ಮಂಗಳವಾರ, ಜುಲೈ 2, 2013

ಸೋಲಿಗರ ಬೀಡಿನಲ್ಲಿ - 29/06/2013


ನಮ್ಮ ಬೆಂಗಳೂರು ಅಸೆಂಡರ್ಸ್ (www.bangaloreascenders.org) ವತಿಯಿಂದ ಪ್ರತಿ ತಿಂಗಳು ಹಮ್ಮಿಕೊಳ್ಳುವ JOY OF GIVING ಗೆ ಕಾರಣಾಂತರಗಳಿಂದ ಹೋಗಲು ಆಗುತ್ತಿರಲಿಲ್ಲ. ಈ ಬಾರಿ ಅಂಬರೀಷ್ ರವರ ಸೋಲಿಗರಿಗೆ ಸಮವಸ್ತ್ರಗಳನ್ನು ಹಂಚುವ ಮಿಂಚಂಚೆ ನೋಡಿದಾಕ್ಷಣ ಖುಷಿನೋ ಖುಷಿ. ತಕ್ಷಣವೇ ಅವರಿಗೆ ದೂರವಾಣಿ ಕರೆ ಮಾಡಿ ನಾನು ನಿಮ್ಮೊಟ್ಟಿಗೆ ಬರುತ್ತೇನೆಂದು ತಿಳಿಸಿದೆ.
ಹಿಂದಿನ ದಿನ ಕರೆ ಮಾಡಿ ಬೆಳಗ್ಗೆ 4:25ಕ್ಕೆ ನಮ್ಮ PG ಬಳಿ ಬಂದು ಪಿಕ್ ಮಾಡುವುದಾಗಿ ಹೇಳಿದರು.

29/6/2013 - ಶನಿವಾರ:
ಹೇಳಿದ ಸಮಯಕ್ಕೆ ಕೊಳ್ಳೇಗಾಲಕ್ಕೆ ಹೊರಡಲು ಯುದ್ಧಕ್ಕೆ ಸಿದ್ಧಳಾದ ಸಿಪಾಯಿಯಂತೆ ಕಾಯುತ್ತಿದ್ದೆ. ಸರಿಯಾಗಿ 4:30ಕ್ಕೆ ಅಂಬರೀಷ್ ರವರಿಂದ ಕರೆ ಬಂದಿತು. ನಾನು ಹೋಗಿ ವಾಹನ ಹತ್ತಿದೆ. Qualis ಗಾಡಿ ಕೊಳ್ಳೇಗಾಲದತ್ತ ಮುಖ ಮಾಡಿತು.ದಾರಿಯಲ್ಲಿ ತಂದಿದ್ದ ಬಿಸ್ಕತ್ತು, ಒಣ ದ್ರಾಕ್ಷಿಗಳ ಸಮಾರಾಧನೆ ನಡೆಯುತ್ತಿತ್ತು. ಕೊಳ್ಳೇಗಾಲದಲ್ಲಿ ನಮ್ಮ ಬೆಳಗಿನ ಉಪಹಾರವನ್ನು ಮುಗಿಸಿದೆವು. ಏನೂ ತಿನ್ನೋಲ್ಲವೆಂದು ಹೇಳುತ್ತಿದ್ದ ರಾಜೇಶ್ ಭರ್ಜರಿ ಬ್ಯಾಟಿಂಗ್ ಆಡಿದರು.
ನಾವು ಕರಳಕಟ್ಟೆಯ ಬಳಿ ಸಾಗಿ ಅಲ್ಲಿನ ಸೋಲಿಗ ಮಕ್ಕಳಿಗೆಲ್ಲಾ ಸಮವಸ್ತ್ರ ಹಂಚಿದೆವು. ನಾನು ಮಕ್ಕಳಿಗೆ ಒಂದು ಪದ್ಯ ಹಾಡಲು ಕೇಳಿದೆ. ಎಲ್ಲರೂ ಒಕ್ಕೊರಲಿನಿಂದ Come little Children... ಎಂದು ಹಾಡಿದರು(ಮುಂದುಕ್ ಬರಾಕಿಲ್ಲ ಕ್ಷಮಿಸಿ ಕನ್ನಡ ಮಾಧ್ಯಮದಲ್ಲಿ ಓದಿರೋದು ನಾನು). ಮುದ್ದು ಮುಖದ ಕಂದಮ್ಮಗಳಿಂದ ಬೀಳ್ಕೊಂಡು ಶಾಲೆಯ ಮೇಷ್ಟರಾದ ಕೃಷ್ಣರವರಿಗೆ ನಮ್ಮ ಕೃತಜ್ಞತೆಗಳನ್ನು ತಿಳಿಸಿ ಕಗ್ಗಲಿಗುಂದಿ ಶಾಲೆಯ ಕಡೆಗೆ ಪಯಣ ಬೆಳೆಸಿದೆವು.

ದಾರಿಯಲ್ಲಿ ಕಂಡ ಸಿದ್ದಪ್ಪಾಜಿ ಬೆಟ್ಟದ ಬಗ್ಗೆ ಹಾಗು ಅಲ್ಲಿ ನಡೆಯುವ ಶಿವರಾತ್ರಿ ಉತ್ಸವದ ಬಗ್ಗೆ ಅನಿತಾ ಹಾಗು ಅಂಬಿ ಮಾಹಿತಿಯನ್ನು ನೀಡುತ್ತಿದ್ದರು.

ತುಮಕೂರಿನಿಂದ ಕೊಂಡೊಯ್ದಿದ್ದ ಹಣ್ಣುಗಳ ಸೇವನೆ. ಕಗ್ಗಲಿಗುಂದಿಯ ಮಕ್ಕಳಿಗೆ ಸಮವಸ್ತ್ರ ಹಂಚಿ, ಅಲ್ಲಿನ ಗುರುಗಳಾದ ಚಂದ್ರು ರವರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಕೆರೆದಿಂಬ ಶಾಲೆಯತ್ತ ಹೊರಟೆವು.

ಕೆರೆದಿಂಬ ಪೋಡಿ(ಕಾಲೋನಿ) ಗೆ ಹೋದರೆ ಅಲ್ಲೊಂದು ಸುಂದರ ಗಿಳಿ ಹಲಸಿನ ಬೀಜವನ್ನು ತಿನ್ನುತ್ತಿತ್ತು. ಅದರೊಟ್ಟಿಗೆ ಎಲ್ಲರ Photo Session.

ಯಾರೋ ಒಬ್ಬರು ಅಲ್ಲಿನ ಮೂಸಂಬಿ ಗಿಡ ಹತ್ತಿ ಹಣ್ಣು ಕಿತ್ತು ಎಸೆಯುತ್ತಿದ್ದರು. ಅದನ್ನು ಹಿಡಿಯುವಲ್ಲಿ ರಾಜೇಶ್ - ಅಂಬಿಗೆ ಪೈಪೋಟಿ. ನಾಗರೀಕತೆಯಿಂದ ತುಸು ದೂರವೇ ಉಳಿದಿರುವ, ಮುಗ್ಧತೆಯನ್ನು ತಮ್ಮ ಮೊಗದಲ್ಲಿ ಉಳಿಸಿಕೊಂಡಿರುವ ಮುದ್ದು ಮುಖಗಳನ್ನು ತಮ್ಮ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಹಿಡಿಯುವುದರಲ್ಲಿ ಮಾದು, ರಾಜೇಶ್ ಮಗ್ನರಾಗಿ ಹೋಗಿದ್ದರು.

ಪೋಡಿಯ ಮುಖ್ಯಸ್ಥರಾದ ಸಿದ್ದಪ್ಪಾಜಿಯವರ ಕೈಯ್ಯಿಂದಲೇ ಮಕ್ಕಳಿಗೆ ಸಮವಸ್ತ್ರಗಳನ್ನು ಹಂಚಿಸಿ ಅಲ್ಲಿಂದ ಹೊರಟೆವು.



 ದಾರಿಯಲ್ಲಿ ಕುಲುಕುತ್ತಾ,ಬಳುಕುತ್ತಾ ಸಾಗುತ್ತಿತ್ತು ನಮ್ಮ ಗಾಡಿ. ಮಾಧವ್ ರವರು ಅಲ್ಲಿ ಕಾಣುತ್ತಿದ್ದ ಪಕ್ಷಿ ಸಂಕುಲಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಾವಾದರೋ ಪಾಮರರು. ನನಗೂ, ಅನಿತಾಗೂ ಕಪ್ಪಗಿರುವುದೆಲ್ಲ ಕಾಗೆ, ಬೆಳ್ಳಗಿರುವುದೆಲ್ಲ ಬಾತು... ಊರಲ್ಲಿದ್ದರೆ ನಾಡು ಕೋಳಿ, ಕಾಡಲ್ಲಿದ್ದರೆ ಕಾಡು ಕೋಳಿ ಎಂದು ಹೇಳಿ ನಗುತ್ತಿದ್ದೆವು.

ಅಲ್ಲಿಂದ ಕೊಳ್ಳೇಗಾಲ ತಲುಪಿ, ಊಟ ಮುಗಿಸಿ ಬೆಂಗಳೂರಿಗೆ ಬಂದು ಸೇರಿದಾಗ ರಾತ್ರಿ 8 ಗಂಟೆ.

ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಅಂಬರೀಷ್ ಕಾರಂತ್: ಈ EVENTನ ರೂವಾರಿ
ಕೃಷ್ಣ, ಚಂದ್ರು, ಸಿದ್ದೇಗೌಡ್ರು : ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿ ಎಲ್ಲಾ ರೀತಿಯ ಸಹಕಾರ ನೀಡಿದ್ದಕ್ಕೆ
ಮಾಧವ್ ಜೋಯಿಸ್: ಪಕ್ಷಿಗಳ ಬಗೆಗಿನ ಮಾಹಿತಿಗಾಗಿ