ಶುಕ್ರವಾರ, ಮಾರ್ಚ್ 22, 2013

ರಾತ್ರಿ ಚಾರಣ-ರಾಮದೇವರ ಬೆಟ್ಟ, ತುಮಕೂರು ( Night trek to Ramadevara Betta) - 16 n 17 Mar 2013


ರಾಮದೇವರ ಬೆಟ್ಟ, ತುಮಕೂರು:
ಶ್ರೀ ಸಿದ್ದಗಂಗ ಕ್ಷೇತ್ರದ ಪಕ್ಕ ನೆಲೆಸಿರುವ ರಾಮದೇವರ ಬೆಟ್ಟವು ಬೆಂಗಳೂರು - ತುಮಕೂರು ರಾಷ್ಟ್ರೀಯ  ಹೆದ್ದಾರಿ (NH-4 ) ಯಲ್ಲಿದೆ. ಬೆಟ್ಟದ ಇತಿಹಾಸದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲದ ಕಾರಣ ಇಲ್ಲಿ ಬೊಗಳೆ ಬಿಟ್ಟು ಮಕ್ ಉಗುಸ್ಕೊಳ್ಳೋ ತಪ್ಪು  ಮಾಡೋಲ್ಲ  ...
ಚಾರಣ ಶುರು ಮಾಡುವ ಸ್ಥಳ - ರಾಮದೇವರ ಬೆಟ್ಟ, ತುಮಕೂರು 
ಚಾರಣದ ನನ್ನ ಅನುಭವ:
Bangalore Ascenders (BASC-www.bangaloreascenders.org) ಇಂದ ದಿನಾಂಕ 16 ಮಾರ್ಚ್ 2013ರ ಸಂಜೆ  ಎಲ್ಲರೂ ಬೆಂಗಳೂರು ರೈಲ್ವೆ  ನಿಲ್ದಾಣದಿಂದ ಸಂಜೆ 4:45ಕ್ಕೆ ಹೊರಟೆವು. ನಾನು,ನವೀನ ಮುಂಚೆ ಹೋಗಿ ಟಿಕೆಟ್ ತೆಗೆದುಕೊಂಡು ಎಲ್ಲರ ಬರವನ್ನೇ ಕಾಯುತ್ತಿದ್ದೆವು... ಎಲ್ಲರು ಬಂದರೂ ನಮ್ಮ ಹಿರೋಯಿನ್ ಈ ಚಾರಣದ ನನ್ನ ಸಹ-ರೂವಾರಿ ವಿನೂತ್ನ ಇನ್ನೂ ಬಂದೇ ಇಲ್ಲ!!! ಆಮೇಲೆ ರೈಲು ಹೊರಡುವ ಕೆಲವೇ ಕ್ಷಣಗಳ ಮುಂಚೆ DDLJ ಕಾಜೋಲ್ ತರ Running ನಲ್ಲಿ ಬಂದು ನಮ್ಮನ್ನು ಸೇರಿಕೊಂಡಳು. ಮಾನ್ಯ ಕಿರಣ್ I am wearing Black & Black ಅಂತ SMS ಕಳುಹಿಸಿದ್ದ, ನಮ್ಮ ಶಾಂಪೂ ಸುರೇಶ Black & Black ಎಲ್ಲಿ ಅಂತ ಹುಡುಕಿದ್ದೇ ಹುಡುಕಿದ್ದು. ಆದರೆ ಆಸಾಮಿ ನಾನು ಮೊದಲೇ ಪ್ಲಾಟ್ ಫಾರಂ ಸಂಖ್ಯೆ 10 ಎಂದು ತಿಳಿಸಿದ್ದರೂ, 9ನೇ ಪ್ಲಾಟ್ ಫಾರಂ ರೈಲು ಹಿಡಿದು ಓಸಿಯಗಿ ಯಶವಂತಪುರದವರೆಗೂ ಪ್ರಯಾಣ ಮಾಡಿ ಅಲ್ಲಿ ಕಾದು ನಂತರ ನಮ್ಮ ರೈಲನ್ನು ಹತ್ತಿಕೊಂಡ. BASCನ ನಿಯಮದಂತೆ ಎಲ್ಲರಿಂದಲೂ INDEMNITY BONDಗೆ ಸಹಿ ಪಡೆದೆವು. ಮತ್ತೊಬ್ಬ ಸಹ ಚಾರಣಿಗ ಅನಿರುಧ್ಧ್ ಬಸ್ಸಿನಲ್ಲಿ ಬಂದು ಚಾರಣದ ಸಮಯಕ್ಕೆ ಸರಿಯಾಗಿ ನಮ್ಮ ಜೊತೆಗೂಡಿದ. ಹೀಗೆ ಒಟ್ಟಾರೆ 23 ಚಾರಣಿಗರು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ನಮ್ಮ ರಾತ್ರಿ ಚಾರಣವನ್ನು ಶುರು ಮಾಡಿದೆವು.

ಹೋದ ವಾರ ಇದೇ ಸ್ಥಳಕ್ಕೆ ಬೆಳಗಿನ ಹೊತ್ತಿನಲ್ಲಿ 11 ಮಂದಿಯೊಟ್ಟಿಗೆ  BASC ನಿಂದಲೇ ಚಾರಣ ಮಾಡಿದ್ದೆ . ಶೌನಕ್ ಹೋದ ವಾರವೂ ನನ್ನ ಜೊತೆ ಚಾರಣ ಮಾಡಿದ್ದರಿಂದ ಅವನನ್ನು ಮತ್ತು ಸುರೇಶನನ್ನು ತಂಡವನ್ನು ಮುನ್ನಡೆಸಲು ಹೇಳಿದೆನು. ಎಲ್ಲರೂ ಟಾರ್ಚ್ ತಂದಿದ್ದರೂ ದಾರಿ ದೀಪವದವರು ಇವರು  ....
8 30 ರ ಹೊತ್ತಿಗೆ ಬೆಟ್ಟದ ತುದಿಯನ್ನು ತಲುಪಿ ಅಲ್ಲಿದ್ದ ಪುಟ್ಟ ಶಿವದೆವಲಯವನ್ನು ಹೊಕ್ಕು ದೇವರಿಗೆ ನಮಸ್ಕರಿಸಿ ಶಿವಲಿಂಗದ ಮುಂದೆ ಕುಳಿತ ನಂದಿಯನ್ನು ಕಂಡು ಹೊರಬಂದೆವು.
ಶಿವ ದೇವಾಲಯ - ರಾಮದೇವರ ಬೆಟ್ಟ, ತುಮಕೂರು


ಕಲ್ಲು ಮಂಟಪ


ನಂತರ ನಮ್ಮ ತಂಡಕ್ಕೆ ಸ್ವಲ್ಪ ಸಮಯ ಆಟ ಆಡಿ ನಂತರ ಅಡುಗೆ ಮಾಡೋಣವೋ ಇಲ್ಲ ಪುಲಾವ್ ಅನ್ನು ಮಾಡಿ,ಉಂಡು  ನಂತರ ಆಟ ಶುರು ಮಾಡೊಣವೋ ಎಂದು ಕೇಳಿದರೆ ಎಲ್ಲರೂ ಒಕ್ಕೊರಲಿನಿಂದ ಊಟ ಎಂದು ಕೂಗಿದರು ಆಗ ಮನಸಿಗೆ  ಹೊಳೆದದ್ದು ... ಕಾಲೇಜ್  ನಲ್ಲಿ "ದೇವರಹೆಣ" ಅಂತ ಒಂದು ಪಾಠ ಇತ್ತು . ಆ ಪಾಠದಲ್ಲಿದ್ದ ಒಂದು ಸಾಲು - ಅನ್ನ ಎಂಬ ಶಬುದ ಕಿವಿಗೆ ಬೀಳುತ್ತಲೇ ಠೊಣ್ಣಿ  ಹ ಹ್ಹ ಹ್ಹ ಎಂದು ನಕ್ಕು ಬಿಟ್ಟಿದ್ದನು  ...

ಮೊದಲೇ ಎಲ್ಲರಿಗೂ ಇ-ಮೇಲ್ ನಲ್ಲಿ ತಿಳಿಸಿದ್ದಂತೆ ಅವರವರಿಗೆ ವಹಿಸಲಾಗಿದ್ದ ಪದಾರ್ಥಗಳನ್ನು ಎಲ್ಲ ಸಹ ಚಾರಣಿಗರೂ  ಮರೆಯದೇ ತಂದಿದ್ದರು .


ಬಟಾಣಿ ಬಿಡಿಸಿ,ಹುರುಳಿಕಾಯಿ,ಟೊಮೇಟೊ,ಈರುಳ್ಳಿ,ಆಲೂಗಡ್ಡೆ ಎಲ್ಲ ತರಕಾರಿ ಹೆಚ್ಚುತ್ತಾ, ಒಂದು ತಂಡ ಹಾಸಿದ್ದ ಟಾರ್ಪಲಿನ್ ಮೇಲೆ ಹರಟುತ್ತ ಕುಳಿತಿದ್ದರು. ಪುದಿನ,ಕೊತ್ತಂಬರಿ ಬಿಡಿಸುತ್ತ ಆ ತಂಡದ ಮುಂದಾಳತ್ವವನ್ನು ಕಾಜೋಲ್  ಅಲ್ಲಲ್ಲ ವಿನೂತ್ನ ನಿರ್ವಹಿಸುತ್ತಿದ್ದಳು ...
ಅಡುಗೆ ಮಾಡಲು ಸಿದ್ಧತೆ

ನಾನು ಈ ಕಡೆ ಪಾಕ ಪ್ರವೀಣರಾದ ಜಿನು ಮತ್ತು ಅಶೋಕ್ ರವರ ಬಳಿ ಸಾಗಿ ಏನೋ ಉಚಿತ ಸಲಹೆ ಕೊಡಲು ಹೋಗಿ ನಿಂಗೆ ಅಡುಗೆ ಮಾಡೋಕ್ ಬರತ್ತಾ ಅಂತ ಬೈಸಿಕೊಂಡೆ (ನಂಗೆ ಕುಕ್ಕರಿನಲ್ಲಿ ಮಾತ್ರ ಅನ್ನ ಮಾಡೋಕ್ ಬರೋದು :- ( )

ಬಿಸಿ ಬಿಸಿ ಪುಲಾವ್ ಸಿದ್ಧವಾಗುತ್ತಿದೆ

ಅಂತೂ ಪುಲಾವ್,ಮೊಸರು ಬಜ್ಜಿ ಎರಡೂ ಉಣ್ಣಲು ಸಿದ್ಧ!!!!


ಅಶೋಕ್  ಎಲ್ಲ್ರುಗೂ ಸಾಲಿಗಿ ನಿಲ್ಲಲು ಹೇಳಿ,ಒಬ್ಬರಿಗೆ ಒಂದೇ ಸೌಟು ಎಲ್ಲರದೂ ಆದರೆ ಎರಡನೇ ಸುತ್ತಿಗೆ ಬರುವಿರಂತೆ ಎಂದು ಹೇಳುತ್ತಿದ್ದ .

ಹಿಂದಿನಿಂದ ಯಾರೋ ALPHABETICAL ORDER ಅಲ್ಲಿ ನಿಲ್ಲೋಣ ಎಂದು ಸಲಹೆ ಕೊಡುತ್ತಿದ್ದರು. ಆಗ ಆನಂದತೀರ್ಥ(ತೀರ್ಥ ಸೇವಿಸಿದಾಗ ಆನಂದ ಆಗೇ ಆಗತ್ತೆ ಬಿಡಿ) ಮತ್ತು ಆಶಿಶ್ ಮಧ್ಯೆ ಮಾತುಕತೆ ನಡೆಯುತ್ತಿತ್ತು... ಆನಂದ್ ನಾನು ಮೊದಲು ಎಂದರೆ ಆಶಿಶ್ ನಂದು DOUBLE-A ಎಂದು ಹೇಳುತ್ತಿದ್ದ. ಮನಸೋ ತೃಪ್ತಿ ಪುಲಾವ್ ಅನ್ನು ಭರ್ಜರಿ ಬೇಟೆಯಾಡಿ ಎಲ್ಲರೂ ಕ್ಯಾಂಪ್ ಫೈರ್ ಹಾಕಿದೆವು. ನಂತರ ಪುಟ್ಟ ಮಕ್ಕಳಂತೆ ಅದರ ಸುತ್ತಲೂ ಚುಕು ಬುಕು ಎಂದು  ಓಡಿದ್ದು ಸ್ಮೃತಿ ಪಟಲದಲ್ಲಿ ಹಸಿರಾಗಿದೆ .

ಚುಕು ಬುಕು - CAMP FIRE

ಕೆಲಸದ ಒತ್ತಡದ ನಡುವೆ ಬಹಳವೇ ಮಂದಿ ಆಗಂತುಕರ ನಡುವೆ DVG ರವರ ಮಾತಿನಂತೆ "ಎಲ್ಲರೊಳಗೊಂದಾಗುವುದು" ಎಂತಹ ಸೊಗಸಿನ ಸಂಗತಿ...ವಯಸ್ಸು ಎಷ್ಟಾದರೆನಂತೆ ಆಸ್ವಾದಿಸುವ ಮನಸ್ಸು ಸದಾ ಯವ್ವನದಿಂದ ಕೂಡಿರಬೇಕಷ್ಟೇ ...

ಈಗ ಎಲ್ಲರನ್ನು 2 ತಂಡಗಳನ್ನಾಗಿ ವಿಭಾಗಿಸಿದೆವು ನಿಯಮಾವಳಿಯನ್ನು ಹಾಕಿದೆವು .


1.ತಂಡದಿಂದ ಒಬ್ಬರು ಬಂದು ಅವರ ಸ್ವ-ಪರಿಚಯವನ್ನು ಮಾಡಿಕೊಂಡು ತಮ್ಮಲ್ಲಡಗಿರುವ ಪ್ರತಿಭೆಯನ್ನು ಹೊರಗೆಡವಬೇಕು. ನಂತರ ಪಾಟಿ ಸವಾಲನ್ನು ಸ್ವೀಕರಿಸಿ ಮತ್ತೊಂದು ತಂಡದಿಂದ ಒಬ್ಬರು ಬಂದು ತಮ್ಮ ಸ್ವ-ಪರಿಚಯ ಮಾಡಿಕೊಂಡು ಸವಾಲಿಗೆ ಟಾಂಗಾ ಕೊಡಬೇಕು .

2. ಒಂದು ಪ್ರತಿಭೆಗೆ ಒಂದೇ ಅವಕಾಶ .

ತಂಡಗಳಿಗೆ ಏನಾದ್ರು ಹೆಸರು ಕೊಡ್ರಪ್ಪ ಅಂತ ಹೇಳಿದೆ...ಕಾವೇರಿ,ಗಂಗೆ, Dr. ರಾಜ್  ಕುಮಾರ್ ತಂಡ,ಕುವೆಂಪು ತಂಡ  ಹೀಗೆ ಏನೇನೋ ನನ್ನ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಯಾರೋ ಮಧ್ಯದಿಂದ KFC ಎಂದು ಕೂಗಿದರು.ಯಾರೋ ಚಿಕೆನ್ ಪಾರ್ಟಿ ಅಂತ ಅಂದ್ಕೊಂಡ್ರೆ .... ಅದಲ್ಲ  KFC ಅಂದ್ರೆ "ಕಾಶೀನಾಥ್ ಫ್ಯಾನ್ಸ್ ಕ್ಲಬ್" ಅಂತೆ!!! ...ನಮ್ ತಂಡದೋರು ಈ  ಮಟ್ಟಕ್ಕೆ ಪೋಲೀನಾ ಅನ್ನಿಸಿಬಿಡ್ತು. ವಿನೂತ್ನರವರು ಮುಂದಾಳತ್ವ ವಹಿಸಿದ್ದ ತಂಡದ ಹೆಸರು BABA (ರಜನಿಕಾಂತ್ ಅಭಿಮಾನಿಗಳಿವರು!!!)

23 ಜನರಲ್ಲೂ ಎಲ್ಲಿಲ್ಲದ ಉತ್ಸಾಹ ... ಭಾವಗೀತೆ,ಮಂಕುತಿಮ್ಮನ ಕಗ್ಗ, ಚಿತ್ರಗೀತೆ, ಭಕ್ತಿಗೀತೆ, ನೃತ್ಯ ಎಲ್ಲಾ ರೀತಿಯ ಪ್ರತಿಭೆಗಳನ್ನು ಹೊರಗೆಡವಿದರು.
ಪ್ರತಿಭೆಯ ಅನಾವರಣ


ಅತ್ಯುತ್ತಮ ಪ್ರದರ್ಶನ  ನೀಡಿದವರ  ಪಟ್ಟಿ :

ಅಶೋಕ್ - ಭಾವಗೀತೆ

ಕಿರಣ್  - ಗುಂಡು ಹಾರಿಸಿವುದು  (ರೈಫಲ್  0.002 mm ಅಂತ ಅದೇನೋ ಹೇಳ್ದ ನಂಗೆ ಅಷ್ಟು ಅರ್ಥ ಆಗ್ಲಿಲ್ಲ ಎಲ್ಲಾ ಓ  ಅಂದ್ರು ನಾನು ಓ ಅಂದೇ ಅಷ್ಟೇ)

ಅರುಣ್ & ಭರತ್  - ಮಂಕುತಿಮ್ಮನ ಕಗ್ಗ

ಶ್ರೀನಿಧಿ & ಮಲ್ಲಿಕಾರ್ಜುನ್ - ನೃತ್ಯ

ಆನಂದ್ & ಸುರೇಶ - ಭಕ್ತಿಗೀತೆ

ಜಿನು - ಅವಿವಹಿತರಿಗಾಗಿ ಬಿಟ್ಟಿ ಪ್ರವಚನ

ಆ ತಣ್ಣಗಿನ ಹವೆಯಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನಮ್ಮ ತುಮಕೂರಿನ ರಾತ್ರಿಯ ದೀಪಧಾರೆಯನ್ನು ನೋಡುವುದೇ ಸೊಗಸು. ನಮ್ಮೂರು ಇಷ್ಟು ಚೆನ್ನಾಗಿದ್ಯಾ ಅನ್ನಿಸ್ತು ಅಂದ್ರೆ ಅತಿಶಯೋಕ್ತಿಯಾಗಲಾರದು ...

ಯಾರೋ ಪಲ್ಲವಿ ನಿಮ್ಮನೆ ಎಲ್ಲಿ ತೋರ್ಸು ಅಂತ ಕೆಳ್ಬಿಡೋದಾ.... ದೇವ್ರೇ VTU ಪರೀಕ್ಷೆಗಿಂತ ಕಷ್ಟದ ಪ್ರಶ್ನೆ ಇದು!!!
ರಾತ್ರಿಯ ದೀಪಧಾರೆ

ದೇವಸ್ಥಾನದ ಮುಂದೆ SLEEPING BAG ಹೊದ್ದು ನಾನು ವಿನು ಮಲಗಿದ್ದೆವು. ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಕೊರೆಯುವ ಚಳಿ ತಾಳಲಾರದೆ ದೇವಾಲಯದ ಒಳ ಹೊಕ್ಕು ಅಲ್ಲಿ ಮಲಗಿಬಿಟ್ಟೆವು.

ಬೆಳಗ್ಗೆ ಎದ್ದು ಹಾರುತ್ತ ಜಿಗಿಯುತ್ತಾ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು ನಂತರ ಎಲ್ಲಾ ಗುಂಪು ಛಾಯಾಚಿತ್ರ (GROUP PHOTO) ತೆಗೆಸಿಕೊಂಡು 8 ಗಂಟೆಯ ಹೊತ್ತಿಗೆ ಬೆಟ್ಟವನ್ನು ಇಳಿಯಲು ಶುರು ಮಾಡಿದೆವು.
ನಮ್ GANG

ಏನ್  POSE ಅಪ್ಪ


ಕೆಳಗಿಳಿಯುತ್ತಿರುವುದು - ರಾಮದೇವರ ಬೆಟ್ಟ, ತುಮಕೂರು


ಇಳಿಯಲು ಬೇರೆ ಸುತ್ತು ದಾರಿಯನ್ನು ಬಳಸಿದ ಕಾರಣ ನಾವು ಕೆಳಗಡೆಗೆ ತಲುಪಲು ಸ್ವಲ್ಪ ತಡವಾಯಿತು.10 ಗಂಟೆಯ ಹೊತ್ತಿಗೆ ಎಲ್ಲರು ಪವಿತ್ರ ಹೋಟೆಲ್ ಕಡೆ ಮುಖಮಾಡಿ ದಾರಿಯಲ್ಲಿ ಹಲಸಿನ ಹಣ್ಣನ್ನು ಸವಿದು ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಎಲ್ಲರು ಬೆಂಗಳೂರಿಗೆ ಹೊರಟರು.ಅವರನ್ನು ಬೀಳ್ಕೊಟ್ಟು ನಾನು ನಮ್ಮ ಮನೆಗೆಂದು ತುಮಕೂರಿಗೆ ಹೊರಟೆ .

ರಾತ್ರಿ ಚಾರಣಕ್ಕೆ ಹೊರಡುವ ಮುನ್ನ ಪಾಲಿಸಬೇಕಾದ ಕೆಲ ಸಂಗತಿಗಳು :

1.  ಟಾರ್ಚ್ ಅನ್ನು ಹೊಸ ಬ್ಯಾಟರಿಯೊಂದಿಗೆ ಖಡ್ಡಾಯವಾಗಿ ಇಟ್ಟುಕೊಳ್ಳಬೇಕು.
2. SHORTS / 3/4th ಪ್ಯಾಂಟ್ ಹಾಕದಿರುವುದು ಉತ್ತಮ (ಆ ಹಳ್ಳಿಯ ನಿವಾಸಿಗಳಿಗೆ ಅನುಮಾನ ಬಂದರೆ ನಮ್ಮನ್ನು ಚಾರಣ ಮಾಡಲು ಬಿಡುವುದಿಲ್ಲ).
3. SLEEPING BAG / BLANKET ಅನ್ನು ಖಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು
4. ಆದಷ್ಟು ಗಲಾಟೆ ಮಾಡದೆ ಸುಮ್ಮನೆ ನಡೆಯುವುದು ಉತ್ತಮ.
5. ಅಲ್ಲಿ ಕುಡಿಯುವ ನೀರಿನ ಯಾವುದೇ ಮೂಲವಿಲ್ಲದಿರುವುದರಿಂದ ಸಾಕಷ್ಟು ನೀರನ್ನು ಒಯ್ಯಬೇಕು.

ಮಾಹಿತಿ:
ಸ್ಥಳ: ರಾಮದೇವರ ಬೆಟ್ಟ, ಕ್ಯಾತ್ಸಂದ್ರ, ( Ramadevara Betta, Kyatsandra) - ತುಮಕೂರು ಜಿಲ್ಲೆ, ಕರ್ನಾಟಕ.
ಚಾರಣ ಶುರು ಮಾಡುವ ಸ್ಥಳ: ಕ್ಯಾತ್ಸಂದ್ರ
ದೂರ: ಬೆಂಗಳೂರಿನಿಂದ  65 ಕಿ.ಮೀ.
ಪರ್ವತರೋಹಣದ ದರ್ಜೆ : ಸುಲಭ
ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ: ಬೆಂಗಳೂರು-ತುಮಕೂರು ಹೆದ್ದಾರಿ (NH 4) - ಕ್ಯಾತ್ಸಂದ್ರ ದಲ್ಲಿ ಇಳಿದು ಮಠದ ಕಡೆಗೆ ನಡೆದು ಹೋಗಬೇಕು.

ಗುರುವಾರ, ಫೆಬ್ರವರಿ 28, 2013

ಕಾಡುವ ಹಾಡು - ಜಯತೇ .. ಸತ್ಯಮೇವ ಜಯತೇ


ಕೇಳಿದೊಡನೆ ಭಾವಕ್ಕೆ ತಟ್ಟುವ, ಮನಕ್ಕೆ ಮುಟ್ಟುವ ಹಾಡು.....




ಮಠ ಚಿತ್ರ ನೋಡಿದಾಗ ತುಂಬಾ ಮನಸ್ಸಿಗೆ ಹಿಡಿಸಿದ ಹಾಡು ... ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನು ಗುರುಪ್ರಸಾದ್ ರವರು ಬಹಳ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಮತ್ತು ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ ಸಹ .... 












 ಚಿತ್ರ - ಮಾರ್ಗದರ್ಶಿ/ ಮಠ                                       ಗಾಯಕರು - ಮನ್ನಾ ಡೇ
ಸಂಗೀತ - ಜಯದೇವ/ ವಿ.ಮನೋಹರ್                       ಸಾಹಿತ್ಯ - ಕು.ರಾ.ಸೀತಾರಾಮಶಾಸ್ತ್ರಿ


ಜಯತೇ ಜಯತೇ ಜಯತೇ .... ಸತ್ಯಮೇವ ಜಯತೇ ..ಸತ್ಯಮೇವ ಜಯತೇ ...

ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ...ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಗುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಧುರ ಭಾವ ತುಂಬಿದಂಥ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂಥ ನಿಧಿಯೆ ಇಲ್ಲ ಬಲ್ಲಿರ
ಸರಳ ಜೀವಿಗೆಂದಿಗೂ ಸೋಲೆ ಇಲ್ಲ ಕಾಣಿರ
ಸತ್ಯವಾದ ಘನತೆ ಸೋಲೆ ಕಾಣದಂತೆ

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲಿ ಇರುವ ಅಂತರಾತ್ಮ ಕಾಣದೆ
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಂಗಳವಾರ, ಜನವರಿ 29, 2013

Baanali Badalaago - Simple Agi Ond Love Story - Kaaduva Haadu

 ನೋಡಿದ್ ತಕ್ಷಣಾನೇ ಕಾಡಿದ ಹಾಡು - LOVE AT FIRST SIGHT ತರ

ಛಾಯಾಚಿತ್ರಗಾರನ ಕೆಲಸ, ಜಾಗದ ಆಯ್ಕೆ, ಸಾಹಿತ್ಯ ತುಂಬಾನೇ ಮನಸೋರೆಗೊಳ್ಳತ್ತೆ ....




ಮೊದಲ ಪ್ರಯತ್ನದಲ್ಲೇ ನಿರ್ದೇಶಕರಾದ ಸುನಿ ಅವರ ಹೊಸತನ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಚಿತ್ರವನ್ನು ಸೆರೆ ಹಿಡಿಯುವಲ್ಲಿ ಮನೋಹರ್ ಜೋಷಿಯವರ ಕೈ ಚಳಕ ಎದ್ದು ಕಾಣುತ್ತದೆ.
ಸಿದ್ದುರವರ ಸಾಹಿತ್ಯಕ್ಕೆ ಭರತ್ ರವರು ತಮ್ಮ ಸಂಗೀತದ ಭಾಷೆಯಲ್ಲಿ ಅರ್ಥ ಕೊಟ್ಟರೆ ಸೋನು ನಿಗಮ್ ನಿಜಕ್ಕೂ ಅದಕ್ಕೆ ಜೀವ ತುಂಬಿ ಹಾಡಿದ್ದಾರೆ....
2013ರ HIT SONG LIST ನಲ್ಲಿ ಈ ಹಾಡು ಸೇರ್ಪಡೆಯಾಗೋದ್ರಲ್ಲಿ ಸಂಶಯಾನೇ ಇಲ್ಲ .....



ಸಾಹಿತ್ಯದ ಸ್ವಾದವನ್ನು ಆಸ್ವಾದಿಸಿ:
https://www.youtube.com/watch?v=7cBSr4dGRZY
ಬಾನಲಿ ಬದಲಾಗೋ...ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಮನದಿ ಏನೂ... ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿ ಮಾಡದೇ
ಕೆಣಕಿ ನನ್ನ ಕೆಣಕಿ ...ತೆರೆದೇ ಮನದ ಕಿಟಕಿ
ಕರುಣಿಸು ಪ್ರೇಮ ಧಾರೆ ಬಯಕೆಯ ತೋರದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಸರದಿಯಲ್ಲಿ... ಹೊಸ ಬಯಕೆ ಸರಿದಾಡಿದೆ
ಹರಸಿ ಬೇಗ ಕರೆ ಮಾಡು ತಡ ಮಾಡದೇ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೇಮ ಭಾಷೆ ಪದಗಳ ನೋಡದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಸೋಮವಾರ, ಜನವರಿ 21, 2013

ದಾಂಡೇಲಿ ಮತ್ತು ಗೋಕರ್ಣ ಪ್ರವಾಸ - 19, 20 ಜನವರಿ 2013


ಈ ಬಾರಿ ಪ್ರವಾಸದ ನನ್ನ ಅನುಭವದ ಬಗ್ಗೆ ಹೇಳೋದಕ್ಕಿಂತಲೂ ಸಹ ಪ್ರವಾಸಿಗರು... ಛೆ ಛೆ ಹೊಸ ಸ್ನೇಹಿತರು ...ಛೆ ಏನೋ ಸರಿಯಾದ್ ಪದಾನೆ ಸಿಗ್ತಿಲ್ಲ್ವಲ್ಲ ..... ಶುಕ್ರವಾರ (18 ಜನವರಿ 2013 ) ಪ್ರವಾಸಕ್ಕೆ ಹೊರಟಾಗ ಗಿರಿ & ನಾಗರ್ಜುನ್ ಹೊರತು ಪಡಿಸಿ ಎಲ್ಲರೂ ಹೊಸ ಮುಖಗಳೇ ... ಆದರೆ ಇಂದೇಕೋ ಅವರನ್ನ ಹೊಸ ಸ್ನೇಹಿತರು ಅಂತ ಕರೆಯೋಕೆ ಒಹ್ ಕ್ಷಮಿಸಿ ಬರೆಯೋಕ್ಕೆ ಮನಸೇ ಬರ್ತಿಲ್ಲ .... ಎಷ್ಟೋ ವರ್ಷಗಳ ಮಿತ್ರರು ಅನ್ನುವಷ್ಟು ಮಟ್ಟಿಗೆ ಭಾಂದವ್ಯ ಬೆಳೆದಿದೆ .....
ಈ ನನ್ನ ಸ್ನೇಹಿತರು ನನಗೆ ಹೇಗೆ ಅನ್ಸಿದ್ರು ಅನ್ನೋದನ್ನ ಎರೆಡು ಸಾಲಿನಲ್ಲಿ ಗೀಚೋ ಪುಟ್ಟ ಪ್ರಯತ್ನ ( ಯಾರ್ ಬಗ್ಗೆನಾದ್ರು ಋಣಾತ್ಮಕವಾಗಿ ಬರೆದಿದ್ದೇನೆ ಅನ್ಸಿದ್ದ್ರೆ ಬೇಜಾರ್ ಮಾಡ್ಕೊತೀರ ....ಮಾಡ್ಕೊಳಿ ನಮಪ್ಪನ್ ಮನೆ ಗಂಟೇನ್ ಹೋಗೋಲ್ಲ!!! )

ಟೈಗರ್ ಬಂದಿದಾನೆ ಹಾಂ !!!!
ಪ್ರವಾಸದ ಪೂರ ಆರೋಗ್ಯ ಕೈ ಕೊಟ್ಟ ಸಲುವಾಗಿ ಅಮ್ಮನ ಮಡಿಲ ಬೆಚ್ಚಗಿನ ಭಾವದ ಅನುಭೂತಿ ಕೊಟ್ಟ, ಅನ್ಸಿದ್ದನ್ನ ಹೇಳೋ ಮಗುವಿನ ಮನಸಿನ ಪ್ರಭಾಕರ್




ಹಸನ್ಮುಖಿ ಗುರ್ವ ರೆಡ್ಡಿ
ಹುಡುಗಿಗೆ ಫೋನ್ ಮಾಡಿ ಮಾತಾಡಪ್ಪ ಅಂದ್ರೆ ( పెళ్లి చూపులు) ಅವರ ತಾಯಿಗೆ - ಅವಳಿಗೆ ಫೋನ್ ಮಾಡಿ ಮಾಡಿ ಸಾಕಾಯ್ತು ಎತ್ತುತ್ತಿಲ್ಲ ಅವಳಿಗೆ ಮಾಡೋಕ್ಕೆ ಹೇಳು ಅನ್ನೋಷ್ಟು ಗಂಡೆದೆ ವೀರ!!! ಏನೇ ಆಗ್ಲಿ 2 ಕೋಟಿ ವರದಕ್ಷಿಣೆ ಕೊಟ್ರೆ ಕೋತೀನ ಬೇಕಾದ್ರೂ ಮದ್ವೆ ಆಗ್ತೀನಿ ಅಂತಾನೆ ಅದು ಬೇರೆ ವಿಷ್ಯ ಬಿಡಿ ....




ನಾಗಾರ್ಜುನ್ ( ನಾಗ+ಅರ್ಜುನ್ = ಸವರ್ಣ ದೀರ್ಘಸಂಧಿ  )
ಸಹಾಯ ಮಾಡೋದ್ರಲ್ಲಿ ಎಳ್ಳಷ್ಟೂ ದೀರ್ಘಾಲೋಚನೆ ಮಾಡದಲೇ ಇರೋ , ನಾಗಾರ್ಜುನ ಕೊಂಡದಷ್ಟು ವಿಶಾಲ ಮನಸ್ಸಿನ ಹುಡುಗ .......


ಬೆಣ್ಣೆ ಹುಡುಗ ನವನೀತ್ ಜೊತೆ ಚಿಗುರು ಮನಸ್ಸಿನ ಮಿತ ಭಾಷಿ ಪಲ್ಲವಿ
ಏನ್ರೀ ಹೇಳೋದ್ ಇವರ ಜೋಡಿ ಬಗ್ಗೆ .... ರಾಷ್ಟ್ರೀಯ ಮಟ್ಟ(National Level)ದ ವಾಲಿ ಬಾಲ್ ಆಟಗಾರ್ತಿಯನ್ನು ಜಿಲ್ಲಾ ಮಟ್ಟ( District Level)ದ ಆಟಗಾರ ಒಂದೇ ವಾರದಲ್ಲಿ ಪಟಾಯಿಸ್ಯಾನೆ ಅಂದ್ರೆ ಸುಮ್ನೆನಾ ....  HOW TO PATAISE A GIRL IN ONE WEEK ( SAATH DIN LADKI IN !!!) ಅಂತೇನಾದ್ರೂ ಇವ ಪುಸ್ತಕ ಬರ್ದ್ರೆ ಒಂದೇ ದಿನದಲ್ಲಿ ಎಲ್ಲಾ ರೆಕಾರ್ಡುಗಳನ್ನೂ ಮುರಿದು ಪುಸ್ತಕ ಮರು ಮುದ್ರಣ ಕಾಣುವಂತಾಗುತ್ತದೆ!!!!



ದೀಪಿಕಾ ನಾಗಮಂಗಲ ಅಲ್ಲಲ್ಲ ಚೌಹಾಣ್
ಚಮಚ ಹಿಡ್ಕೊಂಡೆ ಹುಟ್ಟಿರೋ ( ಯಾವ್ ಲೋಹ, ಎಷ್ಟು ಕ್ಯಾರೆಟ್ ಅಂತೇನಾದ್ರೂ ಕೆಳುದ್ರೋ ನಾ ಸುಮ್ಕೆ ಇರಾಕಿಲ್ಲ) ಪಂಚರಂಗಿ ಸಿನಿಮಾದ ತಾರೆಯನ್ನ ನೆನಪಿಸೋ ಪಿಂಕ್ ಚಡ್ಡಿ HEROIN !!! ಅಲ್ಲಪ್ಪೋ HEROINE.



ಅಕ್ಕ ಬಾಂಡ್ ಶ್ವೇತ
ನೀರಿನಂತೆ (UNIVERSAL SOLVENT ) ಎಲ್ಲದಕ್ಕೂ, ಎಲ್ಲರೊಟ್ಟಿಗೂ ತುಂಬಾನೇ ಬೇಗ ಹೊಂದಿಕೊಳ್ಳೋ ಸ್ವಭಾವದ ಹುಡುಗಿ.


BIRTHDAY BOY ಸಂದೀಪ್
ಪಾಪದ ಪ್ರಾಣಿ ಒಂದು ನಾಲ್ಕೈದು ಬಾರಿಯಾದರೂ ಒದೆ ತಿಂದು ... ಕೆಂಪಗೆ ಮಾಡಿಕೊಂಡ.


ಸದಾ ಹೊಸತೇನನ್ನೋ ಬಯಸೋ ನವೀನ್
ಉದಾ: ಇಲ್ಲಿದೆ. ಕ್ಯಾಮೆರಾ ನೋಡಿ ಪೋಸು ಕೊಟ್ಟದ್ದೆ ಕೊಟ್ಟದ್ದು!!!



ವಿಜಯ್
ಜೊಷಿಗಳು ಬಿಡಿ ಪಟ ಹಾರ್ಸೋದ್ರಲ್ಲಿ ಎತ್ತಿದ ಕೈ ... ಬಾಲ್ಯದಿಂದಲೂ ಆಡಿದ ಆಟ ( बाये हाथ का खेल)


ದರ್ಪಣ್

ಕನ್ನಡಿಯು ನಿಮ್ಮ ಪ್ರತಿಬಿಂಬವನ್ನು ತದ್ರೂಪಿನಲ್ಲಿ ಪ್ರತಿಫಲಿಸುತ್ತದೆ ... ಯಾವಾಗಲೋ ಮಿಡ್ಲ್ ಸ್ಕೂಲ್ ನಲ್ಲಿ ಓದಿದ್ದು. ಈ ಹುಡುಗಾನೂ ಅಷ್ಟೇ ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡ್ತಿದ್ದ ( ನನ್ಹತ್ರ. ಬೇರೆವ್ರ್ ಜೊತೆ ನಂಗೊತ್ತಿಲ್ಲ)


LAST BUT NOT THE LEAST

गिरी गिरी गिरी गिरी बिजली गिरी

ಈ ಪ್ರವಾಸದ ರೂವಾರಿ. ರೋಮಿಯೋ ಗಿರೀಶ್ ಗೆ FEMALE FANS ಜಾಸ್ತಿ. ಅದಕ್ಕೆ ಒಂದು GFC( Girish Fans Club) ಅನ್ನೋ ಸಂಘಾನ ಶುರು ಮಾಡೋ ಪ್ರಯತ್ನ ನಡೀತಿದೆ.
If you Like Giri or have Crush on him, Can join this Club.

It is strictly for Girls who are >= 85 Born. Entry FREE and EXIT- You have to Pay!! - ಗಿರಿಯ ಪ್ರೇಮ ಪಾಶದಿಂದ ಬಿಡಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ !!!!


                  ಎಲ್ರು ಬಗ್ಗೆನೂ ಕೊರ್ದಿದ್ದು ಮುಗೀತು ....

                                                  ಶುಭಂ( ಶುದ್ಧ ಬಂಡಲ್)

 




                                                                                          - ಪಲ್ಲವಿ ರಂಗನಾಥ್




ಗುರುವಾರ, ಡಿಸೆಂಬರ್ 27, 2012

ರಾತ್ರಿ ಚಾರಣ - ಮಾಲೆಕಲ್ಲು ತಿರುಪತಿ - 24, 25 ಡಿಸೆಂಬರ್ 2012


ಮಾಲೆಕಲ್ಲು ತಿರುಪತಿ ಬೆಟ್ಟ:
ಮಾಲೆಕಲ್ಲು ಬೆಟ್ಟದ ಲಕ್ಷ್ಮಿ ವೆಂಕಟೇಶ್ವರ ದೇವಾಲಯವು "ಅಮರಗಿರಿ ಮಾಲೆಕಲ್ಲು ತಿರುಪತಿ"ಯೆಂದೇ ಪ್ರಸಿದ್ಧಿ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನೆಲೆಗೊಂಡಿರುವ ಈ ದೇವಾಲಯವು 1250 ಮೆಟ್ಟಿಲುಗಳನ್ನು ಹೊಂದಿದ್ದು, ಹೊಯ್ಸಳರ ಕಾಲದ್ದೆಂದು ಐತಿಹ್ಯವಿದೆ.

ಸ್ಥಳ ಪುರಾಣ:
ಸುಮಾರು 800 ವರ್ಷಗಳ ಹಿಂದೆ ಲಕ್ಷ್ಮಿ ನಾರಾಯಣನು ಚಿತ್ರದುರ್ಗದ ಪಾಳೇಗಾರನಾದ ತಿಮ್ಮಪ್ಪ ನಾಯಕನ ಕನಸಿನಲ್ಲಿ ಕಾಣಿಸಿಕೊಂಡು, ತಾನಿರುವ ಸ್ಥಳಕ್ಕೆ ಬಂದು ತನ್ನನ್ನು ಮೇಲೆತ್ತಲು ಹೇಳಿ, ಕೆಲ ಸೂಚನೆಗಳನ್ನು ನೀಡುತ್ತಾನೆ. ಅಂತೆಯೇ ತುಳಸೀ ಮಾಲೆಯ ರೂಪದಲ್ಲಿ ಬೆಟ್ಟದ ಕಲ್ಲುಗಳ ಮೇಲೆ ನಿರ್ಮಿತವಾದ ದಾರಿಯಲ್ಲಿ ನಡೆಯುತ್ತಾ ಸ್ವಾಮಿ ನೆಲೆಸಿರುವ ಜಾಗವನ್ನು ಅರಿತು ತಿಮ್ಮಪ್ಪ ನಾಯಕನು ಬೆಟ್ಟದ ಮೇಲೆ ಮತ್ತು ಕೆಳಗೆ ದೇವಾಲಯಗಳನ್ನು ನಿರ್ಮಿಸುತ್ತಾನೆ. ತುಳಸೀಮಾಲೆಯ ಹಾದಿಯಿದ್ದುದ್ದರಿಂದ " ಮಾಲೆಕಲ್ಲು ತಿರುಪತಿ" ಎಂಬ ಹೆಸರು ಬಂದಿದೆ.

ಮಾಲೆಕಲ್ಲು ತಿರುಪತಿ ಬೆಟ್ಟ
ಮಾಲೆಕಲ್ಲು ತಿರುಪತಿ ಬೆಟ್ಟ
 


ಲಕ್ಷ್ಮಿ ವೆಂಕಟೇಶ್ವರ ದೇವಾಲಯ

ಶಿವಾಲಯ( ಚಂದ್ರ ಮೌಳೇಶ್ವರ ದೇವಸ್ಥಾನ):
ಮುಜ್ರಾಯಿಗೆ ಸೇರಿದ ಈ ದೇವಸ್ಥಾನವೂ ಸಹ ಅರಸೀಕೆರೆಯಲ್ಲೇ ಸ್ಥಾಪಿತಗೊಂಡಿದ್ದು, ಕ್ರಿ. ಶ. 1200 ಕ್ಕೂ ಹಿಂದಿನ ದೇವಾಲಯವೆಂದು ಅಲ್ಲಿರುವ ಶಾಸನವೊಂದು ಹೇಳುತ್ತದೆ. ಶಿವಲಿಂಗ ಮೂರ್ತಿ,  ಕಲ್ಲು ಬಸವ ಮತ್ತು ಬಳಪದ ಕಲ್ಲಿನಿಂದ ನಿರ್ಮಿತವಾದ ಕಂಬಗಳಿಂದ ಕೂಡಿದ ಈ ಸುಂದರ ದೇವಾಲಯವು ನಿಮ್ಮ ಕ್ಯಾಮೆರಾ ಕೈ ಚಳಕವನ್ನು ತೋರಿಸಲು ಅತ್ಯುತ್ತಮ ಸ್ಥಳವಾಗಿದೆ.

ಚಂದ್ರಮೌಳೇಶ್ವರ ದೇವಾಲಯ, ಅರಸೀಕೆರೆ



ಚಾರಣದ ನನ್ನ ಅನುಭವ:
Bangalore Ascenders (BASC - www.bangaloreascenders.org) ಇಂದ ದಿನಾಂಕ 24 ಡಿಸೆಂಬರ್ 2012ರ ರಾತ್ರಿ ಎಲ್ಲರೂ ಬೆಂಗಳೂರಿನ ರಾಜಾಜಿ ನಗರದ ನವರಂಗ್ ಚಿತ್ರಮಂದಿರದ ಬಳಿ 9:30ಕ್ಕೆ  ಬರಲು ಇ- ಮೇಲ್  ನಲ್ಲಿ ತಿಳಿಸಿದ್ದೆ. ಅಂತೆಯೇ ಸಮಯಕ್ಕೆ ಸರಿಯಾಗಿ ಅಲ್ಲಿ ಸೇರಿದ ನಾವು ಬೆಂಗಳೂರು ಬಿಡುವಷ್ಟರಲ್ಲಿ ಸಮಯ 10:10. ಯಶವಂತಪುರದಲ್ಲಿ ನಮ್ಮ ಬರುವಿಕೆಗಾಗಿ ಕಾಯುತ್ತಿದ್ದ 6 ಮಂದಿಯನ್ನು ಹತ್ತಿಸಿಕೊಂಡು ಒಟ್ಟಾರೆ 22 ಚಾರಣಿಗರು ಅರಸೀಕೆರೆಯತ್ತ ಪ್ರಯಾಣ ಬೆಳೆಸಿದೆವು.
ಬಸ್ಸಿನಲ್ಲಿ  BASCನ ನಿಯಮದಂದೆ ಎಲ್ಲರಿಂದಲೂ INDEMNITY BONDಗೆ ಸಹಿ ಪಡೆದು ಸ್ವ-ಪರಿಚಯವನ್ನು ಮಾಡಿಕೊಳ್ಳಲು ಹೇಳಿದೆವು ಮತ್ತು ಪರಿಚಯದಲ್ಲಿ ತಮ್ಮ ಹೆಸರಿನ ಪಕ್ಕದಲ್ಲಿ ಒಂದು ಉಪನಾಮವನ್ನು ಹೇಳಬೇಕೆಂದು ತಿಳಿಸಿದೆವು. ( ಷರತ್ತು - ಉಪನಾಮ ಕೆಟ್ಟದ್ದಾಗಿರಬೇಕು). ವಿನೋದದ ರೀತಿಯಲ್ಲೇ ಷರತ್ತನ್ನು ಸ್ವೀಕರಿಸಿದ ಸ್ನೇಹಿತರು ತಮ್ಮ ಉಪ ನಾಮಗಳನ್ನು ಖುಷಿಯಿಂದಲೇ ಹೇಳಿಕೊಂಡರು.
ಸ್ವ-ನಾಮಕರಣದ ಪಟ್ಟಿ ಇಂತಿದೆ:
  • ಅಸಹ್ಯ ಅರುಣ್ - ತಾನು ಸೋಂಬೇರಿಯೆಂದು ಎದೆ ತಟ್ಟಿ ಹೇಳಿಕೊಳ್ಳುವ ಎದೆಗಾರಿಕೆಯುಳ್ಳವ.
  • ಮಾರಿಮುತ್ತು ಸಂಧ್ಯ - ಅಕ್ಕ ಫುಲ್ ಹೆದ್ರುಸ್ತಾಳಪ್ಪ ( ಎಲ್ಲ್ರುಗು ಹವಾ ಮಾಡ್ಗಿದ್ಲು ಚಾರಣದಲ್ಲಿ)
  • ಚಿಂಗಿ ರಾಹುಲ್ - ಮೂಲತಃ ನಾಗಲ್ಯಾಂಡ್ ರಾಜ್ಯದವನಾದ ಈತನ ಕನ್ನಡ ಮಾತನಾಡುವ ಶೈಲಿಯನ್ನು ಕೇಳುವುದೇ ಮಜಾ( ಕನ್ನಡ ನಟಿ ಪೂಜಾ ಗಾಂಧಿಯನ್ನು ನೆನಪಿಸುತ್ತಾನೆ)
  • ರೌಡಿ ರಮ - ಗಾತ್ರದಲ್ಲಿ, ಆವಾಜ್ ಹಾಕುವುದರಲ್ಲಿ ನನ್ನ ಪ್ರತಿಸ್ಪರ್ಧಿ
  • ಹರಾಮಿ ಹರ್ಷ - ತುಂಬಾ ಬಲಶಾಲಿ ( ಇಲ್ಲದಿದ್ರೆ ವೆಂಕಟೇಶ್ವರ ಚಾರಣದಲ್ಲಿ ಡೋಲಿ ಹೊರಲು ಆಗುತ್ತಿತ್ತೇ !! )
  • ಪಂಗನಾಮ ಜಗದೀಶ್ - ತಿರುಪತಿ ತಿರುಮಲ ವೆಂಕಟೇಶ ( ಮೂಲತಃ ತಿರುಪತಿಯವನು)
  • ಯಕ್ಕುಟ್ಟೋಗಿರೋ ವಿಶ್ವಾಸ್ M - ಟೊಮೇಟೊ ಹುಡುಗ ( ಬೆಟ್ಟದ ಮೇಲೆ ಮ್ಯಾಗಿ ತಯಾರಿಸಲು ಟೊಮೇಟೊ ಕೊಂಡು ತಂದಿದ್ದ)
  • ವೋಡ್ಕಾ ವಿನಯ್ - ಫುಲ್ ಡ್ರಾಮಾ - ( ನಾಟಕ ಅಭ್ಯಾಸ ಮಾಡುತ್ತಿದ್ದಾನೆ - LKG ಅಷ್ಟೇ ಇನ್ನು)
  • ಪೇಪರ್ ಪಡ್ಡು ( ಸುಧೀಂದ್ರ) - MINDTREE ನಲ್ಲಿ ಉದ್ಯೋಗಿ, Notice Serve ಮಾಡ್ಯಾನೆ ( ಕ್ಷಮಿಸಿ ತರ್ಜುಮೆ ಮಾಡಿ ಕನ್ನಡಾನ ಗಬ್ಬೆಬ್ಬ್ಸಕ್ಕೆ ಇಷ್ಟ ಇಲ್ಲ)
  • ILLEGAL ಶೃತಿ - ಪೂಟ್ ಲಾಯ್ರಿ, ಎಲ್ಲದುಕ್ಕು ಲಾ ಪಾಯಿಂಟು, ಸೆಕ್ಷನ್ನು ಅನ್ತಿರ್ತಾಳೆ.
  • ನಾಗೇಂದ್ರ ಅಲಿಯಾಸ್ ಬ್ಲೇಡ್ ನಾಗ - ಇವನು ಹಾಸ್ಯ ಮಾಡೋವಾಗ ಇವನ ಸಮಯ ಸ್ಪೂರ್ತಿಗೆ ಯಾರದ್ರೂ ತಲೆದೂಗ್ಲೇ ಬೇಕು.
  • ಕಿತ್ತೋಗಿರೋ ವಿಶ್ವಾಸ್ HK - ಉತ್ತಮ ಹಾಡುಗಾರ( ತಾನೇ ಮುಂದೆ ಬಂದು ಹಾಡುತ್ತೇನೆಂದು ಹೇಳಿದ) ಹಾಗು ಛಾಯಾಗ್ರಾಹಕ
  • ಧಬಾಂಗ್ ಅಶುತೋಷ್ - ಮನಮೋಹನ್ ಸಿಂಗ್ ರವರ ಅಪರಾವತಾರ ( ಬಾಯೇ ಬಿಡಲ್ಲ ಅನ್ನುತ್ತೆ ಪಾರ್ಟಿ)
  • ರಾಮ್ ಕುಮಾರ್ ಅಲಿಯಾಸ್ ಬಾಬಾ ರಾಮ್ - ಬಾಬಾ ಚಿಹ್ನೆಗೆ ಪೇಟೆಂಟ್ ಮಾಡಿಸ್ಕೊಂಡಿದಾರೆ so ನಾವು ನಮ್ ಬಾಯಿಗೆ ZIP ಹಾಕಿಕೊಳ್ಳೋದು ಉತ್ತಮ.
  • ರಾಸ್ಕಲ್ ರೋಹಿತ್ - ಅಬ್ಬಾ ಮತ್ತೊಬ್ಬ ನಾಗೇಂದ್ರನ ಸಾಥಿ - ಹಾಸ್ಯ ಚಕ್ರವರ್ತಿ
  • ಸಪ್ಪೆ ಸಪ್ನಾ - ಡಾಕುಟ್ರಮ್ಮ ( ವಯಸ್ಸು 18, ನೋಡಲು ಗೋದಿ ಮೈ ಬಣ್ಣ ಹೊಂದಿದ್ದು, ಸದಾ ಹಸನ್ಮುಖಿಯಾಗಿರುವ ಇವರು ಕನ್ನಡ, ಆಂಗ್ಲ ಭಾಷೆಗಳನ್ನು ಬಲ್ಲವರಾಗಿರುತ್ತಾರೆ)
  • ಕಪ್ಪ ಅರವಿಂದ್ - ತಮಿಳಿಗನಾದ ಈತ, ಕನ್ನಡದ ಐತಿಹಾಸಿಕ ಚಿತ್ರ ಸಂಗೊಳ್ಳಿ ರಾಯಣ್ಣ ಚಿತ್ರದ ಸಾಲೊಂದನ್ನು ಹೇಳಿದ ( ಕಪ್ಪ ಬೇಕಾ ಕಪ್ಪ - ಈ ಸಾಲು ನಿಮಗೆ ರಾಗಿಣಿ ನಟಿಸಿರುವ ತುಪ್ಪ ಬೇಕಾ ತುಪ್ಪ ಹಾಡನ್ನು ನೆನಪಿಗೆ ತಂದರೆ ರೇಣುಕಾಚಾರ್ಯ, ನರ್ಸ್ ಜಯಲಕ್ಷ್ಮಿ ಮೇಲೆ ಆಣೆ ನಾನು ಜವಾಬ್ದಾರಳಲ್ಲ!!)
  • ಮೊಟ್ಟೆ ಸುನೀಲ್ - ಅರಸೀಕೆರೆ ಅಣ್ಣಾ - ಈ ಚಾರಣದ ಸಹ-ರೂವಾರಿ - ತಮ್ಮ ಬಕ್ಕ ತಲೆಯ ಮೇಲೆ ಬಹಳವೇ ಅಭಿಮಾನವನ್ನು ಬೆಳೆಸಿಕೊಂಡಿದ್ದಾರೆ --- I LIKE IT KAANTAA
  • ಚಂದ್ರ ಶೇಖರ್ ಅಲಿಯಾಸ್ ಮೊಗ್ಯಾಂಬೊ ಶೇಖರ್ - ಇವರನ್ನು ಕರ್ನಾಟಕದ ಪ್ರವಾಸೀ ತಾಣಗಳ WIKIPEDIA ಎಂದರೆ ಅತಿಶಯೋಕ್ತಿಯಾಗಲಾರದು.
  • ಮೊಗ್ಲಿ ನಿರಂಜನ್ - ತನ್ನ ವಿಶಿಷ್ಟ ಶೈಲಿಯ ನೃತ್ಯದಿಂದ ಎಲ್ಲರ ಮನ ಸೂರೆಗೊಂಡನು.( ಜಂಗಲ್ ಬುಕ್ ಹಾಡನ್ನು ನೃತ್ಯ ಮಾಡಿ ತೋರಿಸಿಕೊಟ್ಟ)
  • ಪೆಡಲ್ ಶುಭ - ಸೈಕಲ್ ಎಂದರೆ ಪ್ರಾಣ ಹಾಗಾಗಿ ಪೆಡಲ್ ಎನ್ನುವ ನಾಮಕರಣ.

ಈ ರೀತಿಯಾಗಿ ನಮ್ಮ ಪಯಣವನ್ನು ಮುಂದುವರೆಸಿದ ನಾವು ಅರಸೀಕೆರೆಯ ಮಾಲೆಕಲ್ಲು ತಿರುಪತಿ ಬೆಟ್ಟದ ಬುಡವನ್ನು ತಲುಪುವಷ್ಟರಲ್ಲಿ ಸಮಯ ಬೆಳಗ್ಗೆ 2 ಗಂಟೆ( 25 ಡಿಸೆಂಬರ್ 2012).
ತುಂಬು ಚಂದಿರನು ತನ್ನ ಬೆಳದಿಂಗಳನ್ನು ಚೆಲ್ಲಿ ತೋರಿಸಿಕೊಟ್ಟ ದಾರಿಯಲ್ಲಿ ಮೆಟ್ಟಿಲುಗಳನ್ನು ಹತ್ತುತ್ತ ಸಾಗಿ ಮೇಲಿರುವ ದೇವಾಲಯವನ್ನು ತಲುಪುವಷ್ಟರಲ್ಲೂ ಗಡಿಯಾರ 3 ಗಂಟೆ ತೋರಿಸುತ್ತಿತ್ತು.
ಎಲ್ಲರೂ ಅವರವರಿಗೆ ವಹಿಸಿದ್ದ ಅಡುಗೆ ಸಾಮಗ್ರಿ, ಪದಾರ್ಥಗಳನ್ನು ಹೊರತೆಗೆದರು( ತರಕಾರಿಗಳು, ಪಾತ್ರೆ, ಅಡಿಕೆ ಪಟ್ಟಿಯ ತಟ್ಟೆ)
ಪಾಕ ಕ್ರಾಂತಿ ಶುರು ...
ಮಾಲೆಕಲ್ಲು ಬೆಟ್ಟ - ಪಾಕ ಕ್ರಾಂತಿ

ಮಾಲೆಕಲ್ಲು ಬೆಟ್ಟ - ಬಿಸಿ ಬಿಸಿ ಮ್ಯಾಗಿ


ತರಕಾರಿ ಹೆಚ್ಚಿ, ಮ್ಯಾಗಿ ಮಾಡಿ ತಿಂದು ಆ ನಡುಗುವ ಚಳಿಯಲ್ಲಿ ಹೊದಿಕೆಗಾಗಿ ಕಿತ್ತಾಡುತ್ತಾ ಮಲಗಿ ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.
ಛಾಯ ಚಿತ್ರಗಳನ್ನು ತೆಗೆಯಲು ಯುದ್ಧಕ್ಕೆ ನಿಂತ ಯೋಧರಂತೆ ಕೆಲ ಸಹ ಚಾರಣಿಗರು ಸನ್ನದ್ಧರಾಗಿದ್ದರು. ತಿಳಿಯಾಗಸದಲ್ಲಿ ನೇಸರನ ಹೊಂಗಿರಣಗಳು ಮೂಡಿ ಅರುಣೋದಯವಾದ ಕೂಡಲೇ ಎಲ್ಲರ ಕ್ಯಾಮೆರಾ ಕಣ್ಣುಗಳು ಭಾಸ್ಕರನತ್ತಲೇ ಮುಖಮಾಡಿ ಫೋಟೋಗಳನ್ನು ಕ್ಲಿಕ್ಕಿಸುವಲ್ಲಿ ಕಾರ್ಯನಿರತವಾಗಿದ್ದವು.
ಮಾಲೆಕಲ್ಲು ಬೆಟ್ಟ - ಅರುಣೋದಯ
ಮಾಲೆಕಲ್ಲು ಬೆಟ್ಟ - ಗುಂಪು ಛಾಯಾಚಿತ್ರ



ಮಾಲೆಕಲ್ಲು ಬೆಟ್ಟ - ಗುಂಪು ಛಾಯಾಚಿತ್ರ

ಸುಮಾರು 7:30ರ ಹೊತ್ತಿಗೆ ಕೆಳಗಿಳಿಯಲು ಶುರು ಮಾಡಿ ಕೆಳಗಿನ ದೇವಸ್ಥಾನವನ್ನು ತಲುಪುವ ಹೊತ್ತಿಗೆ ಸಮಯ 8:30. ಅಲ್ಲಿ ಲಕ್ಷ್ಮಿ ನಾರಾಯಣನ ದರ್ಶನಗೈದು ನಮ್ಮ ಪಯಣ ಶಿವಾಲಯದತ್ತ ಸಾಗಿತು.
ಚಂದ್ರಮೌಳೇಶ್ವರ ದೇವಾಲಯದ ಶಿಲ್ಪಿಯ ಕೈ ಚಳಕಕ್ಕೆ ತಲೆದೂಗುತ್ತಾ ಸಾಗಿದಂತೆ ಮನದ ಮೂಲೆಯಲ್ಲೊಂದು ಬೇಸರ ... ಮುಸ್ಲಿಮರ ನಿರಂತರ ಧಾಳಿಗೆ ತುತ್ತಾದ ದೇವಾಲಯದ ಶಿಲ್ಪಗಳು ತಮ್ಮ ಪ್ರಾಕೃತಿಕ ಸೌಂದರ್ಯವನ್ನು ಕಳೆದುಕೊಂಡಿರುವುದು ವಿಷಾದಕರ ಸಂಗತಿ( ಪ್ರತಿಯೊಂದು ಶಿಲ್ಪದ ಮುಖವನ್ನೂ ಭಂಗ ಮಾಡಲಾಗಿದೆ). ದೇವಾಲಯದ ಒಳ ಹೊಕ್ಕು ಅಲ್ಲಿನ ಶಿಲ್ಪಕಲೆಯನ್ನು ನೋಡುತ್ತಿದ್ದರೆ ಏನೋ ಒಂದು ರೀತಿಯ ಪುಳಕ. ನವಗ್ರಹಗಳ ಸೂಕ್ಷ್ಮ ಕೆತ್ತನೆ, ಬಳಪದ ಕಲ್ಲಿನಿಂದ ನಿರ್ಮಿತವಾದ ಕಂಬಗಳು ಮತ್ತು ಅದರ ಮೇಲೆ ಮೂಡಿಸಿರುವ ಸೂಕ್ಷ್ಮಾತಿ ಸೂಕ್ಷ್ಮ ಕೆತ್ತನೆಗಳು ಆಗಿನ ಕಾಲದ ಶಿಲ್ಪಿಗಳ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಶಿವಾಲಯ - ಬಳಪದ ಕಲ್ಲಿನ ಕಂಬ


ಶಿವಾಲಯ

ಶಿವಾಲಯ - ಶಿಲಾ ಶಾಸನ
ಅಲ್ಲಿನ ಶಿಲಾಶಾಸನವನ್ನು ನೋಡಿ ಓದಬೇಕೆಂದು ಹೊರಟರೆ ಆಗಿನ ಕಾಲದ ಕನ್ನಡ ನಮಗೆಲ್ಲಿ ಅರ್ಥವಾದೀತು(ಬದಲಾಗುತ್ತಿರುವ ಸಮಾಜದ ಜೊತೆಯಲ್ಲಿ ಭಾಷೆಯ ಬಳಕೆಯೂ ಬದಲಾಗುವುದಲ್ಲವೇ- ಆಗಿನ ಕಾಲದಲ್ಲಿ ಬರೆಯುವಾಗ ಪದಗಳ ವಿಂಗಡಣೆಗೆಂದು ಸ್ಥಳವನ್ನು ಬಿಡುತ್ತಿರಲಿಲ್ಲ )

ಶಿವಾಲಯ - ರಾಜ ನರ್ತಕಿಯರು


ಶಿವಾಲಯ - ಗುಂಪು ಛಾಯಾಚಿತ್ರ

ಶಿವಾಲಯದಿಂದ ಹೊರಟು ಹತ್ತಿರದ ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಕೆರೆಯ ಬಳಿ ಹೊರಟೆವು(ತಿಂದಮೇಲೆ ಕೆರೆ ಕಡೆ ತಾನೇ ಅಂತ  ಅಪಾರ+ಅರ್ಥ ಮಾಡ್ಕೋಬೇಡಿ!! - ನಾವು ಹೋಗಿದ್ದು ತೆಪ್ಪದಲ್ಲಿ ಪ್ರಯಾಣ ಮಾಡಲು)
ತೆಪ್ಪವಿಹಾರ ಮಾಡುತ್ತಾ, ಮಾರ್ಗ ಮಧ್ಯದಲ್ಲಿ ಹಾಡುಗಳನ್ನು ಗುನುಗುತ್ತಾ, ಪ್ರಕೃತಿಯಮ್ಮನ ಮಡಿಲಲ್ಲಿ ಮಗುವಾಗುವುದೇ ಸಂಭ್ರಮ.
ತೆಪ್ಪವಿಹಾರ, ಅರಸೀಕೆರೆ

ಇಲ್ಲಿಂದ ಬೆಂಗಳುರಿನೆಡೆಗೆ ಮುಖ ಮಾಡಿ ಮಾರ್ಗ ಮಧ್ಯೆ ಕಾಮತ್ ಹೋಟೆಲ್ ನಲ್ಲಿ ಆಹಾರವನ್ನು ಸೇವಿಸಿ ಮಹಾನಗರಿಯನ್ನು ತಲುಪುವಷ್ಟರಲ್ಲಿ ಸಮಯ ಸಂಜೆ 5:30.

ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಸುನೀಲ್ ಕುಮಾರ್ - ನನ್ನ ಬೆನ್ನೆಲುಬಾಗಿ ನಿಂತು ಸಹ -ರೂವಾರಿಯಾಗಿ, ಮೊದಲೇ ಮಾತನಾಡಿ ತೆಪ್ಪ ನಡೆಸುವ ಅಂಬಿಗನಿಂದ  ಸಂಚಾರಿ ದೂರವಾಣಿ(MOBILE ) ಸಂಖ್ಯೆಯನ್ನೂ ಸಹ ಪಡೆದು ನಾವು ತೆಪ್ಪವಿಹಾರ ಮಾಡಲು ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದಕ್ಕಾಗಿ. 
ವಿನಯ್, ಅಶುತೋಷ್, ವಿಶ್ವಾಸ್ HK, ಸುನೀಲ್ , ರೋಹಿತ್- ಉತ್ತಮ ಛಾಯಾಚಿತ್ರಗಳಿಗಾಗಿ  
ವಿಶ್ವಾಸ್ M, ಸಂಧ್ಯ, ಶೃತಿ - ತರಕಾರಿ ತಂದದ್ದಕ್ಕಾಗಿ
ಸಪ್ನಾ, ಹರ್ಷ, ಜಗದೀಶ್, ನಿರಂಜನ್, ಶುಭ - ಮ್ಯಾಗಿ ಪ್ಯಾಕೆಟ್ ತಂದದ್ದಕ್ಕಾಗಿ
ನಾಗೇಂದ್ರ, ರಾಮ್  - ಟಾರ್ಪಾಲಿನ್ ಹೊತ್ತು ತಂದದ್ದಕ್ಕಾಗಿ
ವಿಶ್ವಾಸ್ HK - ಅಡುಗೆ ಮಾಡುವ ಪಾತ್ರೆ ತಂದದ್ದಕ್ಕಾಗಿ
ಸುಧೀಂದ್ರ, ರಾಹುಲ್, ರೋಹಿತ್, ಅರುಣ್, ವಿನಯ್, ಶೇಖರ್, ಅಶುತೋಷ್, ಅರವಿಂದ್ - ನೀರಿನ ವ್ಯವಸ್ಥೆಗಾಗಿ
ರಮ - ಹಳೆ ದಿನಪತ್ರಿಕೆಯನ್ನು ತಂದದ್ದಕ್ಕಾಗಿ.

ಮಾಹಿತಿ:

ಸ್ಥಳ: ಮಾಲೆಕಲ್ಲು ತಿರುಪತಿ ( MALEKALLU TIRUPATI ) - ಅರಸೀಕೆರೆ, ಹಾಸನ ಜಿಲ್ಲೆ , ಕರ್ನಾಟಕ.

ಚಾರಣ ಶುರು ಮಾಡುವ ಸ್ಥಳ: ಅರಸೀಕೆರೆ

ದೂರ: ಬೆಂಗಳೂರಿನಿಂದ  172 ಕಿ.ಮೀ. 
ಪರ್ವತರೋಹದ ದರ್ಜೆ : ಸುಲಭ 

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ: ಬೆಂಗಳೂರು( BH ರಸ್ತೆ )- ತುಮಕೂರು - ತಿಪಟೂರು - ಅರಸೀಕೆರೆ

  • ವಿಶೇಷ ಸೂಚನೆ - ಮಾರ್ಗ ಮಧ್ಯೆ 2 ಕಡೆ ಸುಂಕ ಪಾವತಿ ಮಾಡಬೇಕಾಗುತ್ತದೆ.
  •  


                                                                                                         -ಪೊರ್ಕಿ ಪಲ್ಲವಿ 

ಸೋಮವಾರ, ನವೆಂಬರ್ 26, 2012

ಕುಮಾರ ಪರ್ವತ ಚಾರಣ ( Kumara Parvata(KP) Trek - 7& 8 ನವೆಂಬರ್ 2012

ಕುಮಾರ ಪರ್ವತ :-
ಕುಮಾರ ಪರ್ವತ(KP)ವು ಕರ್ನಾಟಕದ ಸುಳ್ಯ ತಾಲೂಕಿನ, ಸುಬ್ರಮಣ್ಯ ಗ್ರಾಮದಲ್ಲಿ ನೆಲೆಸಿದ್ದು, ತನ್ನ ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಚಾರಣಿಗರನ್ನು ಆಕರ್ಷಿಸುತ್ತಿದೆ. ಇಡೀ ಕರ್ನಾಟಕದಲ್ಲೇ ಚಾರಣಕ್ಕೆಂದು ಇದಕ್ಕೆ 3ನೇ ಸ್ಥಾನ( 1- ಮುಳ್ಳಯ್ಯನ ಗಿರಿ, ಚಿಕ್ಕಮಗಳೂರು, 2 - ತಡಿಯಾಂಡಮೋಲ್, ಕೊಡಗು). ಸುಬ್ರಮಣ್ಯನ ಶ್ರೀರಕ್ಷೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಕುಮಾರ ಪರ್ವತವು ಚಾರಣಿಗರ ಸ್ವರ್ಗವೆಂದೇ ಹೇಳಬೇಕು.
1712 ಮೀ. ಎತ್ತರದ ಶಿಖರ ಬಿಂದುವನ್ನು ಮುಟ್ಟಲು ನಾವು 13 ಕಿ.ಮೀ. ಚಾರಣ ಮಾಡಬೇಕು (ಒಟ್ಟಾರೆ ಕ್ರಮಿಸುವ ದೂರ 26 ಕಿ.ಮೀ.).ಸೋಮವಾರ ಪೇಟೆಯ ಕಡೆಯಿಂದಲೂ ಚಾರಣ ಮಾಡಬಹುದಾಗಿದೆ.
ಕುಮಾರ ಪರ್ವತ

ಕುಮಾರ ಪರ್ವತ -ಮಾರ್ಗ ಸೂಚಿ
ಕುಮಾರ ಪರ್ವತ -ಮಾರ್ಗ ಸೂಚಿ


ಮಂಜರಾಬಾದ್ ಕೋಟೆ :-
ಸಕಲೇಶಪುರದ ಹೊರವಲಯದಲ್ಲಿ ನಿರ್ಮಿತವಾಗಿರುವ ಈ ಕೋಟೆಯನ್ನು ಮೈಸೂರಿನ ಹುಲಿ ಟಿಪ್ಪು ಸುಲ್ತಾನನು 1785-92ರ ಅವಧಿಯಲ್ಲಿ ನಿರ್ಮಿಸಿದನು. ತನ್ನ ವಿಶಿಷ್ಟ ಇಸ್ಲಾಮಿಕ್ ಶೈಲಿಯ ಈ ಕೋಟೆಯು ನಕ್ಷತ್ರಾಕೃತಿಯಲ್ಲಿದೆ. ಕೋಟೆಯ ಮಾದರಿಯ ನೀಲನಕ್ಷೆಯನ್ನು ಕೋಟೆಯ ಒಳ ಭಾಗದಲ್ಲಿ ಕೆತ್ತಿದ್ದಾರೆ.
ಮಂಜರಾಬಾದ್ ಕೋಟೆ


ಪರದೆಯ ಹಿಂದೆ :-
2009ರ ಏಪ್ರಿಲ್ ನಲ್ಲಿ 6 ಜನ ಸ್ನೇಹಿತರೊಟ್ಟಿಗೆ KP ಗೆ ಚಾರಣ ಮಾಡಿದ್ದು, ನಂತರ ಈ ಬಾರಿ ಬೆಂಗಳೂರು ಅಸೆಂಡರ್ಸ್ (Bangalore ASCENDers - BASC) ಮುಖಾಂತರ ಹೋಗಿ ಬರೋಣವೆಂದುಕೊಂಡು BASC ನಿಂದ ಇ-ಮೇಲ್ ಕಳುಹಿಸಿದೆ.
ಈ ಬಾರಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಚಿಕ್ಕಪ್ಪನವರ ಸಹಾಯ ಪಡೆದು ಹಸಿರು ಹಾದಿ(Green Route) ಚಾರಣದ ಹಾದಿಯನ್ನು ಗೂಡ್ಸ್ ಗಾಡಿಯ ಹಿಂದಿನ ತೆರೆದ ಬೋಗಿಯಲ್ಲಿ ಕುಳಿತು( चल चैय्या चैय्या)  ಪ್ರಯಾಣ ಮಾಡಬೇಕೆಂದು ಆಸೆಪಟ್ಟಿದ್ದೆ.  ಇ - ಮೇಲ್ ಮಾಡಿದ 24 ಗಂಟೆಗಳೊಳಗಾಗಿ ಅತ್ಯುತ್ತಮ ಪ್ರತಿಕ್ರಿಯೆ ಬಂದು, ನಾನು ಪ್ರತಿಯೊಬ್ಬರಿಗೂ ಖುದ್ದಾಗಿ ಕರೆ ಮಾಡಿ, ಚಾರಣಕ್ಕೆ ಆಹ್ವಾನಿಸಿದೆ. ಶ್ರೀಕಾಂತ್ ರವರೊಟ್ಟಿಗೆ ಮಾತನಾಡುತ್ತಾ ನನ್ನ चल चैय्या चैय्या ಯೋಜನೆಯ ಬಗ್ಗೆ ತಿಳಿಸಿ ತಮಗೆ ಸಮ್ಮತಿಯಿದೆಯೇ ಎಂದು ಕೇಳಿದೆ. ತಮ್ಮ ಒಪ್ಪಿಗೆಯನ್ನು ಸೂಚಿಸಿದ ಅವರು, ನಿಮ್ಮ ಸಂದರ್ಶನ(Interview) ದಲ್ಲಿ ನಾನು ಪಾಸಾದೆನೇ, ನನ್ನ ಹೆಸರನ್ನು ಆಯ್ಕೆಯಾದವರ ಪಟ್ಟಿಯಲ್ಲಿ ಸೇರಿಸುವಿರಾ ಎಂದು ಕೇಳಿದರು ;-) .
ಅನಿವಾರ್ಯ ಕಾರಣಗಳಿಂದ ಆಯ್ಕೆ ಪಟ್ಟಿಯಲ್ಲಿದ್ದ ಒಬ್ಬರು ಬರಲಾಗದೆಂದು ತಿಳಿಸಿದ ಕಾರಣ ಶ್ರೀಹರ್ಷನಿಗೆ ಕರೆ ಮಾಡಿ, ದೇವಸ್ಥಾನಕ್ಕೆ ಭಾರತೀಯ ಸಾಂಪ್ರದಾಯಿಕ ಉಡುಗೆಯುಟ್ಟು ಹೋಗಬೇಕೆಂಬುದು ನನ್ನ ಇಚ್ಛೆ, ಇದಕ್ಕೆ ತಮ್ಮ ಒಪಪಿಗೆಯಿದೆಯೇ ಎಂದು ಕೇಳಿದರೆ,  ಪಂಚೆ ಏನು ಕಾಡು ಮನುಷ್ಯರ ವೇಷ ಧರಿಸಲೂ ಸಿದ್ಧ ಎಂದ. ( ಕಾಡು ಮನುಷ್ಯರು ಬಟ್ಟೇನೇ ಹಾಕೋದಿಲ್ಲ ಅಂತ ಎಲ್ಲೋ ಓದಿದ್ದ ನೆನಪು !!!)ಒಟ್ಟು 12 ಜನರನ್ನು ಆಯ್ಕೆಯ ಪಟ್ಟಿಯಲ್ಲಿ ಸೇರಿಸಿ, 1 ಆಸನವನ್ನು ವಿವೇಕ್ ಭಟ್ ( My Cousin) ಗಾಗಿ ಮೀಸಲಿಟ್ಟಿದ್ದೆ. ಅನಿವಾರ್ಯ ಕಾರಣಗಳಿಂದಾಗಿ ಅವನು ನಮ್ಮೊಡನೆ ಬರಲಾಗಲಿಲ್ಲ. ಹಾಗಾಗಿ ಕಾಯುತ್ತಿರುವವರ ಪಟ್ಟಿ(Waiting List) ಯಲ್ಲಿದ್ದ ಚಂದ್ರಶೇಖರ್ ಗೆ ಕರೆ ಮಾಡಿ ಕೇಳಿದಾಗ ಅವರು ಖುಷಿಯಿಂದ ಬರಲು ಒಪ್ಪಿದರು.

ಬಂದಿತು ನವೆಂಬರ್ 16: 

ಪೂರ್ವ ಯೋಜನೆಯಂತೆ Bangalore Ascenders( BASC - www.bangaloreascenders.org)ನಿಂದ ಕುಮಾರಪರ್ವತಕ್ಕೆ ಚಾರಣಗೈಯ್ಯಲು ಎಲ್ಲರೂ ಶುಕ್ರವಾರ (16 ನವೆಂಬರ್ 2012) ರಾತ್ರಿ 10 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿಯಿರುವ ಶಾಂತಲಾ ರೇಷ್ಮೆ ಮಳಿಗೆ(Shantala Silk House) ಯ ಬಳಿ ಸೇರಿದೆವು. 10:45 ರ ಹೊತ್ತಿಗೆ ಸಕಲೇಶಪುರಕ್ಕೆ ನಮ್ಮ ಪಯಣ ಬೆಳೆಯಿತು.
ದಾರಿಯ ಮಧ್ಯದಲ್ಲಿ ಶ್ರೀಹರ್ಷನ ಒತ್ತಾಯದ ಮೇರೆಗೆ ಚನ್ನರಾಯಪಟ್ಟಣದ ಬಳಿಯ ಒಂದು ಡಾಬಾದಲ್ಲಿ ಚಹಾ ಮತ್ತು ಇಡ್ಲಿ ಸೇವನೆಯಾಯಿತು. ಸುರೇಶ್ ಅಲ್ಲಿ ತನ್ನ 7ನೇ ತರಗತಿಯಲ್ಲಿ ಬರೆದ ಪ್ರೇಮ ಪತ್ರದ ಬಗ್ಗೆ ಹೇಳುತ್ತಾ, ಮಾತಿನ ಮಧ್ಯೆ H G ಗೀತ ಎಂದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಯಾವಾಗ ಬಂದು ಸೇರಿದ್ದನೋ ಗೊತ್ತಿಲ್ಲ, ಹರ್ಷ MERCURY ಗೀತ ಅಂದ. ಎಲ್ಲರೂ ನಗುತ್ತಿದ್ದರೆ, ನನಗೆ ಅರ್ಥವಾಗದೆ ಬೆ ಬೆ ಬ್ಬೆ ಎಂದು ನೋಡುತ್ತಾ ಪಕ್ಕಕ್ಕೆ ತಿರುಗಿದೆ, ಸುಧೀಂದ್ರ , HG- Atomic Symbol of MERCURY ಎಂದ. ನನ್ನ ಬೆಪ್ಪು ತನಕ್ಕೆ ನನ್ನನ್ನು ನಾನೇ ಶಪಿಸುತ್ತಾ ಎಂದುಕೊಂಡೆ ಅದಕ್ಕೆ ಈ ಬಡ್ಡೀಮಗ INTEL ನಲ್ಲಿ ಇರೋದು ಅಂತ. (Intel Inside, Mental Outside) .ನಂತರ TT ಹತ್ತಿ ಸಕಲೇಶಪುರ ತಲುಪುವ ಹೊತ್ತಿಗೆ ಬೆಳಗಿನ ಜಾವ 3 ಗಂಟೆ.
(ಇಲ್ಲಿ ಶೇಖರ್ ನ GPS in SAMSUNG Mobileಗೆ ನಮ್ಮ ಧನ್ಯವಾದಗಳನ್ನು ಅರ್ಪಿಸಲೇಬೇಕು. ಮುಕ್ಕಾಲು ಗಂಟೆ ಯಾವ್ಯಾವುದೋ ದಾರಿ ಹೇಳಿ ಚಾಲಕನ ತಲೆ ಅಯೋಮಯ! ಮೆಟ್ಟಿಲುಗಳನ್ನು ಇಳಿದು ಹೋಗುವ ದಾರಿ ಎಲ್ಲಾ ಹೇಳಿದ್ರೆ ಪಾಪ ಡ್ರೈವರ್ Centre Shock ತಿಂದವರಂತೆ ಶಾಕ್ ಆಗ್ದಲೇ ಇರ್ತಾರಾ!!)

 ನವೆಂಬರ್ 17:
ರೈಲ್ವೆ ನಿಲ್ದಾಣದಲ್ಲಿ BASC ನ ನಿಯಮದಂತೆ ಎಲ್ಲರ ಸ್ವ-ಪರಿಚಯ ಶುರುವಾಯಿತು. ಎಲ್ಲರೂ ತಮ್ಮ ಅಡಗಿದ ಪ್ರತಿಭೆ(HIDDEN TALENT ) ಗಳನ್ನು ಹೊರತೆಗೆಯಲು ಶುರುಮಾಡಿದರು.  
  • ವಿನೂತ್ನ(ಅತ್ಯದ್ಭುತ ಮನೋಸ್ಥೈರ್ಯಿ) - ಹರ್ಷನಿಗಾಗಿ 2 ಯುಗಳಗೀತೆಗಳನ್ನು ಹಾಡಿದಳು (ಯಾಕಂದ್ರೆ ಇವನ Apartmentನಲ್ಲಿ WASHING MACHINE ಇದೆ! )
  • ಶ್ರೀ ಹರ್ಷ( ಅತ್ಯುತ್ತಮ ವಾಗ್ಮಿ ) - ನನ್ನ ಹೆಸರು ಹರ್ಷ, ಶ್ರೀ ಹರ್ಷ (BOND, JAMES BOND) ಎಂದು ಹೇಳಿಕೊಂಡ. ವಿನೂತ್ನಳಿಗಾಗಿ ಅವಳ ಮೇಲೆ ಆಶುಕವಿತ್ವ ರಚಿಸಿ ಹಾಡಿದನು. (ಭಾಷೆ ಅರ್ಥವಾಗದಿದ್ರು ನಾಚಿ ನೀರಾಗುವ ಸರದಿ ವಿನೂತ್ನಳದು)
  • ಯದುನಂದನ(ಹಾಸ್ಯ ಚಕ್ರವರ್ತಿ) - ತನ್ನ ವಿಶಿಷ್ಟ ಶೈಲಿಯಿಂದ ಮುಗ್ಧನಂತೆ ಹಾಸ್ಯಮಾಡುತ್ತಾ ಮನಸೂರೆ ಮಾಡುತ್ತಾನೆ. ಇವನ ಮನೆಯ ಪಾಯಿಖಾನೆ(TOILET) ಯ Commodeನಲ್ಲಿ ನೀಲಿಹಲ್ಲು (BLUETOOTH) ಇರುವುದು ಒಂದು ವಿಶೇಷವಾದರೆ, ಇವನು ಅದರ ಮೇಲೆ ಕುಳಿತ ಸಮಯದಲ್ಲೇ CC Camera ಇಲ್ಲದಿದ್ದ್ರೂ, ವರುಣ್ ಇವನ ಮೊಬೈಲ್ ಗೆ ಕರೆ ಮಾಡುವುದು ಮತ್ತೊಂದು ವಿಶೇಷ
  • ವರುಣ್( ಛಲಗಾರ - ಜಲಪಾತದ ಬಳಿ ಬಿದ್ದು ಮೂಗು ಮುರಿದುಕೊಂಡು ಇನ್ನು 1 ತಿಂಗಳಾಗಿಲ್ಲ ಆಗಲೇ KP ಚಾರಣಕ್ಕೆ ಅತ್ಯುತ್ಸಾಹದಲ್ಲಿ ಬಂದ) - RHYMES ಹೇಳಪ್ಪಾ ಅಂದ್ರೆ ಪಕ್ಕದಲ್ಲಿದ್ದ Intel ಹರ್ಷನಿಗೆ ನಾಯಿ ಮರಿ ನಾಯಿ ಮರಿ ತಿಂಡಿ ಬೇಕಾ ಅಂತ ಕೇಳ್ತಾನೆ( ಹರ್ಷ ಭೋಜನ ಪ್ರಿಯ ಎಂಬುದು ಎಲ್ಲರೂ ಒಪ್ಪುವಂತ ಮಾತಾಗಿದ್ರೂ ಈ ರೀತಿ ತೇಜೋವಧೆ ಆಗ್ಬಾರ್ದಿತ್ತು)
  • ವಂಶಿ ಕೃಷ್ಣ( ಸಾಧು ಪ್ರಾಣಿ) - ತೆಲುಗು ಚಿತ್ರದ ಸಂಭಾಷಣೆ ಹೇಳ್ತೀನಿ ಅಂತ ಎಲ್ಲಾ ಎಗರಿಸಿಕೊಂಡು ಹೇಳ್ಬಿಡೋದೇ ( NTR ಏನಾದ್ರೂ ಬದುಕಿ, ಅಪ್ಪಿ ತಪ್ಪಿ ಕೇಳಿಸಿಕೊಂಡಿದ್ದಿದ್ದರೆ ಅಲ್ಲೇ ಹೃದಯಾಘಾತವಾಗ್ತಿತ್ತೇನೋ!!)
  • ರಾಮ್ ಕುಮಾರ್ (ಯೋಗ ಪಟು) - ಇವನ ಜಾನಪದ ಗೀತೆಯನ್ನು ಆಲಿಸಿ ರೈಲ್ವೆ ಸಿಬ್ಬಂದಿಯೂ ತಲೆದೂಗಿದರು!
  • ನಾಗೇಂದ್ರ( G-Boys ಅಲಿಯಾಸ್ ಬುಸ್ಸು) - ಹರ್ಷನನ್ನು ಹರ್ಷಿತ ಮಾಡಿ ಪ್ರೇಮ ನಿವೇದನೆ (Propose) ಮಾಡೆಂದು ಹೇಳಿದರೆ L-BOARD ತರ ಆಡಿ, ನಂತರ ತಾನೇ ಖುದ್ದಾಗಿ ಹಾಡು ಹಾಡುತ್ತೇನೆಂದು ಹಾಡಿದ( ಕ್ಷಮಿಸಿ - ಯಾವ ಹಾಡೆಂದು ನೆನಪಿಲ್ಲ)
  • ಚಂದ್ರ ಶೇಖರ್( ಸಕಲಕಲಾವಲ್ಲಭ) - ಹಿಂದಿ ಹಾಡು ಹೇಳಿ ಮನರಂಜಿಸುವುದರ ಜೊತೆಗೇ ರೈಲ್ವೆ ಪೋಲಿಸ್ ಎದುರಲ್ಲೇ ಪೋಲೀಸರ ಮೇಲಿನ ಒಂದು ಹಾಸ್ಯ ಚಟಾಕಿ ಹಾರಿಸಿದ.
  • ಶ್ರೀಕಾಂತ್( HP ಮ್ಯಾನೇಜರ್) - ತಮ್ಮ ಉಲ್ಟಾ ಸಾಹಿತ್ಯದ ಗಾನ ಸುಧೆಯಿಂದ( ವನಮಾ ವುಹದೇ - ಮಾನವಾ ದೇಹವು) ನಮ್ಮ ಹೃನ್ಮನ ತಣಿಸುವುದರ ಜೊತೆಗೇ ತಮ್ಮ ವಯಸ್ಸನ್ನೂ ಸಹ ಉಲ್ಟಾ ಮಾಡಿಕೊಂಡು ( 43-34) ಯುವಕರಂತೆ ನಮ್ಮೊಡನೆ  ಬೆರೆತರು.                                                                                        ಇವ್ರ್ ಮನೇಲಿ Prestige Cooker ಉಪಯೋಗಿಸ್ತಾರೆ( ಜಾಹಿರಾತು - ಯಾರು ಹೆಂಡ್ತೀನ ಪ್ರೀತಿಸ್ತರೋ ಅವರು Prestigeನ ಹೇಗೆ ನಿರಾಕರಿಸಿಯಾರು!!
  • ಸುರೇಶ್ ( ಶಾಂಪೂ ಸುರೇಶ) - HG ಗೀತ ಓಹ್ ಕ್ಷಮಿಸಿ Mercury ಗೀತಾಗೆ ನೀಡಿದ ಪ್ರೇಮಪತ್ರದ ಸವಿವರಣೆ ನೀಡುತ್ತಾ PT ಮಾಸ್ತರರು ಬಿಟ್ಟ ಒದೆಯನ್ನು TV9 ಗೆ ಸಡ್ದು ಹೊಡೆಯುವಂತೆ ಚಿತ್ರ ಸಹಿತ ಕಣ್ಮುಂದೆ ಬರುವಂತೆ ವಿವರಿಸಿದನು.
  • ಸುಧೀಂದ್ರ ( ಪಡ್ಡು from ಪಾವಗಡ) - ಆನಂದ ಭೈರವಿ ರಾಗದಿಂದ ನಮ್ಮ ಮನಕ್ಕೆ ಆನಂದವನ್ನುಂಟು ಮಾಡಿದನು.
  • ಶಿವ ಕುಮಾರ್(ಪೋಲಿಸನ ಪುತ್ರ) - ತನ್ನ ಗೌಡ್ರು ಶೈಲಿಯಲ್ಲಿ ನಾಗರಹಾವು ಚಿತ್ರದ ತುಣುಕೊಂದನ್ನು ನಟಿಸಿ ತೋರಿಸಿದ( क्या रे बुल बुल ಮಾತಾಡಕಿಲ್ವ )
ನಮ್ಮ ಚಿಕ್ಕಪ್ಪನವರೆನೋ ರೈಲು ಹತ್ತಿಸಿ ರೈಟ್ ರೈಟ್ ಎನ್ನಲು ಸಿದ್ಧವಿದ್ದರು, ಆದರೆ ಹಾಳಾದ್ದು ಆ ಗೂಡ್ಸ್ ಗಾಡಿ ಅನಿವಾರ್ಯ ಕಾರಣಗಳಿಂದ 7 ಗಂಟೆಗೆ ಬರಬೇಕಿದ್ದದ್ದು 10 ಗಂಟೆಯಾದ್ರೂ ಬರಲೇ ಇಲ್ಲ. ನಂತರ ಚಿಕ್ಕಮ್ಮ ಮಾಡಿದ ಉಪ್ಪಿಟ್ಟು, ದೋಸೆಯನ್ನು ತಿಂದು ಮಂಜರಾಬಾದ್ ನ ಕೋಟೆ ನೋಡಲು ಹೊರಟೆವು.
ಸಕಲೇಶಪುರ ರೈಲ್ವೆ ನಿಲ್ದಾಣದ ಬಳಿ - ಚಿಕ್ಕಪ್ಪನೊಟ್ಟಿಗೆ
ಸಕಲೇಶಪುರ - ಚಿಕ್ಕಮ್ಮನೊಟ್ಟಿಗೆ


11 ರ ಹೊತ್ತಿಗೆ ಕೋಟೆ ತಲುಪಿ ಕೋಟೆಯ ಭವ್ಯತೆಯನ್ನು ನೋಡುತ್ತಾ, ನಕ್ಷತ್ರ ಮಾದರಿಯ ಆ ಕೋಟೆಯ ನೀಲನಕ್ಷೆಯನ್ನು ಗೋಪುರದ ಕೆಳ ಬದಿಯಲ್ಲಿ ನಮ್ಮ ಬಿಟ್ಟಿ ಮಾರ್ಗದರ್ಶಿ( ಇವನೇನೋ ಗೈಡ್ ಮಾಡಿದ್ದಕ್ಕೆ ದುಡ್ಡು ಕೇಳ್ದ ನಾವು ಹಂಗೆ ಜೈ ಅಂದ್ಬಿಟ್ವಿ) ತೋರಿಸಿ ಕೊಟ್ಟನು. ನಂತರ ಟಿಪ್ಪು ಸುಲ್ತಾನನ ಸುರಂಗ ಮಾರ್ಗ, ರಾಜ ಮನೆತನದವರು ಉಪಯೋಗಿಸುತ್ತಿದ್ದ ಸಂಡಾಸ್(TOILET) ಅನ್ನು ತೋರಿಸಿದ.(ಪುಣ್ಯಕ್ಕೆ ಪ್ರಾಯೋಗಿಕವಾಗಿ ತೋರಿಸಿ ಗೌಡ್ರು ದರ್ಬಾರ್ ಎನ್ನಲಿಲ್ಲ! ). ಆಗಿನ ತಾಂತ್ರಿಕತೆಗೆ ಮಾರುಹೋದ ನಾವು ಮನದಲ್ಲೇ ಆಗಿನ ಅಭಿಯಂತರರ( Engineer's) ಚಾತುರ್ಯವನ್ನು ಶ್ಲಾಘಿಸುತ್ತಾ, ಕುಕ್ಕೆಯತ್ತ ಹೊರಟು ಕುಮಾರಧಾರಾ ನದಿಯಲ್ಲಿ ಮನಸೋ ಇಚ್ಛೆ ಮಿಂದು, ಈಜಾಡಿ, ಕುಮಾರ ಕೃಪಾ ಹೋಟೆಲ್ ನಲ್ಲಿ ಭೋಜನ ಮುಗಿಸಿ ಚಾರಣ ಶುರುಮಾಡುವಷ್ಟರಲ್ಲಿ ಸಂಜೆ 4 ಗಂಟೆ.
ಮಂಜರಾಬಾದ್ ಕೋಟೆ


ಮಂಜರಾಬಾದ್ ಕೋಟೆ- ನೀಲ ನಕ್ಷೆ

ಮಂಜರಾಬಾದ್ ಕೋಟೆ - ಪ್ರವೇಶ ದ್ವಾರ

ಮಂಜರಾಬಾದ್ ಕೋಟೆ - ಬಾವಿ
 

ನಮ್ಮ BACKPACKಗಳನ್ನು ಹೊತ್ತು ಸುಂದರ ಪ್ರಕೃತಿ ಮಾತೆಯ ಮಡಿಲ ಕಂದಮ್ಮಗಳಾಗಿ ಪರ್ವತಾರೋಹಣವನ್ನು ಕೈಗೊಂಡೆವು. ದಾರಿಯಲ್ಲಿ ಕಂಡ ವಿವಿಧ ರೀತಿಯ ಮರಗಳನ್ನು ನೋಡುತ್ತಾ, ಅದರ ಮೇಲೆ ಫಲಕದಲ್ಲಿ ಸೂಚಿಸಿದ್ದ ಹೆಸರುಗಳನ್ನು ಓದುತ್ತಾ, ಉಸ್ಸು ಬಿಸ್ಸು ಎಂದು ಏದುಸಿರು ಬಿಟ್ಟು, ಮಧ್ಯೆ ಮಧ್ಯೆ ಸುಧಾರಿಸಿಕೊಳ್ಳುತ್ತಾ ಮೇಲೆರುತ್ತಿದ್ದೆವು. ಪಡುವಣ ಬಾಂದಳದಲ್ಲಿ ಮುಳುಗುತ್ತಿದ್ದ ಕೆಂಪು ಭಾಸ್ಕರನನ್ನು, ಆಗ ತಾನೇ ನಗು ನಗುತ್ತಾ ಮೇಲೇರುತ್ತಿದ್ದ ಚಂದಿರನನ್ನು ಏಕ ಕಾಲದಲ್ಲಿ ಕಂಡು ಕಂಗಳಲ್ಲೇ ಸೆರೆಹಿಡಿಯುತ್ತಾ ಭಟ್ಟರ ಮನೆ ತಲುಪುವಷ್ಟರಲ್ಲಿ ಸಂಜೆ 6:45.

ಭಟ್ಟರ ಮನೆಗೆ ನಡೆದರೆ ಅಲ್ಲಿ ತಣ್ಣನೆಯ ಮಜ್ಜಿಗೆ ನಮ್ಮ ತನು,ಮನ ಎರಡನ್ನೂ ತಣಿಸಿತು. ನಂತರ ಊಟದ ಹೊತ್ತಿನವರೆಗೂ ಗಾನ ಬಜಾನ- ಅಂತ್ಯಾಕ್ಷರಿ ಕಾರ್ಯಕ್ರಮ ಶುರು. ಎರಡೂ ತಂಡಗಳೂ ಪಾಟಿ ಸವಾಲನ್ನು ಅತ್ಯುತ್ಸಾಹದಲ್ಲಿ ಸ್ವೀಕರಿಸುತ್ತಿದ್ದವು. ಕನ್ನಡ, ತೆಲುಗು, ಹಿಂದಿ ಚಲನಚಿತ್ರಗೀತೆಗಳೂ, ಭಾವಗೀತೆಗಳೂ ಎಲ್ಲರ ಬಾಯಲ್ಲೂ ನಲಿದಾಡಿತು. ಬಂಗಾರಪ್ಪನವರಂತೆ ಪಕ್ಷಾಂತರ ಮಾಡಿದ ವಂಶಿ, ನಮ್ಮ ತಂಡ ತೊರೆದು ವಿರೋಧ ಪಕ್ಷವನ್ನು ಸೇರಿಬಿಟ್ಟ ಮತ್ತು ತೆಲುಗು ಬರುವುದಿಲ್ಲವೆಂದು ಹೇಳಿಕೊಂಡಿದ್ದ ಶೇಖರ್ ತೆಲುಗು ಚಿತ್ರಗಳ ಹಾಡುಗಳನ್ನು ಮೇಲೆ ಮೇಲೆ ಹಾಡಿ ತಾನು LIER ಎಂಬುದನ್ನು ಸಾಬೀತುಪಡಿಸಿಕೊಂಡ.
ಭಟ್ಟರು ಮಾಡಿ ತಂದಿಟ್ಟ ಬಿಸಿ ಬಿಸಿ ಅಡುಗೆಯನ್ನು ( ಅನ್ನ , ಹುಳಿ- ಸಾಂಬಾರ್, ಮಜ್ಜಿಗೆ, ಉಪ್ಪಿನಕಾಯಿ) ಭರ್ಜರಿಯಾಗಿ ತಿಂದು ಮಲಗುವಷ್ಟರಲ್ಲಿ ಸಮಯ 10:30.

ನವೆಂಬರ್ 18:
 ಬೆಳಗ್ಗೆ 5:30ಕ್ಕೆ ಒಲ್ಲದ ಮನಸ್ಸಿನಿಂದ ಎದ್ದು, ಆ ನಡುಗುವ ಚಳಿಯಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ, ಪುಷ್ಪಗಿರಿಯೆಡೆಗೆ ಹೊರಡುವಷ್ಟರಲ್ಲಿ 6:30. ಮಾರ್ಗ ಮಧ್ಯೆ ಅರಣ್ಯ ಇಲಾಖೆಯಲ್ಲಿ ಹಣ ಕಟ್ಟಿ, ಚಾರಣಕ್ಕೆ ಅನುಮತಿ ಪಡೆದು, ನಡೆದು ಹೋಗುತ್ತಿದ್ದಾಗ ಒಂದು ಪರ್ಸ್ ಕಾಣಿಸಿತು. ತೆಗೆದು ನೋಡಿದಾಗ ಅದರಲ್ಲಿ ಹಣದ ಹೊರತು ಆ ಪರ್ಸಿನ ಮಾಲೀಕನ ಬಗೆಗೆ ಯಾವುದೇ ಗುರುತಿರಲಿಲ್ಲ. 8 45ರ ಹೊತ್ತಿಗೆ ಕಲ್ಲು ಮಂಟಪ ಸೇರಿ,ತಂಡದೊಂದಿಗೆ ಚರ್ಚಿಸಿ BASC ನಿಧಿಗೆ ಅದನ್ನು ಕೊಡೋಣವೆಂದು ತೀರ್ಮಾನಿಸಿದೆವು. ಬುತ್ತಿ ಕಟ್ಟಿಸಿಕೊಂಡು ತಂದಿದ್ದ ಚಪಾತಿಯನ್ನು ತಿಂದು ಪುಷ್ಪಗಿರಿಯ ಹಾದಿ ಹಿಡಿದೆವು. ದಾರಿಯಲ್ಲಿ ಹಾಡು ಹಾಡುತ್ತಾ, ಜಿಗಣೆಯ ಸವಿ ಮುತ್ತುಗಳನ್ನು ಸ್ವೀಕರಿಸುತ್ತಾ, ಕಾಡು ಹಾದಿಯಲ್ಲಿ ಮುಂದುವರಿದೆವು. ನಾನು, ನಾಗೇಂದ್ರ ಸ್ವಲ್ಪ ಸಮಯ ಕಾದು, ಯಾರೂ ಬಾರದಿದ್ದನ್ನು ಕಂಡು, ಕಲ್ಲಿನ ಮೇಲೆ ಬಾಣದ ಗುರುತನ್ನು ಅಚ್ಚು ಮೂಡಿಸುತ್ತಾ ಸಾಗಿದೆವು. ಅಲ್ಲಿ ಮರಳಿ ಬರುತ್ತಿದ್ದ ಬೇರೊಂದು ತಂಡವನ್ನು ಕೇಳಿದಾಗ, ಆ ತಂಡವು ನಮ್ಮ ತಂಡದ ಇತರೆ ಸದಸ್ಯರು ಆಗಲೇ ಪುಷ್ಪಗಿರಿಯನ್ನು ತಲುಪಿರುವುದಾಗಿ ಹೇಳಿದರು. ನಮಗೆ ಆಗ ತಿಳಿಯಿತು ನಾವು ಸೋಮವಾರಪೇಟೆಯಿಂದ ಪುಷ್ಪಗಿರಿಗೆ ಚಾರಣ ಮಾಡುವ ದಾರಿಯಲ್ಲಿದ್ದೇವೆಂದು. ನಾವು ಬೇಗ ನಡೆದು ಶಿಖರ ಬಿಂದು (PEAK) ತಲುಪುವಷ್ಟರಲ್ಲಿ ಗಡಿಯಾರ 12 ಗಂಟೆ ತೋರಿಸುತ್ತಿತ್ತು. ಅಲ್ಲಿ ಶಿವಲಿಂಗವನ್ನು ನೋಡಿ " ಬ್ರಹ್ಮ ಮುರಾರಿ ಸುರಾರ್ಚಿತ" ಎಂದು " ಲಿಂಗಾಷ್ಟಕ" ವನ್ನು ಶುರು ಮಾಡಿದರೆ ಅದನ್ನು ಕೇಳಿದ  ತಂಡದ ಇತರೆ ಸದಸ್ಯರು ನಮ್ಮನ್ನು ಸೇರಿ, ತಮ್ಮ ದನಿಗೂಡಿಸಿದರು. ಅದೊಂದು ಸಮೂಹ ಗಾಯನದಂತಾಗಿ ನಾನಂತೂ ಬಹಳವೇ ಖುಷಿಪಟ್ಟೆ.
ಕುಮಾರ ಪರ್ವತ-ಕಲ್ಲು ಮಂಟಪ

ಕುಮಾರ ಪರ್ವತ 

ಕುಮಾರ ಪರ್ವತ  


ಕುಮಾರ ಪರ್ವತ - ಮನುಷ್ಯನ ವಿಕಾಸ(ಶ್ರೀಹರ್ಷನ ಬುದ್ದಿಮತ್ತೆ)
 

ಅಲ್ಲಿಂದ ಮರಳಿ ಭಟ್ಟರ ಮನೆಯ ದಾರಿ ಹಿಡಿದೆವು. ಈಗ ಹರ್ಷ ತಾನು ತಂದಿದ್ದ ಬ್ರೆಡ್ಡನ್ನು ಕೊಟ್ಟರೆ ಎಲ್ಲರೂ ಅವನಿಗೂ ಸಹ ಉಳಿಯದಂತೆ ಗುಳುಂ ಸ್ವಾಹಾ ಮಾಡಿಬಿಟ್ಟರು. ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಭಟ್ಟರ ಮನೆ ಸೇರಿ, ಊಟವನ್ನು ಮುಗಿಸಿ, ಸ್ವಲ್ಪ ಹೊತ್ತು ವಿರಮಿಸಿಕೊಂಡೆವು. ನನ್ನ ಬಳಿಯಿದ್ದ ಟಾರ್ಚ್ ಅನ್ನು ಯಾರೋ ಕೇಳಿ ಪಡೆದರು. ಅದನ್ನು ನೋಡಿದ ನಾಗೇಂದ್ರ ಅದು ಪಲ್ಲವಿಯಷ್ಟೇ ದಪ್ಪಗಿದೆ ಎಂದ.(ನಾನು ನಿದ್ದೆ ಬಾರದಿದ್ದರೂ ಬಂದವಳಂತೆ ನಟಿಸುತ್ತಾ ಮಲಗಿಬಿಟ್ಟೆ).
ತಮ್ಮ ಮಂಡಿ  ನೋವಿನಿಂದಾಗಿ ಚಾರಣವನ್ನು ಅರ್ಧಕ್ಕೆ ನಿಲ್ಲಿಸಿ, ಭಟ್ಟರ ಮನೆ ಸೇರಿದ್ದ ಶ್ರೀಕಾಂತ್ ರವರೊಟ್ಟಿಗೆ ನಾವು ಮೊದಲನೇ ತಂಡ ಹೊರಟೆವು. ಎರಡನೇ ತಂಡ ಸ್ವಲ್ಪ ತಡವಾಗಿ ಹೊರಟು ನಮ್ಮನ್ನು ಸೇರುವುದಾಗಿ ಹೇಳಿದರು.

ದಾರಿಯ ಮಧ್ಯೆ ಅಣ್ಣಾ ಬಾಂಡ್ ಶೇಖರ್ ಅನೇಕ ಪ್ರವಾಸೀ ತಾಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು ಮತ್ತು ಏನಾದರೂ ಸಹಾಯ ಬೇಕಿದ್ದಲ್ಲಿ ನೀಡಲು ಸಿದ್ಧವೆಂದೂ ಹೇಳಿದರು. ಈತನ ಸುತ್ತುವ ಆಸಕ್ತಿಯನ್ನು ಕಂಡು ನಾನು ಆಶ್ಚರ್ಯ ಪಟ್ಟರೆ ಸುಧಿ ಅಂತೂ ಕೇಳೇಬಿಟ್ಟ- ನಿಮ್ಮ ಸಮಯ ನಿರ್ವಹಣೆ( TIME MANAGEMENT) ಬಗ್ಗೆ ಹೇಳಿ ಅಂತ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ 1.6 ವರ್ಷವಾಗಿದೆ. ಅಷ್ಟರಲ್ಲೇ ಭಾಗಶಃ ಕರ್ನಾಟಕದ ಎಲ್ಲಾ ಜಾಗಗಳಿಗೂ ಭೇಟಿ ಕೊಟ್ಟಿದ್ದಾರೆ( ಆಡು ಮುಟ್ಟದ ಸೊಪ್ಪಿಲ್ಲ ಗಾದೆಯ ತರಹ ಶೇಖರ್ ನೋಡಿರದ ಸ್ಥಳವಿಲ್ಲ ಎನ್ನಬಹುದೇನೋ!)
ಸುಮಾರು ಸಂಜೆ 6:45ರ ಹೊತ್ತಿಗೆ ಚಾರಣ ಮುಗಿಸುವಲ್ಲಿ ಕಾಲುಗಳು ಪದ ಹಾಡುತ್ತಿತ್ತು. ಅಲ್ಲಿ ಒಂದು ಪ್ರವಾಸಿ ಮಂದಿರದ ಕೋಣೆಯನ್ನು ಬಾಡಿಗೆಗೆ ಪಡೆದು, ನಮ್ಮ ಸ್ನಾನ ಮುಗಿಸಿ, ಪೂರ್ವ ನಿಯೋಜನೆಯಂತೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯುಟ್ಟು, ದೇವಸ್ಥಾನದ ಕಡೆಗೆ ನಡೆದೆವು. ಮಾನ ರಕ್ಷಣೆಯ ಸಲುವಾಗಿ ಹರ್ಷ ಪಂಚೆಗೆ ಬೆಲ್ಟ್ ಕಟ್ಟಿದ್ದನ್ನು ಕಂಡು ವಿನೂತ್ನ ನಗುತ್ತಿದ್ದಳು.
8:15ಕ್ಕೆ ದೇವಸ್ಥಾನವನ್ನು ಪ್ರವೇಶಿಸಿದ ನಾವು, "ಶ್ರೀ ಸುಬ್ರಮಣ್ಯ" ನ ದರ್ಶನಗೈದು, ಸಕಲರಿಗೂ ಒಳಿತನ್ನು ಮಾಡೆಂದು ಬೇಡಿ, ಅಲ್ಲೇ ಪ್ರಸಾದ(ಭೋಜನ)ವನ್ನು ಸ್ವೀಕರಿಸಿ ಹೊರಬರುವಷ್ಟರಲ್ಲಿ ಸಮಯ 9.
ಎಲ್ಲರಿಂದಲೂ ಮುಂಗಡವಾಗಿ ಪಡೆದಿದ್ದ ಹಣದಲ್ಲಿ ಇನ್ನೂ ಸಾಕಷ್ಟು ಉಳಿದಿತ್ತಾದ್ದರಿಂದ ಎಲ್ಲರಿಗೂ ICE CREAM with FRUIT SALAD ತಿನ್ನಲು ಮನಸ್ಸಿದೆಯಾ ಎಂದು ಕೇಳಿದರೆ ತಕ್ಷಣವೇ ಎಲ್ಲರೂ ಕೈ ಎತ್ತಿ ತಮ್ಮ ಸಮ್ಮತಿಯನ್ನು ಸೂಚಿಸಿದರು. ಆಗಲೇ TT ಯ ಬಳಿ ತೆರಳುತ್ತಿದ್ದ ವಿನೂತ್ನ, ಶೇಖರ್ & ವಂಶಿಯನ್ನು ICE CREAM ತಿನ್ನಲು ಬರುವಿರಾ ಎಂದು ಕೇಳಿ Phone Cut ಮಾಡಿ, ಹೋಟೆಲ್ ತಲುಪುವಷ್ಟರಲ್ಲಿ ಅವರು ನಮಗೂ ಮುಂಚೆಯೇ ಅಲ್ಲಿ ಪ್ರತ್ಯಕ್ಷ! ( ICE CREAM ತಿನ್ನಲು ಇವರು PT ಉಷಾರನ್ನೂ ಮೀರುಸ್ತಾರೆ ಬಿಡೀಪ್ಪ!!)
ನಾನಿನ್ನೂ ನಿಧಾನಕ್ಕೆICE CREAM ಅನ್ನು ಸವಿದು ಮೆಲ್ಲುತ್ತಿದ್ದೆ. ಉದುರುತ್ತಿದ್ದ ಕಚ್ಚೆ ಪಂಚೆಯನ್ನೂ ಲೆಕ್ಕಿಸದೆ ಹಾಗೆ ಹಿಡಿದು ಯದು ಓಡಿ ಬಂದ. ಪಲ್ಲವಿ ನಮಗೆ ಇನ್ನೊಂದು GUD BUD ಬೇಕು ಎಂದು ಸರಿ ಅಮೋಘ 2ನೇ ಬಾರಿಗೆ ಎಂದು ಎಲ್ಲರೂ GUD BUD ತಿಂದು TT ಬಳಿ ತೆರಳಿ ಕುಕ್ಕೆ ಬಿಡುವಷ್ಟರಲ್ಲಿ ಸಮಯ 11.
KP ಗೆ ಬೈ ಬೈ ಹೇಳಿ ರಾಜಧಾನಿಯನ್ನು ಬಂದು ಸೇರಿದಾಗ ಗಡಿಯಾರ 5:45 ತೋರಿಸುತ್ತಿತ್ತು.

ನನ್ ಕಡೆಯಿಂದ ವಿಶೇಷ ಧನ್ಯವಾದಗಳು:-

  • ಭಟ್ಟರು ಮತ್ತು ಕುಟುಂಬ,  ಚಿಕ್ಕಪ್ಪ & ಚಿಕ್ಕಮ್ಮ : ಅನ್ನದಾತೋ ಸುಖೀಭವ
  • ನಾಗೇಂದ್ರ : Tarpaulin ಅನ್ನು ಹೊತ್ತು ತಂದು, ಅರಣ್ಯ ಇಲಾಖೆಯಲ್ಲಿ ಮಾತಾಡಿ ಹಣ ಕಟ್ಟುವ ಮೊತ್ತವನ್ನು ಕಡಿಮೆ ಮಾಡಿಸಿದ್ದಕ್ಕಾಗಿ.
  • ಸುರೇಶ್ : ಚಾರಣದ ರೂಪುರೇಷೆಯನ್ನು ನಿರ್ಮಿಸಲು ಅನುವಾಗಿ, Tarpaulin ಅನ್ನು ಹೊತ್ತು ತಂದದ್ದಕ್ಕಾಗಿ.
  • ಶಿವ ಕುಮಾರ್:  INDEMNITY BOND ಮುದ್ರಣ ಪ್ರತಿ(Print Out)ಯನ್ನು ತಂದುಕೊಟ್ಟದ್ದಕ್ಕಾಗಿ.
  • ವಿನೂತ್ನ - ಅನಾರೋಗ್ಯವಿದ್ದೂ, ತನ್ನ ಮನೋ ಸಾಮರ್ಥ್ಯದಿಂದ ಚಾರಣವನ್ನು ಪೂರ್ಣಗೊಳಿಸಿದ್ದಕ್ಕಾಗಿ.
  • ಅನಾಮಿಕ( ಪರ್ಸ್ ಕಳೆದುಕೊಂಡವರು)  -BASC ನಿಧಿಗಾಗಿ ಪರೋಕ್ಷವಾಗಿ ಧನ ಸಹಾಯ ಮಾಡಿದ್ದಕ್ಕಾಗಿ.
  • ಇತರೆ ಎಲ್ಲಾ ಸಹ ಚಾರಣಿಗರು - ಎಳ್ಳಷ್ಟೂ ನಖರಾ ಮಾಡದೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸಿದ್ದಕ್ಕಾಗಿ. 
ಮಾಹಿತಿ:

ಸ್ಥಳ: ಕುಮಾರ ಪರ್ವತ ( KUMARA PARVATA-KP ) - ಸುಳ್ಯ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ.

ಚಾರಣ ಶುರು ಮಾಡುವ ಸ್ಥಳ: ಕುಕ್ಕೆ/ ಸೋಮವಾರಪೇಟೆ

ದೂರ: ಬೆಂಗಳೂರಿನಿಂದ  282 ಕಿ.ಮೀ. (
ಕುಕ್ಕೆ) / 234 ಕಿ.ಮೀ( ಸೋಮವಾರಪೇಟೆ )
 

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು( ಸುಬ್ರಮಣ್ಯ ರೋಡ್ ವರೆಗು)

ಮಾರ್ಗ: 

ಬೆಂಗಳೂರು( NH 73 Highway)-ಕುಣಿಗಲ್-ಚನ್ನರಾಯಪಟ್ಟಣ-ಸಕಲೇಶಪುರ-ಮಂಜರಾಬಾದ್ ಕೋಟೆ-ಕುಕ್ಕೆ    
ಬೆಂಗಳೂರು ( NH 73 Highway) - ಕುಣಿಗಲ್ - ಚನ್ನರಾಯಪಟ್ಟಣ - ಹೊಳೆನರಸೀಪುರ - ಸೋಮವಾರಪೇಟೆ

ಭಟ್ಟರ ಮನೆ - 1 ಊಟಕ್ಕೆ 80 ರೂ.
ಅರಣ್ಯ ಇಲಾಖೆಯಲ್ಲಿ ಚಾರಣ ಮಾಡಲು - ತಲಾ 200 ರೂ. 

ಕುಮಾರ ಧಾರಾ ನದಿಯಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ಬದಲಿಸಲು ಕಬ್ಬಿಣದ ಸಣ್ಣ ಕೋಣೆಗಳಿವೆ.