ಮಂಗಳವಾರ, ಜುಲೈ 2, 2013

ಸೋಲಿಗರ ಬೀಡಿನಲ್ಲಿ - 29/06/2013


ನಮ್ಮ ಬೆಂಗಳೂರು ಅಸೆಂಡರ್ಸ್ (www.bangaloreascenders.org) ವತಿಯಿಂದ ಪ್ರತಿ ತಿಂಗಳು ಹಮ್ಮಿಕೊಳ್ಳುವ JOY OF GIVING ಗೆ ಕಾರಣಾಂತರಗಳಿಂದ ಹೋಗಲು ಆಗುತ್ತಿರಲಿಲ್ಲ. ಈ ಬಾರಿ ಅಂಬರೀಷ್ ರವರ ಸೋಲಿಗರಿಗೆ ಸಮವಸ್ತ್ರಗಳನ್ನು ಹಂಚುವ ಮಿಂಚಂಚೆ ನೋಡಿದಾಕ್ಷಣ ಖುಷಿನೋ ಖುಷಿ. ತಕ್ಷಣವೇ ಅವರಿಗೆ ದೂರವಾಣಿ ಕರೆ ಮಾಡಿ ನಾನು ನಿಮ್ಮೊಟ್ಟಿಗೆ ಬರುತ್ತೇನೆಂದು ತಿಳಿಸಿದೆ.
ಹಿಂದಿನ ದಿನ ಕರೆ ಮಾಡಿ ಬೆಳಗ್ಗೆ 4:25ಕ್ಕೆ ನಮ್ಮ PG ಬಳಿ ಬಂದು ಪಿಕ್ ಮಾಡುವುದಾಗಿ ಹೇಳಿದರು.

29/6/2013 - ಶನಿವಾರ:
ಹೇಳಿದ ಸಮಯಕ್ಕೆ ಕೊಳ್ಳೇಗಾಲಕ್ಕೆ ಹೊರಡಲು ಯುದ್ಧಕ್ಕೆ ಸಿದ್ಧಳಾದ ಸಿಪಾಯಿಯಂತೆ ಕಾಯುತ್ತಿದ್ದೆ. ಸರಿಯಾಗಿ 4:30ಕ್ಕೆ ಅಂಬರೀಷ್ ರವರಿಂದ ಕರೆ ಬಂದಿತು. ನಾನು ಹೋಗಿ ವಾಹನ ಹತ್ತಿದೆ. Qualis ಗಾಡಿ ಕೊಳ್ಳೇಗಾಲದತ್ತ ಮುಖ ಮಾಡಿತು.ದಾರಿಯಲ್ಲಿ ತಂದಿದ್ದ ಬಿಸ್ಕತ್ತು, ಒಣ ದ್ರಾಕ್ಷಿಗಳ ಸಮಾರಾಧನೆ ನಡೆಯುತ್ತಿತ್ತು. ಕೊಳ್ಳೇಗಾಲದಲ್ಲಿ ನಮ್ಮ ಬೆಳಗಿನ ಉಪಹಾರವನ್ನು ಮುಗಿಸಿದೆವು. ಏನೂ ತಿನ್ನೋಲ್ಲವೆಂದು ಹೇಳುತ್ತಿದ್ದ ರಾಜೇಶ್ ಭರ್ಜರಿ ಬ್ಯಾಟಿಂಗ್ ಆಡಿದರು.
ನಾವು ಕರಳಕಟ್ಟೆಯ ಬಳಿ ಸಾಗಿ ಅಲ್ಲಿನ ಸೋಲಿಗ ಮಕ್ಕಳಿಗೆಲ್ಲಾ ಸಮವಸ್ತ್ರ ಹಂಚಿದೆವು. ನಾನು ಮಕ್ಕಳಿಗೆ ಒಂದು ಪದ್ಯ ಹಾಡಲು ಕೇಳಿದೆ. ಎಲ್ಲರೂ ಒಕ್ಕೊರಲಿನಿಂದ Come little Children... ಎಂದು ಹಾಡಿದರು(ಮುಂದುಕ್ ಬರಾಕಿಲ್ಲ ಕ್ಷಮಿಸಿ ಕನ್ನಡ ಮಾಧ್ಯಮದಲ್ಲಿ ಓದಿರೋದು ನಾನು). ಮುದ್ದು ಮುಖದ ಕಂದಮ್ಮಗಳಿಂದ ಬೀಳ್ಕೊಂಡು ಶಾಲೆಯ ಮೇಷ್ಟರಾದ ಕೃಷ್ಣರವರಿಗೆ ನಮ್ಮ ಕೃತಜ್ಞತೆಗಳನ್ನು ತಿಳಿಸಿ ಕಗ್ಗಲಿಗುಂದಿ ಶಾಲೆಯ ಕಡೆಗೆ ಪಯಣ ಬೆಳೆಸಿದೆವು.

ದಾರಿಯಲ್ಲಿ ಕಂಡ ಸಿದ್ದಪ್ಪಾಜಿ ಬೆಟ್ಟದ ಬಗ್ಗೆ ಹಾಗು ಅಲ್ಲಿ ನಡೆಯುವ ಶಿವರಾತ್ರಿ ಉತ್ಸವದ ಬಗ್ಗೆ ಅನಿತಾ ಹಾಗು ಅಂಬಿ ಮಾಹಿತಿಯನ್ನು ನೀಡುತ್ತಿದ್ದರು.

ತುಮಕೂರಿನಿಂದ ಕೊಂಡೊಯ್ದಿದ್ದ ಹಣ್ಣುಗಳ ಸೇವನೆ. ಕಗ್ಗಲಿಗುಂದಿಯ ಮಕ್ಕಳಿಗೆ ಸಮವಸ್ತ್ರ ಹಂಚಿ, ಅಲ್ಲಿನ ಗುರುಗಳಾದ ಚಂದ್ರು ರವರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಕೆರೆದಿಂಬ ಶಾಲೆಯತ್ತ ಹೊರಟೆವು.

ಕೆರೆದಿಂಬ ಪೋಡಿ(ಕಾಲೋನಿ) ಗೆ ಹೋದರೆ ಅಲ್ಲೊಂದು ಸುಂದರ ಗಿಳಿ ಹಲಸಿನ ಬೀಜವನ್ನು ತಿನ್ನುತ್ತಿತ್ತು. ಅದರೊಟ್ಟಿಗೆ ಎಲ್ಲರ Photo Session.

ಯಾರೋ ಒಬ್ಬರು ಅಲ್ಲಿನ ಮೂಸಂಬಿ ಗಿಡ ಹತ್ತಿ ಹಣ್ಣು ಕಿತ್ತು ಎಸೆಯುತ್ತಿದ್ದರು. ಅದನ್ನು ಹಿಡಿಯುವಲ್ಲಿ ರಾಜೇಶ್ - ಅಂಬಿಗೆ ಪೈಪೋಟಿ. ನಾಗರೀಕತೆಯಿಂದ ತುಸು ದೂರವೇ ಉಳಿದಿರುವ, ಮುಗ್ಧತೆಯನ್ನು ತಮ್ಮ ಮೊಗದಲ್ಲಿ ಉಳಿಸಿಕೊಂಡಿರುವ ಮುದ್ದು ಮುಖಗಳನ್ನು ತಮ್ಮ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಹಿಡಿಯುವುದರಲ್ಲಿ ಮಾದು, ರಾಜೇಶ್ ಮಗ್ನರಾಗಿ ಹೋಗಿದ್ದರು.

ಪೋಡಿಯ ಮುಖ್ಯಸ್ಥರಾದ ಸಿದ್ದಪ್ಪಾಜಿಯವರ ಕೈಯ್ಯಿಂದಲೇ ಮಕ್ಕಳಿಗೆ ಸಮವಸ್ತ್ರಗಳನ್ನು ಹಂಚಿಸಿ ಅಲ್ಲಿಂದ ಹೊರಟೆವು.



 ದಾರಿಯಲ್ಲಿ ಕುಲುಕುತ್ತಾ,ಬಳುಕುತ್ತಾ ಸಾಗುತ್ತಿತ್ತು ನಮ್ಮ ಗಾಡಿ. ಮಾಧವ್ ರವರು ಅಲ್ಲಿ ಕಾಣುತ್ತಿದ್ದ ಪಕ್ಷಿ ಸಂಕುಲಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಾವಾದರೋ ಪಾಮರರು. ನನಗೂ, ಅನಿತಾಗೂ ಕಪ್ಪಗಿರುವುದೆಲ್ಲ ಕಾಗೆ, ಬೆಳ್ಳಗಿರುವುದೆಲ್ಲ ಬಾತು... ಊರಲ್ಲಿದ್ದರೆ ನಾಡು ಕೋಳಿ, ಕಾಡಲ್ಲಿದ್ದರೆ ಕಾಡು ಕೋಳಿ ಎಂದು ಹೇಳಿ ನಗುತ್ತಿದ್ದೆವು.

ಅಲ್ಲಿಂದ ಕೊಳ್ಳೇಗಾಲ ತಲುಪಿ, ಊಟ ಮುಗಿಸಿ ಬೆಂಗಳೂರಿಗೆ ಬಂದು ಸೇರಿದಾಗ ರಾತ್ರಿ 8 ಗಂಟೆ.

ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಅಂಬರೀಷ್ ಕಾರಂತ್: ಈ EVENTನ ರೂವಾರಿ
ಕೃಷ್ಣ, ಚಂದ್ರು, ಸಿದ್ದೇಗೌಡ್ರು : ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿ ಎಲ್ಲಾ ರೀತಿಯ ಸಹಕಾರ ನೀಡಿದ್ದಕ್ಕೆ
ಮಾಧವ್ ಜೋಯಿಸ್: ಪಕ್ಷಿಗಳ ಬಗೆಗಿನ ಮಾಹಿತಿಗಾಗಿ

ಶುಕ್ರವಾರ, ಜೂನ್ 28, 2013

ಪಶ್ಚಿಮ ಘಟ್ಟಗಳ ಶೃಂಗದ ಮಡಿಲಲ್ಲಿ -1 : 01 & 02 ಜೂನ್ 2013


ಬೆಳಗ್ಗೆ ಎದ್ದು ಪಲಾವ್ ತಿಂದು, ಟೀ ಸೇವಿಸಿ ಅಲ್ಲಿಂದ ಯಡಕುಮರಿಯತ್ತ ಚಾರಣ ಪ್ರಾರಂಭಿಸಿದೆವು. ಅಲ್ಲಿ ಒಂದು ಸೀಬೆ ಮರದಲ್ಲಿ ಟೈಗರ್ ಹತ್ತಿ ಹಣ್ಣು ಕೀಳುತ್ತಿದ್ದ. ಅವನು ಎಸೆದ ಸೀಬೇಕಾಯಿಯನ್ನು ತೆಗೆದುಕೊಳ್ಳಲು ನಾನು ಸುಮ ಒಟ್ಟಿಗೆ ಓಡಿ ಅಕ್ಕ Bond ಕೊಟ್ಟ ಒಂದು  push ಗೆ ನಾನು ರಜನಿಕಾಂತ್ Style ನಂತೆ  ಪಲ್ಟಿ ಹೊಡೆದು ಬಿದ್ದೆ. ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ!!!
(ಚಿಕ್ಕಂದಿನಲ್ಲಿ ಆಡಿದ ನಾಯಿ ಮತ್ತು ಮೂಳೆ ಆಟವನ್ನು ನಾವು ಇನ್ನೂ ಮರೆತಿಲ್ಲವೆಂದು ಹೆಮ್ಮೆಯಿಂದ ಹೇಳುತ್ತೇನೆ)
ಅಲ್ಲಿ ನಮ್ಮ ಪಾಂಡಿತ್ಯವನ್ನು ನೋಡಿದ ಯಾರೋ ಮಾಲಾಶ್ರಿಯವರ ಹೊಸ ಸಿನೆಮಾಗೆ Stunt Artist ಬೇಕು ಬರ್ತ್ಯಾ ಅಂತ ಕೇಳಿದ್ರು .
ನಾನು ನಟಿಸೋದು ಆಮೇಲೆ TV9ನಲ್ಲಿ ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಹಂಡೆಯಂತಿರುವ ಮಾಲಾಶ್ರಿ ಎಗರಿ ಬೀಳುವಾಗ ಲೋಟದಂತಾಗಿ ಬಿಡುತ್ತಾಳೆ ಅನ್ನೋದು ಎಲ್ಲಾ ಯಾಕೆ ಅಂತ ನಾನೇ ಆ offerನ ತಿರಸ್ಕರಿಸಿಬಿಟ್ಟೆ!!!

ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಒಂದು ಪುಟ್ಟ ಗುಡ್ಡವನ್ನು ತಲುಪಿದೆವು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಎಷ್ಟು ಕಣ್ತುಂಬಿಸಿಕೊಂಡರೂ  ಸಾಲದು ... ಸುತ್ತಲಿನ ಹಸಿರ ವನರಾಶಿ, ಕೆಳಗೆ ಚಿಕ್ಕದಾಗಿ ಕಾಣುತ್ತಿದ್ದ ರೈಲ್ವೆ ಹಾದಿ ಮತ್ತು ಅದಕ್ಕೆ ಮಾಡಿದ್ದ ಸುರಂಗ ಎಲ್ಲವನ್ನೂ ನೋಡಿ ಮನಸ್ಸು ಕ್ಷಣಕಾಲ ಮೂಕವಿಸ್ಮಿತ ....
ಪದಗಳಲ್ಲಿ ವರ್ಣಿಸಿದರೆ ಆ ಪ್ರಕೃತಿ ಸೌಂದರ್ಯದ ಸೌಂದರ್ಯವನ್ನು ಕಡಿಮೆ ಮಾಡುತ್ತಿದ್ದೀನೇನೋ ಅನ್ನಿಸುತ್ತೆ...
                                             ಮಾತಿಗೊಂದು ಅರ್ಥವೇಕೆ,
                                              ಅರ್ಥವಿದ್ದರಷ್ಟೆ ಸಾಕೆ?
                                             ಮೋಡಗಳನು ನೋಡಿರಲಿ
                                              ಅರ್ಥ ಅಲ್ಪ ಎಂದು ತಿಳಿ
                              ಮಾತು ಅರ್ಥ ಎರಡು ವ್ಯರ್ಥ ಸ್ವ-ಅರ್ಥವಿರದಿರೆ
                                                            (ಕುವೆಂಪುರವರ ಪಕ್ಷಿಕಾಶಿ ಕವನಸಂಕಲನದ ಪದ್ಯ)

ನೋಡಿ ಜಾಗ ಇಷ್ಟು ಚೆನ್ನಗಿದ್ದ್ಮೇಲೆ Photo Session ನಡಿಬೇಕಲ್ವ ... ಇಲ್ಲಿ ಸುಮ-ಮಂಜು ಜೋಡಿ ಫೋಟೋ ತೇಗೀತಿದ್ರೆ ನನ್ನ ಬಾರೆ ಅಂತ ಎಳ್ಕೊಂಡು पति पत्नी और वो ಅಂದ್ಲು. ನಂಗೆ "ವೋ" ಆಗೋಕ್ಕೆ ಇಷ್ಟ ಇರ್ಲಿಲ್ಲ ಬೇಡ ಬೇಡ ಅಂತಿದ್ದೆ ಅವಳು ಬಿಡಲೇ ಇಲ್ಲ(ಒಂದ್ ಸಲ ಬಿದ್ದಿದ್ ಪೆಟ್ಟಿಗೆ ಕುಂಟುತ್ತ ನಡೀತಿದ್ದೆ ಅದಕ್ಕೆ ಹೆದರಿ ಜಾಸ್ತಿ Protest ಮಾಡೋಕ್ಕೆ ಹೋಗ್ಲಿಲ್ಲ)






ಅಲ್ಲಿಂದ ಕಾಡು ಹಾದಿಯಲ್ಲಿ ಸಾಗಿ ರೈಲ್ವೆ ಹಾದಿಗೆ ತಲುಪಿದೆವು. ಅಲ್ಲಿ ರೈಲ್ವೆ ಹಳಿಯ ಮೇಲೆ ಮತ್ತೊಂದು ಫೋಟೋ ಸೆಶನ್.

ಅಲ್ಲಿಂದ ಯಡಕುಮರಿ ರೈಲ್ವೆ ನಿಲ್ದಾಣ ತಲುಪಿ,ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಚಾರಣ ಪ್ರಾರಂಭಿಸಿದೆವು. ಬಿದಿರು ಮೆಳೆಯಲ್ಲಿ ಸಪ್ತಗಿರಿ ಜೊತೆ ಮಾತಾಡ್ತಾ ನಡೀತಿದ್ದೆ. ಅವರ ಗಮನವೆಲ್ಲ ನೆಲದ ಮೇಲೆ ನಮ್ಮ ರಕ್ತ ಹೀರಲು ಕಾದು ನಿಂತ ಜಿಗಣೆಯ ಮೇಲೆಯೇ. ಒಂದು ಸಣ್ಣ ತೊರೆಯನ್ನು ದಾಟಿ ಮುಂದುವರಿದರೆ ಅಲ್ಲಿ ಇಂಬಳಗಳ ಸುರಿಮಳೆ ... ನಂಗೆ ರಕ್ತ ಇಲ್ಲ ಇನ್ನು ಇವಕ್ಕೆ ಬೇರೆ !!!



ಟೈಗರ್, ಗಿರಿ, ನವೀನ ಯಾರೂ ಜಿಗಣೆ ಬಗ್ಗೆ ತಲೇನೇ ಕೆಡುಸ್ಕೊತಿಲ್ಲ ... ಕಡೆಗೂ ಕೆಂಪು ಹೊಳೆ ಹತ್ತಿರ ತುಂತುರು ಮಳೆಯಲ್ಲಿ ಒಡೋಡ್ಕೊಂಡು ಬಂದು ಸೇರುದ್ವಿ. ಹೊಳೆ ದಾಟಿ ಹೆದ್ದಾರಿ ತಲುಪುವಷ್ಟರಲ್ಲಿ ಗಂಟೆ 3. ಅಲ್ಲಿಂದ ಇರ್ಮಯಿ ಜಲಪಾತದತ್ತ ಹೊರಟೆವು. ಪುಣ್ಯಕ್ಕೆ ಆ ಜಲಪಾತ ಇನ್ನು ನಮ್ಮ ದುಷ್ಟ ಜನರ ಕಣ್ಣಿಗೆ ಬೀಳದೆ ಪ್ಲಾಸ್ಟಿಕ್ ಮುಕ್ತ ಜಾಗವಾಗಿತ್ತು. ಸಣ್ಣದಾಗಿ ಹರಿಯುವ ಝರಿ ಮತ್ತು ಅದರಿಂದ ನೈಸರ್ಗಿಕವಾಗಿ ನಿರ್ಮಿತವಾಗಿದ್ದ  ಪುಟ್ಟ ಕೊಳ... ನೀರಲ್ಲಿ ಮಿಂದು ಧರ್ಮಸ್ಥಳದ ಮಂಜುನಾಥನ ದರ್ಶನಗೈಯ್ಯಲು ನಡೆದೆವು.

ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದಾಗ ಅದ್ಯಾವ್ದೋ ಕಂಬಿಗೆ ಕಟ್ಟಿದ್ದ  Friendship Band ಕಾಣುಸ್ತು. ದೇವರು ಕೊಟ್ಟ ಪ್ರಸಾದ ಅಂತ ಹರ್ಷ ಅದನ್ನ ಕದ್ದು ಬಿಟ್ಟ.(ಸುರೇಶನಿಗೆ ನಿನ್ನ ಚಿನ್ನದ ಚೈನನ್ನು ಕಟ್ಟು ಅಂತ ಉಚಿತ ಸಲಹೆ ಬೇರೆ !!!) ನಾವು ಆ Band Ownerಗೆ ಇದ್ದ ರೋಗ ನಿಂಗೂ ಬರತ್ತೆ, ಗಲೀಜು ಅಂತ ಏನೇನು ಹೇಳಿದರೂ ಆಸಾಮಿ DON'T CARE ಅಂದ್ಬಿಟ್ಟ. Double hearted friendship Band ಕೈಗೆ ಹಾಕ್ಕೊಂಡ್ರೆ ಇಬ್ಬರು ಹುಡ್ಗೀರು ಸಿಗ್ತಾರೆ ಅನ್ನೋದು ಅವನ ಭಾವನೆ ( ಪೂನಂ ಗೆ ಕನ್ನಡ ಓದೋಕ್ಕೆ ಬರೋಲ್ಲ ಅನ್ನೋ ಧೈರ್ಯದಿಂದ ಇದನ್ನ ಬರೀತಿದೀನಿ). ದರ್ಶನ ಮುಗಿಸಿ ಪ್ರಸಾದಕ್ಕೆ ಹೋದೆವು. ಅಲ್ಲಿ ಯಾರೋ ದಡೂತಿ ಹೆಂಗಸು ನಮ್ಮ ಜಿಮ್ ಬಾಡಿ ರಾಜೇಶ್ ನೆ ತಳ್ಳಿಬಿಟ್ಟಳಂತೆ!!
ಊಟ ಮುಗಿಸಿ ಬಸ್ ಹತ್ತಿ ಬೆಂಗಳೂರಿನತ್ತ ಮುಖ ಮಾಡುವಷ್ಟರಲ್ಲಿ ಗಂಟೆ 10. ಹರ್ಷನ ಪ್ರೇಮದ ಕಥೆ-ವ್ಯಥೆ ಕೇಳಿದ ರವೀಂದ್ರ ಅಂತೂ ಹರ್ಷ- ಪೂನಂ ರವರ ಮದುವೆ ಮಾಡಿಸಲು ತನ್ನ ಅಪ್ಪ ಮಾಡುವ ಪೌರೋಹಿತ್ಯವನ್ನು ತಾನೇ ಮಾಡಲು ಅಣಿಯಾಗಿಬಿಟ್ಟ!!!
ಭಾರತ್ ಬಂದ್ ತರ ಎಲ್ಲರು ಸೋಮವಾರ ರಜೆ ಹಾಕಲು ಅಣಿಯಾಗಿಬಿಟ್ಟರು. ಎಲ್ಲರನ್ನು ಬೇಡವೆಂದು ಸಮಾಧಾನಗೊಳಿಸುವಷ್ಟರಲ್ಲಿ ಹರ್ಷ ಸಾಕಾಗಿ ಹೋದ.ಈಗ ಶಶಿ ರವರ ಪ್ರೇಮದ ಕಥೆ ಶುರು. ಎಲ್ಲರಿಗೂ ನಿದ್ದೆ ಬರುತ್ತಿದ್ದರೂ 11 ವರ್ಷಗಳ Love Marriage Story ಕೇಳಲು ಕುತೂಹಲ. ಬಾಸು ಬಾಸು ಅಂತ ಪಾಪ ಅವರ ಪ್ರಾಣ ಹಿಂಡ್ಬಿಟ್ವಿ.

                               ದಿನಕ್ಕೊಮ್ಮೆ ಮೂಡುಂಟು, ದಿನಕ್ಕೊಮ್ಮೆ ಮುಳುಗು
                               ದಿನದ ಕತ್ತಲೆಯುಂಟು, ದಿನದ ಬೆಳಗು


ಚಾರಣವೆಲ್ಲಾ ಮುಗಿದು ರಾಜಧಾನಿ ತಲುಪಿದಾಗ ಗಡಿಯಾರ 6.30 ಎಂದು ತೋರಿಸುತ್ತಿತ್ತು.



ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಗಿರೀಶ್ ನಾಗಮಂಗಲ - GPS ತಂದು ಚಾರಣದ ಉಸ್ತುವಾರಿಯಲ್ಲಿ ಸಹಕಾರ ನೀಡಿದ್ದಕ್ಕೆ.
ರಾಮ್ ಕುಮಾರ್- ಕಾಗಿನಹಾರೆಯ ನಿರ್ವಾಹಕರ ಬಳಿ ಮಾತನಾಡಿ ಅವರನ್ನು ತಣ್ಣಗೆ ಮಾಡಿದ್ದಕ್ಕೆ.
ವಿಶ್ವಾಸ್ HK - ಕಾಗಿನಹಾರೆಯ ಕೋಟೆಯ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ
ಗೋಪಾಲ್ - ಅನ್ನದಾತೋ ಸುಖೀಭವ







ಶುಕ್ರವಾರ, ಮೇ 3, 2013

ನಾಗಲ-ಪಶ್ಚಿಮ ಚಾರಣ (Treknic to Nagala-West )


ನಾಗಲ:
ನಾಗಲಾಪುರಂ  ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಗಡಿ ಭಾಗದಲ್ಲಿದ್ದು, ಭಾರತದ ಪೂರ್ವ ಘಟ್ಟ(Eastern Ghats) ಗಳ ಸಾಲಿಗೆ ಸೇರುತ್ತದೆ. ಸ್ಫಟಿಕ ಶುಭ್ರವಾದ ನೈಸರ್ಗಿಕ ನಿರ್ಮಿತ ಝರಿ ಮತ್ತು ಕೊಳಗಳಿಂದ ನಿರ್ಮಿತವಾಗಿರುವ ಈ ಪ್ರದೇಶವು ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಚಾರಣಿಗರನ್ನು ತನ್ನತ್ತ ಸೆಳೆಯುತ್ತದೆ.




ಚಾರಣದ ನನ್ನ ಅನುಭವ:

Bangalore Ascenders (BASC - www.bangaloreascenders.org) ಇಂದ ಚಾರಣಕ್ಕೆಂದು ನಮ್ಮ ಬಾಸ್ಕ್( BASC) ನ ಆಧಾರಸ್ಥಂಬಗಳಲ್ಲೊಬ್ಬರಾದ RX ಸತೀಶ್ ರವರು ಆಯೋಜಿಸಿದ್ದ ಚಾರಣಕ್ಕೆ ನಾವೆಲ್ಲರೂ ಕೂಡಿ 22 ಮಂದಿ ಹೊರಟೆವು. ಆಂಧ್ರ ಸಾರಿಗೆಗೆ ಚಳ್ಳೆಹಣ್ಣು ತಿನ್ನಿಸಲೋಸುಗ ಸತೀಶ್ ರವರು ಎರಡು ಬೇರೆ ಬೇರೆ ಟೆಂಪೋ ಟ್ರಾವೆಲ್ ಗಳನ್ನು ಗೊತ್ತು ಮಾಡಿದ್ದರು( ರಸ್ತೆ ತೆರಿಗೆ: TT- 3500, ಬಸ್ಸು -13000). ಅವರು ಕಳುಹಿಸಿದ ಇ-ಮೇಲ್ ನಂತೆ ಎಲ್ಲರೂ ಶುಕ್ರವಾರ(26.04.2013) ರಾತ್ರಿ ಶಾಂತಲಾ ರೇಷ್ಮೆ ಮಳಿಗೆ( Shantala Silk House),ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ರಾತ್ರಿ ಸುಮಾರು 10ರ ಹೊತ್ತಿಗೆ ಸೇರಿದೆವು.10:30ರ ಹೊತ್ತಿಗೆ ಬೆಂಗಳೂರಿನಿಂದ ಹೊರಟು, ಬೆಳಗಿನ ಜಾವ 5 30ರ ಹೊತ್ತಿಗೆ( 27.4.2013) ಪಿಚಾತ್ತೂರು ಸೇರಿದ ನಾವು ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಅಲ್ಲಿಯೇ ಇದ್ದ ಒಂದು ಪುಟ್ಟ ಹೋಟೆಲ್ ನಲ್ಲಿ ಇಡ್ಲಿ ತಿಂದು 9 ಗಂಟೆಯ ಹೊತ್ತಿಗೆ ನಾಗಲ ಕಡೆಗೆ ಹೊರಟೆವು.
9 15 ರಿಂದ 9 30ರ ವರೆಗೆ ಸತೀಶ್ BASCನಲ್ಲಿ ಅನುಸರಿಸಬೇಕಾದ ಕೆಲ ನಿಯಮಗಳ ಕುರಿತು ಹೇಳಿದರು. ಈ ಮೊದಲೇ ಈ ಜಾಗಕ್ಕೆ ಚಾರಣ ಮಾಡಿ ಅನುಭವವಿದ್ದ DSLR ಕ್ಯಾಮೆರಾ ಹಿಡಿದಿದ್ದ ಕಾರ್ತಿಕ್ ಮತ್ತು Bournvita Goggles ತೊಟ್ಟಿದ್ದ ನಿರಂಜನ್ ತಂಡದ ಮುಂದಾಳತ್ವವನ್ನು ವಹಿಸಿದರು.


ಮೊದಲ 45 ನಿಮಿಷಗಳ ಚಾರಣವು ಸೂರ್ಯನ ರಶ್ಮಿಯೊಡನೆ ಕಳೆದು ಚರ್ಮವೆಲ್ಲ ಕೆಂಪಾಗಿ ನಂತರ ಮರದ ನೆರಳು ಆವರಿಸಿ ಬಿಸಿಲಿನ ಝಳವು ಕಡಿಮೆಯಾಯಿತು.

ತನ್ನ ಸ್ಫಟಿಕ ಶುಭ್ರತೆಯಿಂದ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಭಾರತದ ಪೂರ್ವ ಘಟ್ಟದಲ್ಲಿ ತನ್ನದೇ ಆದ ವಿಶೇಷ ಸಸ್ಯ ಸಂಪತ್ತಿನಿಂದ ಕೂಡಿದ ಕೊಳದ ಬಳಿ ಜಟಿಲ ಕಾನನದ ಕುಟಿಲ ಪಥದೊಳಗೆ ಹರಿಯುತ್ತಿದ್ದ ತೊರೆಯ ಪಕ್ಕದಲ್ಲಿ ನಮ್ಮ ಚಾರಣ.


ನೀರನ್ನು ಕಂಡೊಡನೆ ನೀರಿಗಿಳಿಯುವುದೋ ಇಲ್ಲ ಫೋಟೋ ತೆಗೆಯುವುದೋ ಎಂಬ ಗೊಂದಲ. ಸರಿ ನೀರಿಗಿಳಿದರೆ ಇನ್ನೆಲ್ಲಿ ಛಾಯಾಚಿತ್ರ ತೆಗೆಯುವುದು ಎಂದು ಮೊದಲು ಕೆಲವು ಫೋಟೋ ಗಳನ್ನು ಕ್ಲಿಕ್ಕಿಸಿ ನಂತರ ಓ ಎಂದು ಕೂಗುತ್ತಾ ನೀರಿಗಿಳಿದೆವು. ಪುಟ್ಟದಾಗಿ ಹರಿಯುವ ಝರಿ, ಅದರಿಂದ ನಿರ್ಮಿತವಾದ ಕೊಳ( Pool-1), ಅದರ ತಳದಲ್ಲಿ ಕಾಣುವ ಕಲ್ಲುಗಳು, ಕಾಲಿಗೆ ಕಚಗುಳಿಯಿಡುವ ಮೀನುಗಳು....

ಅಲ್ಲಿ ನಮ್ಮ ವೃತ್ತಿಪರ ಛಾಯಾಗ್ರಾಹಕರಾದ ಗೋವಿಂದ್ ರವರಿಗೆ ನಾವು ನಮ್ಮ ಫೋಟೋಗಳಿಗಾಗಿ ಪೋಸು ಕೊಡಲು ಸರತಿಯಲ್ಲಿ ಕಾಯುತ್ತಿದ್ದೆವು. ನಾನು ಮತ್ಸ್ಯ ಕನ್ಯೆ( Mermaid) ತರಹ ನೀರಿನಿಂದೇಳ್ತೀನಿ ನಂದು ಫೋಟೋ ತೆಗೀರಿ ಅಂತ ಅವರ ಛಾಯಾಗ್ರಹಣಕ್ಕೆ ಸವಾಲೊಡ್ಡುವಂತೆ ಕೇಳುತ್ತಿದ್ದೆ( ಇದೆಲ್ಲಿಂದ ಗಂಟ್ ಬಿತ್ತೋ ಪಾರ್ಟಿ ಅಂತ ಗೋವಿಂದ್ ಏನಾದ್ರು ಅಂದ್ಕೊಂಡಿದ್ದ್ರೆ ವಾಟಾಳ್ ನಾಗರಾಜ್ ಟೋಪಿ & ಕನ್ನಡಕದ ಮೇಲೆ ಆಣೆ ನಾನೇನ್ ಬೇಜಾರ್ ಮಾಡ್ಕೊಳಲ್ಲ. ನಮಗೆ ಫೋಟೋ ಮುಖ್ಯ ಅಷ್ಟೆ.)

ಶ್ವೇತ ತಂದಿದ್ದ Dolphin ಚಿತ್ರಗಳಿದ್ದ ನೀಲಿ ಬಣ್ಣದ ಟ್ಯೂಬ್ ನಲ್ಲಿ ಕುಳಿತು ನೀರ ಮೇಲೆ ತೇಲುವಾಗ ಮನದಲಿ ಮೂಡಿದ ಹಾಡು :
                              ಉಡುಗಣ ವೇಷ್ಠಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ 
                              ಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವ ರಸಹಚಾರಿ

ಅಲ್ಲಿಂದ ಸುಮಾರು 20 ನಿಮಿಷಗಳ ಕಾಲ ಹಬ್ಬಿದ ಮಲೆಯಲ್ಲಿ ಮುಂದುವರೆದು ಎರಡನೇ ಕೊಳ(Pool-2)ವನ್ನು ಸೇರಿದೆವು. ತನ್ನ ಪಚ್ಚವರ್ಣದ ತರಂಗ ಶೋಭಿತ ಗಂಭೀರಾಂಬುಧಿಯು ಮೊದಲನೇ ಕೊಳಕ್ಕಿಂತಲೂ ಮತ್ತೂ ಸುಂದರವಾಗಿ ಕಂಗೊಳಿಸುತ್ತಿತ್ತು.

ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮಧುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ ಬಿಳಿಯಾ ಮೋಡದ ಹಿಂದೆ ಹೊಳೆಯುತ್ತಿತ್ತು
                                                                                 ( ಒಂದು ಮುಂಜಾವಿನಲಿ)

Catering ರಾಮ್ ಮತ್ತು ಸಂಗಡಿಗರ ಪಾಕ ಕ್ರಾಂತಿಯ ದೆಸೆಯಿಂದ ಹೊಟ್ಟೆಗೆ ಬಿಸಿ ಬಿಸಿಯಾದ ಪುಳಿಯೊಗರೆ ಬಿತ್ತು.



ಮೂರನೇ ಕೊಳ(Pool-3)ದತ್ತ ದಾಪುಗಾಲು ಹಾಕುತ್ತಾ ನಡೆದರೆ 10-15 ನಿಮಿಷಗಳಲ್ಲೆಲ್ಲ ಆ ಜಾಗವನ್ನು ತಲುಪಿಬಿಟ್ಟೆವು. ಸುಮಾರು 30-40 ಅಡಿಗಳಷ್ಟು ಆಳವಿರುವ ಆ ಕೊಳದಲ್ಲಿ ಈಜಿದರೆ ಅಮಿತ ಹರ್ಷ ಮನಸಿಗೆ...  ಸೃಷ್ಟಿ ಲೀಲೆಗೆ ತಲ್ಲಣಗೊಂಡ ಮನವು ಪ್ರಕೃತಿ ಮಾತೆಗೆ ಮನದಲ್ಲೇ ವಂದಿಸಿತು.


ಮುಂಬರುವ ಚಂದಿರನಿಗಾಗಿ ದಾರಿ ಮಾಡುತ್ತಾ ಪಡುವಣದಂಚಿನಲ್ಲಿ ಭಾಸ್ಕರನು ಮರೆಯಾಗುತ್ತಿದ್ದು, ನಾವು ನಮ್ಮ ನೀರಾಟ ಸಾಕು ಮಾಡಿ ಮೇಲೆದ್ದೆವು. ಇಲ್ಲಿ ನೀರಿಗೆ ಬಿದ್ದು ಹಾಳಾದ ಸತೀಶ್ ರವರ ಕ್ಯಾಮೆರಾದಿಂದ ಅಡುಗೆ ತಯಾರಿಸುವ ಜಾಗದಲ್ಲಿ ನಿರಂಜನ್ ಅದನ್ನಿಟ್ಟುಕೊಂಡು ಎಲ್ಲರಿಗೂ ಬಹಳವೇ ನಗೆಯೂಟ ಉಣಿಸಿದನು. ಶ್ವೇತ ಮತ್ತು ಗೌತಮ್ ಗೆ ಫೋಟೋ ತೆಗೆಯುತ್ತೇನೆಂದು ಹೇಳಿ ಅವರನ್ನು ವಿವಿಧ ಭಂಗಿಗಳಲ್ಲಿ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದನು. ಇವನೆಷ್ಟು ಸಹಜ ಕಲಾವಿದನೆಂದರೆ ಗೌತಮ್ ಗೆ ಮಗಾ ನೀನ್ ಇಲ್ಲೇ ಇರು ನಾನೇ ಹಿಂದಕ್ಕೆ ಹೋಗಿ ತೆಗೀತೀನಿ ಅಂತ ಬೇರೆ ಹೇಳ್ತಿದ್ದ ( ಓ ಮಲ್ಲಿಗೆ ಚಿತ್ರದ ಮುಸ್ತಫಾನನ್ನು ನೆನೆಸಿಕೊಳ್ಳಿ).

ಅಡುಗೆ ಆಗುವವರೆಗೂ ಎರಡು ತಂಡಗಳಾಗಿ ವಿಭಜನೆಗೊಂಡು ಆಟಕ್ಕೆ ಕುಳಿತೆವು. ನಮ್ಮ ಮನರಂಜನೆ ಶುರು. ಚಲನಚಿತ್ರದ ಹೆಸರನ್ನು ಮೂಕಾಭಿನಯದ ಮೂಲಕ ತೋರಿಸುವುದು (Dumb Charades).ಚಿತ್ರದ ಹೆಸರನ್ನು ಊಹಿಸುವುದರಲ್ಲಂತೂ ಸತೀಶ್ ಎತ್ತಿದ ಕೈ. सलीम  लंगड़े  पे  क्यूँ रोता है ( ಅದರ ಅಸಲಿ ಹೆಸರು सलीम लंगड़े पे मत रो) ಸತೀಶ್ ಅಂತೂ ನಮ್ಮ ತಂಡದಲ್ಲಿ 18 ತುಂಬಿರದ Indemnity Bondಗೆ ತನ್ನ ಚಿಕ್ಕಮ್ಮ ಅಲಿಯಾಸ್ Cousin ಇಂದ ಪೋಷಕರ(Guardian) ಸಹಿ ಪಡೆದ ಅನಿರುದ್ಧ್ ಇದ್ದಾನೆ ಎಂಬುದನ್ನೂ ಮರೆತು ಮಾಕಿ ಸಾಲಾ ಇನ್ನೂ ಏನೇನೋ .... ( ಚುಕ್ಕಿಗಳನ್ನು ನೀವು TVಯಲ್ಲಿ ಬರುವ ಬೀಪ್ ಶಬ್ದಗಳೆಂದು ತಿಳಿಯಬೇಕಾಗಿದೆ) ಊಹೆಗಳನ್ನು ಮಾಡುತ್ತಿದ್ದರು.


ಊಟ ಮುಗಿಸಿ ಎಲ್ಲರೂ ಮಲಗಲು ತಾವು ಹುಡುಕಿ ಭೂಮಿತಾಯಿಯ ಮಡಿಲಿಗೆ ಶರಣು ಹೋದೆವು.
ಜುಳು ಜುಳು ನಾದಗೈಯ್ಯುತ್ತಾ ಹರಿಯುತ್ತಿದ್ದ ನೀರ ಸದ್ದು, ಝರಿಯ ಮೊರೆತ, ಮರಗಳ ಮೇಲೆ ಕುಳಿತ ಮಿಂಚು ಹುಳುಗಳು ಮತ್ತು ಇವುಗಳಿಗೆಲ್ಲ ನಾನೇ ರಾಜ ನನ್ನಿಂದಲೇ ನಿಮ್ಮ ಸೌಂದರ್ಯಕ್ಕೊಂದು ಬೆಡಗು ಎಂದು ಮರಗಳ ನಡುವೆ ನುಸುಳಿ ನಗುತ್ತಿದ್ದ ಪೂರ್ಣಚಂದಿರ ... ಇದರ ನಡುವೆ ಸುಮಾರು 1 30ರ ವರೆಗೂ(28.4.2013) ಹರಟುತ್ತಾ ನಂತರ ಮಲಗಿದೆವು.
ಮಾರನೆಯ ದಿನ ಮೂರನೇ ಕೊಳದಲ್ಲಿ ಮತ್ತೆ ಆಟ ಶುರು. ಈ ಬಾರಿ ಮೇಲಿನಿಂದ ಒಬ್ಬರನ್ನು ಜೋಲಿ ಬೀಸಿ ಎಸೆಯೋ ಆಟ. Life Jacket ತೊಟ್ಟ ನಮ್ಮನ್ನು ಮೇಲಿನಿಂದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಸಡ್ಡು ಹೊಡೆಯುವಂತೆ ರಂಗನಾಥ್ Square, ಗೋವಿಂದ್, ಸತೀಶ್ ಎಸೆಯುತ್ತಿದ್ದರು. ಆ ಗಾಳಿಯಲ್ಲಿ ಹಾರಿ ಬೀಳುವಾಗಿನ ಸಂತೋಷವನ್ನು ಮನವು ಈಗಲೂ ನೆನೆದು ಖುಷಿ ಪಡುತ್ತದೆ( ಮತ್ತೆ ಮೂಡಿ ಬಾ ನೀ ಎನ್ನ ಚಿತ್ತ ಪ್ರುಥುವಿಯಲ್ಲಿ)
ತಿಂಡಿ ಮುಗಿಸಿ ಮತ್ತೆ ನಮ್ಮ ಚಾರಣವನ್ನು ಶುರು ಮಾಡುವಷ್ಟರಲ್ಲಿ ಗಂಟೆ 11. ಅಲ್ಲಿಂದ ಮೊದಲನೇ ಕೊಳದ ಬಳಿ ಸಾಗಿ ನೀರಿನೊಳಗೆ BASCನ ನಿಯಮದಂತೆ ಎಲ್ಲರ ಸ್ವ-ಪರಿಚಯ ಮತ್ತು ಅವರಿಗೆ ನೀರೆರೆಚಾಟ. ಪುಷ್ಪವೃಷ್ಟಿಯ ತರಹ ಜಲವೃಷ್ಟಿ. ನಾನೇನೋ Different ಅಂತ ಪೋಸ್ ಕೊಡಬೇಕಲ್ಲ ಚಿಕ್ಕ ಚಿಕ್ಕ ಕಲ್ಲುಗಳನ್ನಾಯ್ದು ROCKವೃಷ್ಟಿ ( ಹೆಸರು ಸ್ವಲ್ಪ ದರಿದ್ರವಾಗಿದೆ ಒಸಿ ಅಡ್ಜಸ್ಟ್ ಮಾಡ್ಕೊಳಿ) ಅಂತ ಹೊಡೆಯಲು ಹೋಗಿ ದೂರ್ವಾಸ ಮುನಿಯಿಂದ (ನಿರಂಜನ್)  ಬೈಸಿಕೊಂಡೆ. ಪುಣ್ಯಕ್ಕೆ ಶಾಪ ಕೊಡಲಿಲ್ಲ ಆಸಾಮಿ.

ಮಾನ್ಯ S M ಕೃಷ್ಣಾ ರವರು ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಹೇಳಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಲಂಡನ್ ನಲ್ಲಿ MBA ಮುಗಿಸಿ ಬಂದು ಜೈವಿಕ ಚೀಲ(Biodegradable Bags ) ಗಳನ್ನು ತಯಾರಿಸುವ ತನ್ನದೇ ಆದ ಸಣ್ಣ ಉದ್ದಿಮೆಯನ್ನು ನಡೆಸುತ್ತಿರುವ ರಂಗನಾಥ್ ನ ಮಾತುಗಳನ್ನು ಎಲ್ಲರೂ ತದೇಕ ಚಿತ್ತದಿಂದ ಆಲಿಸುತ್ತಿದ್ದೆವು. ದೀಪಕ್ ಗೆ 5 ಕನ್ನಡ ಪದಗಳನ್ನು ಹೇಳಲು ಸವಾಲು ಹಾಕಿದರು. ನಂತರ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿಯಾದ ಶ್ರೀದೇವಿಯವರಿಗೆ ಒಂದು ಪ್ರಶ್ನೆ ಕೇಳಲು ಹೇಳಿದೆವು.

ಇಲ್ಲಿ ಕನ್ನಡ ತರ್ಜುಮೆ ಮಾಡಿದರೆ ಪದಗಳ ರಸಸ್ವಾದ ಹಾಳಾಗುವ ಕಾರಣ ತದ್ರೂಪನ್ನು ಇಡಲಾಗಿದೆ.

ಶ್ರೀದೇವಿ - Which is your Favorite color?
ಉತ್ತರ ( ಹೇಳಿದವರಾರೆಂದು ಮರೆತು ಹೋಗಿದೆ) - Blue
ಪಕ್ಕದಲ್ಲಿ ಯಾರೋ ತಕ್ಷಣವೇ ಕೇಳಿದರು - Favorite Film!!!!????
(ಯಾರೂ ಪ್ರಶ್ನೆನ ಅದಲಿ ಬದಲಿ ಮಡ್ಬೇಡ್ರಪ್ಪ)
ತಿರುಗಿ ನೋಡಿದರೆ ರಂಗನಾಥ್ ... ಒಹ್ ನಮ್ ದೇಶ ಲಂಡನ್ ಆಗೋದ್ರಲ್ಲಿ ಸಂಶಯಾನೆ ಇಲ್ಲ ಬಿಡಿ.
ಸತೀಶ್ BRIEF ಪದದ ಕುರಿತು ತಮ್ಮ ಅನುಮಾನವನ್ನು ವ್ಯಕ್ತ ಪಡಿಸುತ್ತಿದ್ದರು ( Brief ಎಂದರೆ ಚಿಕ್ಕದಾಗಿ ಹೇಳಬೇಕೋ ಇಲ್ಲ ಸವಿಸ್ತಾರ ಎಂಬ ಅರ್ಥವೋ ಎನ್ನುವ ಅನುಮಾನ ಅವರಿಗೆ ಚಿಕ್ಕಂದಿನಿಂದಲೂ ಇದೆಯಂತೆ)
ಶಿವಕುಮಾರ್ ಮುಂಗಾರು ಮಳೆ ಭಾಗ -2 ಕಥೆಯನ್ನು ಹೇಳುತ್ತಿದ್ದ ( ಕಥೆ ನೈಜ ಘಟನೆಯನ್ನು ಆಧರಿಸಿದ್ದು, ಪ್ರೀತಿ ಮಧುರ ತ್ಯಾಗ ಅಮರ ಎಂಬ ಸಂದೇಶದಿಂದ ಮುಕ್ತಾಯಗೊಳ್ಳುತ್ತದೆ)



ಗೋವಿಂದ್ ರವರು ತಮ್ಮ ಹಿಮಾಲಯದ ಸುನಂದಾದೇವಿ ಮತ್ತು ನಂದಾದೇವಿ ಪರ್ವತಾರೋಹಣದ ಅನುಭವವನ್ನು ಮನಮುಟ್ಟುವಂತೆ ಚಿತ್ರಿಸಿ ಹೇಳುತ್ತಿದ್ದರು. ಪರೀಕ್ಷಾ ಕೊಠಡಿಯಲ್ಲೂ ಕಂಡಿರದ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ( Pin Drop Silence) ಅಲ್ಲಿ ಮನೆ ಮಾಡಿತ್ತು. ಕತ್ತಲಾಗುತ್ತಾ ಬಂದದ್ದರಿಂದ ಮಾಡಿದ್ದ ಮ್ಯಾಗಿ ತಿಂದು ಅಲ್ಲಿಂದ ಹೊರಟು TT ತಲುಪಿ ಅಲ್ಲಿ ಗೋವಿಂದ್ ರವರು ತಮ್ಮ ಅನುಭವದ ಮುಂದುವರೆದ ಭಾಗವನ್ನು ಅಲ್ಲಿದ್ದ ಬೆಟ್ಟಗಳನ್ನು ತೋರಿಸಿ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
TT ಬಳಿ ಬಂದು ಚಾಲಕರಿಗೆ ಚೆನ್ನಾಗಿ ನಿದ್ದೆ ಮಾಡಿದಿರಾ ಎಂದು ಕೇಳಿದರೆ ರಾತ್ರಿ ಎಲ್ಲಾ ದೆವ್ವದ ಕಾಟ ನಿದ್ದೇನೆ ಬರ್ಲಿಲ್ಲ ಅಂದ್ರು...
ದೆವ್ವ ಹೀಗೆ ಮೋಸ ಮಾಡುತ್ತೆ ಅಂತ ನಾನು ತಿಳ್ಕೊಂಡಿರ್ಲಿಲ್ಲ ( ಮನುಷ್ಯರು ಮಾತ್ರ ಮೋಸ ಮಾಡೋದು ಅನ್ನೋದು ನನ್ನ ಅಭಿಪ್ರಾಯ). ರಾತ್ರಿ 1 30ರ ವರೆಗೂ ಎದ್ದಿದೀವಿ ನಮಗೆ ಒಂದು ಮರಿ ದೆವ್ವನಾದ್ರೂ ಕಾಣ್ಲಿಲ್ಲ, ಚಾಲಕರಿಗೆ ಮಾತ್ರ ದೆವ್ವಗಳು!!!! ಬಹುವಚನ!!!  
ಅಲ್ಲಿಂದ ಹೊರಟು ಮಾರ್ಗ ಮಧ್ಯದ ಡಾಬಾ ದಲ್ಲಿ ಊಟ ಮುಗಿಸಿ ಬೆಂಗಳೂರಿಗೆ ಮರಳುವಷ್ಟರಲ್ಲಿ ಬೆಳಗ್ಗೆ 5 45.

ಮಾಹಿತಿ:

ಸ್ಥಳ: ನಾಗಲಾಪುರಂ (Nagala-West) -ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ
ಚಾರಣ ಶುರು ಮಾಡುವ ಸ್ಥಳ: ಪಿಚಾತ್ತೂರು
ದೂರ: ಬೆಂಗಳೂರಿನಿಂದ  270 ಕಿ.ಮೀ., ಚನ್ನೈ ಇಂದ 85 ಕಿ.ಮೀ.

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು
ಮಾರ್ಗ: ಬೆಂಗಳೂರು - ಕೋಲಾರ - ಮುಳಬಾಗಿಲು - ಪಲಮನೆರ್ - ಚಿ
ತ್ತೂರು - ಪುತ್ತೂರು - ಪಿಚಾತ್ತೂರು





ಶುಕ್ರವಾರ, ಮಾರ್ಚ್ 22, 2013

ರಾತ್ರಿ ಚಾರಣ-ರಾಮದೇವರ ಬೆಟ್ಟ, ತುಮಕೂರು ( Night trek to Ramadevara Betta) - 16 n 17 Mar 2013


ರಾಮದೇವರ ಬೆಟ್ಟ, ತುಮಕೂರು:
ಶ್ರೀ ಸಿದ್ದಗಂಗ ಕ್ಷೇತ್ರದ ಪಕ್ಕ ನೆಲೆಸಿರುವ ರಾಮದೇವರ ಬೆಟ್ಟವು ಬೆಂಗಳೂರು - ತುಮಕೂರು ರಾಷ್ಟ್ರೀಯ  ಹೆದ್ದಾರಿ (NH-4 ) ಯಲ್ಲಿದೆ. ಬೆಟ್ಟದ ಇತಿಹಾಸದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲದ ಕಾರಣ ಇಲ್ಲಿ ಬೊಗಳೆ ಬಿಟ್ಟು ಮಕ್ ಉಗುಸ್ಕೊಳ್ಳೋ ತಪ್ಪು  ಮಾಡೋಲ್ಲ  ...
ಚಾರಣ ಶುರು ಮಾಡುವ ಸ್ಥಳ - ರಾಮದೇವರ ಬೆಟ್ಟ, ತುಮಕೂರು 
ಚಾರಣದ ನನ್ನ ಅನುಭವ:
Bangalore Ascenders (BASC-www.bangaloreascenders.org) ಇಂದ ದಿನಾಂಕ 16 ಮಾರ್ಚ್ 2013ರ ಸಂಜೆ  ಎಲ್ಲರೂ ಬೆಂಗಳೂರು ರೈಲ್ವೆ  ನಿಲ್ದಾಣದಿಂದ ಸಂಜೆ 4:45ಕ್ಕೆ ಹೊರಟೆವು. ನಾನು,ನವೀನ ಮುಂಚೆ ಹೋಗಿ ಟಿಕೆಟ್ ತೆಗೆದುಕೊಂಡು ಎಲ್ಲರ ಬರವನ್ನೇ ಕಾಯುತ್ತಿದ್ದೆವು... ಎಲ್ಲರು ಬಂದರೂ ನಮ್ಮ ಹಿರೋಯಿನ್ ಈ ಚಾರಣದ ನನ್ನ ಸಹ-ರೂವಾರಿ ವಿನೂತ್ನ ಇನ್ನೂ ಬಂದೇ ಇಲ್ಲ!!! ಆಮೇಲೆ ರೈಲು ಹೊರಡುವ ಕೆಲವೇ ಕ್ಷಣಗಳ ಮುಂಚೆ DDLJ ಕಾಜೋಲ್ ತರ Running ನಲ್ಲಿ ಬಂದು ನಮ್ಮನ್ನು ಸೇರಿಕೊಂಡಳು. ಮಾನ್ಯ ಕಿರಣ್ I am wearing Black & Black ಅಂತ SMS ಕಳುಹಿಸಿದ್ದ, ನಮ್ಮ ಶಾಂಪೂ ಸುರೇಶ Black & Black ಎಲ್ಲಿ ಅಂತ ಹುಡುಕಿದ್ದೇ ಹುಡುಕಿದ್ದು. ಆದರೆ ಆಸಾಮಿ ನಾನು ಮೊದಲೇ ಪ್ಲಾಟ್ ಫಾರಂ ಸಂಖ್ಯೆ 10 ಎಂದು ತಿಳಿಸಿದ್ದರೂ, 9ನೇ ಪ್ಲಾಟ್ ಫಾರಂ ರೈಲು ಹಿಡಿದು ಓಸಿಯಗಿ ಯಶವಂತಪುರದವರೆಗೂ ಪ್ರಯಾಣ ಮಾಡಿ ಅಲ್ಲಿ ಕಾದು ನಂತರ ನಮ್ಮ ರೈಲನ್ನು ಹತ್ತಿಕೊಂಡ. BASCನ ನಿಯಮದಂತೆ ಎಲ್ಲರಿಂದಲೂ INDEMNITY BONDಗೆ ಸಹಿ ಪಡೆದೆವು. ಮತ್ತೊಬ್ಬ ಸಹ ಚಾರಣಿಗ ಅನಿರುಧ್ಧ್ ಬಸ್ಸಿನಲ್ಲಿ ಬಂದು ಚಾರಣದ ಸಮಯಕ್ಕೆ ಸರಿಯಾಗಿ ನಮ್ಮ ಜೊತೆಗೂಡಿದ. ಹೀಗೆ ಒಟ್ಟಾರೆ 23 ಚಾರಣಿಗರು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ನಮ್ಮ ರಾತ್ರಿ ಚಾರಣವನ್ನು ಶುರು ಮಾಡಿದೆವು.

ಹೋದ ವಾರ ಇದೇ ಸ್ಥಳಕ್ಕೆ ಬೆಳಗಿನ ಹೊತ್ತಿನಲ್ಲಿ 11 ಮಂದಿಯೊಟ್ಟಿಗೆ  BASC ನಿಂದಲೇ ಚಾರಣ ಮಾಡಿದ್ದೆ . ಶೌನಕ್ ಹೋದ ವಾರವೂ ನನ್ನ ಜೊತೆ ಚಾರಣ ಮಾಡಿದ್ದರಿಂದ ಅವನನ್ನು ಮತ್ತು ಸುರೇಶನನ್ನು ತಂಡವನ್ನು ಮುನ್ನಡೆಸಲು ಹೇಳಿದೆನು. ಎಲ್ಲರೂ ಟಾರ್ಚ್ ತಂದಿದ್ದರೂ ದಾರಿ ದೀಪವದವರು ಇವರು  ....
8 30 ರ ಹೊತ್ತಿಗೆ ಬೆಟ್ಟದ ತುದಿಯನ್ನು ತಲುಪಿ ಅಲ್ಲಿದ್ದ ಪುಟ್ಟ ಶಿವದೆವಲಯವನ್ನು ಹೊಕ್ಕು ದೇವರಿಗೆ ನಮಸ್ಕರಿಸಿ ಶಿವಲಿಂಗದ ಮುಂದೆ ಕುಳಿತ ನಂದಿಯನ್ನು ಕಂಡು ಹೊರಬಂದೆವು.
ಶಿವ ದೇವಾಲಯ - ರಾಮದೇವರ ಬೆಟ್ಟ, ತುಮಕೂರು


ಕಲ್ಲು ಮಂಟಪ


ನಂತರ ನಮ್ಮ ತಂಡಕ್ಕೆ ಸ್ವಲ್ಪ ಸಮಯ ಆಟ ಆಡಿ ನಂತರ ಅಡುಗೆ ಮಾಡೋಣವೋ ಇಲ್ಲ ಪುಲಾವ್ ಅನ್ನು ಮಾಡಿ,ಉಂಡು  ನಂತರ ಆಟ ಶುರು ಮಾಡೊಣವೋ ಎಂದು ಕೇಳಿದರೆ ಎಲ್ಲರೂ ಒಕ್ಕೊರಲಿನಿಂದ ಊಟ ಎಂದು ಕೂಗಿದರು ಆಗ ಮನಸಿಗೆ  ಹೊಳೆದದ್ದು ... ಕಾಲೇಜ್  ನಲ್ಲಿ "ದೇವರಹೆಣ" ಅಂತ ಒಂದು ಪಾಠ ಇತ್ತು . ಆ ಪಾಠದಲ್ಲಿದ್ದ ಒಂದು ಸಾಲು - ಅನ್ನ ಎಂಬ ಶಬುದ ಕಿವಿಗೆ ಬೀಳುತ್ತಲೇ ಠೊಣ್ಣಿ  ಹ ಹ್ಹ ಹ್ಹ ಎಂದು ನಕ್ಕು ಬಿಟ್ಟಿದ್ದನು  ...

ಮೊದಲೇ ಎಲ್ಲರಿಗೂ ಇ-ಮೇಲ್ ನಲ್ಲಿ ತಿಳಿಸಿದ್ದಂತೆ ಅವರವರಿಗೆ ವಹಿಸಲಾಗಿದ್ದ ಪದಾರ್ಥಗಳನ್ನು ಎಲ್ಲ ಸಹ ಚಾರಣಿಗರೂ  ಮರೆಯದೇ ತಂದಿದ್ದರು .


ಬಟಾಣಿ ಬಿಡಿಸಿ,ಹುರುಳಿಕಾಯಿ,ಟೊಮೇಟೊ,ಈರುಳ್ಳಿ,ಆಲೂಗಡ್ಡೆ ಎಲ್ಲ ತರಕಾರಿ ಹೆಚ್ಚುತ್ತಾ, ಒಂದು ತಂಡ ಹಾಸಿದ್ದ ಟಾರ್ಪಲಿನ್ ಮೇಲೆ ಹರಟುತ್ತ ಕುಳಿತಿದ್ದರು. ಪುದಿನ,ಕೊತ್ತಂಬರಿ ಬಿಡಿಸುತ್ತ ಆ ತಂಡದ ಮುಂದಾಳತ್ವವನ್ನು ಕಾಜೋಲ್  ಅಲ್ಲಲ್ಲ ವಿನೂತ್ನ ನಿರ್ವಹಿಸುತ್ತಿದ್ದಳು ...
ಅಡುಗೆ ಮಾಡಲು ಸಿದ್ಧತೆ

ನಾನು ಈ ಕಡೆ ಪಾಕ ಪ್ರವೀಣರಾದ ಜಿನು ಮತ್ತು ಅಶೋಕ್ ರವರ ಬಳಿ ಸಾಗಿ ಏನೋ ಉಚಿತ ಸಲಹೆ ಕೊಡಲು ಹೋಗಿ ನಿಂಗೆ ಅಡುಗೆ ಮಾಡೋಕ್ ಬರತ್ತಾ ಅಂತ ಬೈಸಿಕೊಂಡೆ (ನಂಗೆ ಕುಕ್ಕರಿನಲ್ಲಿ ಮಾತ್ರ ಅನ್ನ ಮಾಡೋಕ್ ಬರೋದು :- ( )

ಬಿಸಿ ಬಿಸಿ ಪುಲಾವ್ ಸಿದ್ಧವಾಗುತ್ತಿದೆ

ಅಂತೂ ಪುಲಾವ್,ಮೊಸರು ಬಜ್ಜಿ ಎರಡೂ ಉಣ್ಣಲು ಸಿದ್ಧ!!!!


ಅಶೋಕ್  ಎಲ್ಲ್ರುಗೂ ಸಾಲಿಗಿ ನಿಲ್ಲಲು ಹೇಳಿ,ಒಬ್ಬರಿಗೆ ಒಂದೇ ಸೌಟು ಎಲ್ಲರದೂ ಆದರೆ ಎರಡನೇ ಸುತ್ತಿಗೆ ಬರುವಿರಂತೆ ಎಂದು ಹೇಳುತ್ತಿದ್ದ .

ಹಿಂದಿನಿಂದ ಯಾರೋ ALPHABETICAL ORDER ಅಲ್ಲಿ ನಿಲ್ಲೋಣ ಎಂದು ಸಲಹೆ ಕೊಡುತ್ತಿದ್ದರು. ಆಗ ಆನಂದತೀರ್ಥ(ತೀರ್ಥ ಸೇವಿಸಿದಾಗ ಆನಂದ ಆಗೇ ಆಗತ್ತೆ ಬಿಡಿ) ಮತ್ತು ಆಶಿಶ್ ಮಧ್ಯೆ ಮಾತುಕತೆ ನಡೆಯುತ್ತಿತ್ತು... ಆನಂದ್ ನಾನು ಮೊದಲು ಎಂದರೆ ಆಶಿಶ್ ನಂದು DOUBLE-A ಎಂದು ಹೇಳುತ್ತಿದ್ದ. ಮನಸೋ ತೃಪ್ತಿ ಪುಲಾವ್ ಅನ್ನು ಭರ್ಜರಿ ಬೇಟೆಯಾಡಿ ಎಲ್ಲರೂ ಕ್ಯಾಂಪ್ ಫೈರ್ ಹಾಕಿದೆವು. ನಂತರ ಪುಟ್ಟ ಮಕ್ಕಳಂತೆ ಅದರ ಸುತ್ತಲೂ ಚುಕು ಬುಕು ಎಂದು  ಓಡಿದ್ದು ಸ್ಮೃತಿ ಪಟಲದಲ್ಲಿ ಹಸಿರಾಗಿದೆ .

ಚುಕು ಬುಕು - CAMP FIRE

ಕೆಲಸದ ಒತ್ತಡದ ನಡುವೆ ಬಹಳವೇ ಮಂದಿ ಆಗಂತುಕರ ನಡುವೆ DVG ರವರ ಮಾತಿನಂತೆ "ಎಲ್ಲರೊಳಗೊಂದಾಗುವುದು" ಎಂತಹ ಸೊಗಸಿನ ಸಂಗತಿ...ವಯಸ್ಸು ಎಷ್ಟಾದರೆನಂತೆ ಆಸ್ವಾದಿಸುವ ಮನಸ್ಸು ಸದಾ ಯವ್ವನದಿಂದ ಕೂಡಿರಬೇಕಷ್ಟೇ ...

ಈಗ ಎಲ್ಲರನ್ನು 2 ತಂಡಗಳನ್ನಾಗಿ ವಿಭಾಗಿಸಿದೆವು ನಿಯಮಾವಳಿಯನ್ನು ಹಾಕಿದೆವು .


1.ತಂಡದಿಂದ ಒಬ್ಬರು ಬಂದು ಅವರ ಸ್ವ-ಪರಿಚಯವನ್ನು ಮಾಡಿಕೊಂಡು ತಮ್ಮಲ್ಲಡಗಿರುವ ಪ್ರತಿಭೆಯನ್ನು ಹೊರಗೆಡವಬೇಕು. ನಂತರ ಪಾಟಿ ಸವಾಲನ್ನು ಸ್ವೀಕರಿಸಿ ಮತ್ತೊಂದು ತಂಡದಿಂದ ಒಬ್ಬರು ಬಂದು ತಮ್ಮ ಸ್ವ-ಪರಿಚಯ ಮಾಡಿಕೊಂಡು ಸವಾಲಿಗೆ ಟಾಂಗಾ ಕೊಡಬೇಕು .

2. ಒಂದು ಪ್ರತಿಭೆಗೆ ಒಂದೇ ಅವಕಾಶ .

ತಂಡಗಳಿಗೆ ಏನಾದ್ರು ಹೆಸರು ಕೊಡ್ರಪ್ಪ ಅಂತ ಹೇಳಿದೆ...ಕಾವೇರಿ,ಗಂಗೆ, Dr. ರಾಜ್  ಕುಮಾರ್ ತಂಡ,ಕುವೆಂಪು ತಂಡ  ಹೀಗೆ ಏನೇನೋ ನನ್ನ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಯಾರೋ ಮಧ್ಯದಿಂದ KFC ಎಂದು ಕೂಗಿದರು.ಯಾರೋ ಚಿಕೆನ್ ಪಾರ್ಟಿ ಅಂತ ಅಂದ್ಕೊಂಡ್ರೆ .... ಅದಲ್ಲ  KFC ಅಂದ್ರೆ "ಕಾಶೀನಾಥ್ ಫ್ಯಾನ್ಸ್ ಕ್ಲಬ್" ಅಂತೆ!!! ...ನಮ್ ತಂಡದೋರು ಈ  ಮಟ್ಟಕ್ಕೆ ಪೋಲೀನಾ ಅನ್ನಿಸಿಬಿಡ್ತು. ವಿನೂತ್ನರವರು ಮುಂದಾಳತ್ವ ವಹಿಸಿದ್ದ ತಂಡದ ಹೆಸರು BABA (ರಜನಿಕಾಂತ್ ಅಭಿಮಾನಿಗಳಿವರು!!!)

23 ಜನರಲ್ಲೂ ಎಲ್ಲಿಲ್ಲದ ಉತ್ಸಾಹ ... ಭಾವಗೀತೆ,ಮಂಕುತಿಮ್ಮನ ಕಗ್ಗ, ಚಿತ್ರಗೀತೆ, ಭಕ್ತಿಗೀತೆ, ನೃತ್ಯ ಎಲ್ಲಾ ರೀತಿಯ ಪ್ರತಿಭೆಗಳನ್ನು ಹೊರಗೆಡವಿದರು.
ಪ್ರತಿಭೆಯ ಅನಾವರಣ


ಅತ್ಯುತ್ತಮ ಪ್ರದರ್ಶನ  ನೀಡಿದವರ  ಪಟ್ಟಿ :

ಅಶೋಕ್ - ಭಾವಗೀತೆ

ಕಿರಣ್  - ಗುಂಡು ಹಾರಿಸಿವುದು  (ರೈಫಲ್  0.002 mm ಅಂತ ಅದೇನೋ ಹೇಳ್ದ ನಂಗೆ ಅಷ್ಟು ಅರ್ಥ ಆಗ್ಲಿಲ್ಲ ಎಲ್ಲಾ ಓ  ಅಂದ್ರು ನಾನು ಓ ಅಂದೇ ಅಷ್ಟೇ)

ಅರುಣ್ & ಭರತ್  - ಮಂಕುತಿಮ್ಮನ ಕಗ್ಗ

ಶ್ರೀನಿಧಿ & ಮಲ್ಲಿಕಾರ್ಜುನ್ - ನೃತ್ಯ

ಆನಂದ್ & ಸುರೇಶ - ಭಕ್ತಿಗೀತೆ

ಜಿನು - ಅವಿವಹಿತರಿಗಾಗಿ ಬಿಟ್ಟಿ ಪ್ರವಚನ

ಆ ತಣ್ಣಗಿನ ಹವೆಯಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನಮ್ಮ ತುಮಕೂರಿನ ರಾತ್ರಿಯ ದೀಪಧಾರೆಯನ್ನು ನೋಡುವುದೇ ಸೊಗಸು. ನಮ್ಮೂರು ಇಷ್ಟು ಚೆನ್ನಾಗಿದ್ಯಾ ಅನ್ನಿಸ್ತು ಅಂದ್ರೆ ಅತಿಶಯೋಕ್ತಿಯಾಗಲಾರದು ...

ಯಾರೋ ಪಲ್ಲವಿ ನಿಮ್ಮನೆ ಎಲ್ಲಿ ತೋರ್ಸು ಅಂತ ಕೆಳ್ಬಿಡೋದಾ.... ದೇವ್ರೇ VTU ಪರೀಕ್ಷೆಗಿಂತ ಕಷ್ಟದ ಪ್ರಶ್ನೆ ಇದು!!!
ರಾತ್ರಿಯ ದೀಪಧಾರೆ

ದೇವಸ್ಥಾನದ ಮುಂದೆ SLEEPING BAG ಹೊದ್ದು ನಾನು ವಿನು ಮಲಗಿದ್ದೆವು. ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಕೊರೆಯುವ ಚಳಿ ತಾಳಲಾರದೆ ದೇವಾಲಯದ ಒಳ ಹೊಕ್ಕು ಅಲ್ಲಿ ಮಲಗಿಬಿಟ್ಟೆವು.

ಬೆಳಗ್ಗೆ ಎದ್ದು ಹಾರುತ್ತ ಜಿಗಿಯುತ್ತಾ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು ನಂತರ ಎಲ್ಲಾ ಗುಂಪು ಛಾಯಾಚಿತ್ರ (GROUP PHOTO) ತೆಗೆಸಿಕೊಂಡು 8 ಗಂಟೆಯ ಹೊತ್ತಿಗೆ ಬೆಟ್ಟವನ್ನು ಇಳಿಯಲು ಶುರು ಮಾಡಿದೆವು.
ನಮ್ GANG

ಏನ್  POSE ಅಪ್ಪ


ಕೆಳಗಿಳಿಯುತ್ತಿರುವುದು - ರಾಮದೇವರ ಬೆಟ್ಟ, ತುಮಕೂರು


ಇಳಿಯಲು ಬೇರೆ ಸುತ್ತು ದಾರಿಯನ್ನು ಬಳಸಿದ ಕಾರಣ ನಾವು ಕೆಳಗಡೆಗೆ ತಲುಪಲು ಸ್ವಲ್ಪ ತಡವಾಯಿತು.10 ಗಂಟೆಯ ಹೊತ್ತಿಗೆ ಎಲ್ಲರು ಪವಿತ್ರ ಹೋಟೆಲ್ ಕಡೆ ಮುಖಮಾಡಿ ದಾರಿಯಲ್ಲಿ ಹಲಸಿನ ಹಣ್ಣನ್ನು ಸವಿದು ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಎಲ್ಲರು ಬೆಂಗಳೂರಿಗೆ ಹೊರಟರು.ಅವರನ್ನು ಬೀಳ್ಕೊಟ್ಟು ನಾನು ನಮ್ಮ ಮನೆಗೆಂದು ತುಮಕೂರಿಗೆ ಹೊರಟೆ .

ರಾತ್ರಿ ಚಾರಣಕ್ಕೆ ಹೊರಡುವ ಮುನ್ನ ಪಾಲಿಸಬೇಕಾದ ಕೆಲ ಸಂಗತಿಗಳು :

1.  ಟಾರ್ಚ್ ಅನ್ನು ಹೊಸ ಬ್ಯಾಟರಿಯೊಂದಿಗೆ ಖಡ್ಡಾಯವಾಗಿ ಇಟ್ಟುಕೊಳ್ಳಬೇಕು.
2. SHORTS / 3/4th ಪ್ಯಾಂಟ್ ಹಾಕದಿರುವುದು ಉತ್ತಮ (ಆ ಹಳ್ಳಿಯ ನಿವಾಸಿಗಳಿಗೆ ಅನುಮಾನ ಬಂದರೆ ನಮ್ಮನ್ನು ಚಾರಣ ಮಾಡಲು ಬಿಡುವುದಿಲ್ಲ).
3. SLEEPING BAG / BLANKET ಅನ್ನು ಖಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು
4. ಆದಷ್ಟು ಗಲಾಟೆ ಮಾಡದೆ ಸುಮ್ಮನೆ ನಡೆಯುವುದು ಉತ್ತಮ.
5. ಅಲ್ಲಿ ಕುಡಿಯುವ ನೀರಿನ ಯಾವುದೇ ಮೂಲವಿಲ್ಲದಿರುವುದರಿಂದ ಸಾಕಷ್ಟು ನೀರನ್ನು ಒಯ್ಯಬೇಕು.

ಮಾಹಿತಿ:
ಸ್ಥಳ: ರಾಮದೇವರ ಬೆಟ್ಟ, ಕ್ಯಾತ್ಸಂದ್ರ, ( Ramadevara Betta, Kyatsandra) - ತುಮಕೂರು ಜಿಲ್ಲೆ, ಕರ್ನಾಟಕ.
ಚಾರಣ ಶುರು ಮಾಡುವ ಸ್ಥಳ: ಕ್ಯಾತ್ಸಂದ್ರ
ದೂರ: ಬೆಂಗಳೂರಿನಿಂದ  65 ಕಿ.ಮೀ.
ಪರ್ವತರೋಹಣದ ದರ್ಜೆ : ಸುಲಭ
ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು
ಮಾರ್ಗ: ಬೆಂಗಳೂರು-ತುಮಕೂರು ಹೆದ್ದಾರಿ (NH 4) - ಕ್ಯಾತ್ಸಂದ್ರ ದಲ್ಲಿ ಇಳಿದು ಮಠದ ಕಡೆಗೆ ನಡೆದು ಹೋಗಬೇಕು.

ಗುರುವಾರ, ಫೆಬ್ರವರಿ 28, 2013

ಕಾಡುವ ಹಾಡು - ಜಯತೇ .. ಸತ್ಯಮೇವ ಜಯತೇ


ಕೇಳಿದೊಡನೆ ಭಾವಕ್ಕೆ ತಟ್ಟುವ, ಮನಕ್ಕೆ ಮುಟ್ಟುವ ಹಾಡು.....




ಮಠ ಚಿತ್ರ ನೋಡಿದಾಗ ತುಂಬಾ ಮನಸ್ಸಿಗೆ ಹಿಡಿಸಿದ ಹಾಡು ... ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನು ಗುರುಪ್ರಸಾದ್ ರವರು ಬಹಳ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಮತ್ತು ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ ಸಹ .... 












 ಚಿತ್ರ - ಮಾರ್ಗದರ್ಶಿ/ ಮಠ                                       ಗಾಯಕರು - ಮನ್ನಾ ಡೇ
ಸಂಗೀತ - ಜಯದೇವ/ ವಿ.ಮನೋಹರ್                       ಸಾಹಿತ್ಯ - ಕು.ರಾ.ಸೀತಾರಾಮಶಾಸ್ತ್ರಿ


ಜಯತೇ ಜಯತೇ ಜಯತೇ .... ಸತ್ಯಮೇವ ಜಯತೇ ..ಸತ್ಯಮೇವ ಜಯತೇ ...

ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ...ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಗುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಧುರ ಭಾವ ತುಂಬಿದಂಥ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂಥ ನಿಧಿಯೆ ಇಲ್ಲ ಬಲ್ಲಿರ
ಸರಳ ಜೀವಿಗೆಂದಿಗೂ ಸೋಲೆ ಇಲ್ಲ ಕಾಣಿರ
ಸತ್ಯವಾದ ಘನತೆ ಸೋಲೆ ಕಾಣದಂತೆ

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲಿ ಇರುವ ಅಂತರಾತ್ಮ ಕಾಣದೆ
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ

ಮಂಗಳವಾರ, ಜನವರಿ 29, 2013

Baanali Badalaago - Simple Agi Ond Love Story - Kaaduva Haadu

 ನೋಡಿದ್ ತಕ್ಷಣಾನೇ ಕಾಡಿದ ಹಾಡು - LOVE AT FIRST SIGHT ತರ

ಛಾಯಾಚಿತ್ರಗಾರನ ಕೆಲಸ, ಜಾಗದ ಆಯ್ಕೆ, ಸಾಹಿತ್ಯ ತುಂಬಾನೇ ಮನಸೋರೆಗೊಳ್ಳತ್ತೆ ....




ಮೊದಲ ಪ್ರಯತ್ನದಲ್ಲೇ ನಿರ್ದೇಶಕರಾದ ಸುನಿ ಅವರ ಹೊಸತನ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಚಿತ್ರವನ್ನು ಸೆರೆ ಹಿಡಿಯುವಲ್ಲಿ ಮನೋಹರ್ ಜೋಷಿಯವರ ಕೈ ಚಳಕ ಎದ್ದು ಕಾಣುತ್ತದೆ.
ಸಿದ್ದುರವರ ಸಾಹಿತ್ಯಕ್ಕೆ ಭರತ್ ರವರು ತಮ್ಮ ಸಂಗೀತದ ಭಾಷೆಯಲ್ಲಿ ಅರ್ಥ ಕೊಟ್ಟರೆ ಸೋನು ನಿಗಮ್ ನಿಜಕ್ಕೂ ಅದಕ್ಕೆ ಜೀವ ತುಂಬಿ ಹಾಡಿದ್ದಾರೆ....
2013ರ HIT SONG LIST ನಲ್ಲಿ ಈ ಹಾಡು ಸೇರ್ಪಡೆಯಾಗೋದ್ರಲ್ಲಿ ಸಂಶಯಾನೇ ಇಲ್ಲ .....



ಸಾಹಿತ್ಯದ ಸ್ವಾದವನ್ನು ಆಸ್ವಾದಿಸಿ:
https://www.youtube.com/watch?v=7cBSr4dGRZY
ಬಾನಲಿ ಬದಲಾಗೋ...ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಮನದಿ ಏನೂ... ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿ ಮಾಡದೇ
ಕೆಣಕಿ ನನ್ನ ಕೆಣಕಿ ...ತೆರೆದೇ ಮನದ ಕಿಟಕಿ
ಕರುಣಿಸು ಪ್ರೇಮ ಧಾರೆ ಬಯಕೆಯ ತೋರದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಸರದಿಯಲ್ಲಿ... ಹೊಸ ಬಯಕೆ ಸರಿದಾಡಿದೆ
ಹರಸಿ ಬೇಗ ಕರೆ ಮಾಡು ತಡ ಮಾಡದೇ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೇಮ ಭಾಷೆ ಪದಗಳ ನೋಡದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ

ಸೋಮವಾರ, ಜನವರಿ 21, 2013

ದಾಂಡೇಲಿ ಮತ್ತು ಗೋಕರ್ಣ ಪ್ರವಾಸ - 19, 20 ಜನವರಿ 2013


ಈ ಬಾರಿ ಪ್ರವಾಸದ ನನ್ನ ಅನುಭವದ ಬಗ್ಗೆ ಹೇಳೋದಕ್ಕಿಂತಲೂ ಸಹ ಪ್ರವಾಸಿಗರು... ಛೆ ಛೆ ಹೊಸ ಸ್ನೇಹಿತರು ...ಛೆ ಏನೋ ಸರಿಯಾದ್ ಪದಾನೆ ಸಿಗ್ತಿಲ್ಲ್ವಲ್ಲ ..... ಶುಕ್ರವಾರ (18 ಜನವರಿ 2013 ) ಪ್ರವಾಸಕ್ಕೆ ಹೊರಟಾಗ ಗಿರಿ & ನಾಗರ್ಜುನ್ ಹೊರತು ಪಡಿಸಿ ಎಲ್ಲರೂ ಹೊಸ ಮುಖಗಳೇ ... ಆದರೆ ಇಂದೇಕೋ ಅವರನ್ನ ಹೊಸ ಸ್ನೇಹಿತರು ಅಂತ ಕರೆಯೋಕೆ ಒಹ್ ಕ್ಷಮಿಸಿ ಬರೆಯೋಕ್ಕೆ ಮನಸೇ ಬರ್ತಿಲ್ಲ .... ಎಷ್ಟೋ ವರ್ಷಗಳ ಮಿತ್ರರು ಅನ್ನುವಷ್ಟು ಮಟ್ಟಿಗೆ ಭಾಂದವ್ಯ ಬೆಳೆದಿದೆ .....
ಈ ನನ್ನ ಸ್ನೇಹಿತರು ನನಗೆ ಹೇಗೆ ಅನ್ಸಿದ್ರು ಅನ್ನೋದನ್ನ ಎರೆಡು ಸಾಲಿನಲ್ಲಿ ಗೀಚೋ ಪುಟ್ಟ ಪ್ರಯತ್ನ ( ಯಾರ್ ಬಗ್ಗೆನಾದ್ರು ಋಣಾತ್ಮಕವಾಗಿ ಬರೆದಿದ್ದೇನೆ ಅನ್ಸಿದ್ದ್ರೆ ಬೇಜಾರ್ ಮಾಡ್ಕೊತೀರ ....ಮಾಡ್ಕೊಳಿ ನಮಪ್ಪನ್ ಮನೆ ಗಂಟೇನ್ ಹೋಗೋಲ್ಲ!!! )

ಟೈಗರ್ ಬಂದಿದಾನೆ ಹಾಂ !!!!
ಪ್ರವಾಸದ ಪೂರ ಆರೋಗ್ಯ ಕೈ ಕೊಟ್ಟ ಸಲುವಾಗಿ ಅಮ್ಮನ ಮಡಿಲ ಬೆಚ್ಚಗಿನ ಭಾವದ ಅನುಭೂತಿ ಕೊಟ್ಟ, ಅನ್ಸಿದ್ದನ್ನ ಹೇಳೋ ಮಗುವಿನ ಮನಸಿನ ಪ್ರಭಾಕರ್




ಹಸನ್ಮುಖಿ ಗುರ್ವ ರೆಡ್ಡಿ
ಹುಡುಗಿಗೆ ಫೋನ್ ಮಾಡಿ ಮಾತಾಡಪ್ಪ ಅಂದ್ರೆ ( పెళ్లి చూపులు) ಅವರ ತಾಯಿಗೆ - ಅವಳಿಗೆ ಫೋನ್ ಮಾಡಿ ಮಾಡಿ ಸಾಕಾಯ್ತು ಎತ್ತುತ್ತಿಲ್ಲ ಅವಳಿಗೆ ಮಾಡೋಕ್ಕೆ ಹೇಳು ಅನ್ನೋಷ್ಟು ಗಂಡೆದೆ ವೀರ!!! ಏನೇ ಆಗ್ಲಿ 2 ಕೋಟಿ ವರದಕ್ಷಿಣೆ ಕೊಟ್ರೆ ಕೋತೀನ ಬೇಕಾದ್ರೂ ಮದ್ವೆ ಆಗ್ತೀನಿ ಅಂತಾನೆ ಅದು ಬೇರೆ ವಿಷ್ಯ ಬಿಡಿ ....




ನಾಗಾರ್ಜುನ್ ( ನಾಗ+ಅರ್ಜುನ್ = ಸವರ್ಣ ದೀರ್ಘಸಂಧಿ  )
ಸಹಾಯ ಮಾಡೋದ್ರಲ್ಲಿ ಎಳ್ಳಷ್ಟೂ ದೀರ್ಘಾಲೋಚನೆ ಮಾಡದಲೇ ಇರೋ , ನಾಗಾರ್ಜುನ ಕೊಂಡದಷ್ಟು ವಿಶಾಲ ಮನಸ್ಸಿನ ಹುಡುಗ .......


ಬೆಣ್ಣೆ ಹುಡುಗ ನವನೀತ್ ಜೊತೆ ಚಿಗುರು ಮನಸ್ಸಿನ ಮಿತ ಭಾಷಿ ಪಲ್ಲವಿ
ಏನ್ರೀ ಹೇಳೋದ್ ಇವರ ಜೋಡಿ ಬಗ್ಗೆ .... ರಾಷ್ಟ್ರೀಯ ಮಟ್ಟ(National Level)ದ ವಾಲಿ ಬಾಲ್ ಆಟಗಾರ್ತಿಯನ್ನು ಜಿಲ್ಲಾ ಮಟ್ಟ( District Level)ದ ಆಟಗಾರ ಒಂದೇ ವಾರದಲ್ಲಿ ಪಟಾಯಿಸ್ಯಾನೆ ಅಂದ್ರೆ ಸುಮ್ನೆನಾ ....  HOW TO PATAISE A GIRL IN ONE WEEK ( SAATH DIN LADKI IN !!!) ಅಂತೇನಾದ್ರೂ ಇವ ಪುಸ್ತಕ ಬರ್ದ್ರೆ ಒಂದೇ ದಿನದಲ್ಲಿ ಎಲ್ಲಾ ರೆಕಾರ್ಡುಗಳನ್ನೂ ಮುರಿದು ಪುಸ್ತಕ ಮರು ಮುದ್ರಣ ಕಾಣುವಂತಾಗುತ್ತದೆ!!!!



ದೀಪಿಕಾ ನಾಗಮಂಗಲ ಅಲ್ಲಲ್ಲ ಚೌಹಾಣ್
ಚಮಚ ಹಿಡ್ಕೊಂಡೆ ಹುಟ್ಟಿರೋ ( ಯಾವ್ ಲೋಹ, ಎಷ್ಟು ಕ್ಯಾರೆಟ್ ಅಂತೇನಾದ್ರೂ ಕೆಳುದ್ರೋ ನಾ ಸುಮ್ಕೆ ಇರಾಕಿಲ್ಲ) ಪಂಚರಂಗಿ ಸಿನಿಮಾದ ತಾರೆಯನ್ನ ನೆನಪಿಸೋ ಪಿಂಕ್ ಚಡ್ಡಿ HEROIN !!! ಅಲ್ಲಪ್ಪೋ HEROINE.



ಅಕ್ಕ ಬಾಂಡ್ ಶ್ವೇತ
ನೀರಿನಂತೆ (UNIVERSAL SOLVENT ) ಎಲ್ಲದಕ್ಕೂ, ಎಲ್ಲರೊಟ್ಟಿಗೂ ತುಂಬಾನೇ ಬೇಗ ಹೊಂದಿಕೊಳ್ಳೋ ಸ್ವಭಾವದ ಹುಡುಗಿ.


BIRTHDAY BOY ಸಂದೀಪ್
ಪಾಪದ ಪ್ರಾಣಿ ಒಂದು ನಾಲ್ಕೈದು ಬಾರಿಯಾದರೂ ಒದೆ ತಿಂದು ... ಕೆಂಪಗೆ ಮಾಡಿಕೊಂಡ.


ಸದಾ ಹೊಸತೇನನ್ನೋ ಬಯಸೋ ನವೀನ್
ಉದಾ: ಇಲ್ಲಿದೆ. ಕ್ಯಾಮೆರಾ ನೋಡಿ ಪೋಸು ಕೊಟ್ಟದ್ದೆ ಕೊಟ್ಟದ್ದು!!!



ವಿಜಯ್
ಜೊಷಿಗಳು ಬಿಡಿ ಪಟ ಹಾರ್ಸೋದ್ರಲ್ಲಿ ಎತ್ತಿದ ಕೈ ... ಬಾಲ್ಯದಿಂದಲೂ ಆಡಿದ ಆಟ ( बाये हाथ का खेल)


ದರ್ಪಣ್

ಕನ್ನಡಿಯು ನಿಮ್ಮ ಪ್ರತಿಬಿಂಬವನ್ನು ತದ್ರೂಪಿನಲ್ಲಿ ಪ್ರತಿಫಲಿಸುತ್ತದೆ ... ಯಾವಾಗಲೋ ಮಿಡ್ಲ್ ಸ್ಕೂಲ್ ನಲ್ಲಿ ಓದಿದ್ದು. ಈ ಹುಡುಗಾನೂ ಅಷ್ಟೇ ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡ್ತಿದ್ದ ( ನನ್ಹತ್ರ. ಬೇರೆವ್ರ್ ಜೊತೆ ನಂಗೊತ್ತಿಲ್ಲ)


LAST BUT NOT THE LEAST

गिरी गिरी गिरी गिरी बिजली गिरी

ಈ ಪ್ರವಾಸದ ರೂವಾರಿ. ರೋಮಿಯೋ ಗಿರೀಶ್ ಗೆ FEMALE FANS ಜಾಸ್ತಿ. ಅದಕ್ಕೆ ಒಂದು GFC( Girish Fans Club) ಅನ್ನೋ ಸಂಘಾನ ಶುರು ಮಾಡೋ ಪ್ರಯತ್ನ ನಡೀತಿದೆ.
If you Like Giri or have Crush on him, Can join this Club.

It is strictly for Girls who are >= 85 Born. Entry FREE and EXIT- You have to Pay!! - ಗಿರಿಯ ಪ್ರೇಮ ಪಾಶದಿಂದ ಬಿಡಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ !!!!


                  ಎಲ್ರು ಬಗ್ಗೆನೂ ಕೊರ್ದಿದ್ದು ಮುಗೀತು ....

                                                  ಶುಭಂ( ಶುದ್ಧ ಬಂಡಲ್)

 




                                                                                          - ಪಲ್ಲವಿ ರಂಗನಾಥ್