ಭಾನುವಾರ, ಸೆಪ್ಟೆಂಬರ್ 16, 2012

ರಾತ್ರಿ ಚಾರಣ - ಚನ್ನಗಿರಿ (Night Trek - Channagiri) – 2.6.2012

 

ಮನುಷ್ಯನ ಆಸಕ್ತಿ, ಅಭಿರುಚಿಗಳು ನೂರಾರು. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಆಸಕ್ತಿ. ಒಬ್ಬರಿಗೆ ತಿನ್ನೋದು ಅಂದ್ರೆ ಇಷ್ಟ. ಮತ್ತೊಬ್ಬರಿಗೆ ಚೆನ್ನಾಗಿ ಮಲಗೋದು ಅಂದ್ರೆ ಇಷ್ಟ, ನಮ್ಮ ಬಾಸ್ಕ್(Bangalore Ascenders-BASC- www.bangaloreascenders.org) ಮಂದಿಗೆ ಹೊಸ ಹೊಸ ಜಾಗಗಳನ್ನ ಅನ್ವೇಷಣೆ ಮಾಡಿ, ಚಾರಣ ಮಾಡೋದು ಅಂದ್ರೆ ಇಷ್ಟ.

BASC ನಲ್ಲಿ ಸುಮಾರು 3000ಕ್ಕೂ ಮೇಲ್ಪಟ್ಟು ಸದಸ್ಯರಿದ್ದಾರೆ. ಬೇರೆ ಬೇರೆ ಭಾಷೆ, ಸಂಸ್ಕೃತಿಗಳ ಬೇರೆ  ಬೇರೆ ಪ್ರದೇಶಗಳಿಂದ ಬಂದಿರೋರೆಲ್ಲರು ಒಟ್ಟಿಗೆ ಸೇರ್ತೀವಿ ಮತ್ತು ಎಲ್ಲರ ಸಮಾನ ಅಭಿರುಚಿ ಒಂದೇ ಅದು - ಚಾರಣ. 
ಒಂಥರ ವಿವಿಧತೆಯಲ್ಲಿ ಏಕತೆ ಅನ್ನಬಹುದು. ಇದು ನಿಮ್ಮ ಅನುಭವಕ್ಕೆ ಬರಬೇಕಾದರೆ ಒಮ್ಮೆನಾದ್ರು ಬಾಸ್ಕ್ ನಲ್ಲಿ ಚಾರಣ ಮಾಡೇ ತಿಳೀಬೇಕು. 

ಚಾರಣದಲ್ಲಿ ಸುಲಭ, ಸಾಧಾರಣ ಮತ್ತು ಕಷ್ಟ ಎಂಬ ವಿಭಾಗಗಳಿದ್ದು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಚಾರಣ ಮಾಡಬಹುದು. 


ಇನ್ನೊಂದು ರೀತಿಯ ಚಾರಣದ ಬಗೆ ಅಂದ್ರೆ ಹಗಲು ಚಾರಣ ಮಾಡಿ ರಾತ್ರಿ ಬಿಡಾರ ಹೂಡೋದು ಮತ್ತು ರಾತ್ರಿಯ ಚಾರಣ. ಎರಡೂ ವಿಭಿನ್ನ ರೀತಿಯ ಅನುಭವಗಳನ್ನ ಕೊಡುತ್ತವೆ.

ಕೊರ್ದಿದ್ದು ಸಾಕು ವಿಷ್ಯಕ್ ಬಾ ಅಂತೀರ .... ಇದೋ ಬಂದೆ.

ನಾವೆಲ್ಲರೂ ಕೂಡಿ ಒಟ್ಟು 26 ಮಂದಿ ಬಾಸ್ಕ್ ಇಂದ ಚೆನ್ನಗಿರಿಗೆ ರಾತ್ರಿ ಚಾರಣ ಹೊರಟೆವು. ವಿ.ವಿ. ಪುರಂನ ತಿಸಿಸು ಬೀದಿಯಲ್ಲಿ ಎಲ್ಲರ ಸಮಾಗಮ. ನಂತರ ಹೊಟ್ಟೆಗೆ ಏನೋ ತುಂಬಿಸ್ಕೊಂಡು(ಏನೋ ಅಂತ ಹೇಳೋಕ್ಕಾಗಲ್ಲ ಯಾಕಂದ್ರೆ ಅದು ತಿನಿಸು ಬೀದಿ - ಏನೇನೆಲ್ಲಾ ಅನ್ನೋ ಪದ ಸೂಕ್ತ ಅನ್ಸುತ್ತೆ). ದಿನಾಂಕ 2.6.2012ರಂದು ರಾತ್ರಿ ಸುಮಾರು 10:30ರ ಹೊತ್ತಿಗೆ ಹೊರಟ್ವಿ. 

ನಮ್ ಡಾಕುಟ್ರಪ್ಪ ಹರೀಶ್ ಅವರ ಅಜ್ಜಿ ಮನೆಗೆ ಹೋಗಿ ಗಾಡಿಗಳನ್ನ ನಿಲ್ಸಿ ಚಾರಣ ಆರಂಭಿಸಿದ್ವಿ. ಹುಣ್ಣಿಮೆಗೆ ಇನ್ನೆರಡು ದಿನಗಳಿದ್ವು ತುಂಬು ಚಂದಿರ ನಮ್ಮನ್ನು ನಗು ನಗುತ್ತಾ ಸ್ವಾಗತಿಸಿದ. ಏನೇ ಹೇಳಿ ಬೆಳದಿಂಗಳ ಚಾರಣ ಕೊಡೋ ಮಾಜಾನೇ ಬೇರೆ. ಅದು ಅಜ್ಜಿಯ ಕೈ ತುತ್ತಿನ ತರಹ. ಆ ತಂಗಾಳಿ, ಆ ಬೆಳದಿಂಗಳು, ನಮ್ಮೊಟ್ಟಿಗಿನ ಸಧಭಿರುಚಿಯ ಸ್ನೇಹಿತರು (ಹೊಸುಬ್ರು, ಹಳುಬ್ರು, ಹಿಂದೆ ಸ್ನೇಹಿತರಾಗಿರೋರು, ಮುಂದೆ ಆಗೋರು) ಜೊತೆಗೆ ಚುಚ್ಚೋ ಮುಳ್ಳು(ಹಿನ್ನಲೆ ಸಂಗೀತ - ಏನೋ ಒಂಥರ ಪರ ಪರ) ಇವು ಸಾಲ್ದು ಅಂಥ ಸ್ವಲ್ಪ ಸ್ವಲ್ಪಾನೇ ಕಣ್ ಎಳೆಯೋ ನಿದ್ದೆ. 





ಮಧ್ಯರಾತ್ರಿ ಸುಮಾರು 2:30 ಹೊತ್ತಿಗೆ (3.6.2012) ಶುರುಮಾಡಿದ ಚಾರಣ ಒಂದು ಘಟ್ಟ ಮುಟ್ಟೋದ್ರಲ್ಲಿ ಮುಂಜಾನೆ 4:30 ಆಗಿತ್ತು. ಮುಂದಕ್ಕೆ ಸರಿಯಾದ ದಾರಿ ಕಾಣ್ಲಿಲ್ಲ ( ಸರಿಯಾದ ಏನ್ಬಂತು ನಾವ್ ಹೋಗಿದ್ದೆ ದಾರಿ ಅನ್ನಿ). ಸರಿ ಅಲ್ಲೇ ಕ್ಯಾಂಪ್ ಫೈರ್ ಹಚ್ಚಿದ್ದ್ವಿ (ಕ್ಷಮಿಸಿ ಕನ್ನಡದಲ್ಲಿ ಏನಂತಾರೆ ಅಂತ ನೆನ್ನೆ ಇಂದ ಯೋಚಿಸ್ದೆ ಹಾಳಾದ್ದು ಹೋಳೀಲೇ ಇಲ್ಲ). ಅಲ್ಲಿ ಎಲ್ಲರು ಅವರವರ ಸ್ವ-ಪರಿಚಯ ಮಾಡಿಕೊಂಡ್ರು. ಒಬ್ಬೊಬ್ಬರ ಪರಿಚಯದ ನಂತರ ಅವರಿಗೆ ಜೈಕಾರ ಅಥವ ಚಪ್ಪಾಳೆ ಹೊಡೀತಿದ್ವಿ. ಮಾನ್ಯ ರವೀಂದ್ರರವರಿಂದ ಅತ್ಯುತ್ತಮ ಪರಿಚಯ ಮಾಡಿಕೊಂಡವರಿಗೆ ಜಾಮೂನಿನ ಬಹುಮಾನ(ಸಾಯೀಶ ತಂದಿದ್ ಜಾಮೂನ್ ನ  ಎಲ್ರಿಗೂ ಕೊಟ್ಟು ಬಿಟ್ಟಿ ಪ್ರಚಾರ ತೊಗೊಂಡ). ನಂತರ ಮೂಡಣದಲ್ಲಿ ನೇಸರನ ಉದಯ(ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ - ಬೇಂದ್ರೆಯವರ ಕವನ ಕಣ್ರಿ ನಂದಲ್ಲ - ಕದ್ದಿದ್ದು) ಅದಾದಮೇಲೆ ಯಾರ್ಯಾರೋ ಪುಣ್ಯಾತ್ಮರು ಹೋಗಿ ಮೇಲೆ ತಲುಪೋದಕ್ಕೆ ಯುರೇಕಾ ಅಂತ ದಾರಿ ಕಂಡುಹಿಡ್ಕೊಂಡ್ ಬಂದ್ರು(ನಮ್ ಡಾಕುಟ್ರು, ಗೌಡ್ರು ಯುರೇಕಾ ಅಂತ ಬರ್ಲಿಲ್ಲ ಅದು ಬೇರೆ ವಿಷ್ಯ)

ಅಲ್ಲಿಗೆ ಹೋಗಿ ತಲುಪೋಷ್ಟ್ರಲ್ಲಿ ಬೆಳಗ್ಗೆ 8 ಗಂಟೆ. 

ಅಂತಿಮ ಗುರಿ( Final Destiny) ತಲುಪಿದಮೇಲೆ ನಿದ್ದೆ ಮಾಡೋರು ನಿದ್ದೆ ಮಾಡಿದ್ರು, ಪಟ ತೆಗ್ಯೋರು ತೆಗುದ್ರು, ಮ್ಯಾಗಿ ಮಾಡಿ ತಿನ್ನೋರು ತಿಂದ್ರು, ಕುಡ್ಯೋರು ಕುಡುದ್ರು - ಟೀನ (ಬೇರೆ ಏನೋ ಅಂದ್ಕೋಬೇಡಿ ನಮ್ ಬಾಸ್ಕ್ ನಲ್ಲಿ ಅದೆಲ್ಲಾ ನಿಷಿದ್ಧ)

ಇಳಿಯೋಕ್ಕೆ ಶುರು ಮಾಡಿದ್ದು ಸುಮಾರು 10:30ರ  ಹೊತ್ತಿಗೆ.

ಈಗ ಸಿಕ್ತು ನೋಡಿ ಸರಿಯಾದ ದಾರಿ! ಕೆಳಗಿಳಿದು ಬಂದ್ರೆ ಅಲ್ಲೊಂದು ಪುಟ್ಟ ಕಲ್ಯಾಣಿ ನಮ್ಮನ್ನು ಕೈ ಬೀಸಿ ಕರೀತಿತ್ತು. ಅದ್ರಲ್ಲಿ ಮನಸೋ ತೃಪ್ತಿ  ಈಜಾಡೋರು  ಈಜಾಡುದ್ರು, ಫೋಟೋ ತೆಗ್ಯೋರು ತೆಗುದ್ರು, ನೀರಲ್ಲಿ ಕಾಲು ಇಳಿಬಿಟ್ಕೊಂಡು ಕೂರೋರು ಕೂತಿದ್ರು.
ಅಲ್ಲಿಂದ ಹರೀಶ್ ರವರ ಅಜ್ಜಿಮನೆಯತ್ತ ನಮ್ಮ ನಡಿಗೆ. ಅಲ್ಲಿ ಭಾನುವಾರದ ಬಾಡೂಟ ಸಿದ್ಧವಾಗಿತ್ತು(ತಿನ್ನೋರು ತಿಂದ್ರು ಉಳಿದೋರು ನಮ್ಮಂಥ ಸಸ್ಯಾಹಾರಿಗಳು ಗೊಜ್ಜನ್ನ ತಿಂದ್ವಿ). ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಮಧ್ಯಾಹ್ನ 3 ಗಂಟೆ.


ನಮ್ ಕಡೆಯಿಂದ ವಿಶೇಷ ಧನ್ಯವಾದಗಳು:

ಡಾ. ಹರೀಶ್ ಬಾಬು
- ಉದಾರತೆಯಿಂದ ತಮ್ಮ ಕಾರನ್ನು ತಂದು ಎಲ್ರನ್ನು ಲಗ್ಗೇಜ್ ಆಟೋ ಥರ ತುಂಬ್ಕೊಂಡು ಬಂದು, ಅವರಜ್ಜಿ ಮನೇಲಿ ಗಾಡಿಗಳನ್ನ ನಿಲ್ಸೋಕೆ ಜಾಗ ಕೊಟ್ಟು, ಬಿಟ್ಟಿ ಊಟಾನೂ ಹಾಕ್ಸಿದ್ದಕ್ಕೆ.

ವಿನಯ್ ಕುಮಾರ್ - ಇವನ್ ಬಗ್ಗೆ ಏನ್ ಹೇಳೋದ್ ರೀ - ಈ ಚಾರಣದ ರೂವಾರಿ. ಶುಕ್ರವಾರ ಸಂಜೆ ಈ-ಮೇಲ್ ನ ಪೋಸ್ಟ್ ಮಾಡಿ, ಶನಿವಾರ ರಾತ್ರಿ ಹೊತ್ತಿಗೆ 26
ನಾನ ಸಂಘಟಿಸಿ ಚಾರಣಕ್ಕೆ ಎತ್ತಾಕ್ಕೊಂಡ್ ಬಂದಿದಾನೆ( ರಾಜಕೀಯ ಪಕ್ಷದೋರ ಕೈಗೆ ಸಿಗದಂತೆ ಇವನನ್ನು ನೋಡಿಕೊಳ್ಳೋದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ!!!)

                                                           ಅಷ್ಟೇನಪ್ಪ ಸುಸ್ತಾಯ್ತು ಬೈ ಬೈ 


ಮಾಹಿತಿ :
ಸ್ಥಳ: ಚನ್ನಗಿರಿ
(Channagiri) , ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಹತ್ತಿರದ ಸ್ಥಳ: ನಂದಿ ಬೆಟ್ಟ
ದೂರ: ಬೆಂಗಳೂರಿನಿಂದ 56 ಕಿ. ಮೀ.
ತಲುಪುವ ಬಗೆ: ಸ್ವಂತ ವಾಹನ/ ರೈಲು/ ಬಸ್ಸು
ಮಾರ್ಗ: ಬೆಂಗಳೂರು - ದೇವನಹಳ್ಳಿ - ನಂದಿ ಕ್ರಾಸ್ - ನಂದಿ ಬೆಟ್ಟದ ಹಿಂಬಾಗ 

2 ಕಾಮೆಂಟ್‌ಗಳು:

  1. your blogs are good to read!!! i read few and they are too good !!! will surely read all your writings!!

    ಪ್ರತ್ಯುತ್ತರಅಳಿಸಿ
  2. ಓದ್ತಾ ಹೋದಾಗೆ ನಾನೂ ನಿಮ್ಮ ಜೊತೆ ಇದ್ದೇನೇನೋ ಅನ್ನಿಸ್ತಿದೆ ....ಅಂದ ಹಾಗೆ camp fire ಗೆ ಕನ್ನಡದಲ್ಲಿ "ಶಿಬಿರಾಗ್ನಿ" ಶಿಬಿರ +ಅಗ್ನಿ= ಶಿಬಿರಾಗ್ನಿ (ಸವರ್ಣ ದೀರ್ಘ ಸಂಧಿ)

    ಪ್ರತ್ಯುತ್ತರಅಳಿಸಿ