ಶುಕ್ರವಾರ, ಸೆಪ್ಟೆಂಬರ್ 21, 2012

ರಾತ್ರಿ ಚಾರಣ - ಕೌರವ ಕೊಂಡ( Night Trek - Kowrava Konda ) – 15.9.2012

 

ನಾವೆಲ್ಲರೂ ಕೂಡಿ ಒಟ್ಟು 23  ಮಂದಿ Bangalore Ascenders( BASC - www.bangaloreascenders.org) ಇಂದ ರಾತ್ರಿ ಚಾರಣ ಕೌರವ ಕೊಂಡಕ್ಕೆ ಹೊರಟೆವು. ನಮ್ಮ ಚಾರಣದ ರೂವಾರಿ ವಿನಯ್ ಸಿ.ಬಿ.ಐ  ನಿಲ್ದಾಣದ ಹತ್ತಿರ ಎಲ್ಲರು ಸಂಜೆ 5:30ಕ್ಕೆ ಬರಬೇಕೆಂದು ಇ-ಮೇಲ್ ಕಳುಹಿಸಿದ್ದ. ಅಂತೆಯೇ ನಾನು ಮತ್ತು ರಾಮ್ ನಮ್ಮ ಟೆಂಟ್ ಮತ್ತು Sleeping Bag ಎಲ್ಲಾ ಎತ್ತಾಕ್ಕೊಂಡು 5:45ರ ಹೊತ್ತಿಗೆ  ಸಿ.ಬಿ.ಐ  ನಿಲ್ದಾಣವನ್ನು ತಲುಪುದ್ವಿ. ನಮ್ಮ ಮಹಾನಗರಿ ಬೆಂಗಳೂರಿನ ಟ್ರಾಫಿಕ್ ನ ದೆಸೆಯಿಂದಾಗಿ ಎಲ್ಲರೂ ಕಲೆತು ಬೆಂಗಳೂರನ್ನು ಬಿಡುವ ಹೊತ್ತಿಗೆ ರಾತ್ರಿ 7:45.

ವಿನಯ್ ಗೆ  ಆದಷ್ಟು ಬೇಗ ತಲುಪಿ ಬೆಟ್ಟದ ಮೇಲೆ ಬೋಂಡ, ಪುಳಿಯೋಗರೆ ಎಲ್ಲ  ಮಾಡ್ಬೇಕು ಅಂತೆಲ್ಲಾ ಆಸೆ ಇತ್ತು. ಯಾವಾಗ 25ಕ್ಕೂ ಹೆಚ್ಚಿನ ಮಂದಿ ಬರ್ತಾರೆ ಅಂತಾಯ್ತೋ ಸಮಾರಾಧನೆಗೆ ಅಡಿಗೆ ಮಾಡ್ದಂಗೆ ಆಗತ್ತೆ ಅಂತ ಸುಮ್ನಾಗ್ಬಿಟ್ಟ.

ದಾರಿಯ ಮಧ್ಯದಲ್ಲಿ ನಮ್ಮ ತಿನಿಸನ್ನು ಕಟ್ಟಿಸಿಕೊಂಡು ನಮ್ಮ ಡಾಕುಟ್ರಪ್ಪ ಹರೀಶ್ ಅವರ ನೆಂಟರ ಮನೆ( ಮಂಚಿನಬೆಲೆ) ತಲುಪಿ ನಮ್ಮ ವಾಹನಗಳನ್ನು ನಿಲ್ಲಿಸುವ ಹೊತ್ತಿಗೆ ರಾತ್ರಿ 9:50.(ನಮ್ ಡಾಕುಟ್ರುಗೆ ಚಿಕ್ಕಬಳ್ಳಾಪುರದ ಎಲ್ಲಾ ಹಳ್ಳಿಯಲ್ಲೂ ನೆಂಟರಿದ್ದಾರೆ ಮತ್ತು ಅವರೆಲ್ಲಾ ಸಹೃದಯಿಗಳು ಎಂದರೆ ಅತಿಶಯೋಕ್ತಿಯಾಗಲಾರದು). ನಂತರ BASC ನ ನಿಯಮದಂತೆ INDEMNITY BONDಗೆ ಎಲ್ಲರಿಂದ ಸಹಿ ಹಾಕಿಸಿಕೊಂಡು(ಕನ್ನಡದಲ್ಲಿ ಏನಂತಾರೆ ಅಂತ ಯಡ್ಯುರಪ್ಪ- ಶೋಭಕ್ಕನ ಮೇಲಾಣೆ ನಂಗೊತ್ತಿಲ್ಲ), ಅಲ್ಲಿದ್ದ ಸೌದೆಯನ್ನು CAMP FIREಗೆ ಉರುವಲಾಗಿ ಉಪಯೋಗಿಸಲು ಎಲ್ಲರೂ ತಲಾಗೊಂದರಂತೆ ತೆಗೆದುಕೊಂಡು ಹೊರಟೆವು. ಅಲ್ಲಿ ನಮಗೆದುರಾದ ಕೆಲವು ಹಳ್ಳಿಗರು( ತೀರ್ಥಸೇವಿಗರು) ನಮಗೆ VTU ಪ್ರಶ್ನೆ ಪತ್ರಿಕೆಗಿಂತಲೂ ಕಷ್ಟಕರವಾದ ನಾನಾ ತರಹದ ಪ್ರಶ್ನೆಗಳನ್ನು ಒಡ್ಡಿ, ನಮ್ಮನ್ನು ಶಂಕಿತ ಉಗ್ರಗಾಮಿಗಳ ಪಟ್ಟಿಗೆ ಸೇರಿಸಿಬಿಟ್ಟರು!!!!! :-(

ಆಗ ರಣಧೀರನಂತೆ ಬಂದ ಹರೀಶ್, ಅವರ ಗೌಡ್ರು ಸ್ಟೈಲ್ ನಲ್ಲಿ ಒಂದ್ ಆವಾಜ್ ಬಿಟ್ರು... ಆ ಹಳ್ಳಿಯವರು ಉಸಿರೆತ್ತದೆ ಅಲ್ಲಿಂದ ಕಾಲ್ತೆಗೆದರು.

ಹಿಂದಿನ ಕಾಲದಲ್ಲಿ ರಾಜಕುಮಾರಿನ ಭೇಟಿ ಆಗೋಕೆ 7 ಸಮುದ್ರ, 7 ಬೆಟ್ಟ ದಾಟಿ ಹೋಗ್ತಿದ್ರಂತೆ. ನಾವೂ ಹೋದ್ವಿ... ಗದ್ದೆ, ಕೆರೆ, ಬಯಲು, ಹೈ ವೇ ರೋಡು, ಕೌರವ ಹಳ್ಳಿ ಎಲ್ಲಾ ದಾಟ್ಕೊಂಡು( ರಾಜಕುಮಾರ ಸಿಗೋದಿರ್ಲಿ, ನಂಗೆ ಕಾಣಲೂ ಇಲ್ಲ) ಅಮಾವಾಸ್ಯೆ ಮಧ್ಯರಾತ್ರಿ ದೆವ್ವ ಕೂಗೋ ಹೊತ್ನಾಗೆ (ಹಿನ್ನಲೆ ಸಂಗೀತ - ತಂಗಾಳಿಯಲ್ಲಿ ನಾನು ತೇಲಿ ಬಂದೆ). ಹುಣಸೆ ಮರದ ಹತ್ರ ಇಣುಕಿ ಇಣುಕಿ ನೋಡುದ್ವಪ್ಪ ದೊಡ್ದವಿರ್ಲಿ ಒಂದು ಮರಿ ದೆವ್ವನಾದ್ರು ಕಾಣದ್ ಬೇಡ್ವ. ಬಲೇ ನಿರಾಸೆ ಆಯ್ತು ಅನ್ನಿ( ಎಷ್ಟು ದಿನ ಅಂತ ಕನ್ನಡೀಲಿ ಮುಖ ನೋಡ್ಕೊಳ್ಳೋದು!!!)

ನಾವು ದೊಣ್ಣೆಗಳನ್ನು ಹಿಡಿದು ದಂಡುಪಾಳ್ಯದವರ ತರ ದಂಡಿ ಮಾರ್ಚ್ ಮಾಡ್ಕೊಂಡ್ ಎದುರಾದ ಚಿಕ್ಕ 3 ಹಳ್ಳಿಗಳನ್ನ ದಾಟಿ ಹೋಗ್ತಿದ್ವಿ. ಒಂದೊಂದು ಹಳ್ಳೀಲೂ ನಾಯಿಗಳು ನಮಗೆ ಭವ್ಯ ಸ್ವಾಗತವನ್ನು ಕೋರ್ತಿದ್ವು. ಆ ಸದ್ದಿಗೆ ಎಚ್ಚರಗೊಂಡ ಹಳ್ಳಿಗರನ್ನು ನಮ್ ಡಾಕ್ಟ್ರು INJECTION ಕೊಡ್ದಲೇನೆ ಸಾಂತ್ವಾನ ಮಾಡ್ತಿದ್ರು.

ಬೆಟ್ಟ ಹತ್ತುತ್ತಿರಬೇಕಾದ್ರೆ ಹಿಂದೆ ಬರುತ್ತಿದ್ದ ಕಟ್ಟ ಕಡೆಯ ಯೋಧರಿಂದ ಸಣ್ಣದಾಗಿ ಜಾನಪದ ಗೀತೆ ಕೇಳಿಬರುತ್ತಿತ್ತು(ರಾಮ್ ಹಾಡ್ತಿದ್ದಿದ್ದು). ನಾನು ಸರಿಯಾಗಿ ಕೇಳೋಣ ಅಂತ ನನ್ನ ನಡಿಗೆಯನ್ನ ನಿಧಾನ ಮಾಡಿ, ಬೇಗ ಬೇಗ ಹತ್ತೇ ಅಂತ ವಿನಯ್ ಹತ್ರ ಬೈಸ್ಕೊಂಡೆ. ಸರಿ ಮೇಲೆ ಹತ್ತಿ ನಮ್ಮ ಅಂತಿಮ ಗುರಿ( Final Destiny) ತಲುಪಿದಾಗ ಸಮಯ ಮುಂಜಾನೆ 3 ಗಂಟೆ(16.9.2012).
ಅಲ್ಲಿ ಕ್ಯಾಂಪ್ ಫೈರ್ ಹಾಕಿ ನಂತರ BASCನ ನಿಯಮದಂತೆ ಎಲ್ಲರ ಸ್ವ-ಪರಿಚಯ. ಎಲ್ಲರಿಗೂ ಒಂದೊಂದು TASK(Ragging) ಇರುತ್ತಿತ್ತು ಮತ್ತು ಅದನ್ನು ಎಲ್ಲರೂ ಕಡ್ಡಾಯವಾಗಿ ಮಾಡಲೇಬೇಕೆಂದು ತಾಕೀತು ಮಾಡುತ್ತಿದ್ದೆವು.
ಅತುತ್ತಮ ಪ್ರದರ್ಶನ ನೀಡಿದವರ ಪಟ್ಟಿ ಇಂತಿದೆ:

ಡಾ. ಹರೀಶ್ ಬಾಬು- ನಮ್ಮ BASC ನ ಕಂಬ(Pillar) ಮುದ್ದಾಸರ್ ನಂತೆ ನಟಿಸಿದ್ದಕ್ಕಾಗಿ.
ಹಲ್ ಡಾಕ್ಟ್ರು ಪ್ರಿಯ - ಬೆಲ್ಲಿ ನೃತ್ಯ ಪ್ರದರ್ಶಿಸಿ ನಮ್ಮನ್ನು ರಂಜಿಸಿದ್ದಕ್ಕಾಗಿ.
ಕಲಿಯುಗ ಕರ್ಣ ರವೀಂದ್ರ(ಅಂಬರೀಶ್ ಅಭಿಮಾನಿಗಳು ನೊಂದ್ಕೋಬಾರ್ದು) - ಚಿಲ್ಲರೆ ಕಾಸು ಸಂಗ್ರಹಣೆ ಮತ್ತು ಅದನ್ನು BASC ನಿಧಿಗೆ ದಾನವಿತ್ತಿದ್ದಕ್ಕಾಗಿ.
ಉದಾರಿ ಮೋಹನ್ - ಹುಡುಗಿಯರಿಂದ ಹೇರ್ ಬ್ಯಾಂಡ್/ಕ್ಲಿಪ್ ಸಂಗ್ರಹಿಸಿ ನಂತರ ಹಿಂತಿರುಗಿಸಿದ್ದಕ್ಕಾಗಿ!!
ಯೋಗ ಪಟು ರಾಮ್ ಮತ್ತು ಶ್ವೇತ - ತಮ್ಮ ಸಂಗೀತ ಸುಧೆಯಿಂದ ನಮ್ಮ ಹೃನ್ಮನ ತಣಿಸಿದ್ದಕ್ಕಾಗಿ.
(ನಾಳೆ ನನ್ನ ಹುಟ್ಟಿದ ಹಬ್ಬ ಅಂತ ಹೇಳಿ ಬರ್ತಡೇ ಬಮ್ಸ್ ತಿಂದ ಜಿನು - ಇರಲಾರದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇನೇ)
ಆಮೇಲೆ ಸಾಹಸ ಮಾಡಿ ಟೆಂಟ್ ಹಾಕಿ ಮಲಗಿ ಹಾಡುತ್ತಾ ಇದ್ವಿ, ಎಲ್ರು ಟೆಂಟ್ ಹಾರ್ತಿದೆ ಅಂತ ಕೂಗಾಡೋಕೆ ಶುರು ಮಾಡಿದ್ರು, ರಭಸವಾಗಿ ಬೀಸುತ್ತಿದ್ದ ಗಾಳಿಯೊಟ್ಟಿಗೆ ನಮ್ಮ ಟೆಂಟ್ ಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವೃಥಾ ಪ್ರಯತ್ನ ನಡೆಸುತ್ತಿದ್ದವು(ಇದ್ರಲ್ಲಿ ಅತಿ ಶೀಘ್ರದಲ್ಲಿ ಸೋಲೊಪ್ಪಿಕೊಂಡದ್ದು ನಮ್ ಡಾಕ್ಟ್ರು ಟೆಂಟ್). ನಮ್ ಟೆಂಟ್ ನಲ್ಲಿ ನನ್ನೊಟ್ಟಿಗೆ ಇನ್ನೂ ಇಬ್ರಿದ್ದ್ರು. ಇಲ್ಲದಿದ್ದ್ರೆ ಗಾಳಿ ನನ್ನ ಸಮೇತ ಟೆಂಟ್ ನ ಹಾರುವ ತಟ್ಟೆ(Flying Saucer) ಯಂತೆ ಎತ್ಕೊಂಡ್ ಹೋಗ್ತಿತ್ತೋ ಏನೋ!!!

ಟೆಂಟ್ ತೆಗೆದು ಬಿಸ್ಕೆಟ್ಟು ಅದು ಇದು ಹಾಳು ಮೂಳು ಅಂತ ತಿಂದು ಕೆಳಗಿಳಿದು ಬರೋಷ್ಟರಲ್ಲಿ ಟಾಟಾ ಮ್ಯಾಜಿಕ್ ಎಂಬ ದೈತ್ಯ ವಾಹನ, ನಾವು ನಮ್ಮ ವಾಹನಗಳನ್ನು ನಿಲ್ಲಿಸಿದ್ದ ಜಾಗದವರೆಗೂ ನಮ್ಮನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು. ಯಾರೋ ಚೌಕಾಸಿ ಮಾಡಿ 270ರೂ. ಗಳಿಗೆ ಕುದುರಿಸಿದ್ರು. ಡಾಕ್ರು ನೆಂಟ್ರು ಮನೆ ತಲುಪಿ ಅಲ್ಲಿ ಸಿಕ್ಕ ಪುದೀನ, ಬೀಟ್ ರೂಟ್(ಒಪ್ಪಿಗೆ ಪಡೆದು) ಕಿತ್ತುಕೊಂಡು ಹೊರಟಾಗ ಸುಮಾರು 10 ಗಂಟೆ. ಮಹಾನಗರಿ ತಲುಪುವಷ್ಟರಲ್ಲಿ ಬೆಳಗ್ಗೆ 11 ಗಂಟೆ.

ನಮ್ ಕಡೆಯಿಂದ ವಿಶೇಷ ಧನ್ಯವಾದಗಳು:

ಡಾ. ಹರೀಶ್ ಬಾಬು - ಈ ಬಾರಿಯೂ ಉದಾರತೆಯಿಂದ ತಮ್ಮ ಕಾರನ್ನು ತಂದು ಎಲ್ರನ್ನು ಲಗ್ಗೇಜ್ ಆಟೋ ಥರ ತುಂಬ್ಕೊಂಡು ಬಂದು, ಅವರ ನೆಂಟರ ಮನೇಲಿ ಗಾಡಿಗಳನ್ನ ನಿಲ್ಸೋಕೆ ಜಾಗ ಕೊಡ್ಸಿದ್ದಕ್ಕೆ.
ವಿನಯ್ ಕುಮಾರ್ -  ಚಾರಣದ ಹೊಣೆ ಹೊತ್ತದ್ದಕ್ಕಾಗಿ.

ಮಾಹಿತಿ :
ಸ್ಥಳ: ಕೌರವ ಕೊಂಡ(Kowrava Konda) , ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಹತ್ತಿರದ ಸ್ಥಳ: ನಂದಿ ಬೆಟ್ಟ
ದೂರ: ಬೆಂಗಳೂರಿನಿಂದ 70+ ಕಿ.ಮೀ.
ತಲುಪುವ ಬಗೆ: ಸ್ವಂತ ವಾಹನ/ಬಸ್ಸು
ಮಾರ್ಗ: ಬೆಂಗಳೂರು - ದೇವನಹಳ್ಳಿ - ಚಿಕ್ಕಬಳ್ಳಾಪುರ - ಮರಸನಹಳ್ಳಿ- ಕೌರವ ಹಳ್ಳಿ

1 ಕಾಮೆಂಟ್‌: