ರಾಮದೇವರ ಬೆಟ್ಟ, ತುಮಕೂರು:
ಶ್ರೀ ಸಿದ್ದಗಂಗ ಕ್ಷೇತ್ರದ ಪಕ್ಕ ನೆಲೆಸಿರುವ ರಾಮದೇವರ ಬೆಟ್ಟವು ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿ (NH-4 ) ಯಲ್ಲಿದೆ. ಬೆಟ್ಟದ ಇತಿಹಾಸದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲದ ಕಾರಣ ಇಲ್ಲಿ ಬೊಗಳೆ ಬಿಟ್ಟು ಮಕ್ ಉಗುಸ್ಕೊಳ್ಳೋ ತಪ್ಪು ಮಾಡೋಲ್ಲ ...
ಚಾರಣ ಶುರು ಮಾಡುವ ಸ್ಥಳ - ರಾಮದೇವರ ಬೆಟ್ಟ, ತುಮಕೂರು |
Bangalore Ascenders (BASC-www.bangaloreascenders.org) ಇಂದ ದಿನಾಂಕ 16 ಮಾರ್ಚ್ 2013ರ ಸಂಜೆ ಎಲ್ಲರೂ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಸಂಜೆ 4:45ಕ್ಕೆ ಹೊರಟೆವು. ನಾನು,ನವೀನ ಮುಂಚೆ ಹೋಗಿ ಟಿಕೆಟ್ ತೆಗೆದುಕೊಂಡು ಎಲ್ಲರ ಬರವನ್ನೇ ಕಾಯುತ್ತಿದ್ದೆವು... ಎಲ್ಲರು ಬಂದರೂ ನಮ್ಮ ಹಿರೋಯಿನ್ ಈ ಚಾರಣದ ನನ್ನ ಸಹ-ರೂವಾರಿ ವಿನೂತ್ನ ಇನ್ನೂ ಬಂದೇ ಇಲ್ಲ!!! ಆಮೇಲೆ ರೈಲು ಹೊರಡುವ ಕೆಲವೇ ಕ್ಷಣಗಳ ಮುಂಚೆ DDLJ ಕಾಜೋಲ್ ತರ Running ನಲ್ಲಿ ಬಂದು ನಮ್ಮನ್ನು ಸೇರಿಕೊಂಡಳು. ಮಾನ್ಯ ಕಿರಣ್ I am wearing Black & Black ಅಂತ SMS ಕಳುಹಿಸಿದ್ದ, ನಮ್ಮ ಶಾಂಪೂ ಸುರೇಶ Black & Black ಎಲ್ಲಿ ಅಂತ ಹುಡುಕಿದ್ದೇ ಹುಡುಕಿದ್ದು. ಆದರೆ ಆಸಾಮಿ ನಾನು ಮೊದಲೇ ಪ್ಲಾಟ್ ಫಾರಂ ಸಂಖ್ಯೆ 10 ಎಂದು ತಿಳಿಸಿದ್ದರೂ, 9ನೇ ಪ್ಲಾಟ್ ಫಾರಂ ರೈಲು ಹಿಡಿದು ಓಸಿಯಗಿ ಯಶವಂತಪುರದವರೆಗೂ ಪ್ರಯಾಣ ಮಾಡಿ ಅಲ್ಲಿ ಕಾದು ನಂತರ ನಮ್ಮ ರೈಲನ್ನು ಹತ್ತಿಕೊಂಡ. BASCನ ನಿಯಮದಂತೆ ಎಲ್ಲರಿಂದಲೂ INDEMNITY BONDಗೆ ಸಹಿ ಪಡೆದೆವು. ಮತ್ತೊಬ್ಬ ಸಹ ಚಾರಣಿಗ ಅನಿರುಧ್ಧ್ ಬಸ್ಸಿನಲ್ಲಿ ಬಂದು ಚಾರಣದ ಸಮಯಕ್ಕೆ ಸರಿಯಾಗಿ ನಮ್ಮ ಜೊತೆಗೂಡಿದ. ಹೀಗೆ ಒಟ್ಟಾರೆ 23 ಚಾರಣಿಗರು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ನಮ್ಮ ರಾತ್ರಿ ಚಾರಣವನ್ನು ಶುರು ಮಾಡಿದೆವು.
ಹೋದ ವಾರ ಇದೇ ಸ್ಥಳಕ್ಕೆ ಬೆಳಗಿನ ಹೊತ್ತಿನಲ್ಲಿ 11 ಮಂದಿಯೊಟ್ಟಿಗೆ BASC ನಿಂದಲೇ ಚಾರಣ ಮಾಡಿದ್ದೆ . ಶೌನಕ್ ಹೋದ ವಾರವೂ ನನ್ನ ಜೊತೆ ಚಾರಣ ಮಾಡಿದ್ದರಿಂದ ಅವನನ್ನು ಮತ್ತು ಸುರೇಶನನ್ನು ತಂಡವನ್ನು ಮುನ್ನಡೆಸಲು ಹೇಳಿದೆನು. ಎಲ್ಲರೂ ಟಾರ್ಚ್ ತಂದಿದ್ದರೂ ದಾರಿ ದೀಪವದವರು ಇವರು ....
8 30 ರ ಹೊತ್ತಿಗೆ ಬೆಟ್ಟದ ತುದಿಯನ್ನು ತಲುಪಿ ಅಲ್ಲಿದ್ದ ಪುಟ್ಟ ಶಿವದೆವಲಯವನ್ನು ಹೊಕ್ಕು ದೇವರಿಗೆ ನಮಸ್ಕರಿಸಿ ಶಿವಲಿಂಗದ ಮುಂದೆ ಕುಳಿತ ನಂದಿಯನ್ನು ಕಂಡು ಹೊರಬಂದೆವು.
ಶಿವ ದೇವಾಲಯ - ರಾಮದೇವರ ಬೆಟ್ಟ, ತುಮಕೂರು |
ಕಲ್ಲು ಮಂಟಪ |
ನಂತರ ನಮ್ಮ ತಂಡಕ್ಕೆ ಸ್ವಲ್ಪ ಸಮಯ ಆಟ ಆಡಿ ನಂತರ ಅಡುಗೆ ಮಾಡೋಣವೋ ಇಲ್ಲ ಪುಲಾವ್ ಅನ್ನು ಮಾಡಿ,ಉಂಡು ನಂತರ ಆಟ ಶುರು ಮಾಡೊಣವೋ ಎಂದು ಕೇಳಿದರೆ ಎಲ್ಲರೂ ಒಕ್ಕೊರಲಿನಿಂದ ಊಟ ಎಂದು ಕೂಗಿದರು ಆಗ ಮನಸಿಗೆ ಹೊಳೆದದ್ದು ... ಕಾಲೇಜ್ ನಲ್ಲಿ "ದೇವರಹೆಣ" ಅಂತ ಒಂದು ಪಾಠ ಇತ್ತು . ಆ ಪಾಠದಲ್ಲಿದ್ದ ಒಂದು ಸಾಲು - ಅನ್ನ ಎಂಬ ಶಬುದ ಕಿವಿಗೆ ಬೀಳುತ್ತಲೇ ಠೊಣ್ಣಿ ಹ ಹ್ಹ ಹ್ಹ ಎಂದು ನಕ್ಕು ಬಿಟ್ಟಿದ್ದನು ...
ಮೊದಲೇ ಎಲ್ಲರಿಗೂ ಇ-ಮೇಲ್ ನಲ್ಲಿ ತಿಳಿಸಿದ್ದಂತೆ ಅವರವರಿಗೆ ವಹಿಸಲಾಗಿದ್ದ ಪದಾರ್ಥಗಳನ್ನು ಎಲ್ಲ ಸಹ ಚಾರಣಿಗರೂ ಮರೆಯದೇ ತಂದಿದ್ದರು .
ಬಟಾಣಿ ಬಿಡಿಸಿ,ಹುರುಳಿಕಾಯಿ,ಟೊಮೇಟೊ,ಈರುಳ್ಳಿ,ಆಲೂಗಡ್ಡೆ ಎಲ್ಲ ತರಕಾರಿ ಹೆಚ್ಚುತ್ತಾ, ಒಂದು ತಂಡ ಹಾಸಿದ್ದ ಟಾರ್ಪಲಿನ್ ಮೇಲೆ ಹರಟುತ್ತ ಕುಳಿತಿದ್ದರು. ಪುದಿನ,ಕೊತ್ತಂಬರಿ ಬಿಡಿಸುತ್ತ ಆ ತಂಡದ ಮುಂದಾಳತ್ವವನ್ನು ಕಾಜೋಲ್ ಅಲ್ಲಲ್ಲ ವಿನೂತ್ನ ನಿರ್ವಹಿಸುತ್ತಿದ್ದಳು ...
ಅಡುಗೆ ಮಾಡಲು ಸಿದ್ಧತೆ |
ನಾನು ಈ ಕಡೆ ಪಾಕ ಪ್ರವೀಣರಾದ ಜಿನು ಮತ್ತು ಅಶೋಕ್ ರವರ ಬಳಿ ಸಾಗಿ ಏನೋ ಉಚಿತ ಸಲಹೆ ಕೊಡಲು ಹೋಗಿ ನಿಂಗೆ ಅಡುಗೆ ಮಾಡೋಕ್ ಬರತ್ತಾ ಅಂತ ಬೈಸಿಕೊಂಡೆ (ನಂಗೆ ಕುಕ್ಕರಿನಲ್ಲಿ ಮಾತ್ರ ಅನ್ನ ಮಾಡೋಕ್ ಬರೋದು :- ( )
ಬಿಸಿ ಬಿಸಿ ಪುಲಾವ್ ಸಿದ್ಧವಾಗುತ್ತಿದೆ |
ಅಂತೂ ಪುಲಾವ್,ಮೊಸರು ಬಜ್ಜಿ ಎರಡೂ ಉಣ್ಣಲು ಸಿದ್ಧ!!!!
ಅಶೋಕ್ ಎಲ್ಲ್ರುಗೂ ಸಾಲಿಗಿ ನಿಲ್ಲಲು ಹೇಳಿ,ಒಬ್ಬರಿಗೆ ಒಂದೇ ಸೌಟು ಎಲ್ಲರದೂ ಆದರೆ ಎರಡನೇ ಸುತ್ತಿಗೆ ಬರುವಿರಂತೆ ಎಂದು ಹೇಳುತ್ತಿದ್ದ .
ಹಿಂದಿನಿಂದ ಯಾರೋ ALPHABETICAL ORDER ಅಲ್ಲಿ ನಿಲ್ಲೋಣ ಎಂದು ಸಲಹೆ ಕೊಡುತ್ತಿದ್ದರು. ಆಗ ಆನಂದತೀರ್ಥ(ತೀರ್ಥ ಸೇವಿಸಿದಾಗ ಆನಂದ ಆಗೇ ಆಗತ್ತೆ ಬಿಡಿ) ಮತ್ತು ಆಶಿಶ್ ಮಧ್ಯೆ ಮಾತುಕತೆ ನಡೆಯುತ್ತಿತ್ತು... ಆನಂದ್ ನಾನು ಮೊದಲು ಎಂದರೆ ಆಶಿಶ್ ನಂದು DOUBLE-A ಎಂದು ಹೇಳುತ್ತಿದ್ದ. ಮನಸೋ ತೃಪ್ತಿ ಪುಲಾವ್ ಅನ್ನು ಭರ್ಜರಿ ಬೇಟೆಯಾಡಿ ಎಲ್ಲರೂ ಕ್ಯಾಂಪ್ ಫೈರ್ ಹಾಕಿದೆವು. ನಂತರ ಪುಟ್ಟ ಮಕ್ಕಳಂತೆ ಅದರ ಸುತ್ತಲೂ ಚುಕು ಬುಕು ಎಂದು ಓಡಿದ್ದು ಸ್ಮೃತಿ ಪಟಲದಲ್ಲಿ ಹಸಿರಾಗಿದೆ .
ಚುಕು ಬುಕು - CAMP FIRE |
ಕೆಲಸದ ಒತ್ತಡದ ನಡುವೆ ಬಹಳವೇ ಮಂದಿ ಆಗಂತುಕರ ನಡುವೆ DVG ರವರ ಮಾತಿನಂತೆ "ಎಲ್ಲರೊಳಗೊಂದಾಗುವುದು" ಎಂತಹ ಸೊಗಸಿನ ಸಂಗತಿ...ವಯಸ್ಸು ಎಷ್ಟಾದರೆನಂತೆ ಆಸ್ವಾದಿಸುವ ಮನಸ್ಸು ಸದಾ ಯವ್ವನದಿಂದ ಕೂಡಿರಬೇಕಷ್ಟೇ ...
ಈಗ ಎಲ್ಲರನ್ನು 2 ತಂಡಗಳನ್ನಾಗಿ ವಿಭಾಗಿಸಿದೆವು ನಿಯಮಾವಳಿಯನ್ನು ಹಾಕಿದೆವು .
1.ತಂಡದಿಂದ ಒಬ್ಬರು ಬಂದು ಅವರ ಸ್ವ-ಪರಿಚಯವನ್ನು ಮಾಡಿಕೊಂಡು ತಮ್ಮಲ್ಲಡಗಿರುವ ಪ್ರತಿಭೆಯನ್ನು ಹೊರಗೆಡವಬೇಕು. ನಂತರ ಪಾಟಿ ಸವಾಲನ್ನು ಸ್ವೀಕರಿಸಿ ಮತ್ತೊಂದು ತಂಡದಿಂದ ಒಬ್ಬರು ಬಂದು ತಮ್ಮ ಸ್ವ-ಪರಿಚಯ ಮಾಡಿಕೊಂಡು ಸವಾಲಿಗೆ ಟಾಂಗಾ ಕೊಡಬೇಕು .
2. ಒಂದು ಪ್ರತಿಭೆಗೆ ಒಂದೇ ಅವಕಾಶ .
ತಂಡಗಳಿಗೆ ಏನಾದ್ರು ಹೆಸರು ಕೊಡ್ರಪ್ಪ ಅಂತ ಹೇಳಿದೆ...ಕಾವೇರಿ,ಗಂಗೆ, Dr. ರಾಜ್ ಕುಮಾರ್ ತಂಡ,ಕುವೆಂಪು ತಂಡ ಹೀಗೆ ಏನೇನೋ ನನ್ನ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಯಾರೋ ಮಧ್ಯದಿಂದ KFC ಎಂದು ಕೂಗಿದರು.ಯಾರೋ ಚಿಕೆನ್ ಪಾರ್ಟಿ ಅಂತ ಅಂದ್ಕೊಂಡ್ರೆ .... ಅದಲ್ಲ KFC ಅಂದ್ರೆ "ಕಾಶೀನಾಥ್ ಫ್ಯಾನ್ಸ್ ಕ್ಲಬ್" ಅಂತೆ!!! ...ನಮ್ ತಂಡದೋರು ಈ ಮಟ್ಟಕ್ಕೆ ಪೋಲೀನಾ ಅನ್ನಿಸಿಬಿಡ್ತು. ವಿನೂತ್ನರವರು ಮುಂದಾಳತ್ವ ವಹಿಸಿದ್ದ ತಂಡದ ಹೆಸರು BABA (ರಜನಿಕಾಂತ್ ಅಭಿಮಾನಿಗಳಿವರು!!!)
23 ಜನರಲ್ಲೂ ಎಲ್ಲಿಲ್ಲದ ಉತ್ಸಾಹ ... ಭಾವಗೀತೆ,ಮಂಕುತಿಮ್ಮನ ಕಗ್ಗ, ಚಿತ್ರಗೀತೆ, ಭಕ್ತಿಗೀತೆ, ನೃತ್ಯ ಎಲ್ಲಾ ರೀತಿಯ ಪ್ರತಿಭೆಗಳನ್ನು ಹೊರಗೆಡವಿದರು.
ಪ್ರತಿಭೆಯ ಅನಾವರಣ |
ಅತ್ಯುತ್ತಮ ಪ್ರದರ್ಶನ ನೀಡಿದವರ ಪಟ್ಟಿ :
ಅಶೋಕ್ - ಭಾವಗೀತೆ
ಕಿರಣ್ - ಗುಂಡು ಹಾರಿಸಿವುದು (ರೈಫಲ್ 0.002 mm ಅಂತ ಅದೇನೋ ಹೇಳ್ದ ನಂಗೆ ಅಷ್ಟು ಅರ್ಥ ಆಗ್ಲಿಲ್ಲ ಎಲ್ಲಾ ಓ ಅಂದ್ರು ನಾನು ಓ ಅಂದೇ ಅಷ್ಟೇ)
ಅರುಣ್ & ಭರತ್ - ಮಂಕುತಿಮ್ಮನ ಕಗ್ಗ
ಶ್ರೀನಿಧಿ & ಮಲ್ಲಿಕಾರ್ಜುನ್ - ನೃತ್ಯ
ಆನಂದ್ & ಸುರೇಶ - ಭಕ್ತಿಗೀತೆ
ಜಿನು - ಅವಿವಹಿತರಿಗಾಗಿ ಬಿಟ್ಟಿ ಪ್ರವಚನ
ಆ ತಣ್ಣಗಿನ ಹವೆಯಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನಮ್ಮ ತುಮಕೂರಿನ ರಾತ್ರಿಯ ದೀಪಧಾರೆಯನ್ನು ನೋಡುವುದೇ ಸೊಗಸು. ನಮ್ಮೂರು ಇಷ್ಟು ಚೆನ್ನಾಗಿದ್ಯಾ ಅನ್ನಿಸ್ತು ಅಂದ್ರೆ ಅತಿಶಯೋಕ್ತಿಯಾಗಲಾರದು ...
ಯಾರೋ ಪಲ್ಲವಿ ನಿಮ್ಮನೆ ಎಲ್ಲಿ ತೋರ್ಸು ಅಂತ ಕೆಳ್ಬಿಡೋದಾ.... ದೇವ್ರೇ VTU ಪರೀಕ್ಷೆಗಿಂತ ಕಷ್ಟದ ಪ್ರಶ್ನೆ ಇದು!!!
ರಾತ್ರಿಯ ದೀಪಧಾರೆ |
ದೇವಸ್ಥಾನದ ಮುಂದೆ SLEEPING BAG ಹೊದ್ದು ನಾನು ವಿನು ಮಲಗಿದ್ದೆವು. ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಕೊರೆಯುವ ಚಳಿ ತಾಳಲಾರದೆ ದೇವಾಲಯದ ಒಳ ಹೊಕ್ಕು ಅಲ್ಲಿ ಮಲಗಿಬಿಟ್ಟೆವು.
ಬೆಳಗ್ಗೆ ಎದ್ದು ಹಾರುತ್ತ ಜಿಗಿಯುತ್ತಾ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು ನಂತರ ಎಲ್ಲಾ ಗುಂಪು ಛಾಯಾಚಿತ್ರ (GROUP PHOTO) ತೆಗೆಸಿಕೊಂಡು 8 ಗಂಟೆಯ ಹೊತ್ತಿಗೆ ಬೆಟ್ಟವನ್ನು ಇಳಿಯಲು ಶುರು ಮಾಡಿದೆವು.
ನಮ್ GANG |
ಏನ್ POSE ಅಪ್ಪ |
ಕೆಳಗಿಳಿಯುತ್ತಿರುವುದು - ರಾಮದೇವರ ಬೆಟ್ಟ, ತುಮಕೂರು |
ಇಳಿಯಲು ಬೇರೆ ಸುತ್ತು ದಾರಿಯನ್ನು ಬಳಸಿದ ಕಾರಣ ನಾವು ಕೆಳಗಡೆಗೆ ತಲುಪಲು ಸ್ವಲ್ಪ ತಡವಾಯಿತು.10 ಗಂಟೆಯ ಹೊತ್ತಿಗೆ ಎಲ್ಲರು ಪವಿತ್ರ ಹೋಟೆಲ್ ಕಡೆ ಮುಖಮಾಡಿ ದಾರಿಯಲ್ಲಿ ಹಲಸಿನ ಹಣ್ಣನ್ನು ಸವಿದು ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಎಲ್ಲರು ಬೆಂಗಳೂರಿಗೆ ಹೊರಟರು.ಅವರನ್ನು ಬೀಳ್ಕೊಟ್ಟು ನಾನು ನಮ್ಮ ಮನೆಗೆಂದು ತುಮಕೂರಿಗೆ ಹೊರಟೆ .
ರಾತ್ರಿ ಚಾರಣಕ್ಕೆ ಹೊರಡುವ ಮುನ್ನ ಪಾಲಿಸಬೇಕಾದ ಕೆಲ ಸಂಗತಿಗಳು :
1. ಟಾರ್ಚ್ ಅನ್ನು ಹೊಸ ಬ್ಯಾಟರಿಯೊಂದಿಗೆ ಖಡ್ಡಾಯವಾಗಿ ಇಟ್ಟುಕೊಳ್ಳಬೇಕು.
2. SHORTS / 3/4th ಪ್ಯಾಂಟ್ ಹಾಕದಿರುವುದು ಉತ್ತಮ (ಆ ಹಳ್ಳಿಯ ನಿವಾಸಿಗಳಿಗೆ ಅನುಮಾನ ಬಂದರೆ ನಮ್ಮನ್ನು ಚಾರಣ ಮಾಡಲು ಬಿಡುವುದಿಲ್ಲ).
3. SLEEPING BAG / BLANKET ಅನ್ನು ಖಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು
4. ಆದಷ್ಟು ಗಲಾಟೆ ಮಾಡದೆ ಸುಮ್ಮನೆ ನಡೆಯುವುದು ಉತ್ತಮ.
5. ಅಲ್ಲಿ ಕುಡಿಯುವ ನೀರಿನ ಯಾವುದೇ ಮೂಲವಿಲ್ಲದಿರುವುದರಿಂದ ಸಾಕಷ್ಟು ನೀರನ್ನು ಒಯ್ಯಬೇಕು.
ಮಾಹಿತಿ:
ಸ್ಥಳ: ರಾಮದೇವರ ಬೆಟ್ಟ, ಕ್ಯಾತ್ಸಂದ್ರ, ( Ramadevara Betta, Kyatsandra) - ತುಮಕೂರು ಜಿಲ್ಲೆ, ಕರ್ನಾಟಕ.
ಚಾರಣ ಶುರು ಮಾಡುವ ಸ್ಥಳ: ಕ್ಯಾತ್ಸಂದ್ರ
ದೂರ: ಬೆಂಗಳೂರಿನಿಂದ 65 ಕಿ.ಮೀ.
ಪರ್ವತರೋಹಣದ ದರ್ಜೆ : ಸುಲಭ
ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ: ಬೆಂಗಳೂರು-ತುಮಕೂರು ಹೆದ್ದಾರಿ (NH 4) - ಕ್ಯಾತ್ಸಂದ್ರ ದಲ್ಲಿ ಇಳಿದು ಮಠದ ಕಡೆಗೆ ನಡೆದು ಹೋಗಬೇಕು.