ಭಾನುವಾರ, ಸೆಪ್ಟೆಂಬರ್ 16, 2012

ದೂಧ್ ಸಾಗರ್ ಚಾರಣ - Dudh Sagar Trek - 01 & 02 ಸೆಪ್ಟೆಂಬರ್ 2012

   ದೂಧ್ ಸಾಗರ್ :

ಹೆಸರೇ ಹೇಳುವಂತೆ ಪಯೋನಿಧಿ ... ಧುಮ್ಮಿಕ್ಕಿ ಹರಿಯುವ ಮಾಂಡೋವಿ ನದಿಯು ಹಾಲಿನ ಧಾರೆಯಾಗಿ ಭೋರ್ಗರೆಯುತ್ತಾ ಹರಿಯುತ್ತಾಳೆ. ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ಇರುವ ಈ ಜಲಪಾತವು ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು/ಚಾರಣಿಗರನ್ನು ಆಕರ್ಷಿಸುತ್ತದೆ.
                                    

Bangalore Ascenders (BASC - www.bangaloreascenders.org)ಇಂದ ಮೊಹಮ್ಮದ್ ರಫಿ ಆಯೋಜಿಸಿದ್ದ  ದೂಧ್ ಸಾಗರ್ ಚಾರಣಕ್ಕೆಂದು ಶುಕ್ರವಾರ(01.09.2012) ರಾತ್ರಿ ಸುಮಾರು 9ರ ಹೊತ್ತಿಗೆ ಎಲ್ಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸೇರಿದೆವು. ಅದಕ್ಕೆ ಮುಂಚಿನ ನಮ್ಮ ಸಿದ್ಧತೆಗಳನ್ನ ನೋಡ್ಬೇಕಿತ್ತು (ಹೋದವರ್ಷ ಆಗಸ್ಟ್ ನಲ್ಲಿ ವಿವೇಕ್ PC ನೇತೃತ್ವದಲ್ಲಿ ಹೋದ ಅನುಭವ ಇತ್ತಲ್ಲ) ದಿಢೀರ್ ಉಪ್ಪಿಟ್ಟನ್ನು ತಯಾರಿಸಿ( MTR ಗೆ ಸಡ್ಡು ಹೊಡೆಯುವಂತೆ) ಅಗತ್ಯ ಸಾಮಗ್ರಿಗಳು, ತಿನ್ನೊ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಹೊರಟ್ವಿ. ರೈಲು ಸುಮಾರು 9:40ರ ಹೊತ್ತಿಗೆ ಯಶವಂತಪುರದಿಂದ ಹೊರಟಿತು. ಎಲ್ಲರೂ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಅಷ್ಟರಲ್ಲಿ ತುಮಕೂರು ಬಂದು ವಿವೇಕ್ ಭಟ್ ನಮ್ಮನ್ನು ಸೇರಿಕೊಂಡ. ಅವನು ತಂದಿದ್ದ ಚಿತ್ರಾನ್ನ ತಿಂದು ಮಲಗುವಷ್ಟರಲ್ಲಿ 11:30 (ಚಂದ್ರಕಲ & ಸಂತೋಷ್(ಗದ್ದೆ) ರಾತ್ರಿ 1:43ರ ತನಕ ಮೀಟ್ರು ಹಾಕ್ತಿದ್ದ್ರು ನಂಗೆ ನಿದ್ದೆ ಬರ್ಲಿಲ್ಲ ಅಂತ ಪಾಪ ಭಟ್ಟ ಗೋಳಾಡ್ತಿದ್ದ).

ಕ್ಯಾಸಲ್ ರಾಕ್ ತಲುಪುವ ವೇಳೆಗೆ ಬೆಳಗ್ಗೆ 9:45. ಅಲ್ಲಿಂದ ಎಲ್ಲಾ ಮಳೆಯ ರಕ್ಷಾ ಕವಚ(Poncho) ಹಾಕ್ಕೊಂಡು ನಮ್ಮ ಚಾರಣವನ್ನ ಶುರುಮಾಡುದ್ವಿ. ರೈಲು ಹಳಿಗಳ ಮಧ್ಯೆ ನಡೆದು ಹೋಗೋದೇ ಒಂದು ಕಸರತ್ತು. ಕಸರತ್ತು ಏನ್ ಬಂತು ಅದ್ರಲ್ಲಿ ಅಂತಿರಾ... ಮೈಯೆಲ್ಲಾ ಕಣ್ಣಾಗಿರಬೇಕು ಅನ್ನೋ ತರ ಇಲ್ಲಿ ಕಣ್ಣೆಲ್ಲಾ ಹಳಿ ಮೇಲಿರಬೇಕು. ಆಮೇಲೆ ಒಂದು ವಾರದ ತನಕ ನಿಮಗೆ ಹಳದಿ ಬಣ್ಣದ ಮೇಲೆ ಎಷ್ಟು ಜಿಗುಪ್ಸೆ ಹುಟ್ಟತ್ತೆ ಅನ್ನೋದು ನೀವು ಚಾರಣ ಮಾಡೇ ತಿಳೀಬೇಕು. ಇದೇನಪ್ಪಾ ಮೊದಲ್ ಮೊದಲಿಗೆ ಈ ತರ ಹೇಳ್ತ್ಯಾಳೆ ಅಂದ್ಕೋಬೇಡಿ  ನಾನು ಇರೋದನ್ನ ಹೇಳ್ತಿದೀನಷ್ಟೇ.

ದಾರೀಲಿ ಸಾಗುತ್ತ ಇರಬೇಕಾದ್ರೆ ಪ್ರಕೃತಿಯ ಸೊಬಗು ಎಷ್ಟು ಮನಸ್ಸನ್ನ ಉಲ್ಲಾಸಗೊಳಿಸತ್ತೆ ಅಂತೀರಾ . . . . ದೂರದಲ್ಲೆಲ್ಲೋ ತನ್ನನ್ನೇ ಮರೆತು ಹಾಡ್ತಾ ಇರೊ ಹಕ್ಕಿಯ ನಿನಾದ ಕೇಳ್ತಾ, ತಂಗಾಳಿಗೆ ಮೈಯೊಡ್ಡಿ ಮೆಲ್ಲಗೆ ಬೀಸೋ ಮರದ ಸದ್ದನ್ನ ಆಲಿಸುತ್ತಾ, ಆ ಕ್ಷಣಕ್ಕೆ ನೆನಪಿಗೆ ಬರೋ ಭಾವಗೀತೇನ ಸಣ್ಣದಾಗಿ ಗುನುಗುತ್ತಾ . ..

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ, ಎಲ್ಲಿ ಮೋಹನ ಗಿರಿಯ ಬೆರಗಿನ ರೂಪದಿ ನಿಂದಳೋ 
                                   ( ಪಂಜೆ ಮಂಗೆಶರಾಯರಿಗೆ ಒಂದು ಸೆಲ್ಯೂಟ್)

                                       ಅದೊಂದು ಅವರ್ಣನಾತೀತ ಅನುಭವ.

                              ಸುಂದರ ಪ್ರಕೃತಿ + ಭಾವಗೀತೆ = ಕಾಂಬೋ ಪ್ಯಾಕ್ 

         ( ಊರಿನ ಜಂಜಡ, ಕೆಲಸದ ಒತ್ತಡ ಎಲ್ಲವನ್ನೂ ಮರೆತು ನಮ್ಮೊಳಗೇ ನಾವೇ ಕಳೆದುಹೋಗುವ ಸಂಭ್ರಮ)
ಹೀಗೆ ಸಾಗ್ತಾ ಸುಮಾರು 12:30ರ ಹೊತ್ತಿಗೆ ಗೋವಾ ರಾಜ್ಯಕ್ಕೆ ಸ್ವಾಗತ ಅನ್ನೋ ಫಲಕ ನೋಡುದ್ವಿ. ಕರ್ನಾಟಕದ ಗಡಿ ಮುಗಿದು ಗೋವಾ ರಾಜ್ಯಕ್ಕೆ ಪಾದಾರ್ಪಣೆ ಮಾಡಿ, ಫೋಟೋ ತೆಗೆಸಿಕೊಂಡು ಇನ್ನೊಂದು ಗಂಟೆ ಸಾಗಿದರೆ ಅಲ್ಲಿ ಒಂದು ಕರಂಜೊಲ್ ಅನ್ನೋ ಪುಟ್ಟ ನಿಲ್ದಾಣ. ಕಚೇರಿಯಲ್ಲಿ ಗಡಿಯಾರ 1:35 ಅಂತ ತೋರಿಸುತ್ತಿತ್ತು.

ಹೊಟ್ಟೆ ಕೊರ ಕೊರ ಅಂತಿತ್ತು. ಬ್ಯಾಗ್ ನಲ್ಲಿದ್ದ ಮೊಳಕೆ ಕಾಳು ತೆಗೆದು ಮಲ್ಲಿಕಾರ್ಜುನ್ ಕೈಯಲ್ಲಿಟ್ಟು ಈರುಳ್ಳಿ, ಟೊಮೇಟೊ ಹೆಚ್ಚಿ ಹಾಕೋಣ ಅನ್ನೋಷ್ಟರಲ್ಲಿ ಆಗ್ಲೇ ಎಲ್ಲ ತಿನ್ನೋಕ್ಕೆ ಶುರು ಹಚ್ಕೊಂಡ್ಬಿಟ್ಟಿದಾರೆ! ಸರಿ ಅದಕ್ಕೆ ಉಪ್ಪು ಖಾರ ಬೆರೆಸಿ ತಿನ್ನುತ್ತಾ ಇದ್ವಿ ಅಷ್ಟರಲ್ಲಿ ಸ್ಟೇಷನ್ ಮಾಸ್ಟರ್ ಇಂಜಿನ್ ಬರ್ತಾ ಇದೆ ಅಂದ್ರು. ಬೇಗ ಬೇಗ ಬ್ಯಾಗ್ ತಗ್ಲಾಕ್ಕೊಂಡು ಸಿದ್ಧವಾದ್ವಿ. ಇಂಜಿನ್ ಚಾಲಕನ ಅಪ್ಪಣೆ ಪಡೆದು ಅದನ್ನ ಹತ್ತಿ ಪಕ್ಕದಲ್ಲಿ ನಿಂತು ಧರೆಯ ನೈಸರ್ಗಿಕ ನೋಟದ ವೀಕ್ಷಣೆ - ಮರೆಯಲಾಗದ ಅನುಭವ. ಸೇತುವೆಯ ಮೇಲೆ ಇಂಜಿನ್ ಸಾಗುವಾಗ ಬಗ್ಗಿ ನೋಡಿದರೆ ಮೈ ರೋಮಾಂಚನಗೊಳ್ಳುತ್ತೆ - ರೋಮಾಂಚನ ಅಂದ್ರೆ ರೋಮ(ಕೂದಲು) ಹಂಚಿಕಡ್ಡಿ ತರ ನಿಂತ್ಕೊಳ್ಳೋದು.

ಚಾರಣ ಮಾಡೋವಾಗ ಭಾರ ಹೊತ್ಕೊಂಡು ನಿಧಾನ ಗತಿಯಲ್ಲಿ ಸಾಗುತ್ತಾ ಪರಿಸರವನ್ನು ನೋಡಿ ಪುಳಕಗೊಳ್ಳೋದು ಒಂದು ಬಗೆಯಾದ್ರೆ, ಇಂಜಿನ್ ನಲ್ಲಿ ಭಾರ ಗೀರ ಏನೂ ಇಲ್ಲದಲೆ ಆರಾಮಾಗಿ ನಿಂತು ನೋಡೋದು ಮತ್ತೊಂದು ಬಗೆ. ವ್ಯತ್ಯಾಸಕ್ಕೆ ಉತ್ತಮ ಉದಾಹರಣೆ ಅಂದ್ರೆ ಸಿನಿಮಾವನ್ನು ಚಿತ್ರಮಂದಿರಲ್ಲೂ, ಕಂಪ್ಯೂಟರ್ ನಲ್ಲೂ ನೋಡಿದಂತೆ.

ಇಂಜಿನ್ ನಲ್ಲಿ ದೂಧ್ ಸಾಗರ್ ರೈಲ್ವೆ ನಿಲ್ದಾಣ ತಲುಪುವ ಹೊತ್ತಿಗೆ ಮಧ್ಯಾಹ್ನ 2:20. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ಕ್ಯಾಮೆರಾಮೆನ್ ಮಲ್ಲಿಕಾರ್ಜುನ್ ಜೊತೆ ಅಂತ ಹೇಳ್ಕೊಂಡು ವಿವಿಧ ಭಂಗಿಯಲ್ಲಿ ನಿಂತು ಪಟ ತೆಗುಸ್ಕೊಂಡು ಅರ್ಧ ಕಿ. ಮೀ. ಮುಂದೆ ಸಾಗಿ ನಾವು ಬಿಡಾರ ಹೂಡೊ ಸ್ಥಳ ತಲ್ಪುದ್ವಿ. ಅಷ್ಟರಲ್ಲಿ ಸ್ವಲ್ಪ ಮಂದಿ ಬಂದು ಸೇರಿದ್ದಾಗಿತ್ತು.
ಅಲ್ಲಿ ಸ್ನೇಹಿತ ರಮೇಶ್ ಅವನ ಗೆಳೆಯರ ಬಳಗದೊಡನೆ ಬಂದು ಟೆಂಟ್ ಹಾಕಿ ಬಿಡಾರ ಹೂಡಿದ್ದ. ನಮ್ಮ ಸ್ನೇಹಿತರು ಬರೋವರೆಗೂ ಅವರ ಟೆಂಟ್ ನಲ್ಲೆ ಜಾಗ ಪಡೆದು ನಮ್ಮ ಬ್ಯಾಗ್ ಗಳನ್ನು ಅದರಲ್ಲಿಟ್ಟು, ನಮ್ ಟೆಂಟ್ ಹಾಕೋಕ್ಕೆ ಜಾಗ ಹಿಡ್ಕೊಂಡು ಕಾದ್ವಿ. ಅವರು ಬಂದಮೇಲೆ ಟೆಂಟ್ ಹಾಕಿದ್ದು, ಅದರಲ್ಲಿ ಮಲಗಿದ್ದು ಎಲ್ಲಾ ಹೊಸ ಅನುಭವ.

ಸ್ವಲ್ಪ ಹೊತ್ತಿನ ನಂತರ ರಫಿ ಎಲ್ಲರನ್ನು ಒಂದು ಸೂರಿನಡಿ ಒಟ್ಟುಗೂಡಿಸಿದ. ಅಲ್ಲಿ ನಮ್ಮ ಕೆಲ ಸ್ನೇಹಿತರು ಮಾಫಿಯಾ ಅಂತ ಹೊಸ ಆಟ ಆಡ್ತಾ ಇದ್ರು. ಅವಿ ಅದನ್ನ ತುಂಬಾನೇ ಖುಷಿಯಿಂದ ನೋಡ್ತಿದ್ದ( ಆಗ ನಂಗೆ ಅನ್ಸಿದ್ದು ಈ ಬಡ್ಡೀ ಮಗ ಇಷ್ಟು ಆಸ್ಥೆ ವಹಿಸಿ ನೋಡ್ತ್ಯಾನೆ ಅಂದ್ರೆ ಈ ಆಟದಲ್ಲಿ ಏನೋ ಕಿಕ್ ಇದೆ ಅಂತ). ನಂತರ BASC ನ ನಿಯಮದಂತೆ ಎಲ್ಲರ ಸ್ವ-ಪರಿಚಯ(ಮಾಲಿನಿ ಗಂಡನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು ಕೇಳಿ ತುಂಬಾನೇ ಖುಷಿ ಆಯ್ತು). ಸ್ವಲ್ಪ ಹೊತ್ತು ಅಂತ್ಯಾಕ್ಷರಿ ಆಡಿ ಪಾಕ ಕ್ರಾಂತಿ ಮಾಡೋಣ ಅಂತ ನಮ್ಮ ಟೆಂಟ್ ಗೆ ಹಿಂತಿರುಗಿದ್ವಿ.ನಮ್ಮ ಪಾಕ ಪ್ರವೀಣ ವಿವೇಕ್ ಭಟ್ ಗೆ ನಮ್ಮ ಅಳಿಲು ಸೇವೆ ಅಂತ ಸಾಥ್ ಕೊಟ್ವಿ. ನಾನು, ಅವಿ ತರಕಾರಿ ಹೆಚ್ಚಿಕೊಟ್ವಿ. ಚಂದ್ರಲ, ಸಂತೋಷ್( ಜೇಡ) ಕಾಯಿ ತುರಿದು ಕೊಟ್ರು( ಜೇಡ ಅಂತು ಚಿಪ್ಪನ್ನೂ ಬಿಡದೆ ಕ್ಲೀನ್ ಕ್ರಿಷ್ಣಪ್ಪ ಮಾಡಿಬಿಟ್ಟಿದ್ದ!!).

                                                         ಬಿಸಿ ಬಿಸಿ ತರಕಾರಿ ಉಪ್ಪಿಟ್ಟು ರೆಡಿ . . . 

ಎಲ್ಲರೂ ಮಲಗಿದ್ವಿ ಇನ್ನೇನು ಜೋಂಪು ಹತ್ತಿತ್ತು ಮಧ್ಯರಾತ್ರಿ ಒಂದ್ಸಲ ಯಾವ್ದೋ ಗೂಡ್ಸ್ ಗಾಡಿ ಶಬ್ಧ ಮಾಡ್ತು.....ತಕ್ಷಣ ಎಚ್ಚರ ಆಗ್ಹೋಯ್ತು. ಯಾರೋ ಬಾಂಬ್ ಹಾಕುದ್ರೇನೋ ಅನ್ನೊಂಥ ಸದ್ದು ( ಬೇರೆ ಬಾಂಬ್ ಅಂತ ಅಪಾರ+ಅರ್ಥ=ಅಪಾರ್ಥ ಮಾಡ್ಕೋಬೇಡಿ ಮತ್ತೆ). 2 ತಿಂಗಳ ಹಿಂದಷ್ಟೇ ಮದುವೆಯಾದ ವಿವೇಕ್ PC ಹೆಂಡ್ತಿ ಜೊತೆ ಇರೋದ್ ಬಿಟ್ಟು ನಮ್ ಟೆಂಟ್ ಗೆ ಬಂದು ಕಷ್ಟ ಸುಖ ಮಾತಾಡ್ತಿದ್ದ. ಆಮೇಲೆ ನಂಗೆ ಯಾವಾಗ್ ನಿದ್ದೆ ಬಂತೋ ಗೊತ್ತಿಲ್ಲ, ಆಗಾಗ ರೈಲು ಎದೆಮೇಲೆ ಹೋದಂಗ್ ಮಾತ್ರ ಅನ್ನಿಸೋದು.

ಬೆಳಗ್ಗೆ ಎದ್ದು ಪ್ರಕೃತಿಯ ಅಡಗಿದ ಗರ್ಭದಲ್ಲಿ ಮುಂಜಾನೆ ಕಾರ್ಯಗಳನ್ನ ಮುಗಿಸಿ ಬರ್ತಾ ಇದ್ವಿ. ಗದ್ದೆ ಅದೇನೋ ಹಾವು ತೋರುಸ್ತೀನಿ ಅಂತ ಕೂಗ್ತಿದ್ದ. ಹೋಗಿ ನೋಡಿದ್ರೆ ಆಗ ತಾನೇ ಹುಟ್ಟಿದ ಒಂದು ಮರಿ ಸರ್ಪ( ಕಾಳಿಂಗ ಸರ್ಪ ಅಂತ ಯಾರೋ ಅಂದ್ರು, ನಂಗೆ ನೆಟ್ಟುಗ್ ಗೊತ್ತಿಲ್ಲ. ತಪ್ಪು ಬರ್ಯೋದು ಆಮೇಲೆ ಯಾರಾದ್ರೂ ಬಯಾಲಜಿಸ್ಟ್ ಇದ್ರೆ ಮಕ್ ಉಗುಸ್ಕೊಳೋದು ಇವೆಲ್ಲಾ ಯಾಕೆ ಅಂತ ಸರ್ಪ ಅಂತಷ್ಟೇ ಬರ್ದಿದೀನಿ). ತೋರಿಸಿದ್ದಕ್ಕೆ ತಲಾ 10ರೂ. ಕೊಡಿ ಅಂತ ಗದ್ದೆ ಕೇಳ್ತಿದ್ದ ಆದ್ರೆ ಯಾರೂ ಬಿಡಿಗಾಸೂ ಬಿಚ್ಚಲಿಲ್ಲ.

ಬೆಳಗ್ಗೆ ಮ್ಯಾಗಿ ಮಾಡಿ, ಉಪ್ಪಿಟ್ಟು ಮಾಡುದ್ವಿ. ಎಲ್ಲರೂ ಭಟ್ಟನ್ನ ಪ್ರಶಂಸೆ ಮಾಡೋರೆ, ಅವನ್ದೇ ಫೋಟೋ ತೆಗೀತಿದ್ರು - ನಾನು ಕೇಳಿ ಅಡಿಗೆ ಮಾಡೋರ್ ತರ ಪೋಸ್ ಕೊಟ್ಟು ಪಟ ತೆಗುಸ್ಕಳ್ಳೋ ಪರಿಸ್ಥಿತಿ ಬಂದಿತ್ತು :-(

ಅಲ್ಲಿಂದ 9:40ರ ಹೊತ್ತಿಗೆ ಟೆಂಟ್ ಎತ್ಕೊಂಡು ಕೂಲೆಂ ಕಡೆ ಹೊರಟ್ವಿ.










ಸರಿಯಾಗಿ ನಿದ್ದೆ ಮಾಡದ, ಊಟವನ್ನೂ ಮಾಡದ ಯೋಗ ಪಟುಗಳಾದ ರಾಮ್ ರವರಿಂದ ನನಗೆ ದಪ್ಪ ಆಗೋಕ್ಕೆ ಉಚಿತ ಸಲಹೆಗಳು. ನಾನು ಎಷ್ಟು ಆಸಕ್ತಿಯಿಂದ ಕೇಳ್ತಿದ್ದೆ ಅಂದ್ರೆ ದಾರಿ ಸವೆದದ್ದೇ ತಿಳೀಲಿಲ್ಲ. ಮುಂದೆ ವೀಕ್ಷಣಾ ಬಿಂದು( View Point)ವಿನ ಬಳಿಯಲ್ಲಿ ಗುಂಪು ಛಾಯಾಚಿತ್ರ( Group Photo) ತೆಗೆಸಿಕೊಂಡು (ಇಲ್ಲಿ ಬೇಡ ಬೇಡ ಅಂತ ಮುಂಚೇನೇ ಹೇಳಿದ್ರೂ Ear Phone ಹಾಕ್ಕೊಂಡು ಎಲ್ಲರಿಗಿಂತ ಮುಂದೆ ಹೋದ Northy (ಉತ್ತರ ಭಾರತದವ) ತರ ಕಾಣೋ ಅಪ್ಪಟ ಕನ್ನಡಿಗ ದೀಪಕ್ ಮತ್ತು SILENT ತುಳಸಿ ಮಿಸ್ಸಾದ್ರು). 10:45ರ ಹೊತ್ತಿಗೆ ಸೊನಾಲಿಯಂ ಅನ್ನೋ ಪುಟ್ಟ ನಿಲ್ದಾಣ ತಲುಪಿ ಅಲ್ಲಿಂದ ಒಂದು ಹತ್ತು ಹೆಜ್ಜೆ ಮುಂದೆ ಸಾಗಿ ಬಲಕ್ಕೆ ತಿರುಗಿ ಜೀಪು ಹಾದಿಯಲ್ಲಿ ಸಾಗಿ ಮರಳಿ ರೈಲ್ವೆ ಹಾದಿ ಹಿಡಿದೆವು( ಯಾಕೆ ಹೀಗೆ ಮಾಡುದ್ವಿ ಅಂತ ಕೇಳ್ಬೇಡಿ ಅದೇನೋ 20 ರೂ. ಪ್ರವೇಶ ದರ ಉಳಿಸೋಕ್ಕೆ ಅಂದ್ರು, ನಂಗೆ ಎಲ್ಲೂ ಪ್ರವೇಶ ದ್ವಾರ ಕಾಣ್ಲೇ ಇಲ್ಲ).

ಅಲ್ಲಿ ನವೀನ ಒಂದು ನೇರಳೆ ಬಣ್ಣದ ಏಡಿ ನೋಡುದ್ನಂತೆ, ಅದೆಲ್ಲಿದ್ನೋ ಗದ್ದೆ, ಏಡಿ ಹಿಡಿಯೋಕ್ಕೆ ಬೆಂಕಿ ಪೊಟ್ಟಣ ಇದ್ಯಾ ಅಂತ ಕೇಳಕ್ ಶುರು ಮಾಡ್ದ. ಆಮೇಲೆ ಆ ಏಡಿ ಏಳು ಜನ್ಮದ್ದೋ ಹದಿನಾಲ್ಕು ಜನ್ಮದ್ದೋ ಪುಣ್ಯ ಮಾಡಿರ್ಬೇಕು ನೋಡೋಕ್ಕೆ ನನ್ ತರ ಇತ್ತು, ಮಾಂಸ ಇಲ್ಲ ಬದುಕ್ಕೋ ಹೋಗು ಅಂತ ಇಬ್ರೂ ಬಿಟ್ಬಿಟ್ರು. ಮುಂದೆ ಸಾಗಿ ಸುಮಾರು ಮಧ್ಯಾಹ್ನ 1:10ರ ಹೊತ್ತಿಗೆ ಅಲ್ಲೊಂದು ಸಣ್ಣ ಝರಿ ತಲುಪಿ ಎಲ್ಲರೂ ಮನಸೋ ತೃಪ್ತಿ ಆಟ ಆಡುದ್ವಿ.

ಇಲ್ಲಿ ಗಮನಿಸಬೇಕಾದ ಸಂಗತಿಗಳು:
  • ಶಾಂಪೂ ಉಪಯೋಗಿಸಿ ನೀರನ್ನ ಕಲ್ಮಶ ಮಾಡ್ಬಾರ್ದು ಅಂತ ಉಪದೇಶ ಕೊಟ್ಟ ವಿವೇಕ್ PC, ಅವನ ಹೆಂಡ್ತಿ ನನ್ ಹತ್ರ ಇಸ್ಕೊಂಡ ಶಾಂಪೂನ ಉಳಿದರ್ಧ ಭಾಗವನ್ನ ತಲೆಗ ಹಚ್ಕೊಂಡ್ ತಿಕ್ಕಿ ತಿಕ್ಕಿ ಇಡ್ತಿದ್ದ.
  • ತಲೇಲಿ ಎಂಟಾಣೆಯಷ್ಟು ಕೂದ್ಲು ಇರೋ ಸುರೇಶ ಶಾಂಪೂ ಕೊಡು ಅಂತ ಕೇಳ್ದ.
  • ಲೋಕೋದ್ಧಾರಕ, ಸಮಾಜ ಸೇವಕ ನಮ್ಮ ನಿಮ್ಮೆಲ್ಲರ ನೆಚ್ಚಿನ Blacky Chan(ಅಶ್ವಿನ್) ಎಲ್ಲರಿಗಿಂತ ತಡವಾಗಿ ಬಂದು ನಮ್ಮನ್ನು ಸೇರಿಕೊಂಡ(ಅದ್ಯಾಕೆ ಅಂದ್ರೆ .... ಕುಮಾರಸ್ವಾಮಿ-ರಾಧಿಕ ಮೇಲೆ ಆಣೆ ನಾನ್ ಹೇಳಕ್ಕಾಗಲ್ಲಪ್ಪ).
  • ಪ್ರಭು ಜೋತ ಗದ್ದೆ ಬಾಡಿ ಮಸಾಜ್ ಅಂತ ಪ್ರತಿಸ್ಪರ್ಧಿಯಾಗಿ ನಿಂತ. 25ರೂ. V/S 15ರೂ. ಇಲ್ಲೂ ಸಹ ಗದ್ದೆಗೆ 1 ರೂ. ಸಹ ಗಿಟ್ಲಿಲ್ಲ ಅನ್ನೋದು ವಿಷಾದಕರ ಸಂಗತಿ.
ಅಲ್ಲಿಂದ ಹೊರಟು ಕೂಲೆಂ ರೈಲ್ವೆ ನಿಲ್ದಾಣ ತಲುಪಿ ರೈಲ್ವೆ ಕಚೇರಿಯಲ್ಲಿ ಬಗ್ಗಿ ನೋಡಿದಾಗ ನಮಗೆ ಕಂಡದ್ದು ಸಮಯ 2:30. ನಿರೀಕ್ಷಣಾ ಕೊಠಡಿಯಲ್ಲಿ ಉಡುಪನ್ನು ಬದಲಿಸಿದೆವು. ಅವಿನಾಶ್ ಬಚ್ಚಿಟ್ಟುಕೊಂಡಂತೆ ಇಟ್ಟುಕೊಂಡಿದ್ದ ಚಪಾತಿ ಮತ್ತು ಟೊಮೇಟೊ ಗೊಜ್ಜನ್ನು ಬ್ಯಾಗಿನಿಂದ ತೆಗೆದ. ಆಗ ನಮ್ ಮುಖ ನೋಡ್ಬೇಕಿತ್ತು ಮೊರದಗಲ ಆಗ್ಹೋಗಿತ್ತು. ನೀರಲ್ಲಿ ಆಡಿ ಮೊದಲೇ ಹೊಟ್ಟೆ ಚುರುಗುಡ್ತಿತ್ತು, ಚೆನ್ನಾಗಿ ಹಾಕ್ಕೊಂಡ್ ಜಡುದ್ವಿ. ಮಾಂಸಾಹಾರಿಗಳು ಹೋಟೆಲ್ ಗೆ ಹೋಗಿ ಬಂದು ಕೊ ಕ್ಕೊ ಕ್ಕೋ ಅಂತ ಶಬ್ಧ ಮಾಡ್ತಿದ್ರು.

ರೈಲು ಕೂಲೆಂ ಬಿಡುವಷ್ಟರಲ್ಲಿ 4:40 ಆಗಿತ್ತು. ಗೋವಾಗೆ ಹೊರಟಿದ್ದ ಅಶ್ವಿನ್ ಗೆ ಟಾ ಟಾ ಮಾಡಿ ನಾವು ಲೋಂಡ ಕಡೆ ಪಯಣ ಬೆಳೆಸಿದೆವು. ಮಾನ್ಯ ಶಿವರವರ ನೇತೃತ್ವದಲ್ಲಿ ಮಾಫಿಯಾ ಆಟ ಶುರು ಮಾಡುದ್ವಿ, ಸಮಯ ಹೋದದ್ದೇ ತಿಳೀಲಿಲ್ಲ. ಲೋಂಡಾ ತಲುಪುವ ಹೊತ್ತಿಗೆ ಸಂಜೆ ಸುಮಾರು 6:45.

ವಿಶೇಷ ಸೂಚನೆ : ಇಲ್ಲಿ ಕುಂದ(ಒಂದು ಬಗೆಯ ಸಿಹಿ ಖಾದ್ಯ) ಮಾರಲು ಹೋದ ಗದ್ದೆ ಎಷ್ಟು ಲಾಭ ಗಳಿಸಿದ ಅಂತ ಮತ್ತೆ ಹೇಳುವ ಅಗತ್ಯವಿಲ್ಲವೆಂದು ತೋರುತ್ತದೆ.

ಸುಮಾರು 9ರ ಹೊತ್ತಿಗೆ ರೈಲು ಹೊರಟಿತು. ಮತ್ತೆ ಮಾಫಿಯಾ ಆಟ ಶುರು. ಈ ಭಾರಿ ಹಿಂದಿನ ದಿನ ಆಡಿ ಪಳಗಿ ನಿಷ್ಣಾತರಾಗಿದ್ದ ಶ್ರೀಯುತ ಮಲ್ಲಿಕಾರ್ಜುನ್ ರವರಿಂದ ಹೊಸ ಸೇರ್ಪಡೆಯಾದವರಿಗೆಂದು ಆಟದ ಬಗ್ಗೆ ವಿವರಣೆ ನೀಡಲಾಯಿತು. 11:30ರ ವರೆಗೂ ಆಡಿ ನಂತರ ರಫಿಯ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮಲಗಿದೆವು( ಬೆಳಗಿನ ಜಾವ 1 ಗಂಟೆ ತನಕ ಆಡಿ 1000ರೂ. ದಂಡ ಕಟ್ಟಿದ ಬೇರೆ ತಂಡದ ಗತಿ ನಮಗೂ ಬಾರದಂತೆ ತಡೆದದ್ದಕ್ಕಾಗಿ ರಫಿಗೆ ತುಂಬು ಹೃದಯದ ಧನ್ಯವಾದಗಳು)

ಇಲ್ಲಿ ಗಮನಿಸಬೇಕಾದ ಸಂಗತಿಗಳು:
  • ಯಾವಾಗಲು ಯಾರು ಮಾಫಿಯಾ ಲೀಡರ್ ಗಳಲ್ಲಿ ಒಬ್ಬರಾಗಿರ್ತಿದ್ರು ಅಂತ ದಯವಿಟ್ಟು ಕೇಳಬೇಡಿ( ನನ್ ಮುಖ ಕೇಡಿ ಲುಕ್ ಅಂತ ನನಗೆ ಗೊತ್ತಾಗಿದ್ದೇ ಈಗ).
  • ವೃತ್ತಿಯಲ್ಲಿ ಎಂಜಿನಿಯರ್ ಗಳಾದ ಅಭಿರಾಮ್ ಹೊಳ್ಳ(ಪರ ಪುರುಷ), ವಿವೇಕ್ PC ಡಾಕ್ಟರ್ ಗಳಾಗಿ ಏನೇನ್ ಕಿಸ್ದು ದಬ್ಹಾಕುದ್ರು ಅಂತ ನಾನ್ ಹೇಳ್ಬೇಕಾಗಿಲ್ಲ.
  • ಎಲ್ರು ಮೇಲೂ ಅನುಮಾನ ಪಡೋ, ಯಾರ್ ಯಾರನ್ನ ಅನುಮಾನಿಸಿದ್ರೂ, ತಾನೂ ಅನುಮಾನಿಸೋ ಪ್ರಿಯ ಮೇಡಂ ಗೆ ತಂಡದವರಿಂದ ಜೈಕಾರ.
  • ಗದ್ದೆ ಮಾಫಿಯಾ ಆಗ್ಲಿ, ಹಳ್ಳಿಯವನಾಗಿರ್ಲಿ ಎಲ್ಲರೂ ಅವನನ್ನೇ ಮೊದಲು ಸಾಯಿಸ್ತಿದ್ರು.
ಮೇಲಿನ್ನೇನು ರಾಜಧಾನಿ ಬೆಂಗಳೂರು ಬಂತು. ಎಲ್ಲರೂ ರೈಲಿನಿಂದ ಇಳಿದೆವು. ಪ್ರಕೃತಿಯ ಮಡಿಲಲ್ಲಿ ದೂಧ್ ಸಾಗರದ ಜೋಗುಳ ಗಾನದಲ್ಲಿ ಸುಖವಾಗಿ ನಿದ್ರಿಸಿ ಕನಸ್ಕಾಣ್ತಿದ್ದ ಲೋಕದಿಂದ ಒಮ್ಮೆಲೇ ಕಾಂಕ್ರಿಟ್ ನಗರಿಗೆ ದೊಪ್ಪೆಂದು ಬಿದ್ದಂತೆ.

                                  ಮತ್ತದೇ ಆಫೀಸು, ಅದೇ ಕೆಲಸ, ಅದೇ ಟ್ರಾಫಿಕ್ ನ ಸದ್ದು . . .

ಈಗ ದೂಧ್ ಸಾಗರ್ ನೆನಪಿನ ಬುತ್ತಿಯ ಸುಂದರ ಕ್ಷಣಗಳು ಅಷ್ಟೆ. ಬೇಕೆನಿಸಿದಾಗ ಆ ಸವಿಯನ್ನುಣ್ಣಲು ನೆರವಾಗುವುದು ಅಲ್ಲಿ ತೆಗೆದ ಛಾಯಾಚಿತ್ರಗಳು ಮಾತ್ರ.

ನನ್ ಕಡೆಯಿಂದ ವಿಶೇಷ ಧನ್ಯವಾದಗಳು:

ಮೊಹಮ್ಮದ್ ರಫಿ - ಚಾರಣದ ರೂವಾರಿ
ವಿವೇಕ್ ಭಟ್ - ಪಾಕ ಕ್ರಾಂತಿ ಮಾಡಿದ್ದಕ್ಕಾಗಿ
ಮಲ್ಲಿಕಾರ್ಜುನ್, ಪ್ರಭು, ರಫಿ, ಭಟ್ಟ - ಪಟ ತೆಗ್ದಿದ್ದುಕ್ಕೆ
ಸುರೇಶ್ - ಲೈಟರ್ ಕೊಟ್ಟಿದ್ದಕ್ಕೆ ( ಯಾಕ್ ಇಟ್ಕೊಂಡಿದ್ನೋ ನಂಗ್ ಗೊತ್ತಿಲ್ಲಪ್ಪ!!)

ಮಾಹಿತಿ:

ಸ್ಥಳ: ದೂಧ್ ಸಾಗರ್( Dudh Sagar) - ಮಾಂಡೋವಿ ನದಿ, ಕರ್ನಾಟಕ & ಗೋವಾ ರಾಜ್ಯ
ಚಾರಣ ಶುರು ಮಾಡುವ ಸ್ಥಳ: ಕ್ಯಾಸೆಲ್ ರಾಕ್
ದೂರ: ಬೆಂಗಳೂರಿನಿಂದ  528 ಕಿ.ಮೀ., ಪಣಜಿಯಿಂದ 60 ಕಿ.ಮೀ.
ತಲುಪುವ ಬಗೆ: ಸ್ವಂತ ವಾಹನ/ ಬಸ್ಸು(NH -4A)/ರೈಲು( ಉತ್ತಮ)
ಮಾರ್ಗ: ಕರ್ನಾಟಕದಿಂದ( ರೈಲಿನಲ್ಲಿ)  : ಬೆಂಗಳೂರು - ಹುಬ್ಬಳ್ಳಿ - ಧಾರವಾಡ - ಅಳ್ನಾವರ - ಲೋಂಡ - ಕ್ಯಾಸಲ್ ರಾಕ್ - ದೂಧ್ ಸಾಗರ್ - ಕೂಲೆಂ


1 ಕಾಮೆಂಟ್‌: