ಪಶ್ಚಿಮ ಘಟ್ಟಗಳು:
ಸುಮಾರು 1600 ಕಿ.ಮೀ. ಗಳಷ್ಟು ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಮತ್ತು ಬಹುಪಾಲು ನಮ್ಮ ಕರ್ನಾಟಕದಲ್ಲಿದೆ. ಬಗೆ ಬಗೆಯ ಮರಗಿಡಗಳು, ಸಸ್ತನಿಗಳು, ಪಕ್ಷಿ ಪ್ರಭೇದಗಳು, ಪ್ರಾಣಿ ಸಂಕುಲಗಳಿಂದ ಇದು ತನ್ನದೇ ಆದ ಜೀವ ವೈವಿಧ್ಯಗಳ ವೈಶಿಷ್ಟ್ಯತೆಯನ್ನು ಹೊಂದಿದೆ. ಸಂರಕ್ಷಿತ ಅರಣ್ಯಗಳ ವ್ಯಾಪ್ತಿಗೆ ಬರುವ ಪಶ್ಚಿಮ ಘಟ್ಟಗಳು ಮಳೆಯುಂಟುಮಾಡುವ ಮಾರುತಗಳನ್ನು ತಡೆಯುವುದರಿಂದ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಭಾಗವಾಗಿದೆ. ಈ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಇಂಬಳಗಳ ಕಾಟವೂ ಅಂತೆಯೇ ಇರುತ್ತದೆ. ಪರದೆಯ ಹಿಂದೆ:
ನಮ್ಮ BASCನ ಹಳೆಯ ಬ್ಲಾಗ್ ಗಳನ್ನು ನೋಡುತ್ತಿರಬೇಕಾದರೆ ಕಾಗಿನಹಾರೆ ಎಂಬ ಜಾಗ ಕಣ್ಣಿಗೆ
ಬಿದ್ದು, ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೋಡಿ, ಕಾಗಿನಹಾರೆ-ಯಡಕುಮರಿ-
ರಾಷ್ಟ್ರೀಯ ಹೆದ್ದಾರಿ-48... 2 ದಿನಗಳ ಚಾರಣವನ್ನು ಮಾಡಬಹುದು ಎಂದುಕೊಂಡೆ. ಸ್ನೇಹಿತ
ಗಿರೀಶ್ ಬಳಿ ಚರ್ಚಿಸಿದಾಗ ಪಶ್ಚಿಮ ಘಟ್ಟಗಳಲ್ಲಿ ಮಳೆಗಾಲದ ದಿನಗಳ ಚಾರಣ... ಸರಿ ಹೋಗಿ
ಬರೋಣವೆಂದ.
ಮಿಂಚಂಚೆಯನ್ನು ಕಳುಹಿಸಿದ ಕೆಲವೇ ಗಂಟೆಯೊಳಗೆ ನೊಂದಣಿಗಳು ಬಂದು ಎಲ್ಲರೂ ಚಾರಣಕ್ಕೆ ಹೊರಡಲು ಸಿದ್ಧವಾದೆವು.
ಅಡುಗೆ ಮಾಡುವ ಯೋಜನೆಯಿತ್ತಾದ್ದರಿಂದ ಐಯಂಗಾರಿ ಐಯ್ಯಂಗಾರಿ ರಂಗನಿಗೆ ಪುಳಿಯೋಗರೆ ತರಲು ಬೇರೆ ಹೇಳಿದ್ವಿ. ಅನಿವಾರ್ಯ ಕಾರಣಗಳಿಂದ ಆಮೇಲೆ ಅಡುಗೆ ಮಾಡುವುದು ಬೇಡವೆಂದು ತೀರ್ಮಾನಿಸಿದೆವು.
ಅಂದು ಶುಕ್ರವಾರ 31/5/2013: Bangalore Ascenders( BASC - www.bangaloreascenders.org) ನಿಂದ ಕಾಗಿನಹಾರೆ-ಯಡಕುಮರಿ-ರಾಷ್ಟ್ರೀಯ ಹೆದ್ದಾರಿ 48ಕ್ಕೆ ಚಾರಣಗೈಯ್ಯಲು ಎಲ್ಲರೂ ರಾತ್ರಿ 10 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿಯಿರುವ ಶಾಂತಲಾ ರೇಷ್ಮೆ ಮಳಿಗೆ(Shantala Silk House) ಸೇರುವುದೆಂದು ನಿಶ್ಚಯವಾಗಿತ್ತು. ಸಂಪತ್ ಮಾಡಿದ ಪ್ರಾರ್ಥನೆಗೆ ವರುಣದೇವನು ಮುಂಚಿತವಾಗಿಯೇ ಕೃಪೆ ತೋರಿದ್ದರಿಂದ ಸಂಜೆಯಿಂದಲೇ ಮಳೆ ಎಡೆಬಿಡದೆ ಸುರಿಯುತ್ತಿತ್ತು. ಸರಿ ಆ ಮಳೆಯಲ್ಲಿ ನೆನೆದು ತೊಪ್ಪೆಯಾಗಿ ಎಲ್ಲರೂ ಶಾಂತಲ ಇಂದ ಹೊರಡುವಷ್ಟರಲ್ಲಿ ಗಂಟೆ 11.45. ಶನಿವಾರ 01/06/2013: BASCನ ನಿಯಮದಂತೆ ಎಲ್ಲಾ 20 ಮಂದಿಯ ಸ್ವ-ಪರಿಚಯ. ಅಲ್ಲಿ ಬಹಳಷ್ಟು ಪರಿಚಿತ ಮುಖಗಳೇ ಇದ್ದುದ್ದರಿಂದ ಅವರು ಹೇಳುವ ವಾಕ್ಯಗಳನ್ನು ನಿರಂಜನ್ ಮುಂಚಿತವಾಗಿಯೇ ಕಂಠಪಾಠ ಮಾಡಿದವನಂತೆ ಚಾಚೂತಪ್ಪದೆ ಹೇಳುತ್ತಿದ್ದ. ( 3 ಇಡಿಯಟ್ಸ್ ಚಿತ್ರದ ಬಟ್ಟೆ ಇಸ್ತ್ರಿ ಮಾಡುವ ಮಿಲ್ಲಿ ಮೀಟರ್ ನನ್ನು ನೆನಪಿಸಿಕೊಳ್ಳಿ). ಈ ಚಾರಣಕ್ಕೆ ಹೈದರಾಬಾದ್ ನಿಂದ ಬಂದಿದ್ದ ಅಮೂಲ್ ಬೇಬಿಯಂತೆ ಕಾಣುವ ಶಿವಮೊಗ್ಗದ ಕೂಸು ಸದಾಶಿವ ತಾನು ಕಾಶಿನಾಥ್ ಚಿತ್ರಗಳ ಬಹುದೊಡ್ಡ ಅಭಿಮಾನಿಯೆಂದೂ ಬೆಂಗಳೂರಿಗೆ ಬಂದಾಗಲೆಲ್ಲ ಅವರ ಚಿತ್ರದ CDಯನ್ನು ಕೊಂಡೊಯ್ಯುತ್ತೇನೆಂದು ಹೇಳಿದ. ಶ್ರೀಹರ್ಷ ತಾನು ಕುಣಿಗಲ್ ಕುದುರೆಯೆಂದು, ಟೈಗರ್ ಪ್ರಭಾಕರ್ ತಾನು ಪಾಕ ಪ್ರವೀಣನೆಂದು ಮತ್ತು ನಿತ್ಯವೂ ಚಿಕನ್ ತಿನ್ನುತ್ತೇನೆಂದು ಹೇಳಿಕೊಂಡ. ಅಲ್ಲಿದ್ದ ಮಾಂಸಾಹಾರಿಗಳೆಲ್ಲ ನಿಮ್ಮ ಮನೆ ಎಲ್ಲಿ ಎಂದು ಕೇಳಲು ಶುರು ಮಾಡಿದರು. ಸ್ವಲ್ಪ ಹೊತ್ತು ಗಾನ ಬಜಾನ... ನಂತರ ಎಲ್ಲರೂ ನಿದ್ರೆಗೆ ಜಾರಿದರು. ಬೆಳಗ್ಗೆ 5.30ರ ಹೊತ್ತಿಗೆ ಸಕಲೇಶಪುರದ ಬಳಿ ತಿಂಡಿಯನ್ನು ಕಟ್ಟಿಸಿಕೊಂಡು 6.30ರ ಹೊತ್ತಿಗೆ ಮಾಕನಮನೆ ಜಲಪಾತವನ್ನು ಅನ್ವೇಷಿಸಲು ಸದಾ ನೇತೃತ್ವದಲ್ಲಿ ಹೊರಟೆವು. ದಂಡನಾಯಕನಾದ ಸದಾ ಇಲ್ಲಿರಬಹುದು ಅಲ್ಲಿರಬಹುದು ಎಂದು ಒಟ್ಟಾರೆ 8 ಕಿ.ಮೀ. ನಡೆದಾಡಿಸಿದ. ಮಧ್ಯೆ ಎಲ್ಲೋ ಹರಿಯುತ್ತಿದ್ದ ನೀರಿನ ಬಳಿ ಬುತ್ತಿ ತಂದಿದ್ದ ತಿಂಡಿಯನ್ನು ತಿಂದು ಮುಗಿಸಿದೆವು. ಅಲ್ಲಿಂದ ಹೊರಟು ಬರುವಾಗ ಅಲ್ಲಿ ಎಲ್ಲರೂ ಅನಾನಸ್ ಹಣ್ಣುಗಳನ್ನು ಕಿತ್ತು ತಂದರು. ರಾಸಾಯನಿಕಗಳನ್ನು ಹಾಕಿ ಹಣ್ಣು ಮಾಡಿರುತ್ತಿದ್ದ ಅನಾನಸ್ ಗಳನ್ನು ತಿಂದಿದ್ದ ನಮಗೆ ಆ ನೈಸರ್ಗಿಕವಾಗಿ ಕಳೆತ ಪೈನಾಪಲ್ ಬಹಳವೇ ರುಚಿ ಕೊಟ್ಟಿತು. ಪಲ್ಲವಿ - ಕಳ್ಳ ಕಳ್ಳ ಕಳ್ಳ !!! ನಿರಂಜನ್ - ನಾನೇನ್ ಕದೀಲಿಲ್ಲ ಅಲ್ಲಿ ಬಿಟ್ಟಿತ್ತು ಕಿತ್ತೆ ಅಷ್ಟೆ. ಯಾರೋ ದಾರಿಹೋಕರ ಸಹಾಯ ಪಡೆದು ಸರಿಯಾದ ದಾರಿ ಹಿಡಿದು ಮಾಕನಮನೆ ಜಲಪಾತ ತಲುಪಿದೆವು. ಆ ಸ್ಥಳದಲ್ಲಿ ಕಂಡ ಖಾಲಿಯಾಗಿ ಬಿದ್ದಿದ್ದ Fruity Tetrapack ಗಳು , ಮಲ್ಯ ಮಾಮನ ಕಂಪನಿ ಬಾಟಲಿಗಳು ನಮಗಿದ್ದ ನೀರಿಗಿಳಿಯುವ ಉತ್ಸಾಹವನ್ನೇ ಢಂ ಎನ್ನಿಸಿಬಿಟ್ಟವು :( ಹಿಂತಿರುಗಿ ಬರುವಾಗ ಹಲಸಿನ ಹಣ್ಣನ್ನು ಕಿತ್ತು ಮನಸೋ ತೃಪ್ತಿ ತಿಂದೆವು. ದಾರಿಯಲ್ಲಿ ಸಂಪತ್ ಅಂದು ತನ್ನ ಹುಟ್ಟು ಹಬ್ಬವೆಂದು ಹೇಳಿದ. ನಮ್ಮ ವಾಹನದ ಬಳಿ ಬಂದೊಡನೆ ಎಲ್ಲರಿಗೂ ವಿಷಯ ಮುಟ್ಟಿಸಿದಾಗ ಎಲ್ಲರಿಂದ ಅವನಿಗೆ ಬಹು ದೊಡ್ಡ ಉಡುಗೊರೆಯೇ ದೊರೆಯಿತು(ಇರಲಾರದೆ ಇರುವೆ ಬಿಟ್ಟುಕೊಂಡ ಸಂಪತ್ತು).
ಬಸ್ ಏರಿ ಹೋಗುತ್ತಿರುವಾಗ ಮಧ್ಯದಲ್ಲಿ ಗೇರ್
ಬಾಕ್ಸ್ ಕೈ ಕೊಟ್ಟು, ಟೈಗರ್ ನೇತೃತ್ವದಲ್ಲಿ
ಎಲ್ಲರೂ ತಪ್ಪು ದಾರಿ ಹಿಡಿಯುತ್ತಿದ್ದ ಬಸ್ಸನ್ನು ತಮ್ಮ ಬಲ ಪ್ರಯೋಗದಿಂದ ಸರಿ ದಾರಿಗೆ
ತಂದರು.
ಕಾಗಿನಹಾರೆಯ ಶೃಂಗದ ಬೆನ್ನೇರಿ:
ಒಂದು
ನಲ್ಲಿಯ ಬಳಿಯಲ್ಲಿ ತಂದಿದ್ದ ಚಪಾತಿಯನ್ನು ತಿಂದು, ದೂರದಲ್ಲಿ ತನ್ನ ಸಹಜ ಸೌಂದರ್ಯದಿಂದ
ಅತಿ ಚೆಲುವಾಗಿ ಕಾಣುತ್ತಿದ್ದ ಶೃಂಗದ ಬೆನ್ನೇರಲು ಎಲ್ಲರೂ ಬಹಳವೇ ಖುಷಿಯಿಂದ
ಹೊರಟೆವು.
ಮಂಜಿನಿಂದಾವೃತವಾದ ಆ ಪ್ರದೇಶದಲ್ಲಿ ತಣ್ಣಗೆ ಬೀಸುತ್ತಿದ್ದ ತಂಗಾಳಿಯು ನಮ್ಮನ್ನು ಮತ್ತೂ ಉತ್ಸುಕತೆಯಿಂದ ಹೆಜ್ಜೆಯಿಡುವಂತೆ ಮಾಡಿತು. ಸ್ವಲ್ಪ ಮುಂದೆ ಸಾಗಿದಂತೆ ಅಲ್ಲೊಂದು ಹಳೆಯದಾದ ದೇಗುಲದ ಕಲ್ಯಾಣಿಯು ಕಣ್ಣಿಗೆ ಬಿತ್ತು. ಪಶ್ಚಿಮ ಘಟ್ಟಗಳಲ್ಲಷ್ಟೇ ಕಾಣಸಿಗುವ ಮಲಬಾರ್ ಗುಳಿ ಮಂಡಲ(Malabari Pit Viper) ಎಂಬ ಜಾತಿಯ ಒಂದು ಮರಿ ಹಾವು ತನ್ನ ಪಾಡಿಗೆ ತಾನು ಮಲಗಿತ್ತು. ನಾವು ನಮ್ಮ ಕ್ಯಾಮೆರಾಗೆ ಪೋಸು ಕೊಡಪ್ಪಾ ಎಂದು ಬಗೆಬಗೆಯಾಗಿ ಬೇಡಿದೆವು. ಆ ಸೋಂಬೇರಿ ಹಾವು Celebrity ಆಗಲು ಇಷ್ಟವೇ ಪಡಲಿಲ್ಲ. ಗೋವಿಂದ್ ಬಂದು ಆ ಹಾವಿನ ಬಗ್ಗೆ ಏನೇನೋ ಮಾಹಿತಿ ನೀಡಿದರು ಮತ್ತು ನಿಮಗೆ ಬಿಳಿ ಬಣ್ಣದ ಎರಡು ಚುಕ್ಕಿಗಳಂತೆ ಕಾಣುವ ಕಣ್ಣುಗಳು ಕಾಣುತ್ತಾ ಅಂತೆಲ್ಲ ಕೇಳುತ್ತಿದ್ದರು. ಎಲ್ಲರೂ ಹೌದೆನ್ನುತ್ತಿದ್ದರೆ ನನಗೆ ಮಾತ್ರ ಅದೇನೊಂದೂ ಕಾಣಿಸ್ತಾನೆ ಇರ್ಲಿಲ್ಲ. ಗಿರಿ ಆಮೇಲೆ ಕ್ಯಾಮೆರಾದಲ್ಲಿ Zoom ಮಾಡಿ ತೋರಿಸುತ್ತೇನೆ ಎಂದು ಎಲ್ಲರನ್ನು ಸುಮ್ಮನಾಗಿಸಿದ. ದೊಡ್ಡ ಕೊಟೆಯೆಂದು ಆಕ್ರಮಣ ಮಾಡಲು ಹೋದ ನಮಗೆ ಅಲ್ಲಿ ಕಂಡದ್ದು 60X40 ಸೈಟ್ ಅಷ್ಟಿರುವ ಪುಟ್ಟ ಕೋಟೆ. ಕೆಳಗಿಳಿದು ಬಂದು ಶಿರಾಡಿ ಅಮ್ಮನವರ ದೇವಸ್ಥಾನದ ಟ್ರಸ್ಟ್ ನಿಂದ ಇದ್ದ ಒಂದು ವಸತಿ ಗೃಹದಲ್ಲಿ ಬಿಡಾರ ಹೂಡಿದೆವು. ಅಲ್ಲಿ ಟೀ ಮತ್ತು ಬಿಸಿ ಬಿಸಿ ಬೋಂಡದ ಸೇವನೆ. 2 ಚಿಕ್ಕ ಓಸಿ ಹೊಡೆದ ಕೋಡುಬಳೆ ಕೊಟ್ಟು ಒಂದು ಅಧಿಕ ಬೋಂಡ ಬೇಕೆಂದು ವತ್ಸ ನನ್ನ ಹತ್ತಿರ Match fixing ಮಾಡಿಕೊಳ್ಳಲು ಬಂದ. ಅಲ್ಲಿಯ ನಿರ್ವಾಹಕರು ನನ್ನನ್ನು ಕರೆದು ಅವರ ಅಧಿಕಾರ ದರ್ಪದಲ್ಲಿ ನಮ್ಮನ್ನು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಹೇಳುತ್ತಿದ್ದರು. ನಾನು ನನ್ನ HR ಬುದ್ಧಿಯನ್ನೆಲ್ಲಾ ಉಪಯೋಗಿಸಿ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ಹೆಣ್ಣು ಮಗಳು ಒಬ್ಬಳೇ ಉಗುಸ್ಕೊತಿದಾಳೆ ಅಂತ ಹರ್ಷ ಪಕ್ಕಕ್ಕೆ ಬಂದು ನಿಂತ. ಅವನ ಕಣ್ಣೆಲ್ಲಾ ಅವರ ಮೇಜಿನ ಮೇಲಿದ್ದ ಬೋಂಡದ ಮೇಲೆಯೆ. ಆ ಯಜಮಾನರು ನಮ್ಮದು ಹಾಸನ ಎಂದು ಹೇಳಿದರೆ ಇವನು ನಮ್ಮದು ಅದರ ಪಕ್ಕದ ಊರು ಎಂದುಬಿಟ್ಟ. ಅವರು ಎಷ್ಟೇ ಆದ್ರೂ ಮಲೆನಾಡಿನವರು ಬಿಡ್ತಾರಾ ಯಾವ ಊರು ಎಂದು ಕೇಳಿದರು. ಇವನು ಹಾಸನದ ಪಕ್ಕ ಕುಣಿಗಲ್ ಅನ್ನೋದಾ !! ( ಕುಣಿಗಲ್ ನಮ್ಮ ಜಿಲ್ಲೆ ತುಮಕೂರಿಗೆ ಸೇರಿದ್ದು ಮತ್ತು ಹಾಸನದಿಂದ 110ಕಿ.ಮೀ. ದೂರದಲ್ಲಿದೆ.ಹಾಸನದ ಪಕ್ಕ ಯಾವಾಗ್ ಬಂತು ಅನ್ನೋದು ನಂಗೆ ಗೊತ್ತಾಗ್ಲಿಲ್ಲ). ಯಜಮಾನರು ನಮಗೆ Care of Platform ಆಗಲು ಒಪ್ಪಿಗೆ ಕೊಟ್ಟು ಸಂಧಾನದ ಪ್ರತೀತಿಯೇನೋ ಎಂಬಂತೆ ಬೋಂಡ ತೆಗೆದುಕೊಳ್ಳಲು ಹೇಳಿದರು. ನಾನು ಬೇಡವೆಂದು ನಯವಾಗಿ ತಿರಸ್ಕರಿಸಿದೆ. ಶ್ರೀಹರ್ಷನಿಗೆ ಇಬ್ಬರ ಮೇಲೆ ಸಿಟ್ಟು!!! 1. ತನಗೆ ತೆಗೆದುಕೊಳ್ಳಲು ಹೇಳಲಿಲ್ಲ ಎಂದು ಆ ನಿರ್ವಾಹಕರ ಮೇಲೆ 2. ಅವರಿಂದ ಪಡೆದು ತನಗೆ ಕೊಡಲಿಲ್ಲ ಅಂತ ನನ್ನ ಮೇಲೆ :( ಎಲ್ಲರೂ ಹರಟುತ್ತಾ ಸುಮ-ಮಂಜು ಮದುವೆ ಪ್ರಕರಣದ ಕಥೆಯನ್ನು ಕೇಳಿ, ಹೋಟೆಲಿನವರು ಮಾಡಿದ್ದ ಅನ್ನ, ಸಾಂಬಾರ್ & ಹಪ್ಪಳ ತಿಂದು ಮಲಗಿದೆವು. |
(ಚಿಕ್ಕಂದಿನಲ್ಲಿ ಆಡಿದ ನಾಯಿ ಮತ್ತು ಮೂಳೆ ಆಟವನ್ನು ನಾವು ಇನ್ನೂ ಮರೆತಿಲ್ಲವೆಂದು ಹೆಮ್ಮೆಯಿಂದ ಹೇಳುತ್ತೇನೆ)
ಅಲ್ಲಿ ನಮ್ಮ ಪಾಂಡಿತ್ಯವನ್ನು ನೋಡಿದ ಯಾರೋ ಮಾಲಾಶ್ರಿಯವರ ಹೊಸ ಸಿನೆಮಾಗೆ Stunt Artist ಬೇಕು ಬರ್ತ್ಯಾ ಅಂತ ಕೇಳಿದ್ರು .
ನಾನು ನಟಿಸೋದು ಆಮೇಲೆ TV9ನಲ್ಲಿ ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಹಂಡೆಯಂತಿರುವ ಮಾಲಾಶ್ರಿ ಎಗರಿ ಬೀಳುವಾಗ ಲೋಟದಂತಾಗಿ ಬಿಡುತ್ತಾಳೆ ಅನ್ನೋದು ಎಲ್ಲಾ ಯಾಕೆ ಅಂತ ನಾನೇ ಆ offerನ ತಿರಸ್ಕರಿಸಿಬಿಟ್ಟೆ!!!
ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಒಂದು ಪುಟ್ಟ ಗುಡ್ಡವನ್ನು ತಲುಪಿದೆವು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಎಷ್ಟು ಕಣ್ತುಂಬಿಸಿಕೊಂಡರೂ ಸಾಲದು ... ಸುತ್ತಲಿನ ಹಸಿರ ವನರಾಶಿ, ಕೆಳಗೆ ಚಿಕ್ಕದಾಗಿ ಕಾಣುತ್ತಿದ್ದ ರೈಲ್ವೆ ಹಾದಿ ಮತ್ತು ಅದಕ್ಕೆ ಮಾಡಿದ್ದ ಸುರಂಗ ಎಲ್ಲವನ್ನೂ ನೋಡಿ ಮನಸ್ಸು ಕ್ಷಣಕಾಲ ಮೂಕವಿಸ್ಮಿತ ....
ಪದಗಳಲ್ಲಿ ವರ್ಣಿಸಿದರೆ ಆ ಪ್ರಕೃತಿ ಸೌಂದರ್ಯದ ಸೌಂದರ್ಯವನ್ನು ಕಡಿಮೆ ಮಾಡುತ್ತಿದ್ದೀನೇನೋ ಅನ್ನಿಸುತ್ತೆ...
ಮಾತಿಗೊಂದು ಅರ್ಥವೇಕೆ,
ಅರ್ಥವಿದ್ದರಷ್ಟೆ ಸಾಕೆ?
ಮೋಡಗಳನು ನೋಡಿರಲಿ
ಅರ್ಥ ಅಲ್ಪ ಎಂದು ತಿಳಿ
ಮಾತು ಅರ್ಥ ಎರಡು ವ್ಯರ್ಥ ಸ್ವ-ಅರ್ಥವಿರದಿರೆ
(ಕುವೆಂಪುರವರ ಪಕ್ಷಿಕಾಶಿ ಕವನಸಂಕಲನದ ಪದ್ಯ)
ನೋಡಿ ಜಾಗ ಇಷ್ಟು ಚೆನ್ನಗಿದ್ದ್ಮೇಲೆ Photo Session ನಡಿಬೇಕಲ್ವ ... ಇಲ್ಲಿ ಸುಮ-ಮಂಜು ಜೋಡಿ ಫೋಟೋ ತೇಗೀತಿದ್ರೆ ನನ್ನ ಬಾರೆ ಅಂತ ಎಳ್ಕೊಂಡು पति पत्नी और वो ಅಂದ್ಲು. ನಂಗೆ "ವೋ" ಆಗೋಕ್ಕೆ ಇಷ್ಟ ಇರ್ಲಿಲ್ಲ ಬೇಡ ಬೇಡ ಅಂತಿದ್ದೆ ಅವಳು ಬಿಡಲೇ ಇಲ್ಲ(ಒಂದ್ ಸಲ ಬಿದ್ದಿದ್ ಪೆಟ್ಟಿಗೆ ಕುಂಟುತ್ತ ನಡೀತಿದ್ದೆ ಅದಕ್ಕೆ ಹೆದರಿ ಜಾಸ್ತಿ Protest ಮಾಡೋಕ್ಕೆ ಹೋಗ್ಲಿಲ್ಲ)
ಅಲ್ಲಿಂದ ಕಾಡು ಹಾದಿಯಲ್ಲಿ ಸಾಗಿ ರೈಲ್ವೆ ಹಾದಿಗೆ ತಲುಪಿದೆವು. ಅಲ್ಲಿ ರೈಲ್ವೆ ಹಳಿಯ ಮೇಲೆ ಮತ್ತೊಂದು ಫೋಟೋ ಸೆಶನ್.
ಅಲ್ಲಿಂದ ಯಡಕುಮರಿ ರೈಲ್ವೆ ನಿಲ್ದಾಣ ತಲುಪಿ,ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಚಾರಣ ಪ್ರಾರಂಭಿಸಿದೆವು. ಬಿದಿರು ಮೆಳೆಯಲ್ಲಿ ಸಪ್ತಗಿರಿ ಜೊತೆ ಮಾತಾಡ್ತಾ ನಡೀತಿದ್ದೆ. ಅವರ ಗಮನವೆಲ್ಲ ನೆಲದ ಮೇಲೆ ನಮ್ಮ ರಕ್ತ ಹೀರಲು ಕಾದು ನಿಂತ ಜಿಗಣೆಯ ಮೇಲೆಯೇ. ಒಂದು ಸಣ್ಣ ತೊರೆಯನ್ನು ದಾಟಿ ಮುಂದುವರಿದರೆ ಅಲ್ಲಿ ಇಂಬಳಗಳ ಸುರಿಮಳೆ ... ನಂಗೆ ರಕ್ತ ಇಲ್ಲ ಇನ್ನು ಇವಕ್ಕೆ ಬೇರೆ !!!
ಟೈಗರ್, ಗಿರಿ, ನವೀನ ಯಾರೂ ಜಿಗಣೆ ಬಗ್ಗೆ ತಲೇನೇ ಕೆಡುಸ್ಕೊತಿಲ್ಲ ... ಕಡೆಗೂ ಕೆಂಪು ಹೊಳೆ ಹತ್ತಿರ ತುಂತುರು ಮಳೆಯಲ್ಲಿ ಒಡೋಡ್ಕೊಂಡು ಬಂದು ಸೇರುದ್ವಿ. ಹೊಳೆ ದಾಟಿ ಹೆದ್ದಾರಿ ತಲುಪುವಷ್ಟರಲ್ಲಿ ಗಂಟೆ 3. ಅಲ್ಲಿಂದ ಇರ್ಮಯಿ ಜಲಪಾತದತ್ತ ಹೊರಟೆವು. ಪುಣ್ಯಕ್ಕೆ ಆ ಜಲಪಾತ ಇನ್ನು ನಮ್ಮ ದುಷ್ಟ ಜನರ ಕಣ್ಣಿಗೆ ಬೀಳದೆ ಪ್ಲಾಸ್ಟಿಕ್ ಮುಕ್ತ ಜಾಗವಾಗಿತ್ತು. ಸಣ್ಣದಾಗಿ ಹರಿಯುವ ಝರಿ ಮತ್ತು ಅದರಿಂದ ನೈಸರ್ಗಿಕವಾಗಿ ನಿರ್ಮಿತವಾಗಿದ್ದ ಪುಟ್ಟ ಕೊಳ... ನೀರಲ್ಲಿ ಮಿಂದು ಧರ್ಮಸ್ಥಳದ ಮಂಜುನಾಥನ ದರ್ಶನಗೈಯ್ಯಲು ನಡೆದೆವು.
ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದಾಗ ಅದ್ಯಾವ್ದೋ ಕಂಬಿಗೆ ಕಟ್ಟಿದ್ದ Friendship Band ಕಾಣುಸ್ತು. ದೇವರು ಕೊಟ್ಟ ಪ್ರಸಾದ ಅಂತ ಹರ್ಷ ಅದನ್ನ ಕದ್ದು ಬಿಟ್ಟ.(ಸುರೇಶನಿಗೆ ನಿನ್ನ ಚಿನ್ನದ ಚೈನನ್ನು ಕಟ್ಟು ಅಂತ ಉಚಿತ ಸಲಹೆ ಬೇರೆ !!!) ನಾವು ಆ Band Ownerಗೆ ಇದ್ದ ರೋಗ ನಿಂಗೂ ಬರತ್ತೆ, ಗಲೀಜು ಅಂತ ಏನೇನು ಹೇಳಿದರೂ ಆಸಾಮಿ DON'T CARE ಅಂದ್ಬಿಟ್ಟ. Double hearted friendship Band ಕೈಗೆ ಹಾಕ್ಕೊಂಡ್ರೆ ಇಬ್ಬರು ಹುಡ್ಗೀರು ಸಿಗ್ತಾರೆ ಅನ್ನೋದು ಅವನ ಭಾವನೆ ( ಪೂನಂ ಗೆ ಕನ್ನಡ ಓದೋಕ್ಕೆ ಬರೋಲ್ಲ ಅನ್ನೋ ಧೈರ್ಯದಿಂದ ಇದನ್ನ ಬರೀತಿದೀನಿ). ದರ್ಶನ ಮುಗಿಸಿ ಪ್ರಸಾದಕ್ಕೆ ಹೋದೆವು. ಅಲ್ಲಿ ಯಾರೋ ದಡೂತಿ ಹೆಂಗಸು ನಮ್ಮ ಜಿಮ್ ಬಾಡಿ ರಾಜೇಶ್ ನೆ ತಳ್ಳಿಬಿಟ್ಟಳಂತೆ!!
ಊಟ ಮುಗಿಸಿ ಬಸ್ ಹತ್ತಿ ಬೆಂಗಳೂರಿನತ್ತ ಮುಖ ಮಾಡುವಷ್ಟರಲ್ಲಿ ಗಂಟೆ 10. ಹರ್ಷನ ಪ್ರೇಮದ ಕಥೆ-ವ್ಯಥೆ ಕೇಳಿದ ರವೀಂದ್ರ ಅಂತೂ ಹರ್ಷ- ಪೂನಂ ರವರ ಮದುವೆ ಮಾಡಿಸಲು ತನ್ನ ಅಪ್ಪ ಮಾಡುವ ಪೌರೋಹಿತ್ಯವನ್ನು ತಾನೇ ಮಾಡಲು ಅಣಿಯಾಗಿಬಿಟ್ಟ!!!
ಭಾರತ್ ಬಂದ್ ತರ ಎಲ್ಲರು ಸೋಮವಾರ ರಜೆ ಹಾಕಲು ಅಣಿಯಾಗಿಬಿಟ್ಟರು. ಎಲ್ಲರನ್ನು ಬೇಡವೆಂದು ಸಮಾಧಾನಗೊಳಿಸುವಷ್ಟರಲ್ಲಿ ಹರ್ಷ ಸಾಕಾಗಿ ಹೋದ.ಈಗ ಶಶಿ ರವರ ಪ್ರೇಮದ ಕಥೆ ಶುರು. ಎಲ್ಲರಿಗೂ ನಿದ್ದೆ ಬರುತ್ತಿದ್ದರೂ 11 ವರ್ಷಗಳ Love Marriage Story ಕೇಳಲು ಕುತೂಹಲ. ಬಾಸು ಬಾಸು ಅಂತ ಪಾಪ ಅವರ ಪ್ರಾಣ ಹಿಂಡ್ಬಿಟ್ವಿ.
ದಿನಕ್ಕೊಮ್ಮೆ ಮೂಡುಂಟು, ದಿನಕ್ಕೊಮ್ಮೆ ಮುಳುಗು
ದಿನದ ಕತ್ತಲೆಯುಂಟು, ದಿನದ ಬೆಳಗು
ಚಾರಣವೆಲ್ಲಾ ಮುಗಿದು ರಾಜಧಾನಿ ತಲುಪಿದಾಗ ಗಡಿಯಾರ 6.30 ಎಂದು ತೋರಿಸುತ್ತಿತ್ತು.
ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಗಿರೀಶ್ ನಾಗಮಂಗಲ - GPS ತಂದು ಚಾರಣದ ಉಸ್ತುವಾರಿಯಲ್ಲಿ ಸಹಕಾರ ನೀಡಿದ್ದಕ್ಕೆ.
ರಾಮ್ ಕುಮಾರ್- ಕಾಗಿನಹಾರೆಯ ನಿರ್ವಾಹಕರ ಬಳಿ ಮಾತನಾಡಿ ಅವರನ್ನು ತಣ್ಣಗೆ ಮಾಡಿದ್ದಕ್ಕೆ.
ವಿಶ್ವಾಸ್ HK - ಕಾಗಿನಹಾರೆಯ ಕೋಟೆಯ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ
ಗೋಪಾಲ್ - ಅನ್ನದಾತೋ ಸುಖೀಭವ