ಕೆಳಭಾಗದಲ್ಲಿ ಹೊಯ್ಸಳ ಲಾಂಛನವಿದೆ.

ಮಹಿಷಾಸುರಮರ್ಧಿನಿ, ಕೇಶವ ದೇವಾಲಯ, ಅರಳಗುಪ್ಪೆ


         ಹೆಣ್ಣೆಂದರೆ ಶಕ್ತಿಯೋ.....




ಹೊಯ್ಸಳ ಲಾಂಛನ, ಕೇಶವ ದೇವಾಲಯ, ಅರಳಗುಪ್ಪೆ

















ಪ್ರತಿಯೊಂದು ಕಂಬಗಳ ಸೂಕ್ಷ್ಮ ಕುಸುರಿಯ ಕೆತ್ತನೆಯು ದೇವಾಲಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಷಟ್ಭುಜ ಸರಸ್ವತಿ,ಅರಳಗುಪ್ಪೆ




ಹೆಣ್ಣೆಂದರೆ ಯುಕ್ತಿಯೋ ...... 

ದೇವಾಲಯದ ಹೊರಭಾಗದ ಭಿತ್ತಿಯ ಮೇಲಿರುವ ಷಟ್ಭುಜ ಸರಸ್ವತಿಯ ಕೆತ್ತನೆಯೂ ನೋಡಲು ಮನೋಜ್ಞವಾಗಿದೆ.










ಕೇಶವ ದೇವಾಲಯದ ದಕ್ಷಿಣ ಭಾಗದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಉಗ್ರ ನರಸಿಂಹ ದೇವಾಲಯದೊಳಗೆ ಕಾಲಿಟ್ಟೆವು.
ಗರ್ಭಗುಡಿಯಲ್ಲಿ ಕಂಬದ ಮೇಲಿನ ಹಿರಣ್ಯಕಶಪುವನ್ನು ಕೊಲ್ಲುತ್ತಿರುವ ನರಸಿಂಹನ ವಿಗ್ರಹವು ಭಂಗವಾಗಿದ್ದು, ಅದರ ಮುಂದೆ ಬೇರೊಂದು ಉಗ್ರ ನರಸಿಂಹನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.
ದೇವಾಲಯದ ತಳ ಭಾಗದ ಕೆತ್ತನೆಯಲ್ಲಿ ಆನೆಗಳ ಸಾಲುಗಳನ್ನು, ಅದರ ಮೇಲೆ ತುರಗದ ಸಾಲುಗಳನ್ನು ನೋಡಿದರೆ ಹೊಯ್ಸಳ ಶೈಲಿಯ ದೇಗುಲವೆಂದು ಆರಾಮಾಗಿ ಗುರುತಿಸಬಹುದು.


ದೇವಾಲಯದ ಭಿತ್ತಿಯಲ್ಲಿನ ಶಿಲ್ಪಗಳ ಪೀಠ ಭಾಗದಲ್ಲಿ ಶಿಲ್ಪಿ "ಹೊನ್ನೂಜ" ನ ಹೆಸರಿದೆ.









 

 ಹೆಣ್ಣೆಂದರೆ ಸೌಂದರ್ಯವೋ......  

ದೇವಾಲಯದ ಹತ್ತಿರದಲ್ಲಿ ಒಂದು ವೀರಗಲ್ಲಿದ್ದು ಅದರ ಮೇಲೆ ಯುದ್ಧಮಾಡುತ್ತಿರುವ ವೀರರ ಚಿತ್ರ ಮತ್ತು ಅದರ ಮೇಲೆ ಮೂರು ಕನ್ಯೆಯರ ಚಿತ್ರಗಳನ್ನು ಕೆತ್ತಲಾಗಿದೆ.

* ವೀರಗಲ್ಲುಗಳು - ಯುದ್ಧದಲ್ಲಿ ಮಡಿದ ವ್ಯಕ್ತಿಯ ಸ್ಮರಣೆಗಾಗಿ ನೆಡುವ ಕಲ್ಲು. ಯಾವುದಾದರು ಆಯುಧದಲ್ಲಿ ( ಗದೆ, ಖಡ್ಗ, ಬಿಲ್ಲು ಬಾಣ, ಈಟಿ, ಫಿರಂಗಿ) ಯುದ್ಧ ಮಾಡುತ್ತಿರುವ ವ್ಯಕ್ತಿಗಳ ಭಂಗಿಯ ಚಿತ್ರ ಮತ್ತು ಕನ್ನಿಕೆಯರ ಚಿತ್ರವಿರುತ್ತದೆ. ಸತ್ತ ವೀರನನ್ನು ಕನ್ನಿಕೆಯರು ಸ್ವರ್ಗಕ್ಕೆ ಒಯ್ಯುತ್ತಾರೆ ಎಂಬ ನಂಬಿಕೆಯಿದೆ. ಲಿಪಿ ಸಹಿತ ಮತ್ತು ಲಿಪಿ ರಹಿತ ವೀರಗಲ್ಲುಗಳಿವೆ. 

ಅಲ್ಲಿಂದ ಮುಂದೆ ಸಾಗಿ ಹತ್ತಿರದ ಬೇಕರಿಯಲ್ಲಿ ತಂಪು ಪಾನೀಯ ಮತ್ತು ಬಾಳೆಹಣ್ಣನ್ನು ಸೇವಿಸಿ ಕಲ್ಲೇಶ್ವರ ದೇವಾಲಯದತ್ತ ನಡೆದೆವು.

ಕಲ್ಲೇಶ್ವರ ದೇವಾಲಯ, ಅರಳಗುಪ್ಪೆ:


ಈ ಆಲಯವು ಕ್ರಿ. ಶ.  1008 ರ (11ನೇ ಶತಮಾನ) ತ್ರಿಭುವನ ವಲ್ಲಭ ರಾಜನ ಕಾಲದ ದೇವಾಲಯವೆಂದು ಹೇಳಲಾಗುತ್ತದೆ.
ದೇವಾಲಯದ ಮುಂದೆ ದೊಡ್ಡ ಬಸವನ ವಿಗ್ರಹವಿದ್ದು,
ಸೂರ್ಯದೇವ,ಅರಳಗುಪ್ಪೆ

ಬಸವನ ಹಿಂದೆ ಒಂದು  ಪುಟ್ಟ ಸೂರ್ಯದೇವನ  ಗುಡಿಯಿದೆ. ಸೂರ್ಯನ ಸುಂದರ ವದನವು ತೇಜಸ್ಸಿನಿಂದ ಕೂಡಿದೆ.








ಶಿವ-ಪಾರ್ವತಿ,ಅರಳಗುಪ್ಪೆ




ಹೆಣ್ಣೆಂದರೆ ಅನುರಾಗವೋ  ......





ಬಸವನ ಎಡಭಾಗದ ಗುಡಿಯಲ್ಲಿ ಅನುಪಮ ದಾಂಪತ್ಯದ ಸಂಕೇತದಂತೆ ಕಂಡು ಬರುವ ಶಿವ ಪಾರ್ವತಿಯರ ಏಕಶಿಲಾ ವಿಗ್ರಹವು ಅತ್ಯಂತ ಆಕರ್ಷಣೀಯವಾಗಿದೆ. ಪಾರ್ವತಿ ದೇವಿಯ ದೊಡ್ಡ ತಾಳಿ ಬೊಟ್ಟು,ಮುಖದ ಮೇಲಿನ ಅರಿಶಿಣ ವಿಗ್ರಹದ ಮೇಲಿನ ಸೌಂದರ್ಯವನ್ನು ಮತ್ತೂ ಹೆಚ್ಚಿಸಿತ್ತು.  
ದೇವಾಲಯದ ಒಳಭಾಗದ ಮೆಲ್ಛಾವಣಿಯಲ್ಲಿ ಈಶಾನ್ಯ ಭಾಗದಲ್ಲಿ ನಂದಿ, ಭೃಂಗಿ ಸಹಿತ ಶಿವ ಪಾರ್ವತಿಯರ ಕೆತ್ತನೆಯಿದೆ.


 
ಬಸವನ ಮುಂದೆ ದೊಡ್ಡ ಲಿಂಗವಿದ್ದು, ಎಡಕ್ಕೆ 2 ಮತ್ತು ಬಲಕ್ಕೆ 3 ಲಿಂಗಗಳಿರುವುದರಿಂದ ಈ ದೇವಾಲಯಕ್ಕೆ ಷಡ್ಲಿಂಗ (6 ಲಿಂಗಗಳು ) ದೇವಾಲಯವೆಂಬ ಹೆಸರೂ ಇದೆ.

ಬೇಕರಿಯ ಮಾಲೀಕರ ಸಹಾಯ ಪಡೆದು ಮೊದಲೇ ಗೊತ್ತು ಮಾಡಿಕೊಂಡಿದ್ದ ಒಮ್ನಿ(Omni) ವಾಹನದಲ್ಲಿ ತುರುವೇಕೆರೆಯತ್ತ ಸಾಗಿದೆವು.
ಲಲಿತ & ರಾಮಚಂದ್ರರವರ ಮನೆಗೆ ಹೋಗಿ ಸ್ವಲ್ಪ ಸುಧಾರಿಸಿಕೊಂಡು,  ಅವರು ತಮ್ಮ ಮನೆಯಲ್ಲೇ ಪುಟ್ಟದಾಗಿ ನಿರ್ಮಿಸಿರುವ ವಾಚನಾಲಯವನ್ನು ನೋಡಿ,  ಲಲಿತ ಆಂಟಿ ಮತ್ತು ಸುಷ್ಮಾ ಸೇರಿ ಮಾಡಿದ್ದ ಪುಷ್ಕಳ ಭೋಜನ ಹೊಡೆದು ಒಂದು ರೌಂಡು ನಿದ್ದೆ ಮಾಡಿ ರಾಮಚಂದ್ರ ಅಂಕಲ್ ಸಾರಥ್ಯದಲ್ಲಿ ತುರುವೇಕೆರೆಯ ದೇವಾಲಯಗಳ ದರ್ಶನಕ್ಕೆ ಹೊರಟೆವು.

ತುರುವೇಕೆರೆಯ ಬಗ್ಗೆ ಒಂದಷ್ಟು ಸ್ಥಳ ಮಾಹಿತಿ:

ಹಿಂದೆ ತುರುವೇಕೆರೆಯಲ್ಲಿ ತುರುವೇ ಗಿಡಗಳು ಹೆಚ್ಚಾಗಿ ಬೆಳೆಯಿತ್ತಿದ್ದು, ಇವು ಹಸುಗಳಿಗೆ ತುಂಬಾ ಉಪಯುಕ್ತವಾದ್ದರಿಂದ ಈ ಊರು ತುರುಗೆರೆಯಾಗಿ ಕಾಲಾನಂತರದಲ್ಲಿ ತುರುವೇಕೆರೆಯಾಗಿದೆ.
ತುರುವೇಕೆರೆಯನ್ನು ನಿರ್ಮಿಸಿದವನು ಹೊಯ್ಸಳರ  3ನೇ ನರಸಿಂಹ  ದಂಡನಾಯಕ.ತುರುವೇಕೆರೆ ಹೊಯ್ಸಳರ ಕಾಲದಲ್ಲಿ ಒಂದು ದೊಡ್ಡ ಅಗ್ರಹಾರವಾಗಿತ್ತು.
 ತುರುವೇಕೆರೆಯನ್ನು ಮೊದಲು ಆಳಿದ ಮನೆತನ - ಶಾತವಾಹನರು.

ಮೂಲೆ ಶಂಕರ ದೇವಾಲಯ, ತುರುವೇಕೆರೆ:

ಮೂಲೆ ಶಂಕರ ದೇವಾಲಯ, ತುರುವೇಕೆರೆ

ಈ ದೇವಾಲಯವು  ತುರುವೇಕೆರೆಯಲ್ಲಿ ಕಟ್ಟಿದ ಮೊದಲ ದೇವಾಲಯವಾದ್ದರಿಂದ ಮೂಲ ಶಂಕರ ದೇವಾಲಯ ಎಂದು ಹೆಸರು ಪಡೆದು ನಂತರ ಜನರ ಬಾಯಿಯಲ್ಲಿ ಮೂಲೆ ಶಂಕರ ದೇವಾಲಯವೆಂದು ಬದಲುಗೊಂಡಿದೆ.
ಕರ್ನಾಟಕದಲ್ಲಿ ಅಪರೂಪವಾಗಿದ್ದು, 2 ಸ್ವತಂತ್ರವೆನಿಸುವ "ಭೂಮಿಜ" ಮಾದರಿಯ ದೇವಾಲಯಗಳಲ್ಲಿ ಇದೂ ಒಂದು ( ಮತ್ತೊಂದು ನುಗ್ಗೆಹಳ್ಳಿಯ ಸದಾಶಿವ ದೇವಾಲಯ)

*ಭೂಮಿಜ ಮಾದರಿ - ಉತ್ತರ ಭಾರತದ ವಾಸ್ತುಶಿಲ್ಪ ಶೈಲಿ
ಪಶ್ಚಿಮ ಭಾರತ ಮತ್ತು ಮಾಳ್ವ ಪ್ರದೇಶಗಳಲ್ಲಿ ಕಂಡುಬರುವ ದೇವಾಲಯಗಳ ಶಿಖರದಲ್ಲಿ  ಈ ಶೈಲಿಯನ್ನು ಕಾಣಬಹುದು.



ದೇವಾಲಯದ ಗೋಪುರವು ಮಧ್ಯ ಪ್ರದೇಶದ ಖಜುರಾಹೋ ದೇವಾಲಯವನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ.

ದೇವಾಲಯದ ಒಳಗೆ ಹೊಯ್ಸಳರ ಕಾಲದ ಭೈರವ,ವೀರಭದ್ರ, ಸಪ್ತ ಮಾತೃಕೆಯರು ಮತ್ತು ಷಣ್ಮುಖನ ವಿಗ್ರಹಗಳಿವೆ.

ದೇವಾಲಯದ ಹೊರ ಭಿತ್ತಿಯಲ್ಲಿ ಬಾಕಣ, ಇಕ್ಜುರ ಎಂಬ ಶಿಲ್ಪಿಗಳ ಹೆಸರಿದೆ.


ತುರುವೇಕೆರೆ:




ದೇವಾಲಯದ ಬಾಗಿಲು ಮುಚ್ಚಿದ್ದಾಗಲೂ ದೇವಾಲಯದ ಪೂರ್ವದ ಕಿಂಡಿಯಿಂದ ಮೂಲ ವಿಗ್ರಹದ ದರ್ಶನ ಮಾಡಬಹುದು.
ಹುಣ್ಣಿಮೆಯ ದಿನಗಳಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತಿರುವ  ಕೆರೆಯ ನೀರಿನ ಮೇಲೆ ಚಂದ್ರನ ಕಿರಣಗಳು ಬಿದ್ದು ಅದು ಪ್ರತಿಫಲಿತವಾಗಿ  ಅದು ಈ ಕಿಂಡಿಯ ಮುಖಾಂತರ ಸಾಗಿ ಶಿವಲಿಂಗದ ಮೇಲೆ ಬೀಳುವ ವ್ಯವಸ್ಥೆ ಇರಬಹುದೆಂದು ಪ್ರಾಚ್ಯ ವಸ್ತು ಸಂಶೋಧಕರು ಊಹಿಸಿದ್ದಾರೆ. ಕೆರೆಯ ನೀರು ಹಿಂದೆ ದೇವಸ್ಥಾನದ ತಳಬಾಗದವರೆಗೂ ಹರಿಯುತ್ತಿದ್ದು ಈಗ ಒತ್ತುವರಿಯಿಂದಾಗಿ ಕೆರೆಯು ಸ್ವಲ್ಪ ದೂರ ಸರಿದಿದೆ.


ಚನ್ನಕೇಶವ ದೇವಾಲಯ, ತುರುವೇಕೆರೆ
ಕ್ರಿ. ಶ. 1258 (13ನೇ ಶತಮಾನ) ರ ಈ ದೇವಾಲಯದ ನಿರ್ಮಾತೃ ಸೋಮಣ್ಣ.
ದೇವಾಲಯದ ಕಂಬದ ಮೇಲೆ ದಾನ ಶಾಸನವಿದೆ - ಕೋಟೆ ಶಂಕರ ದೇವ ಎಂಬ ಬ್ರಾಹ್ಮಣನಿಗೆ ಊರ ಮಹಾಜನರ ಸಮ್ಮುಖದಲ್ಲಿ ಸೊಮಣ್ಣನು ತನ್ನ ಮಾತಾ ಪಿತೃಗಳಿಗೆ ಸದ್ಗತಿ ದೊರೆಯಲೆಂದು ದೇವಾಲಯವನ್ನು ದಾನ ಮಾಡಿದನು. 5 ಜನರ ಸಹಿ ಈ ದಾನ ಶಾಸನದಲ್ಲಿದೆ.
ಚನ್ನಕೇಶವ ದೇವಾಲಯ, ತುರುವೇಕೆರೆ



ಗಂಗಾಧರೇಶ್ವರ ದೇವಾಲಯ, ತುರುವೇಕೆರೆ

ಶಿವನ ತಲೆಯ ಮೇಲೆ ಕುಳಿತಿರುವ ಗಂಗೆ ಮತ್ತು ಶಿವನ ಪ್ರಭಾವಳಿಯಿಂದ ಗಂಗೆ ಹರಿಯುತ್ತಿರುವ ಒಂದು ಅಪರೂಪದ ಕೆತ್ತನೆ. ಶಿವ-ಗಂಗೆ ಒಟ್ಟಿಗೆ ಇರುವ ಕೆತ್ತನೆಗಳು ಅತಿ ವಿರಳವೆಂದೇ ಹೇಳಬಹುದು.










7 ಅಡಿಯ ನಂದಿ ವಿಗ್ರಹವು ದೇವಾಲಯದ ಮುಂದಿದ್ದು,  ನಂದಿಯ ಬೆನ್ನಿನ ಹತ್ತಿರ ನಿಂತಿದ್ದರೆ ಅದರ ಮೈ ಮೇಲಿನ ನುಣುಪಿನಲ್ಲಿ ನಮ್ಮ ಮುಖ ಕಾಣುತ್ತಿತ್ತು .ಅದರ ನುಣುಪನ್ನು ಮುಟ್ಟಿಯೇ ನೋಡಬೇಕು.
ನಂದಿಯ ಬಾಲದ ಮೇಲಿನ ಬಾಚಣಿಕೆಯಂತಹ ಸೂಕ್ಷ್ಮ ಕೆತ್ತನೆ ಎಂತಹವರಿಗಾದರೂ ಒಮ್ಮೆ ಮುಟ್ಟಿ ಅನುಭವಿಸಬೇಕೆನಿಸುತ್ತದೆ.
ದೇವಾಲಯದ ಮತ್ತೊಂದು ವಿಶೇಷವೆಂದರೆ ಕಲ್ಲಿನಿಂದ ಮಾಡಿರುವ ಗಂಟೆ. ಯಾವುದೇ ಲೋಹವನ್ನು ಉಪಯೋಗಿಸದೆ ಮಾಡಿರುವ ಈ ಗಂಟೆಯನ್ನು ಬಡಿದರೆ ಲೋಹದ ಗಂಟೆಯಂತೆ ಧ್ವನಿಯು ಹೊರ ಹೊಮ್ಮುತ್ತದೆ ಎಂದು ರಾಮಚಂದ್ರ ಅಂಕಲ್ ಹೇಳಿದರು. ಸರಿ ಒಂದು ಕೈ ನೋಡೋಣವೆಂದು ನಾವು ಒಂದು ಚಿಕ್ಕ ಕಲ್ಲನ್ನು ತೆಗೆದುಕೊಂಡು ಎಗರಿ ಎಗರಿ ಅದಕ್ಕೆ ಹೊಡೆದು ಹೌದೆಂದು ದೃಢಪಡಿಸಿಕೊಂಡೆವು.
ಅದರ ಬಳಿಯೇ ಒಂದು ಭಿತ್ತಿಯ ಮೇಲೆ ತನ್ನ ಕಣ್ಣನ್ನು ಶಿವನಿಗೆ ಅರ್ಪಿಸುತ್ತಿರುವ ಬೇಡರ ಕಣ್ಣಪ್ಪನ ಕೆತ್ತನೆಯಿದೆ.

ಬೇಟೆರಾಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿರುವುದರಿಂದ ಆ ಗುಡಿಯನ್ನು ನೋಡಲು ಆಗಲಿಲ್ಲ.

ಇಷ್ಟೆಲ್ಲಾ ನೋಡಿಕೊಂಡು ಲಲಿತ ಆಂಟಿ, ಸುಷ್ಮಾ, ರಾಮಚಂದ್ರ ಅಂಕಲ್ ಇಂದ ಬೀಳ್ಕೊಂಡು ಬೆಂಗಳೂರಿನ ಬಸ್ ಹತ್ತುವಷ್ಟರಲ್ಲಿ ಗಂಟೆ 6 30.

ವಿಶೇಷ ಕೃತಜ್ಞತೆಗಳು:
 ರಾಮಚಂದ್ರ ಅಂಕಲ್--- ತಮ್ಮ ಮನೆಗೆ ಕರೆದು ತಮ್ಮ ಪುಟ್ಟ ಗ್ರಂಥಾಲಯವನ್ನು ತೋರಿಸಿ, ದೇವಸ್ಥಾನದ ಪುರೋಹಿತರಿಗೆ ಹೇಳಿ ದೇವಾಲಯದ ಬಾಗಿಲು ತೆರೆಸಿ ಆ ಸ್ಥಳಗಳ ಪರಿಚಯ ಮಾಡಿಕೊಟ್ಟದ್ದಕ್ಕೆ.
ಲಲಿತ ಆಂಟಿ, ಸುಷ್ಮಾ - ಅತಿಥಿ ದೇವೋ ಭವ ಎಂದು ನಮಗೆಲ್ಲ ಪುಷ್ಕಳ ಭೋಜನ ಹಾಕಿ(ಅನ್ನ, ಹುಳಿ, ರಸಂ, ಜಾಮೂನ್) ಆಮೇಲೆ ಚಕ್ಕೋತೆ ಹಣ್ಣನ್ನು ಸಹ ಕೊಟ್ಟದ್ದಕ್ಕೆ.


ಮಾಹಿತಿ:

ಸ್ಥಳ:
ಅರಳಗುಪ್ಪೆ ಮತ್ತು ತುರುವೇಕೆರೆ( Aralaguppe & Turuvekere) - ತುಮಕೂರು ಜಿಲ್ಲೆ, ಕರ್ನಾಟಕ.
ದೂರ:
ಬೆಂಗಳೂರಿನಿಂದ  125 ಕಿ.ಮೀ .
ತಲುಪುವ ಬಗೆ:
ಸ್ವಂತ ವಾಹನ/ ಬಸ್ಸು/ರೈಲು
* ಬೆಳಗ್ಗೆ 6 30 ಕ್ಕೆ ಹೊರಡುವ ಶಿವಮೊಗ್ಗ ರೈಲನ್ನು ಹತ್ತಿದರೆ ಅರಳಗುಪ್ಪೆಯಲ್ಲಿ ಇಳಿಯಬಹುದು( ದರ-25 ರೂ.)



                                                                                                                                   ಸಶೇಷ.....